ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನಿ ಪಾಲ್ಖೀವಾಲ


 ನಾನಿ ಪಾಲ್ಖೀವಾಲ


ನಮ್ಮ ಭಾರತದಲ್ಲಿ ಅಪಾರ ಬುದ್ಧಿವಂತಿಕೆ, ದೇಶಭಕ್ತಿ, ಸಾಂಸ್ಕೃತಿಕ ಪರಂಪರೆಗಳ ಬಗೆಗಿನ ಗೌರವ, ನೈತಿಕತೆ, ನಿರ್ಭಯತೆ, ಸತ್ಯ ನಿಷ್ಠುರತೆ ಇತ್ಯಾದಿಗಳಿಂದ ಮೇಳೈಸಿದ ಹಲವು ವ್ಯಕ್ತಿಗಳು ಕಾಲದಿಂದ ಕಾಲದಲ್ಲಿ ಮೂಡಿ ಬಂದಿದ್ದಾರೆ.  ಅಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವವರು ನಾನಿ ಪಾಲ್ಖೀವಾಲ.  

ನಾನಿ ಪಾಲ್ಖೀವಾಲ ಅವರು 1920ರ ಜನವರಿ 16ರಂದು ಜನಿಸಿದರು. 

ಭಾರತದ ಸಂವಿಧಾನವನ್ನು ನಾನಿ ಪಾಲ್ಖೀವಾಲ ಅವರಂತೆ ಗೌರವಿಸಿ ಸಂರಕ್ಷಿಸಲು ಪಣ ತೊಟ್ಟವರನ್ನು ನೆನೆಯುವುದು ಕಷ್ಟಸಾಧ್ಯ.  ಭಾರತದ ಪಟ್ಟಭದ್ರ ಹಿತಾಸಕ್ತ ರಾಜಕಾರಣಿಗಳು ತಾವು ಇಷ್ಟಬಂದಂತೆ ತರುವ ಸಾಂವಿಧಾನಕ ತಿದ್ದುಪಡಿಗಳನ್ನು ನ್ಯಾಯಾಂಗವು ಪ್ರಶ್ನಿಸುವಂತಿಲ್ಲ ಎಂದು ಮಾಡಿಕೊಂಡ ನೀತಿಬಾಹಿರ ಕಾಯಕವನ್ನು ಏಕಾಂಗಿಯಾಗಿ ಸುಪ್ರೀಂಕೋರ್ಟಿನಲ್ಲಿ ಹಲವು ಕಾಲಗಳ ವರೆಗೆ ಹೋರಾಡಿ “ಪಾರ್ಲಿಮೆಂಟಿನಲ್ಲಿ ತಿದ್ದುಪಡಿಗಳನ್ನು ಮಾಡಬಹುದೇ ಹೊರತು ಆ ತಿದ್ದುಪಡಿಗಳು ಸಂವಿಧಾನದ ಮೂಲಭೂತ ಅಡಿಪಾಯಗಳನ್ನು ಧ್ವಂಸಗೊಳಿಸಲು ಅಧಿಕಾರವಿಲ್ಲ” ಎಂಬ ತಮ್ಮ ವಾದವನ್ನು ತೀರ್ಪಾಗಿ ಸುಪ್ರೀಂಕೋರ್ಟಿನಿಂದ ಬರುವಂತೆ  (ಪ್ರಸಿದ್ಧ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರದ ಮೊಕದ್ದಮ್ಮೆಗೆ ಸಂಬಂಧಪಟ್ಟಂತೆ) ನಾನಿ ಪಾಲ್ಖೀವಾಲರು ಸಾಧಿಸಿದರು.  ಪತ್ರಿಕಾ ಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯಗಳ ಕುರಿತು ಮಹತ್ವದ ವಾದಗಳನ್ನು ಮಂಡಿಸಿದರು.

ನಾನಿ ಪಾಲ್ಖೀವಾಲ ಅವರಿಗೆ ಸುಪ್ರೀಂ ಕೋರ್ಟಿನ ಪೀಠದ ಆಹ್ವಾನ, ಅಟಾರ್ನಿ ಜನರಲ್ ಹುದ್ದೆಗೆ ಆಹ್ವಾನ  ಮುಂತಾದವುಗಳು ಬಂದರೂ ಅದೆಲ್ಲವನ್ನೂ ನಯವಾಗಿ ನಿರಾಕರಿಸಿದ ಅವರು  ಭಾರತದ ಸಂವಿಧಾನದ ರಕ್ಷೆಗೆ ನಿಂತರು.  ಜನತಾ ಪಕ್ಷದ ಆಳ್ವಿಕೆ ಸಂದರ್ಭದಲ್ಲಿ  ಭಾರತದಿಂದ ಅಮೆರಿಕಕ್ಕೆ ವಿದೇಶಾಂಗ ರಾಯಭಾರಿಯಾಗಿದ್ದರು.  ಅವರು ಭಾರತದ ಸಮಾಜ, ಇಲ್ಲಿನ ಸಂಸ್ಕೃತಿಯ ಬಗ್ಗೆ ಸುದೀರ್ಘವಾದ ಅಧ್ಯಯನ ಹೊಂದಿದ್ದರು.  ನ್ಯಾಯಾಂಗದಲ್ಲಿ, ಆರ್ಥಿಕ ನೀತಿಯಲ್ಲಿ ಅವರು ಇನ್ನಿಲ್ಲದಷ್ಟು ಸಮರ್ಥರಿದ್ದರು.  ವಿವಿಧ ವಿಷಯಗಳಲ್ಲಿ ನಾನಿ ಪಾಲ್ಖೀವಾಲರ ವ್ಯಾಖ್ಯಾನ, ಉಪನ್ಯಾಸಗಳನ್ನು ಓದಿ ಕೇಳುವುದು ಒಂದು ಸೌಭಾಗ್ಯ ಎಂಬಂತಹ ವಾತಾವರಣ ಅಂದಿನ ದಿನ ಭಾರತೀಯರಲ್ಲಿ ಮನೆಮಾಡಿತ್ತು.  ಅಂದಿನ ದಿನಗಳಲ್ಲಿ ಬಜೆಟ್ ಮಂಡನೆ ಆದೊಡನೆಯೇ ನಾನಿ ಪಾಲ್ಖೀವಾಲ ಅವರ ಬಜೆಟ್ ಕುರಿತಾದ ಪ್ರವಚನ ದೇಶದ ವಿವಿದೆಡೆಗಳಲ್ಲಿ ನಡೆಯುತ್ತಿತ್ತು. ಅಂತಹ ಉಪನ್ಯಾಸಗಳನ್ನು ವಿಧಾನಸೌದದ ಬ್ಯಾಂಕ್ವೆಟ್ ಹಾಲಿನಲ್ಲಿ ಕೇಳುವ ಸೌಭಾಗ್ಯ ನಮ್ಮೆಲ್ಲರಿಗೂ ಸಿಗುತ್ತಿತ್ತು.  

ನಾನಿ ಪಾಲ್ಖೀವಾಲರ ಪುಸ್ತಕಗಳಾದ ‘We, the People’,  ‘India’s Priceless Heritage’, ‘Our Constitution Defaced and Defiled’, ‘The Highest Taxed Nation’, ‘Taxation in India’, ‘The Law and Practice of Income Tax’ ಇವೇ ಮುಂತಾದ ಗ್ರಂಥಗಳು ಅಪಾರ ಜನಪ್ರಿಯತೆ ಪಡೆದಿವೆ.  

“ಕಾನೂನಿನಲ್ಲಿರುವ  ಬುದ್ಧಿವಂತಿಕೆಗಿಂತ,  ಕಾನೂನಿನ ಅನುಷ್ಟಾನದಲ್ಲಿ ನೈತಿಕತೆ ಅತಿ ಮುಖ್ಯ.  ಧರ್ಮ ಎಂಬುದು ಸಾರ್ವಜನಿಕ ಸೇವೆಯಲ್ಲಿರುವ ಜನರ ಹೃದಯದಲ್ಲಿರಬೇಕು.  ಅದೇನಾದರೂ ಅಲ್ಲಿ ಸತ್ತು ಹೋದರೆ, ಯಾವುದೇ ಸಂವಿಧಾನ, ಯಾವುದೇ ಕಾನೂನು, ಯಾವುದೇ ತಿದ್ದುಪಡಿಗಳೂ ರಾಷ್ಟ್ರವನ್ನು ಉಳಿಸಲಾರವು” ಎಂಬ ನಾನಿ ಪಾಲ್ಖೀವಾಲ ಅವರ ಮಾತು ನಿತ್ಯ ಸತ್ಯವಾಗಿ ಈ ದೇಶದಲ್ಲಿ ಅಣುರಣಿಸುತ್ತಿದೆ.  

ಈ ದೇಶದ ಬುದ್ಧಿವಂತ, ಪ್ರಾಜ್ಞ, ನೈತಿಕ ನಿಷ್ಟಾವಂತರ ಕೈಯಲ್ಲಿ ಅಧಿಕಾರ ಬರಬೇಕು.  ಆದರೆ ಅಧಿಕಾರ ಎಂಬುದು ಜಾತಿ, ಪಂಗಡ. ಪ್ರಾಂತ್ಯ ಇತ್ಯಾದಿ ಅಸಂಬದ್ಧ ಕ್ಷುಲ್ಲಕ ವಿಷಯಗಳನ್ನೇ ಆಧರಿಸಿ ಹೋಗುತ್ತಿದೆ ಎಂಬುದು ಅತೀ ದೊಡ್ಡ ದುರಂತ ಎಂಬುದು ಪಾಲ್ಖೀವಾಲರ ಅಳಲಾಗಿತ್ತು.  ಆ ಅಳಲು ನಮ್ಮ ನಿತ್ಯ ಜೀವನವಾಗಿದ್ದು ಅದನ್ನು ಕಂಡೂ ಕಾಣದಿರುವಂತೆ ಬದುಕುತ್ತಿರುವ ಭಾರತೀಯ ಸಮಾಜ,  ತನ್ನ ಜವಾಬ್ಧಾರಿಗಳಿಗೆ ಎಷ್ಟು ವಿಮುಖವಾಗಿ ಬದುಕುತ್ತಿದೆ ಎಂಬುದನ್ನು ಸಾರಿ ಹೇಳುತ್ತಿದೆ.  ಆದರೆ ಅದನ್ನೆಲ್ಲಾ ನೋಡಲು ನಾನೀ ಪಾಲ್ಖೀವಾಲ ಅಂತಹ ಪ್ರಾಜ್ಞರು ಈ ದೇಶದಲ್ಲಿ ಕಾಣೆಯಾಗುತ್ತಿದ್ದಾರೆ.  ನಾನಿ ಪಾಲ್ಖೀವಾಲ ಅವರು ಡಿಸೆಂಬರ್ 2002ರ ವರ್ಷದಲ್ಲಿ ಈ ಲೋಕವನ್ನಗಲಿದರು.

On the birth anniversary of great jurist who fought  for protecting the prime values of Indian Constitution Nani Palkhiwala, Palkhivala


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ