ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತ್ಯೇಂದ್ರನಾಥ ಬೋಸ್


ಸತ್ಯೇಂದ್ರನಾಥ ಬೋಸ್


ಕ್ವಾಂಟಮ್ ಚಲನವನ್ನಾಧರಿಸಿದ ಸಂಖ್ಯಾ ಶಾಸ್ತ್ರಗಳಲ್ಲಿ ಎರಡು ವಿಧ. ಒಂದು, ಫರ್ಮಿ-ಡಿರ್ಯಾಕ್ ಸಂಖ್ಯಾಶಾಸ್ತ್ರ. ಇನ್ನೊಂದು, ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ. ಇದರಲ್ಲಿ ಎರಡನೆಯ ಸಂಖ್ಯಾಶಾಸ್ತ್ರ ಪದ್ಧತಿಯನ್ನು ಕಂಡು ಹಿಡಿದು ವಿಶ್ವವಿಖ್ಯಾತರಾದ ಭಾರತೀಯ ಭೌತವಿಜ್ಞಾನಿ, ಸತ್ಯೇಂದ್ರನಾಥ ಬೋಸ್.

ಸತ್ಯೇಂದ್ರನಾಥ ಬೋಸ್ 1894ರ ಜನವರಿ 1ರಂದು ಕೊಲ್ಕತ್ತಾದಲ್ಲಿ ಜನಿಸಿದರು. ತಂದೆ ಸುರೇಂದ್ರನಾಥ್ ಇಂಗ್ಲೀಷ್ ಶಿಕ್ಷಣ ಪಡೆದು ಈಸ್ಟ್ ಇಂಡಿಯಾ ರೇಲ್ವೆಯ ಎಂಜಿನೀಯರಿಂಗ್ ವಿಭಾಗದಲ್ಲಿ ಲೆಕ್ಕ ತಪಾಸಿಗರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಆಮೋದಿನಿ ದೇವಿ.  ಐದನೆಯ ವಯಸ್ಸಿನಲ್ಲಿ ಶಾಲೆಗೆ ಸೇರಿದ ಸತ್ಯೇಂದ್ರನಾಥ ಶಾಲೆಯಲ್ಲಿ ಜಾಣ ಹುಡುಗನಾಗಿದ್ದ. ಈತ ಹಿಂದೂ ಸ್ಕೂಲಿನಲ್ಲಿ ಓದುತ್ತಿದ್ದಾಗ ಉಪೇಂದ್ರನಾಥ್ ಬಕ್ಷಿ ಎಂಬ ಶಿಕ್ಷಕರು ಗಣಿತದಲ್ಲಿ ಈತನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದರು. ಅವರ ಪ್ರೋತ್ಸಾಹದಿಂದ ಸತ್ಯೇಂದ್ರನಾಥ್ ಪರೀಕ್ಷೆಯಲ್ಲಿ ಉತ್ತಮ ಗುಣಾಂಕಗಳನ್ನು ಪಡೆದು ಪ್ರೆಸಿಡೆನ್ಸಿ ಕಾಲೇಜು ಸೇರಿದರು. ಇನ್ನೊಬ್ಬ ಖ್ಯಾತ ವಿಜ್ಞಾನಿ ಮೇಘನಾದ ಸಹಾ ಅವರೂ ಅದೇ ಕಾಲೇಜಿಗೆ ಸೇರಿದ್ದರು. ಇಬ್ಬರೂ ಒಳ್ಳೆಯ ಮಿತ್ರರು. ಬಿ‌ಎಸ್‌ಸಿಯಲ್ಲಿ ಸತ್ಯೇಂದ್ರನಾಥ್ ಬೋಸ್ ಮೊದಲನೆಯ ಸ್ಥಾನ ಪಡೆದರೆ ಮೇಘನಾದ ಸಹಾ ಎರಡನೆಯ ಸ್ಥಾನವನ್ನು ಪಡೆದರು. ಎಂಎಸ್‌ಸಿಯಲ್ಲೂ ಅದೇ ಫಲಿತಾಂಶ. ಇಬ್ಬರೂ 1917ರಲ್ಲಿ ಕೊಲ್ಕತ್ತ ವಿಶ್ವವಿದ್ಯಾನಿಲಯದ ಸೈನ್ಸ್ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ ಸೇರಿದರು. ಬೋಧನೆಯೊಂದಿಗೆ ಏನಾದರೂ ಸಂಶೋಧನೆ ನಡೆಸಬೇಕೆಂದು ಅವರು ನಿರ್ಧರಿಸಿದರು. ಇದಕ್ಕಾಗಿ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ತಿಳಿಯಬೇಕಾಗಿತ್ತು. ವಿಜ್ಞಾನದ ಪತ್ರಿಕೆ (ಜರ್ನಲ್) ಗಳನ್ನು ಓದುವುದರಿಂದಷ್ಟೇ ಇದು ಸಾಧ್ಯವಾಗಬಹುದಿತ್ತು. ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಲ್ಲಿಯೂ ಆಗ ಹಲವು ಸಂಶೋಧನಾ ಪತ್ರಗಳು ಬರುತ್ತಿದ್ದವು. ಇವನ್ನು ಓದುವುದಕ್ಕಾಗಿ ಆ ಭಾಷೆಗಳನ್ನು ಬೋಸ್ ಕಲಿತರು. ಕೆಲಸಕ್ಕೆ ಸೇರಿದ ಒಂದು ವರ್ಷದೊಳಗಾಗಿ ಅನಿಲಗಳ ಚಲನಸಿದ್ಧಾಂತಕ್ಕೆ ಸಂಬಂಧಿಸಿದ ಬೋಸ್ ಮತ್ತು ಸಹಾ ಅವರು ಜೊತೆಯಾಗಿ ಮಂಡಿಸಿದ  ಒಂದು ಸಂಶೋಧನಾ ಪತ್ರ ಇಂಗ್ಲೆಂಡಿನ ‘ಫಿಲಸಾಫಿಕಲ್ ಮ್ಯಾಗಸಿನ್’ ನಲ್ಲಿ ಪ್ರಕಟವಾಯಿತು. 1919ರಲ್ಲಿ ‘ಬುಲೆಟಿನ್ ಆಫ್ ಕೊಲ್ಕತ್ತ ಮ್ಯಾಥಮೆಟಿಕಲ್ ಸೊಸೈಟಿ’ ಯಲ್ಲಿ ಬೋಸ್ ಅವರ ಎರಡು ಸಂಶೋಧನಾ ಪತ್ರಗಳು ಪ್ರಕಟವಾದವು. ಇನ್ನೆರಡು ಪತ್ರಗಳು 1920ರಲ್ಲಿ ‘ಫಿಲಸಾಫಿಕಲ್ ಮ್ಯಾಗಸಿನ್’ನಲ್ಲಿ ಪ್ರಕಟವಾದವು.

1921ರಲ್ಲಿ ಡಾಕ್ಕಾ ವಿಶ್ವವಿದ್ಯಾಲಯ ಪ್ರಾರಂಭವಾಯಿತು. ಅದರ ಕುಲಪತಿಯಾಗಿದ್ದವರು ಡಾ. ಹಾರ್ಟೊಗ್. ಅಧ್ಯಯನ ವಿಭಾಗಗಳು ಉಚ್ಛ ಗುಣಮಟ್ಟದ್ದಾಗಿರಬೇಕೆಂದು ಭಾವಿಸಿದ ಅವರು ಬೋಸ್ ಅವರನ್ನು ಭೌತವಿಜ್ಞಾನದಲ್ಲಿ ರೀಡರ್ ಆಗಿ ನೇಮಿಸಿ ಕೊಲ್ಕೊತ್ತದಿಂದ ಡಾಕ್ಕಾಕ್ಕೆ ಕರೆಸಿಕೊಂಡರು.

ಬೋಸ್‌ರಿಂದ ನಡೆದ ಆವಿಷ್ಕಾರವನ್ನು ತಿಳಿಯುವುದಕ್ಕೆ ಮೊದಲು, 19ನೇ ಶತಮಾನದ ಕೊನೆಗೆ ಅಡಿ ಇಟ್ಟ ಒಂದು ಕ್ರಾಂತಿಕಾರಿ ಸಿದ್ಧಾಂತದ ಪರಿಚಯ ಅಗತ್ಯ. ತನ್ನ ಮೇಲೆ ಬೀಳುವ ವಿಕಿರಣವೆಲ್ಲವನ್ನೂ ಹೀರಬಲ್ಲ ವಸ್ತುವನ್ನು ಭೌತಶಾಸ್ತ್ರದಲ್ಲಿ ‘ಬ್ಲ್ಯಾಕ್ ಬಾಡಿ’- ‘ಕೃಷ್ಣಕಾಯ’ ಎಂದು ಕರೆಯುತ್ತಾರೆ. ಇಂಥ ವಸ್ತುವೊಂದು ಹೊರಸೂಸುವ ವಿಕಿರಣದ ತೀವ್ರತೆ ತರಂಗದೂರದೊಂದಿಗೆ ಬದಲಾಗುತ್ತದೆ. ಅತಿ ಹೆಚ್ಚು ತೀವ್ರತೆಯ ವಿಕಿರಣ ಯಾವ ತರಂಗ ದೂರದಲ್ಲಿದೆ ಎಂಬುದು ಕೃಷ್ಣಕಾಯದ ಉಷ್ಣತೆಯನ್ನು ಅವಲಂಬಿಸಿದೆ. ಆದರೆ ಇದಕ್ಕೆ ಸರಿಯಾದ ವಿವರಣೆ ಮಾತ್ರ 19ನೇ ಶತಮಾನದ ಕೊನೆಯವರೆಗೂ ಸಿಕ್ಕಿರಲಿಲ್ಲ.

ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿ ಇಲೆಕ್ಟ್ರಿಕ್ ಬಲ್ಬುಗಳಿಂದ ಅಧಿಕ ಬೆಳಕನ್ನು ಪಡೆಯಬಹುದಾದ ದಾರಿಗಳನ್ನು ಸೂಚಿಸಲು ಆ ವೇಳೆಗೆ ಕೆಲವು ವಿದ್ಯುತ್ ಕಂಪನಿಗಳು ಜರ್ಮನಿಯ ವಿಜ್ಞಾನಿ ಮಾಕ್ಸ್ ಪ್ಲಾಂಕ್‌ನನ್ನು ಕೇಳಿಕೊಂಡುವು. ವಿದ್ಯುತ್ ಬಲ್ಬಿನ ಬಿಸಿತಂತು ಒಂದು ಕೃಷ್ಣಕಾಯಕ್ಕೆ ಸಮಾನ ಎಂದು ಭಾವಿಸಿಕೊಂಡು ಮಾಕ್ಸ್ ಪ್ಲಾಂಕ್, ಕೃಷ್ಣಕಾಯ ವಿಕಿರಣವನ್ನು ಅಧ್ಯಯಿಸಬೇಕಾಯಿತು. 1894ರಿಂದ ಪ್ಲಾಂಕ್ ಈ ಅಧ್ಯಯನವನ್ನು ಪ್ರಾರಂಭಿಸಿದ. ಕೃಷ್ಣಕಾಯವಿಕಿರಣದ ವರ್ತನೆಯನ್ನು ವಿವರಿಸಲು ಅವನು ಒಂದು ಊಹನೆಗೆ ಶರಣಾಗಬೇಕಾಯಿತು. ವಿದ್ಯುತ್ ಕಾಂತೀಯ ಶಕ್ತಿ ಕ್ವಾಂಟಮ್ ರೂಪದಲ್ಲಿರುತ್ತದೆ ಎಂಬುದೇ ಆ ಊಹನೆ. ಅಂದರೆ ವಿಕಿರಣ ಶಕ್ತಿಯು ಒಂದು ಮೂಲಮಾನದ ಗುಣಕವಾಗಿಯೇ ಇರುತ್ತದೆಯೇ ಹೊರತು ಬೇರೆ ರೀತಿಯಲ್ಲಿ ಅಲ್ಲ ಎಂದರ್ಥ. ಇದರ ಆಧಾರದಿಂದ ಪ್ಲಾಂಕ್ ಕೃಷ್ಣಕಾಯದ ವಿಕಿರಣ ನಿಯಮವನ್ನು ವ್ಯಕ್ತಪಡಿಸಿದ. ಪ್ಲಾಂಕ್ ತನ್ನ ಸಿದ್ಧಾಂತವನ್ನು 1900ನೇ ಡಿಸೆಂಬರ್ 14ರಂದು ಮಂಡಿಸಿದ. ಇದು ‘ಕ್ವಾಂಟಂ ಸಿದ್ಧಾಂತ’ ಎಂದು ಮುಂದೆ ಹೆಸರಾಯಿತು. ವಿಕಿರಣ ನಿಯಮವನ್ನು ವ್ಯಕ್ತಪಡಿಸುವ ಪ್ರಕರಣ ವಿಶ್ವವಿದ್ಯಾಲಯಗಳ ಭೌತವಿಜ್ಞಾನ ಪಾಠಪಟ್ಟಿಯಲ್ಲೂ ಸೇರಿತು.

ಕೆಲವು ಲೋಹಗಳ ಮೇಲೆ ವಿಕಿರಣ ಬಿದ್ದಾಗ ಇಲೆಕ್ಟ್ರಾನ್‌ಗಳು ಹೊಮ್ಮುತ್ತವೆ. ಈ ವಿದ್ಯಮಾನವನ್ನು ದ್ಯುತಿ ವಿದ್ಯುತ್ ಪರಿಣಾಮ ಎನ್ನುತ್ತಾರೆ. 19ನೇ ಶತಮಾನದ ಕೊನೆಗೆ ಈ ಪರಿಣಾಮದ ವಿವರಣೆ ಗೊಂದಲದಲ್ಲಿದ್ದಿತು. 1905ರಲ್ಲಿ ಇದಕ್ಕೆ ಸ್ಪಷ್ಟವಾದ ವಿವರಣೆಯನ್ನು ಕ್ವಾಂಟಂ ಸಿದ್ಧಾಂತದ ಆಧಾರದಿಂದ ಆಲ್ಬರ್ಟ್ ಐನ್‌ಸ್ಟೈನ್ ನೀಡಿದರು. ಶಕ್ತಿಯ ನಿಯತ ಅಳತೆಗಳಷ್ಟೇ ವಿಕಿರಣ ಹೊಮ್ಮುತ್ತದೆ ಎಂಬ ಪ್ಲಾಂಕ್ ಕಲ್ಪನೆಯನ್ನು ‘ವಿಕಿರಣದಲ್ಲಿ ಶಕ್ತಿಯ ನಿಯತ ಅಳತೆಗಳನ್ನೊಳಗೊಂಡ ಕಣಗಳಿವೆ’ ಎಂದು ಐನ್‌ಸ್ಟೈನ್ ಇನ್ನೂ ವಿಸ್ತರಿಸಿದರು. ಮುಂದೆ ಇಂಥ ಕಣಗಳಿಗೆ ‘ಫೋಟಾನ್’ ಗಳೆಂದು ಹೆಸರಾಯಿತು.

1924ರ ಮಾರ್ಚ್ ತಿಂಗಳಲ್ಲಿ ಮೇಘನಾದ ಸಹಾ ಡಾಕ್ಕಾಕ್ಕೆ ಬಂದವರು ಬೋಸ್‌ರನ್ನು ಭೇಟಿಯಾದರು. ಅವರಿಬ್ಬರೂ ಭೌತಶಾಸ್ತ್ರದ  ವಿಚಾರಗಳನ್ನೂ ಭೇಟಿಯಾದಾಗಲೆಲ್ಲ ಚರ್ಚಿಸುತ್ತಿದ್ದರು. ಪ್ಲಾಂಕ್ ಪಡೆದ ಕೃಷ್ಣಕಾಯ ವಿಕಿರಣ ನಿಯಮವನ್ನು ಪುಸ್ತಕಗಳಲ್ಲಿದ್ದಂತೆ ವ್ಯತ್ಪತ್ತಿಸುವಾಗ ತನಗಾಗುವ ಅತೃಪ್ತಿಯನ್ನು ಸಹಾರೊಂದಿಗೆ ಬೋಸ್ ತೋಡಿಕೊಂಡರು. ಆಗ ವೂಲ್ಫ್ ಲಾಂಗ್  ಪೌಲಿ ಎಂಬ ಆಸ್ಟ್ರಿಯನ್ ವಿಜ್ಞಾನಿ ನಡೆಸಿದ ಸಂಶೋಧನೆಯನ್ನು ಸಹಾ ಅವರು ತಿಳಿಸಿದರು. ಕ್ವಾಂಟಂ ನಿರ್ಬಂಧಗಳನ್ನು ಅನ್ವಯಿಸುವುದರಲ್ಲಿರುವ  ಸಮಸ್ಯೆಗಳನ್ನು ಕೂಡ ಅವರು ತಿಳಿಸಿದರು.

ಈ ಸುಳಿವಿನಿಂದ ಮಾಕ್ಸ್ ಪ್ಲಾಂಕ್ ನಿಯಮವನ್ನು ಬೇರೆಯೇ ರೀತಿಯಲ್ಲಿ ಮರುವ್ಯತ್ಪತ್ತಿಸಲು ಬೋಸ್ ನಿಶ್ಚಯಿಸಿದರು. ವಿಳಂಬಿಸದೆ ಪ್ರಾಯಶಃ ಮಾರ್ಚ್-ಏಪ್ರಿಲ್ ತಿಂಗಳೊಳಗೆ ಹಾಗೆ ವ್ಯತ್ಪತ್ತಿಸಿದರು ಕೂಡ. ಹೀಗೆ ಮಾಡುವಾಗ ತನ್ನಿಂತಾನೇ ಸಹಜವಾಗಿಯೋ ಉದ್ದೇಶಪೂರ್ವಕವಾಗಿಯೋ ಹೊಸತೊಂದು ಚಿಂತನೆಯನ್ನು ಅವರು ಭೌತ ಕ್ಷೇತ್ರದಲ್ಲಿ ಬಿತ್ತಿದರು.

ಫೋಟಾನ್‌ಗಳದ್ದಾಗಲೀ ಇಲೆಕ್ಟ್ರಾನ್‌ಗಳದ್ದಾಗಲೀ ಕಣಗಳ ಒಂದು ದೊಡ್ಡ ಸಂದಣಿ ಇದೆ ಎಂದುಕೊಳ್ಳಿ. ಇಡೀ ಸಂದಣಿಯಲ್ಲಿರುವ ಒಟ್ಟು ಶಕ್ತಿಯು ವಿವಿಧ ಕಣಗಳಲ್ಲಿ  ಹಂಚಿಹೋಗುತ್ತದೆ.  ಹೀಗೆ ವಿವಿಧ ಶಕ್ತಿ ಮೌಲ್ಯಗಳಿರುವ ಕಣಗಳ ಸಂಖ್ಯಾ ಮಾಹಿತಿಯೇ ‘ಸ್ಟಾಟಿಸ್ಟಿಕ್ಸ್’. ಇದನ್ನೇ ಕಣಗಳಲ್ಲಿ ಶಕ್ತಿಯ ಹಂಚಿಕೆ ಎನ್ನುವುದು. ಒಂದು ನಿಶ್ಚಿತ ಸ್ಥಿತಿಯಲ್ಲಿ – ಇದನ್ನು ಕ್ವಾಂಟಂ ಸ್ಥಿತಿ ಎನ್ನುತ್ತಾರೆ – ಕಣಗಳ ಸಂಖ್ಯೆ ಎಷ್ಟಿರುತ್ತದೆ ಎಂಬುದನ್ನು ಈ ಹಂಚಿಕೆ ಅವಲಂಬಿಸಿದೆ. ಒಂದು ನಿಶ್ಚಿತ ಸ್ಥಿತಿಯಲ್ಲಿ ಒಂದೇ ಇಲೆಕ್ಟ್ರಾನ್ ಇರಬಲ್ಲುದು ಎಂದು ಪೌಲಿ ಸಾರಿದ. ಇದನ್ನು ಅನುಸರಿಸಿ ಎನ್ರಿಕೊ ಫರ್ಮಿ ಮತ್ತು ಪಾಲ್ ಡಿರಾಕ್, ಇಲೆಕ್ಟ್ರಾನ್‌ಗಳಂಥ ಕಣಗಳ ಸಂದಣಿಯಲ್ಲಿ ಶಕ್ತಿಯ ಹಂಚಿಕೆಯನ್ನು ಪಡೆದರು. ಅದು ‘ಫರ್ಮಿ-ಡಿರಾಕ್ ಹಂಚಿಕೆ’ ಎಂದು ಹೆಸರಾಗಿದೆ. ಆ ಹಂಚಿಕೆಯನ್ನು ಪಾಲಿಸುವ ಕಣಗಳನ್ನು ಫರ್ಮಿಯಾನ್‌ಗಳೆಂದು ಕರೆಯುತ್ತಾರೆ. ಯಾವುದೇ ಒಂದು ನಿಶ್ಚಿತ ಸ್ಥಿತಿಯಲ್ಲಿ ಇರಬಹುದಾದ ಫೋಟಾನ್‌ಗಳ ಸಂಖ್ಯೆಗೆ ಮಿತಿ ಇಲ್ಲ ಎಂದು ಭಾವಿಸಿ ಮುಂದುವರಿದವರು ಬೋಸ್. ಫೋಟಾನ್‌ಗಳಂಥ ಕಣಗಳು ಮುಂದೆ ‘ಬೋಸಾನ್’ ಗಳೆಂದು ಹೆಸರಾದುವು.

ತನ್ನ ನೂತನ ಸಂಶೋಧನಾ ಪತ್ರವನ್ನು ಪ್ರಕಟಣೆಗಾಗಿ ‘ಫಿಲಸಾಫಿಕಲ್ ಮ್ಯಾಗಸಿನ್’ಗೆ ಬೋಸ್ ಕಳಿಸಿದರು. ಏಕೋ, ಈ ಬಾರಿ ಬೋಸ್ ಅವರ ಪತ್ರ ಪ್ರಕಟಣೆಗಾಗಿ ಸ್ವೀಕೃತವಾಗಲಿಲ್ಲ. ಬೋಸ್ ಅವರಿಗೆ ಸಹಜವಾಗಿ ನಿರಾಶೆಯಾಯಿತು. ಜರ್ಮನ್ ಭಾಷೆಯಲ್ಲಾದರೂ ಪ್ರಕಟವಾಗಬಹುದು ಎಂಬ ಆಸೆಯಿಂದ ಅವರು ಅದನ್ನು 1924ನೇ ಜೂನ್ 4ರಂದು ಒಂದು ಕೋರಿಕೆಯೊಂದಿಗೆ ಐನ್‌ಸ್ಟೈನ್‌ಗೆ ಕಳಿಸಿದರು. ತಾನು ಕಳಿಸುತ್ತಿರುವ ಪತ್ರವನ್ನು ಜರ್ಮನ್ ಭಾಷೆಗೆ ಅನುವಾದಿಸಿ ‘ಸೀಟ್ಸ್‌ಕ್ರಿಫ್ಟ್‌ಫರ್ ಫಿಸಿಕ್ಸ್’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಬೇಕೆಂಬುದೇ ಆ ಕೋರಿಕೆಯಾಗಿತ್ತು.

ಅದೃಷ್ಟವಶಾತ್ ತನಗೆ ಬರುವ ‘ಅಸಂಖ್ಯಾತ ಪತ್ರಗಳಲ್ಲಿ ಇದೂ  ಒಂದು’ ಎಂದು ಐನ್‌ಸ್ಟೈನ್, ಬೋಸ್ ಪತ್ರವನ್ನು ಕಡೆಗಣಿಸಲಿಲ್ಲ. ಬೋಸ್ ಅವರ ಸಂಶೋಧನಾ ಪತ್ರವನ್ನು ಸೂಕ್ಷ್ಮವಾಗಿ ಓದಿ ಅದರ ಮಹತ್ವವನ್ನು ಐನ್‌ಸ್ಟೈನ್ ಗ್ರಹಿಸಿದರು. ತಾನೇ ಅದನ್ನು ಅನುವಾದಿಸಿ ಪ್ರಕಟವಾಗುವಂತೆ ನೋಡಿಕೊಂಡರು. ಬೋಸ್ ಸಂಶೋಧನೆ ಮುಖ್ಯವಾದುದೆಂಬ ಟಿಪ್ಪಣಿಯನ್ನೂ ಸೇರಿಸಿದರು. ಸ್ವಲ್ಪ ಸಮಯದ ಅನಂತರ ಬೋಸ್ ಸಂಶೋಧನೆಯನ್ನು – ಅಂದರೆ ಫೋಟಾನ್‌ಗಳಲ್ಲಿ ಶಕ್ತಿಯ ಹಂಚಿಕೆಯನ್ನು – ಐನ್‌ಸ್ಟೈನ್ ಪರಮಾಣುಗಳಿಗೂ ವಿಸ್ತರಿಸಿದರು. ಹೀಗೆ ಹುಟ್ಟಿಕೊಂಡ ಶಕ್ತಿ ಹಂಚಿಕೆಯ ಕ್ರಮ ‘ಬೋಸ್-ಐನ್‌ಸ್ಟೈನ್  ಸ್ಟಾಟಿಸ್ಟಿಕ್ಸ್’ ಅಥವಾ ‘ಬೋಸ್ ಐನ್‌ಸ್ಟೈನ್ ಹಂಚಿಕೆ’ ಎಂದೇ ಖ್ಯಾತವಾಯಿತು. ಈ ಹಂಚಿಕೆಯನ್ನು ಅವಲಂಬಿಸಿಯೇ ‘ಬೋಸ್ ಸಾಂದ್ರೀಕರಣ’ [ಬೋಸ್ ಕಂಡೆನ್ಸೇಷನ್] ಎಂಬ ವಿಶಿಷ್ಟ ವಸ್ತುಸ್ಥಿತಿಯನ್ನು ಐನ್‌ಸ್ಟೈನ್ 1925ರಲ್ಲಿ ಕಲ್ಪಿಸಿದರು. ಸುಮಾರು 70 ವರ್ಷಗಳ ಅನಂತರ ಈ ಕಲ್ಪನೆ ಪ್ರಯೋಗಾಲಯದಲ್ಲಿ ಸಾಕಾರವಾಯಿತು. ಕೊಲರಾಡೊ ವಿಶ್ವವಿದ್ಯಾಲಯಕ್ಕೆ ಸೇರಿದ ಪ್ರಯೋಗಾಲಯದಲ್ಲಿ 1995ನೇ ಜೂನ್ 5 ರಂದು ಶುದ್ಧವಾದ ಬೋಸ್ ಸಾಂದ್ರೀಕರಣ ಸಾಧ್ಯವಾಯಿತು. 2000 ರುಬಿಡಿಯಮ್ ಪರಮಾಣುಗಳನ್ನು ಒಳಗೊಂಡ ಸಂದಣಿಯಲ್ಲಿ, 170 ನಾನೊ ಕೆಲ್ವಿನ್ ಉಷ್ಣತೆಯಲ್ಲಿ ಈ ಅತಿ ಶೀತಸ್ಥಿತಿ ಮೈತಾಳಿತು. ಈ ಸ್ಥಿತಿಯಲ್ಲಿರುವ ವಸ್ತುವನ್ನು ‘ಬೋಸ್ ಕಂಡೆನ್ಸೇಟ್’ ಎಂದು ಕರೆಯುತ್ತಾರೆ.

ಕೃಷ್ಣಕಾಯ ವಿಕಿರಣದ ಪ್ಲಾಂಕ್ ನಿಯಮವನ್ನು ವ್ಯತ್ಪತ್ತಿಸಲು ಸತ್ಯೇಂದ್ರನಾಥ್ ಬೋಸ್ ಉಪಯೋಗಿಸಿದ ಹಂಚಿಕೆ ಕಂಡೆನ್ಸೇಟ್ ರೂಪದಲ್ಲಿ ಮಹತ್ವದ ಫಲ ಕೊಟ್ಟಿತಷ್ಟೆ? ಬೋಸ್ ಪತ್ರದ ಪರವಾಗಿ ಐನ್‌ಸ್ಟೈನ್ ಪ್ರಾರಂಭದಲ್ಲೇ ತಳೆದ ನಿಲುವನ್ನು ಇದು ಬಲವಾಗಿ ಸಮರ್ಥಿಸುತ್ತದೆ. ನೊಬೆಲ್ ಪ್ರಶಸ್ತಿಯನ್ನು ಬೋಸ್ ಪಡೆಯಲಿಲ್ಲ ನಿಜ. ಆದರೆ ಬೋಸ್ ಸಾಂದ್ರೀಕರಣಕ್ಕಾಗಿ 2001ನೇ ವರ್ಷದ ಭೌತ ನೊಬೆಲ್ ಪ್ರಶಸ್ತಿಯು ಅಮೆರಿಕದ ಮೂವರು – ಎರಿಕ್ ಕಾರ್ನೆಲ್, ವೂಲ್ಫ್ ಗಾಂಗ್ ಕೆಟರ್ಲ್ ಮತ್ತು ಕಾರ್ಲ್ ವೈಮನ್ – ವಿಜ್ಞಾನಿಗಳಿಗೆ ಸಂದಿತು. ಬೋಸ್ ಅವರದ್ದು ನೊಬೆಲ್ ಮಟ್ಟದ ಸಂಶೋಧನೆ ಆಗಿದ್ದುದಕ್ಕೆ ಬೇರೆ ಪುರಾವೆ ಬೇಕಿಲ್ಲ.

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ಧಿಗೆ ಬಂದದ್ದು  ‘ದೇವ ಕಣ - ಗಾಡ್ ಪಾರ್ಟಿಕಲ್’ ಪತ್ತೆಮಾಡಿದೆವು ಎಂದು ವಿಜ್ಞಾನಿಗಳು ಪ್ರಕಟಿಸಿದ ಸುದ್ಧಿ.   “ಈ ಗಾಡ್ ಪಾರ್ಟಿಕಲ್ ಅನ್ವೇಷಣೆಯಲ್ಲಿ ಪ್ರಥಮ ಸಂಶೋಧನಾ ಕಾರ್ಯ ನಿರ್ವಹಿಸಿದವರು ಭಾರತದ ಸತ್ಯೇಂದ್ರನಾಥ ಬೋಸ್,  ಹಾಗಾಗಿ ‘ಭಾರತ ದೇಶವು ಈ ಗಾಡ್ ಪಾರ್ಟಿಕಲ್ ಅನ್ವೇಷಣೆಯಲ್ಲಿ ಚಾರಿತ್ರಿಕವಾಗಿ ತಂದೆಯ ಸ್ಥಾನ ಹೊಂದಿದೆ” ಎಂದು ಸಿ ಇ ಆರ್ ಎನ್ ಪ್ರಮುಖ ವಿಜ್ಞಾನಿಗಳಾದ ಪಾಲೋ ಗಿಬೇಲಿನೋ ಅವರು ನುಡಿದಿದ್ದರು. ಬೋಸ್ ಮತ್ತು ಐನ್ ಸ್ಟೀನ್ ಅವರ ನಂತರದಲ್ಲಿ ಪೀಟರ್ ಹಿಗ್ಸ್ ಅವರು ಈ ಕುರಿತು ಆಳವಾದ ಸಂಶೋಧನೆ ನಡೆಸಿದ್ದರು. ನಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ವರ್ಷದಲ್ಲಿ  ಸಿ ಇ ಆರ್ ಎನ್ ಸಂಸ್ಥೆಯ ವಿಜ್ಞಾನಿಗಳ ಬೃಹತ್ ತಂಡ ಈ ಕುರಿತಾದ ಮಹತ್ವದ ಸಾಧನೆಗೆ ದಾಫುಗಾಲಿಟ್ಟಿದೆ.

ಸತ್ಯೇಂದ್ರನಾಥ ಬೋಸ್ ಶಾಂತಿ ಮತ್ತು ನಿಶ್ಯಸ್ತ್ರೀಕರಣ ಪ್ರತಿಪಾದಕರು ಕೂಡ ಆಗಿದ್ದರು. ಅವರು ಸೋವಿಯತ್ ಒಕ್ಕೂಟ, ಡೆನ್ಮಾರ್ಕ್, ಚೆಕೊಸ್ಲೊವಾಕಿಯಗಳನ್ನೊಳಗೊಂಡು ಅನೇಕ ದೇಶಗಳಿಗೆ ಭೇಟಿಕೊಟ್ಟರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬ್ರಿಟಿಷರ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ದೇಶದ ಸ್ವಾತಂತ್ರ್ಯದ ಅವಶ್ಯಕತೆಯನ್ನು ಚೆನ್ನಾಗಿ ಅರಿತಿದ್ದರು. ಅವರು ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ತತ್ವಜ್ಞಾನ, ಕಲೆ, ಸಾಹಿತ್ಯ ಮೊದಲಾದ ವಿಷಯಗಳ್ಲೂ ಆಸಕ್ತಿಯುಳ್ಳವರಾಗಿದ್ದರು.

ವಿಜ್ಞಾನದಲ್ಲಿ ಅವರ ಸೇವೆಯನ್ನು ಮಾನ್ಯಮಾಡಿ ಭಾರತ ಸರಕಾರ ಅವರಿಗೆ 1954ರಲ್ಲಿ ಪದ್ಮವಿಭೂಷಣ ಗೌರವವನ್ನು ನೀಡಿತು. ಸತ್ಯೇಂದ್ರನಾಥ್ ಬೋಸ್ 1974ರಲ್ಲಿ ನಿಧನರಾದರು.

ಪ್ರಮುಖ ಆಧಾರ:   ಅಡ್ಯನಡ್ಕ ಕೃಷ್ಣಭಟ್, ಬಾಲವಿಜ್ಞಾನ ಮಾಸ ಪತ್ರಿಕೆ - ಆಗಸ್ಟ್ 2010. 

On the birth anniversary of great physicist  Satyendranath Bose, known for his great contribution to world on quantum mechanics

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ