ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹನುಮಂತರಾಯರು


 ಕಂದಗಲ್ಲ ಹನುಮಂತರಾಯರು


ನಾಟಕಕಾರ ಹನುಮಂತರಾಯರು 1896 ವರ್ಷದ  ಜನವರಿ  11ರಂದು ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ ಜನಿಸಿದರು. ತಂದೆ ಭೀಮರಾಯರು ಮತ್ತು ತಾಯಿ ಗಂಗೂಬಾಯಿ ಅವರು.  

ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರಾದ ಹನುಮಂತರಾಯರ ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ ನಡೆಯಿತು. ಅವರು ಮಾಧ್ಯಮಿಕ ಶಾಲೆ ಓದಿದ್ದು ವಿಜಾಪುರದಲ್ಲಿ. 

ಓದಿನ ಕಡೆ ಗಮನ ಹರಿಯದೆ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದರು. ತಾಯಿಗೆ ಓದಿ ಕುಲಕರ್ಣಿ ಕೆಲಸ ಹಿಡಿಯಲೆಂಬ ಆಸೆ. ಹುಡುಗನಿಗೋ ನಾಟಕದ ಹುಚ್ಚು. ಎಲ್ಲಿ ನಾಟಕವೆಂದರೆ ಅಲ್ಲಿಗೆ ಓಡುತ್ತಿದ್ದ. 

ಹನುಮಂತರಾಯರು ಚಿಕ್ಕಂದಿನಲ್ಲೇ ಗಣೇಶೋತ್ಸವಕ್ಕಾಗಿ ಚೌತಿಚಂದ್ರ, ಸುಕನ್ಯ, ಭಕ್ತಧ್ರುವ, ಸತ್ಯವಾನ ಸಾವಿತ್ರಿ, ಕೃಷ್ಣ ಸುಧಾಮ, ತರಲಿಟೊಪಿಗಿ ಮುಂತಾದ ಏಕಾಂಕ ನಾಟಕಗಳ ರಚನೆ ಮಾಡಿ ಪ್ರದರ್ಶನ ಮಾಡುತ್ತಿದ್ದರು. ಕೆರೂರು ವಾಸುದೇವಾಚಾರ್ಯರ ಕೃತಿಗಳನ್ನೋದಿ ಪ್ರೇರಿತರಾಗಿ ತಾವೂ ನಾಟಕಕಾರರಾಗಬೇಕೆಂಬ ಹಂಬಲ ಮೂಡಿತು.  ಮೆಟ್ರಿಕ್‌ ನಪಾಸಾಯಿತು.  ಪುಣೆಗೆ ಪಯಣ ಮಾಡಿದರು.  ಪುಣೆ ನಾಟಕಗಳ ಕೇಂದ್ರವಾಗಿತ್ತು.  ಅಲ್ಲಿ ಮಿಲ್ಟ್ರಿ ಕಾರಕೂನನಾಗಿ ಸೇರಿಕೊಂಡು ಸಂಜೆಯವೇಳೆ  ಹಲವಾರು ನಾಟಕಗಳನ್ನು ನೋಡುತ್ತಿದ್ದರು. ಅಲ್ಲಿ ಹೆಸರಾಂತ ರಂಗ ಕರ್ಮಿಗಳಾದ ಗಡಕರಿ, ಗೋಖಲೆ, ದೇಶಪಾಂಡೆ ಮುಂತಾದವರ ಸಹವಾಸ, ಸಮಾಲೋಚನೆ ಅವಕಾಶ ದೊರಕಿತು.  

ತಾಯಿಯ  ಅನಾರೋಗ್ಯದಿಂದ ವಾಪಸ್ ಊರಿಗೆ ಬಂದ ಹನುಮಂತರಾಯರು ಮೊದಲು ಬರೆದದ್ದು ‘ಸಂಧ್ಯಾರಾಗ’- ಮೂರಂಕದ ನಾಟಕ.  ಇದು ಹಲವಾರು ಪ್ರದರ್ಶನ ಕಂಡು ನಾಟಕಕಾರರೆನಿಸಿದರು.

ಮುಂದೆ ಬಾಗಲಕೋಟೆಯಲ್ಲಿ ಬ್ಯಾಂಕ್ ಉದ್ಯೋಗ ಲಭಿಸಿದಾಗ ಅಲ್ಲಿ ರಂಗ ಚಟುವಟಿಕೆಗಳಿಗೆ  ಅನುಕೂಲಕರವಾದ ವಾತಾವರಣ ದೊರಕಿತು.  ಗುಳೇದಗುಡ್ಡ, ಇಳಕಲ್ ಜನಕ್ಕೆ ನಾಟಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಹನುಮಂತರಾಯರಿಗೆ  ಅಪಾರ ಬೆಂಬಲ ದೊರಕಿತು. ವೀರರಾಣಿ ಕಿತ್ತೂರು ಚೆನ್ನಮ್ಮ ಅಂತಹ ಹಲವಾರು ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ರಕ್ತ ರಾತ್ರಿ, ಚಿತ್ರಾಂಗದ, ಬಾಣಸಿಗ ಭೀಮ, ಅಕ್ಷಯಾಂಬರ, ರಾಜಾ ಹರಿಶ್ಚಂದ್ರ, ಬಡತನದ ಭೂತ, ಮಾತಂಗ ಕನ್ಯೆ, ಕುರುಕ್ಷೇತ್ರ ಮುಂತಾದ ನಾಟಕಗಳಿಂದ ಜನರನ್ನು ರಂಜಿಸಿ  ಖ್ಯಾತಿ ಗಳಿಸಿದರು. ಇವರ ರಂಗ ತಾಲೀಮಿನಲ್ಲಿ ತಯಾರಾದ ನಟರು ಹಾಗೂ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜಗುರು, ಸೋನುಬಾಯಿ ದೊಡ್ಡಮನಿ, ಏಣಗಿ ಬಾಳಪ್ಪ, ಸುಭದ್ರಮ್ಮ ಮನಸೂರ, ಗರೂಡ ಸದಾಶಿವರಾಯರು, ಜುಬೇದಬಾಯಿ ಸವಣೂರ, ಕೆ. ನಾಗರತ್ನ, ಅಂಬುಜಾ, ವಸಂತ ಕುಲಕರ್ಣಿ ಮುಂತಾದ ಪ್ರಸಿದ್ಧರ ಬಹುದೊಡ್ಡ ಶಿಷ್ಯವರ್ಗದ ದಂಡೇ ಇತ್ತು.

ಹನುಮಂತರಾಯರು 1966 ವರ್ಷದ ಮೇ 13ರಂದು ಈ ಲೋಕವನ್ನಗಲಿದರು.

On the birth anniversary of playwright Hanumantha Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ