ಪ್ರಭಾ ಮಟಮಾರಿ
ಪ್ರಭಾ ಮಟಮಾರಿ ನಿಧನ
ಬರಹಗಾರರಾಗಿ, ಕನ್ನಡ ನಾಡಿನ ಹೊರಗಿನ ಹೈದರಾಬಾದಿನಲ್ಲಿ ಸಕ್ರಿಯ ಕನ್ನಡ ರಾಯಭಾರಿಯಾಗಿ ಮತ್ತು ಬಹುಭಾಷಾ ಸಂಸ್ಕೃತಿಗಳ ಸಕ್ರಿಯ ಸೇತುವೆಯಾಗಿ ಮಹತ್ವದ ಕಾರ್ಯಾಮಾಡುತ್ತಾ ಬಂದಿದ್ದ, ನಮ್ಮೆಲ್ಲರ ಆತ್ಮೀಯರಾಗಿದ್ದ ಪ್ರಭಾ ಮಟಮಾರಿ ನಿಧನರಾಗಿದ್ದಾರೆ.
ಪ್ರಭಾ ಅವರು 1943ರ ಫೆಬ್ರವರಿ 6ರಂದು ನವಲಗುಂದದಲ್ಲಿ ಜನಿಸಿದರು. ತಂದೆ ಧಾರವಾಡದ ಸುಪ್ರಸಿದ್ಧ ವಕೀಲರಾದ ಬಿ.ಜಿ. ವೈದ್ಯರು. ಮನೆಯ ಸುಸಂಪನ್ನ ಮತ್ತು ಸಾಹಿತ್ಯಿಕ ವಾತಾವರಣ ಅವರ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತಂದೆ ಬಿ.ಜಿ.ವೈದ್ಯರು "ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ" ಸಕ್ರಿಯರಾಗಿದ್ದರು. ಹೀಗಾಗಿ ಹೆಸರಾಂತ ಸಾಹಿತಿ ಗಳೆಲ್ಲ ಮನೆಗೆ ಬರುತ್ತಿದ್ದರು. ಬೇಂದ್ರೆ, ಗೋಕಾಕ, ಮುಗಳಿ, ಬೆಟಗೇರಿ ಕೃಷ್ಣಶರ್ಮಾ ಮುಂತಾದವರೆಲ್ಲ ತಂದೆಯವರ ಅಪ್ತ ಸ್ನೇಹಿತರು. ಸುಪ್ರಸಿದ್ಧ ಕನ್ನಡ ಸಾಹಿತಿಗಳಾಗಿದ್ದ ಶ್ರೀನಿವಾಸ ವೈದ್ಯರು ಪ್ರಭಾ ಅವರ ಅಣ್ಣ.
ಪ್ರಭಾ ಅವರ ವಿದ್ಯಾಭ್ಯಾಸ ಹಾಗೂ ವಿವಾಹ ಪೂರ್ವದ ಜೀವನವೆಲ್ಲ ಧಾರವಾಡಲ್ಲಿ ನಡೆಯಿತು. 1949ಕ್ಕೆ ಇವರ ಪ್ರಾಥಮಿಕ ಶಿಕ್ಷಣ ಆರಂಭವಾಯಿತು. ರೊದ್ದ ಶ್ರೀನಿವಾಸರಾಯರ ಮನೆಗಂಟಿದಂತಿದ್ದ ಇವರ ಶಾಲೆಯ ಮೊದಲ ಹೆಸರು "ಕನ್ನಡ ಒಂದನೇ ನಂ ಪ್ರಾಥಮಿಕ ಶಾಲೆ" ಎಂದಾಗಿತ್ತು. ನಂತರದಲ್ಲಿ ಅದರ ಹೆಸರು ಕನ್ನಡ ವೀರಾಗ್ರಣಿ ಪ್ರಾಥಮಿಕ ಶಾಲೆ ಎಂದು ಬದಲಾಯಿತು. ಮಾಧ್ಯಮಿಕ ಶಾಲೆ "ಆಂಗ್ಲೋ ಕನ್ನಡ ಗರ್ಲ್ಸ್ ಹೈಸ್ಕೂಲ" ಎಂದೇ ಇತ್ತು. ಇನ್ನೂ ಅಂಗ್ರೇಜಿಗಳ ಪ್ರಭಾವ ಆ ಪರಿಸರದಲ್ಲೆಲ್ಲ ಎದ್ದು ಕಾಣುತ್ತಿತ್ತು. ಸ್ಕೂಲಿನ ಎದುರುಗಡೆಯೇ ವಿಶಾಲವಾದ ಕಲೆಕ್ಟರ್ಸ್ ಬಂಗಲೋ, ಸ್ಕೂಲಿನ ಪಕ್ಕಕ್ಕೇ “ಕಾನ್ವೆಂಟ್" ಶಾಲೆ ಇದ್ದುದರಿಂದ ಆ ಪರಿಸರವೆಲ್ಲಾ ಅಂಗ್ರೇಜಿಗಳದೇ ಆಗಿತ್ತು. ಹೀಗಾಗಿ ಎರಡೂ ದೇಶಗಳ ರೀತಿ ನೀತಿಗಳನ್ನು ಅಂದಿನ ದಿನಗಳಲ್ಲಿ ಅನುಸರಿಸ ಬೇಕಾಗುತ್ತಿತ್ತು. ಕ್ರಮೇಣ ಭಾರತೀಯ ಪದ್ದತಿಗಳ ಶಾಲೆ ಕಾಲೇಜುಗಳು ಬಂದವು. ಮುಂದೆ ಪ್ರಭಾ ಅವರು ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
ಪ್ರಭಾ ಮಟಮಾರಿ ಅವರ ಅಣ್ಣ ಶ್ರೀನಿವಾಸ ವೈದ್ಯರ ಸಾಹಿತ್ಯಿಕ ಅಭಿರುಚಿ ಬೆಳೆಯಲು ಮನೋಹರ ಗ್ರಂಥಮಾಲಾ ಮೂಲವಾಗಿತ್ತು. ಶ್ರೀನಿವಾಸ ವೈದ್ಯರಿಗೆ ಗಿರೀಶ್ ಕಾನಾಡ್, ಕೀರ್ತಿನಾಥ ಕುರ್ತಕೋಟಿ ಅವರೊಡನೆ ಆಪ್ತ ಸ್ನೇಹವಿತ್ತು. ಹೀಗಾಗಿ ಶ್ರೀಮತಿ ಪ್ರಭಾ ಅವರಿಗೆ ಪುಸ್ತಕ ಓದುವ ಗೀಳು ಜೊತೆಗೂಡಿತು. "ಕರ್ನಾಟಕ ಏಕೀಕರಣ " ಚಳವಳಿಕಾರ ಶ್ರೀ ರಾಮರಾವ್ ನರಗುಂದಕರ ಇವರ ತಾಯಿಯ ತಂದೆ. ದ.ರಾ.ಬೇಂದ್ರೆ ಅವರ ಸ್ನೇಹಿತರಾದರೆ, ಆಲೂರ ವೆಂಕಟರಾಯರು ಅವರ ಗುರುಗಳು. ಪ್ರಭಾ ಅವರ ತಾಯಿ ಕೂಡ ಓದುವ ಗೀಳಿದ್ದವರು. ಹೀಗಾಗಿ ಪ್ರಭಾ ಅವರ ಬರಹಗಳು ಹಲವಾರು ಮಾಸಪತ್ರಿಕೆ, ಮತ್ತು ವಾರಪತ್ರಿಕೆಗಳಲ್ಲಿ ಮೂಡುತ್ತಿತ್ತು. ಜೊತೆಗೆ ತಾವು ಓದಿದ ಲೇಖನಗಳ ಕುರಿತು ತಮ್ಮದೇ ಆದ ಅಭಿಪ್ರಾಯ ಬರೆದಿಡುವದೂ ಇವರ ನಿತ್ಯದ ರೂಡಿಯಾಗಿತ್ತು.
ಪ್ರಭಾ ಮಟಮಾರಿ ಅವರ ಮೇಲೆ ಬೀchi ಅವರ ಲೇಖನಗಳ ಪ್ರಭಾವ ವಿಶೇಷವಾಗಿತ್ತು. ತ್ರಿವೇಣಿ, ಎಂ. ಕೆ. ಇಂದಿರಾ ಮತ್ತು ಅನುಪಮಾ ನಿರಂಜನ ಪ್ರಭಾ ಅವರ ಮೆಚ್ಚಿನ ಲೇಖಕಿಯರು.
ಮುಂದೆ ಪ್ರಭಾ ಅವರು ಉಪೇಂದ್ರ ಮಟಮಾರಿಯವರೊಂದಿಗೆ ವಿವಾಹವಾಗಿ ಹೈದರಾಬಾದಿನಲ್ಲಿ ವಾಸ್ತವ್ಯ ಹೂಡಿದರು. ಪ್ರಭಾ ಅವರ ಪತಿ ಉಪೇಂದ್ರ ಮಟಮಾರಿ ಅವರು "ಎಮ್. ಉಪೇಂದ್ರ" ಎಂಬ ಹೆಸರಿನಿಂದ ಹಿಂದೀ ಭಾಷೆಯ ಸುಪ್ರಸಿದ್ಧ ಲೇಖಕರು. ಉಪೇಂದ್ರ ಅವರ ಕುಟುಂಬವೂ ಹೈದ್ರಾಬಾದ್ ಕನ್ನಡಿಗರಲ್ಲಿ ಅಗ್ರಗಣ್ಯವಾಗಿದ್ದು ಈ ಸಾಹಿತ್ಯಕ ಅಭಿರುಚಿ ಯುಳ್ಳ ಕುಟುಂಬದಿಂದ ಪ್ರಭಾ ಅವರಿಗೆ ಸಾಕಷ್ಟು ಉತ್ತೇಜನ ದೊರಕಿತು.
ಪ್ರಭಾ ಮಟಮಾರಿ ಅವರು ಬರಹಗಳನ್ನು ಸುಧಾ, ಮಯೂರ, ಮಲ್ಲಿಗೆ, ಕಸ್ತೂರಿ ಕರ್ಮವೀರ ಮುಂತಾದ ನಿಯತಕಾಲಿಕಗಳಿಗೆ ಕಳಿಸುತ್ತಿದ್ದರು. ಆಕಾಶವಾಣಿ ಹೈದ್ರಾಬಾದ್ನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟರು. ರೇಡಿಯೋ ನಾಟಕಗಳು, ವೇದಿಕೆಯ ನಾಟಕಗಳನ್ನೂ ಬರೆದರು. ಕತೆ, ಕವಿತೆ, ಹಾಸ್ಯಲೇಖನ, ಮುಂತಾದವುಗಳು ಪ್ರಕಟಗೊಂಡವು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ "ಕರ್ನಾಟಕ ಸಾಹಿತ್ಯ ಮಂದಿರ" ಎಂಬ ಪ್ರಸಿದ್ಧ ಸಂಸ್ಥೆಯಲ್ಲಿ ಅತ್ಯಂತ ಚಟುವಟಿಕೆಯ ಸದಸ್ಯರಾಗಿದ್ದಾರೆ . ಸಾಹಿತ್ಯಮಂದಿರದ ಹವ್ಯಾಸಿ ಯುವ ಸಾಹಿತಿಗಳು ಹೊರಡಿಸಿದ "ಪರಿಚಯ" ಪತ್ರಿಕೆಗೆ ಪ್ರಾರಂಭದಿಂದಲೂ ತಮ್ಮ ಲೇಖನಗಳನ್ನು ಬರೆದು ಜನಪ್ರಿಯತೆ ಗಳಿಸಿದರು. ಇಲ್ಲಿ ನಡೆಯುವ ನಾಡಹಬ್ಬ ನವರಾತ್ರಿಯ ಒಂಬತ್ತೂ ದಿನದ ಚಟುವಟಿಕೆಗಳಲ್ಲೂ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದರು. ಕವಿ ಸಮ್ಮೇಳನ, ಬಹುಭಾಷಾ ಕವಿಸಮ್ಮೇಳನದಲ್ಲಿ ತಾವು ಬರೆದ ಕನ್ನಡ ಕವಿತೆಗಳ ಹಿಂದೀ ಭಾಷಾಂತರ ಮಾಡಿ ಓದಿ ಪ್ರೇಕ್ಷಕರನ್ನು ನಗೆಗಡಲಲ್ಲಿಯೂ ತೇಲಿಸಿದ್ದರಲ್ಲದೆ ಭಾವುಕರನ್ನಾಗಿಯೂ ಮಾಡಿದ್ದರು. ಇವರು ಮೂಡಿಸಿದ ಹಿಂದೀ ಬರಹಗಳು "ದಕ್ಷಿಣ ಸಮಾಚಾರ" "ಪುಷ್ಪಕ", "ಹಿಂದೀ ವಾರ್ತಾ", "ಮಿಲಾಪ", "ರಾಷ್ಟ್ರೊತ್ಥಾನ" ಮುಂತಾದ ಹಿಂದೀ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 1997ರಲ್ಲಿ “ದೆಹಲಿ ಕನ್ನಡಿಗ" ಪತ್ರಿಕೆಯ ಮೂಲಕ ಸಾ.ಮ.ಗ.ಅವರ ನೇತೃತ್ವದಲ್ಲಿ ನಡೆದ "ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಕಿತ್ತೂರ ಅವರು ಬರೆದ " ಅಜ್ಜಿ" ನಾಟಕದ ನಿರ್ದೇಶನ ಮಾಡಿದರು. ಇದೇ ಸಮಾರಂಭದಲ್ಲಿ ಬಹುಭಾಷಾ ಕವಿಸಮ್ಮೇಳನದಲ್ಲಿ ಹಾಸ್ಯ ಪ್ರಧಾನ ಕವಿತೆಯನ್ನು ಕನ್ನಡ ಹಾಗೂ ಹಿಂದೀ ಎರಡೂ ಭಾಷೆಗಳಲ್ಲಿ ವಾಚಿಸಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದರು. ಈ ಸಂದರ್ಭದಲ್ಲಿ"ಕನ್ನಡ ಪ್ರಚಾರಕಿ" ಎಂದು ಪುಸ್ತಕ ಪ್ರಾಧಿಕಾರದ "ಲಕ್ಕಪ್ಪ" ಅವರಿಂದ ಪ್ರಶಂಶಾ ಪತ್ರದ ಜೊತೆಗಿನ ಸನ್ಮಾನ ಪಡೆದರು.
2003ರಲ್ಲಿ ಪ್ರಭಾ ಮಟಮಾರಿ ಅವರ "ಏಕದಂತ" ಎಂಬ ಹಾಸ್ಯಲೇಖನ, ಕತೆಗಳ
ಮಿಶ್ರ ಸಂಕಲನದ ಪುಸ್ತಕ ಬಿಡುಗಡೆಗೊಂಡಿತು. ಈ ಪುಸ್ತಕ ಪ್ರಕಟಣೆಗೆ ಮಕ್ಕಳಾದ ಕಾರ್ತೀಕ ಹಾಗೂ ಪಲ್ಲವಿಯರ ಸರ್ವತೋಮುಖ ಸಹಾಯ ಸಂದಿತು.
ಪ್ರಭಾ ಮಟಮಾರಿ ಅವರಿಗೆ “ರಾಷ್ಟ್ರೋತ್ಥಾನ" ಪತ್ರಿಕೆಯವರಿಂದ ಝಾಂಸೀ ರಾಣಿ ಪ್ರಶಸ್ತಿ, ಉತ್ತಮ ಸಮಾಜ ಸೇವಕಿ ಸನ್ಮಾನ ಸಂದಿತು. "ದೇಶಬಂಧು" ಪತ್ರಿಕೆಯಲ್ಲಿ ಧರ್ಮೇಂದ್ರ ಪೂಜಾರೀ ಬಗ್ದೂರಿ ಎಂಬ ದಕ್ಷ ಪತ್ರಕರ್ತರಿಂದ ವಿಶೇಷ ಸಂದರ್ಶನ ನಡೆದು ಅದು ಒಂದು ಪೂರ್ತಿ ಪುಟವಾಗಿ "ದೇಶ ಬಂಧು" ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಪ್ರಭಾ ಮಟಮಾರಿ ಅವರು ಹೈದರಾಬಾದಿನ ಸಾಕಷ್ಟು ಕನ್ನಡ ಸಂಸ್ಥೆಗಳಿಗೆ ಆಜೀವ ಸದಸ್ಯರಾಗಿದ್ದರು. ಕರ್ನಾಟಕ ಮಹಿಳಾ ಮಂಡಳಿಯ ದಕ್ಷ ಕಾರ್ಯದರ್ಶಿಯಾಗಿ ಎರಡು ದಶಕಗಳ ಸೇವೆ ಸಲ್ಲಿಸಿದ್ದರು.
ಸುಸಂಸ್ಕೃತ ಕುಟುಂಬದ ಉತ್ತಮ ಗೃಹಿಣಿಯಾಗಿ, ಜನಪ್ರಿಯ "ಸಮಾಜಸೇವಕಿ" ಯಾಗಿ ತುಂಬಿದ ಸಂಸಾರದಲ್ಲಿ ಹಿರಿವಯಸ್ಸಿನ ನಿಶ್ಚಿಂತ ಜೀವನ ನಡೆಸುತ್ತಿದ್ದ ಪ್ರಭಾ ಮಟಮಾರಿ ಅವರು 2025ರ ಜೂನ್ 24ರಂದು ಈ ಲೋಕವನ್ನಗಲಿದರು.
ಆತ್ಮೀಯರೂ, ಸಕ್ರಿಯ ಚಟುವಟಿಕೆಗಳ ಕ್ರಿಯಾಶೀಲರೂ ಆಗಿದ್ದ ಪ್ರಭಾ ಮಟಮಾರಿ ಅವರು ನನ್ನ ಎಲ್ಲ ಬರಹಗಳನ್ನೂ ಓದಿ ಆಪ್ತವಾಗಿ ಪ್ರತಿಕ್ರಯಿಸಿ ಪ್ರೋತ್ಸಾಹಿಸುತ್ತಿದ್ದ ಸಹೃದಯಿ. ಆಪ್ತ ಜೀವವೊಂದು ಕಣ್ಮರೆಯಾದ ಭಾವ ಮೂಡಿದೆ 🌷🙏🌷
Respects to departed soul writer and Social worker Prabha Matmari. 🌷🙏🌷
ಕಾಮೆಂಟ್‌ಗಳು