ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಾ.ವೆಂ. ಆಚಾರ‍್ಯ


ಪಾ.ವೆಂ. ಆಚಾರ‍್ಯ


ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮತ್ತು ಹಾಸ್ಯಬರಹಗಳ ಲೋಕದಲ್ಲಿ ಪಾ.ವೆಂ. ಆಚಾರ‍್ಯ ಅಮರ ಹೆಸರು.

ಪಾ.ವೆಂ. ಆಚಾರ‍್ಯ  ಅಥವಾ ಪಾವೆಂ ಎಂದೇ ಖ್ಯಾತರಾದ ಪಾಡಿಗಾರು ವೆಂಕಟರಮಣ ಆಚಾರ‍್ಯ ಅವರು 1915ರ ಫೆಬ್ರವರಿ 6ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಲಕ್ಷ್ಮೀನಾರಾಯಣ ಆಚಾರ್‍.‍ ತಾಯಿ ಸೀತಮ್ಮ. ಉಡುಪಿಯ ಬಳಿಯ ಅನಂತೇಶ್ವರದಲ್ಲಿ ಎಸ್ಎಸ್ಎಲ್‍ಸಿವರೆಗೆ ಓದಿದ ಪಾವೆಂ ನಂತರ ಹಿಂದಿ  ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕೆಲಕಾಲ ಅಂಗಡಿ ಗುಮಾಸ್ತರಾಗಿ, ಕಂಪನಿಯ ಕಾರ‍್ಯದರ್ಶಿಯಾಗಿ, ಶಿಕ್ಷಕರಾಗಿಯೂ ದುಡಿದರು. ನಂತರ ಪತ್ರಿಕೋದ್ಯಮಕ್ಕೆ ಅಡಿ ಇಟ್ಟರು.

ಪಾವೆಂ ಅವರದ್ದು ಪ್ರಗತಿಪರ ಧೋರಣೆ. ಲೋಕ ಶಿಕ್ಷಣ ಟ್ರಸ್ಟ್ ಸೇರಿ, ಕರ್ಮವೀರ ಪತ್ರಿಕೆಯ ಉಪಸಂಪಾದಕರಾಗಿ ಕಸ್ತೂರಿಯ ಸಂಪಾದಕರಾಗಿ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದದ್ದು.  

ಪಾವೆಂ ಕಿಶೋರಾವಸ್ಥೆಯಿಂದಲೇ ಕಾವ್ಯರಚನೆ ಪ್ರಾರಂಭ ಮಾಡಿದ್ದರು. ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧಗಳಲ್ಲಿ ಅವರದ್ದು ವಿಶಿಷ್ಟ ಕಲೆ. ತುಳುಭಾಷೆಯಲ್ಲೂ ಅವರು ಸಾಹಿತ್ಯ ನಿರ್ಮಾಣ ಮಾಡಿದ್ದರು. ಪಾವೆಂ, ಆಚಾರ‍್ಯ, ಲಾಂಗೂಲಾಚಾರ‍್ಯ, ಮುಂತಾದ ನಾಮಧೇಯದಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಹಾಸ್ಯ ಲೇಖನ ಬರೆದ ದಾಖಲೆ ಅವರದ್ದು.

ಪ್ರಹಾರ, ಲೋಕದ ಡೊಂಕು, ವಿಪರೀತ, ವಕ್ರದೃಷ್ಟಿ ಪಾವೆಂ ಅವರ ಪ್ರಮುಖ ಪ್ರಬಂಧ ಸಂಕಲನಗಳು. ಅವರ ಕವನ ಸಂಕಲನಗಳು  ‘ಕೆಲವು ಪದ್ಯಗಳು’ ಮತ್ತು 'ಬಯ್ಯಮಲ್ಲಿಗೆ' ತುಳು ಕವನಗಳು. ಅವರ ಸಮಗ್ರ ಕಾವ್ಯ 'ಹೌಸಿಂಗ್ ಕಾಲನಿ' ಪ್ರಕಟವಾಗಿದೆ.  ಪದಾರ್ಥ ಚಿಂತಾಮಣಿಯಲ್ಲಂತೂ  ಪದದ ಮೂಲ ಶೋಧಿಸಿ  ಅವರು ನೀಡುತ್ತಿದ್ದ ಅರ್ಥ ಓದುಗನಲ್ಲಿ ಬೆರಗು ಹುಟ್ಟಿಸುತ್ತಿತ್ತು. 'ಮಂಜೂಷಾ' ಅವರ ಕೊನೆಯ ಕೃತಿ. ಅವರ ಸಮಗ್ರ ಕಾವ್ಯ"ಹೌಸಿಂಗ್ ಕಾಲನಿ" ಪ್ರಕಟವಾಗಿದೆ. ಪ್ರಕಟವಾಗದ ಬರಹಗಳೂ ಅನೇಕ ಇವೆ ಎಂಬುದು ಅವರ ಕುರಿತ ಅಧ್ಯಯನಶೀಲರ ಮಾತು. 

ಪಾ.ವೆಂ. ಆಚಾರ‍್ಯರಿಗೆ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಶ್ರೇಷ್ಠ ಸಾಧನೆಗಾಗಿ ಗೋಯಂಕ ಪ್ರಶಸ್ತಿ ದೊರೆತದ್ದು ವಿಶೇಷ. ಈ ಪ್ರಶಸ್ತಿ ಪಡೆದವರಲ್ಲಿ ದೈನಂದಿನ ಪತ್ರಿಕೆಗೆ ಸಂಬಂಧಿಸಿದವರೇ  ಹೆಚ್ಚು ಎಂಬ ಹಿನ್ನೆಲೆಯಲ್ಲಿ ಕಸ್ತೂರಿಯಂತಹ ಮಾಸ ಪತ್ರಿಕೆ ಸಂಪಾದಕರಿಗೆ ಅದು ಸಂದಿತೆಂದರೆ ಅದು ಕಸ್ತೂರಿ ಪತ್ರಿಕೆಯ ಘನತೆಯ ದ್ಯೋತಕ. ಆದರೆ ದುರದೃಷ್ಟವಶಾತ್  ಆ ಪ್ರಶಸ್ತಿ ಸ್ವೀಕರಿಸುವ ಮೊದಲೇ ಅಂದರೆ 1992ರ ಮೇ 4ರಂದು ಪಾವೆಂ  ಈ ಲೋಕದಿಂದ ನಿರ್ಗಮಿಸಿದ್ದರು.  ಪಾವೆಂ  ಅವರಿಗೆ ಮುಂಬಯಿ ಸರಕಾರದ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಪಿ.ಆರ್.ರಾಮಯ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳೂ ಸಂದಿದ್ದವು.

On the birth anniversary of great journalist and writer Padigaru Venkataramana Acharya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ