ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉದಯಶಂಕರ ಪುರಾಣಿಕ


 ಉದಯಶಂಕರ ಪುರಾಣಿಕ


ಇಂದು ನಮ್ಮ ಆತ್ಮೀಯರೂ ಕನ್ನಡ ತಂತ್ರಜ್ಞಾನದಲ್ಲಿ ಮಹತ್ವದ ಕೊಡುಗೆದಾರರೂ ಆದ ಉದಯ ಶಂಕರ ಪುರಾಣಿಕರ ಜನ್ಮದಿನವಾಗಿದೆ.  ಇವರು ಆತ್ಮೀಯ ವಲಯದಲ್ಲಿ ಉದಯ ಪುರಾಣಿಕ್ ಎಂದೇ ಪರಿಚಯಗೊಂಡಿರುವವರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಕುಟುಂಬಗಳಲ್ಲಿ ಪುರಾಣಿಕ್ ಕುಟುಂಬ ಪ್ರಮುಖವಾದುದು.  ಶ್ರೀ ಅನ್ನದಾನಯ್ಯ ಪುರಾಣಿಕ್ ಮತ್ತು ಡಾ. ಸಿದ್ಧಯ್ಯ ಪುರಾಣಿಕ್ ಅವರನ್ನು ಈ ಕನ್ನಡ ನಾಡಿನಲ್ಲಿ ಅರಿಯದವರೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡಿನ ಏಕೀಕರಣ ಚಳುವಳಿಯ ಪ್ರಮುಖ; ಬರಹಗಾರ, ಅನೇಕ ಸಂಘ ಸಂಸ್ಥೆಗಳನ್ನು ಬೆಳೆಸಿದ  ಶ್ರೀ ಅನ್ನದಾನಯ್ಯ ಪುರಾಣಿಕರ ಪುತ್ರರಾದ  ನಮ್ಮೆಲ್ಲರ ಆತ್ಮೀಯರಾದ ಉದಯ ಶಂಕರ ಪುರಾಣಿಕರು ವೃತ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರಾಗಿದ್ದರೂ ಕನ್ನಡದ ಪ್ರೀತಿಯಿಂದ ಅವರು ಯಾವುದೇ ಸದ್ದುಗದ್ದಲವಿಲ್ಲದೆ ಅಪಾರ ಕೆಲಸ ಮಾಡುತ್ತಿರುವವರಾಗಿದ್ದಾರೆ.  ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ, ಜಪಾನುಗಳಲ್ಲಿ ಹಿಂದೆ ಕೆಲಸ ಮಾಡಿರುವ ಇವರು ಪ್ರಸಕ್ತದಲ್ಲಿ ಐ.ಬಿ.ಎಮ್ ಸಂಸ್ಥೆಯ ಹಿರಿಯ ಪ್ರೊಗ್ರಾಮಿಂಗ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ನಾವು ಕಂಪ್ಯೂಟರ್ ತಂತ್ರಜ್ಞಾನದ ಅಳವಡಿಕೆಯನ್ನು ಕಾಣುತ್ತಿರುವ  ಸಹಕಾರಿ ಬ್ಯಾಂಕುಗಳು, ಬೆಂಗಳೂರು ದೂರದರ್ಶನ ಕೇಂದ್ರ, ಎ.ಟಿ.ಎಂ, ಇ-ವ್ಯಾಲೆಟ್, ಮೊಬೈಲ್ ಫೋನ್ಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಲು ಕೇಂದ್ರ ಸರ್ಕಾರ ಹೊರ ತಂದಿರುವ ಆದೇಶ, ಕಾಲ್ ಸೆಂಟರ್, ಇ-ಪುಸ್ತಕ ಮತ್ತು ಇ-ಪ್ರಕಟಣೆಗಳು ಮುಂತಾದವುಗಳಲ್ಲಿ ಉದಯ ಪುರಾಣಿಕರ ಮಹತ್ವದ ಪರಿಶ್ರಮವಿದೆ.  ಇವರ ಒತ್ತಾಯದ ಮೇರೆಗೆ ಅಮೆಜಾನ್ ಅಂತಹ ಸಂಸ್ಥೆಗಳು ತನ್ನ ಭಾರತದ ಕಾಲ್ ಸೆಂಟರ್ಗಳಲ್ಲಿ ಕನ್ನಡ ಬಳಸಲು ಪ್ರಾರಂಭಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಉದಯ ಪುರಾಣಿಕ್ ಅವರ  ಜ್ಞಾನ ಕೇವಲ ತಂತ್ರಜ್ಞಾನಕ್ಕೆ ಸೀಮಿತವಾದುದಲ್ಲ.  ವೇದ, ಉಪನಿಷತ್ತುಗಳು, ವಚನ ಸಾಹಿತ್ಯದಿಂದ, ನವ್ಯ ಮತ್ತು ಇಂದಿನ ಫೇಸ್ಬುಕ್ ಬರಹಗಳ ಬಗ್ಗೆ  ಅವರು ವಿಸ್ತೃತವಾದ ಮುಕ್ತ ಮನೋಭಾವದ ಆಸಕ್ತಿಹೊಂದಿದವರಾಗಿದ್ದಾರೆ.  

ಉದಯ ಪುರಾಣಿಕರು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಕನ್ನಡ ಭಾಷೆಯಲ್ಲಿ 1500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು ಅವು  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದೆ.  ಇಂಗ್ಲಿಷ್ ಭಾಷೆಯಲ್ಲಿ ಇವರು ಬರೆದಿರುವ ಹಲವು ಪುಸ್ತಕಗಳು ವಿದೇಶದಲ್ಲಿ ಪ್ರಕಟಗೊಂಡಿದೆ.  

ವಿಶಿಷ್ಟ ತಂತ್ರಜ್ಞರಾದ ಉದಯ ಪುರಾಣಿಕರಿಂದ ವಿಜ್ಞಾನ ಯುಗದಲ್ಲೂ ಮಹತ್ವದ ಕೊಡುಗೆಗಳು ಸಂದಿವೆ.  ವಿಶ್ವದಾದ್ಯಂತ ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳ ಆರೋಗ್ಯ ತಪಾಸಣೆಗೆ ಬಳಸಲಾಗುತ್ತಿರುವ  ಅಲ್ಟ್ರಾಸೌಂಡ್ ತಂತಜ್ಞಾನಕ್ಕೆ ಬೇಕಾದ ತಂತ್ರಾಂಶವನ್ನು ವಿಶ್ವದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿದ ಕೀರ್ತಿ ಇವರದ್ದಾಗಿದೆ.  ನೂರಾರು ವರ್ಷಗಳ ಹಿಂದಿನ ಹಸ್ತಪ್ರತಿ, ತಾಳೆಗರಿ, ಹಳೆಯ ಪುಸ್ತಕಗಳು ಮತ್ತು ಪ್ರಕಟಣೆಗಳನ್ನು ಡಿಜಿಟಲ್ ದಾಖಲೆಯಾಗಿ ಪರಿವರ್ತಿಸಲು ಇವರು ಅಭಿವೃದ್ಧಿ ಪಡಿಸಿದ ಕೋಲ್ಡ್ ಸ್ಕಾನಿಂಗ್ ತಂತ್ರಜ್ಞಾನವನ್ನು ವಿಶ್ವದ ಹಲವು ಪ್ರಮುಖ ವಸ್ತು ಸಂಗ್ರಹಾಲಯಗಳು ಬಳಸುತ್ತಿವೆ.  ಭವಿಷ್ಯದ ತಂತ್ರಜ್ಞಾನವೆಂದು ಪರಿಗಣಿಸಲಾಗಿರುವ ಇಂಟರ್ನೆಟ್ ಆಫ್ ತಿಂಗ್ಸ್ (IOTIOT), ಸೈಬರ್ ಸುರಕ್ಷತೆ ತಂತ್ರಜ್ಞಾನ, ಡಾಟಾ ಅನೆಲೆಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರ ಸೇವೆಯನ್ನು ವಿಶ್ವದ ಪ್ರಮುಖ ಉದ್ಯಮಗಳು, ರೀಟೇಲ್ ಮಾಲ್ಗಳು ಮತ್ತು ಬ್ಯಾಂಕುಗಳು ಬಳಸಿಕೊಳ್ಳುತ್ತಿವೆ.  

ಮೈಸೂರು ವಿಶ್ವವಿದ್ಯಾಲಯದ ಡಿಜಿಟಲ್ ವಿಶ್ವಕೋಶ ಯೋಜನೆ, ಮಾಹಿತಿ ತಂತ್ರಜ್ಞಾನ ವಿಶ್ವಕೋಶ ಯೋಜನೆ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳು, ಸರ್ಕಾರಗಳು ಮತ್ತು ಸಂಸ್ಥೆಗಳ ಜನಪರ ಯೋಜನೆಗಳಲ್ಲಿ ಪ್ರಮುಖ ಪಾತ್ರವನ್ನು ಪುರಾಣಿಕರು ನಿರ್ವಹಿಸುತ್ತಿದ್ದಾರೆ.  ಕೆಲವು ಕಿರುಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ  ಬರೆದಿದ್ದಾರೆ.  ಫೇಸ್ಬುಕ್ ವಲಯದಲ್ಲಿ ರಕ್ತದಾನಿಗಳ ಗುಂಪನ್ನು ಹುಟ್ಟುಹಾಕಿದ್ದಾರೆ.  ಗ್ರಾಮೀಣ ವಲಯದಲ್ಲಿ ಅನೇಕ ಸಮಾಜಕ್ಕೆ ಅನುಕೂಲಕರವಾಗುವಂತಹ ಕೆಲಸಗಳನ್ನೂ ಮಾಡುತ್ತಾ ಬಂದಿದ್ದಾರೆ. ಅವರ ವಿಶಿಷ್ಟ ಅಂಕಣಗಳು ನಿರಂತರವಾಗಿ ಓದುಗರನ್ನು ತಣಿಸುತ್ತಿವೆ.  ಸಾಹಿತ್ಯ ಸಮ್ಮೇಳನವೂ ಒಳಗೊಂಡಂತೆ ಅವರ ಉಪನ್ಯಾಸಗಳು ದೇಶ ವಿದೇಶಗಳ ವಿವಿಧ ವೇದಿಕೆಗಳಲ್ಲಿ ಹರಿಯುತ್ತಿದೆ.  ಕೇಂದ್ರ ಸರ್ಕಾರದ ರಾಜ್ಯಭಾಷೆಗಳ ತಾಂತ್ರಿಕ ಅನುಷ್ಠಾನದ ಸಲಹಾ ಸಮಿತಿಯಲ್ಲೂ ಅವರ ಪಾತ್ರವಿದೆ.  ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರ ಪ್ರಧಾನ ಸಂಚಾಲಕತ್ವದಲ್ಲಿ 'ಸಾರ್ವಜನಿಕ ಜಾಲತಾಣಗಳು ಮತ್ತು ಸಾಹಿತ್ಯ'ದಂತಹ ಕಮ್ಮಟಕಗಳನ್ನು ನಡೆಸಿದೆ.

ಇಷ್ಟೆಲ್ಲಾ ಸಾಧಿಸಿದ್ದರೂ ತಮ್ಮನ್ನು ಸಾಧಾರಣರಂತೆ ಬಿಂಬಿಸಿಕೊಳ್ಳುವ ಉದಯ ಪುರಾಣಿಕರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಸದಾ ಜನಹಿತದ ಕುರಿತಾಗಿ ಚಿಂತಿಸುತ್ತಿರುತ್ತಾರೆ.  ಆತ್ಮೀಯ ಉದಯ ಶಂಕರ ಪುರಾಣಿಕರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳುತ್ತಾ ಅವರ ಸೇವೆ ಎಲ್ಲೆಡೆ ಸದ್ವಿನಿಯೋಗವಾಗುವಂತಹ ವಾತಾವರಣ ಮೂಡಲಿ ಎಂದು ಹಾರೈಸೋಣ.

On the birth day of our great friend, great contributor in technology Udaya Shankar Puranika Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ