ಹೂಗುಚ್ಛ
ಹೂಗುಚ್ಛ
ಅವನೊಬ್ಬ ಬಡ ಹುಡುಗ. ಆ ವರ್ಷದ ಕ್ರಿಸ್ಮಸ್ ದಿನದಂದು ತನ್ನ ತಾಯಿಗೆ ಒಂದಾದರೂ ಹೂಗುಚ್ಛವನ್ನು ಶುಭಾಶಯಗಳೊಂದಿಗೆ ಕೊಡಬೇಕು ಎಂದು ಅವನ ಆಸೆ. ಆದರೆ, ಅವನಲ್ಲಿ ಇದ್ದದ್ದೋ ಅತಿ ಕಡಿಮೆ ಮೌಲ್ಯದ ನಾಣ್ಯ. ಒಂದೊಂದು ಅಂಗಡಿಯನ್ನೂ ಹತ್ತಿ ಇಳಿದ. ಅವನಲ್ಲಿದ್ದ ನಾಣ್ಯಕ್ಕೆ ಹೂಗುಚ್ಛವೊಂದನ್ನು ಕೊಡಲು ಯಾರೂ ಒಪ್ಪಲಿಲ್ಲ. ಕೊನೆಯದಾಗಿ ಒಂದು ಅಂಗಡಿಗೆ ಹೋದ. ಆದರೆ, ಆ ಸಮಯದಲ್ಲಿ ಆ ಅಂಗಡಿಯಲ್ಲಿ ಹೂಗುಚ್ಛಗಳೇ ಇರಲಿಲ್ಲ. ಎಲ್ಲವೂ ಮಾರಾಟವಾಗಿ ಹೋಗಿದ್ದವು. ಅಂಗಡಿಯವ ಆ ಹುಡಗನನ್ನೂ ಮತ್ತು ಅವನ ಕೈಯಲ್ಲಿದ್ದ ಪುಟ್ಟ ನಾಣ್ಯವನ್ನೂ ನೋಡಿ, ಒಳಗೆ ಹೋಗಿ ಒಂದು ಅತಿ ಸುಂದರವಾದ ಹೂಗುಚ್ಛವನ್ನು ತಂದು ಅವನ ಕೈಯಲ್ಲಿರಿಸಿದ. ‘ಇದರ ಬೆಲೆ ಏನು?’ ಎಂದು ಆ ಹುಡುಗ ಕೇಳಿದಾಗ, ‘ಹಣ ಬೇಡ ಮರಿ, ಇದು ನಿನಗೇ!’ ಎಂದು ಪ್ರೀತಿಯಿಂದ ನುಡಿದ.
ಇದನ್ನು ಗಮನಿಸುತ್ತಿದ್ದ ಅಂಗಡಿಯಾತನ ಹೆಂಡತಿ, “ಇದೇನಿವತ್ತು, ಅಚ್ಚರಿಯಾಗ್ತಾ ಇದೆಯಲ್ಲ’ ಎಂದಳು ವಿಸ್ಮಯದಿಂದ.
ಅಂಗಡಿಯಾತ ನುಡಿದ, “ಬೆಳಗ್ಗೆ ನಾನು ಅಂಗಡಿ ತೆರೆದ ಸಮಯದಲ್ಲಿ ‘ಇವತ್ತು, ನಾನು ನಿನ್ನ ಅಂಗಡಿಗೆ ಬರ್ತೀನಿ. ನನಗಾಗಿ ಒಂದು ಹೂಗುಚ್ಛವನ್ನು ತೆಗೆದಿಟ್ಟಿರು” ಎಂದು ಒಂದು ದನಿ ನನ್ನೊಳಗೇ ಕೇಳಿಸಿತು. ಹಲವು ವರ್ಷಗಳ ಹಿಂದೆ ನಾನು ಕೇಳಿದ್ದ ಮರೆಯಲಾಗದ ದನಿ ಅದು! ನಾನು ಚಿಕ್ಕವನಿದ್ದಾಗ, ಈ ಹುಡುಗನ ಹಾಗೆಯೇ ನಾನೂ ನನ್ನ ತಾಯಿಗೆ ಒಂದು ಹೂಗುಚ್ಛವನ್ನು ಕೊಡಲು ಆಶಿಸಿದ್ದೆ. ಆದರೆ, ನನ್ನ ಹತ್ತಿರ ಹಣವೇ ಇರಲಿಲ್ಲ. ಹಿಂದೆ ಮುಂದೆ ಪರಿಚಯವಿಲ್ಲದ ಒಬ್ಬ ಹಿರಿಯರು ಆಗ ನನಗೆ ಸಹಾಯ ಮಾಡಿದರು. ಅವರು ಅವತ್ತು ಕೊಟ್ಟ ಹಣದಿಂದಲೇ ನನ್ನ ತಾಯಿಗೆ ಹೂಗುಚ್ಛವನ್ನು ತೆಗೆದುಕೊಂಡು ಹೋಗಿ ಕೊಟ್ಟೆ. ಇವತ್ತು ಬೆಳಿಗ್ಗೆ ನನ್ನ ಕಿವಿಯೊಳಗೆ ಧ್ವನಿಸಿದ ಆ ದನಿ ಆ ಹಿರಿಯರ ದನಿಯ ಹಾಗೆಯೇ ಇತ್ತು. ಅಂದು ಅವರು ಮಾಡಿದ ಸಹಾಯಕ್ಕೆ, ಇಂದು ಈ ಹುಡುಗನಿಗೆ ನೀಡಿದ ಹೂಗುಚ್ಛವು ಒಂದು ಸಣ್ಣ ಕೃತಜ್ಞತೆಯೇನೋ ಎಂದೆನಿಸಿತು”.
“ಎಲ್ಲೆಲ್ಲೂ ನೆಲೆಸಿರುವ ದೇವರು ಯಾವಾಗ ಬೇಕಾದರೂ ನಮ್ಮ ಮುಂದೆ ಬಂದು ನಿಲ್ಲಬಹುದು. ಆದ್ದರಿಂದ ಹೂಗುಚ್ಛಗಳೊಂದಿಗೆ ಸಿದ್ಧವಾಗಿ ಕಾದುಕೊಂಡಿರಿ” ಎಂದು ದೇವಾಲಯಗಳಲ್ಲಿ ಹೇಳುವ ಅರ್ಥ ಇದೇ ಇರಬೇಕು.
(ಆಧಾರ: ಮನಸ್ಸೇ ರಿಲ್ಯಾಕ್ಸ್ ಪ್ಲೀಜ್ – ಸ್ವಾಮಿ ಸುಖಬೋಧಾನಂದರು)
ಕಾಮೆಂಟ್‌ಗಳು