ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಮಲಾದಾಸ್


 ಕಮಲಾದಾಸ್

ಕಮಲಾದಾಸ್ ಪ್ರಸಿದ್ಧ  ಬರಹಗಾರ್ತಿ ಎನಿಸಿದ್ದವರು.  ಅವರು ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳನ್ನು ಕಿತ್ತೆಸೆದು ಬೆಳೆಯುವ ಪ್ರಬಲ ಸ್ತ್ರೀಶಕ್ತಿಯನ್ನು ಪ್ರತಿಪಾದಿಸಿದ ಸ್ವಚ್ಛಂದ ನಿಲುವಿನ ಚಿಂತಕರಾಗಿ ಗಮನ ಸೆಳೆದಿದ್ದರು. 

ಕಮಲಾದಾಸ್ ಅವರ ಮೂಲ ಹೆಸರು ಮಾಧವಿ ಕುಟ್ಟಿ. ಅವರು 1934ರ ಮಾರ್ಚ್ 31ರಂದು ತ್ರಿಚೂರು ಜಿಲ್ಲೆಯ ಪುನ್ನಯೂರ್ ಕುಳಂ ಗ್ರಾಮದಲ್ಲಿ ಜನಿಸಿದರು.‍ ತಂದೆ ಇಂಗ್ಲೀಷ್ ಭಾಷಾತಜ್ಞ ವಿ. ಎಮ್. ನಾಯರ್. ತಾಯಿ ಪ್ರಸಿದ್ಧ ಲೇಖಕಿ ಬಾಲಮಣಿಯಮ್ಮ. ಸುಪ್ರಸಿದ್ಧ ವಿದ್ವಾಂಸ ನಾರಾಯಣ ಮೆನನ್ ಅವರು ಆಕೆಯ ಸೋದರಮಾವ. ಅವರು, 'ಲೈಟ್ ಆಫ್ ಏಷ್ಯಾ,' 'ಲೆ ಮಿಸರಬಲ್,' ಮೊದಲಾದ ಪ್ರಸಿದ್ಧ ಸಾಹಿತ್ಯ ಕೃತಿಗಳನ್ನು ಆಂಗ್ಲ ಭಾಷೆಯಿಂದ ಮಲಯಾಳ ಭಾಷೆಗೆ ಅನುವಾದಿಸಿದ ಖ್ಯಾತಿವಂತರು. ಹೀಗೆ ವಿದ್ವತ್ತು, ಸೃಜನಶೀಲತೆಗೆ ಹೆಸರಾದ ಕುಟುಂಬದಲ್ಲಿ ಬೆಳೆದ ಮಾಧವಿ ಕುಟ್ಟಿ, ಬಾಲ್ಯದ ವಿದ್ಯಾಭ್ಯಾಸವನ್ನು ಮನೆಯಲ್ಲೇ ಮಾಡಿದರು. ನಂತರ ಅಲ್ಲಿನ ಯೂರೋಪಿಯನ್ ರೋಮನ್ ಕ್ಯಾಥೊಲಿಕ್ಕರ ವಸತಿಶಾಲೆಯಲ್ಲಿ ಓದಿದರು. 

ಕಮಲಾದಾಸ್ ಅವರಿಗೆ ಅಜ್ಜಿಯ ಪ್ರೀತಿಯ ಸಾನ್ನಿಧ್ಯ, ಕೇರಳದ ವನ್ಯಲೋಕ, ಪ್ರಕೃತಿ ಸೌಂದರ್ಯ ಉತ್ಸಾಹ ಹುರುಪನ್ನು ಕೊಟ್ಟವು. ಮುಂಬೈನಲ್ಲಿ ಬ್ಯಾಂಕ್ನಲ್ಲಿ ಅಧಿಕಾರಿಯಾಗಿದ್ದ ಕೆ. ಮಾಧವ ದಾಸ್ ಅವರೊಡನೆ ವೈವಾಹಿಕ ಜೀವನದಲ್ಲಿ ಉಂಟಾದ ನಿಷ್ಕಳಂಕ ಪ್ರೀತಿಯ ಅಭಾವ, ತಮ್ಮನ್ನು ಕ್ರೂರವಾಗಿ ನಡೆಸಿಕೊಂಡ ಬಗೆ ಇತ್ಯಾದಿಗಳನ್ನು ಅವರು ತಮ್ಮ ಆತ್ಮಕಥೆಯಲ್ಲಿ ವಿಸ್ತೃತವಾಗಿ ಪ್ರಸ್ತಾಪಿಸಿದ್ದಾರೆ. ಈ ನೋವು ತುಡಿತಗಳು ಅವರ ಕಥೆ - ಕಾವ್ಯಗಳಲ್ಲಿ ಅಭಿವ್ಯಕ್ತಿ ಪಡೆದಿವೆ.

ಕಮಲಾದಾಸ್ ಅವರ, ಕಾವ್ಯದ ಪ್ರಧಾನ ವಸ್ತು, ಹೆಣ್ಣಿನ ಸ್ವಾತಂತ್ರ್ಯದ ಬಯಕೆ, ಕಷ್ಟ ಸುಖಗಳು, ನೋವು-ನಿರಾಸೆಗಳು, ನೆಪವಿಲ್ಲದ ಶುದ್ಧ ಆತ್ಮ ಸಖ ಪ್ರೀತಿಯ ಅಪೇಕ್ಷೆಗಳು.  ಕಮಲಾದಾಸ್‍ರ ಸಾಹಿತ್ಯದಲ್ಲಿ ಮುಜುಗರದ ಮೈಚಳಿಬಿಟ್ಟು ಲೈಂಗಿಕ ಕೌಟುಂಬಿಕ ಉಪಾಧಿಗಳನ್ನು ಮೀರಿದ ಸ್ವಾತಂತ್ರ್ಯ ಸ್ತ್ರೀ-ವಿಮೋಚನೆ ಚಿಂತನೆಗಳು ಅಭಿವ್ಯಕ್ತಿ ಪಡೆದಿವೆ.  ಬದುಕಿನ ಹಾದಿಯಲ್ಲಿ ಎದುರಾದ ಎಲ್ಲ ಮೋಹ, ಮದ, ತೀವ್ರ ತುಡಿತ, ಕಾಮನೆಗಳ ಸಿರಿ-ಪರಿಗಳು ಇವಿಷ್ಟೇ ಮಾರ್ಗಗಳು ಎನಿಸದಿದ್ದಾಗ ಅವರು, ಚಿತ್ರಕಲೆ, ರಾಜಕೀಯ, ಮತಾಂತರಗಳಂತಹ ದಾರಿಗಳನ್ನು ಶೋಧಿಸಿದರು.

ಕಮಲಾದಾಸ್ ಅವರು ತಮ್ಮ 15ರ ಹರೆಯದಲ್ಲೇ ಆರಂಭಿಸಿದ ಬರೆವಣಿಗೆ ಮಲಯಾಳಂ ಸಾಹಿತ್ಯ ವಲಯದಲ್ಲಿ ಮಾತ್ರವಲ್ಲದೆ, ಭಾರತೀಯ ಹಾಗೂ ವಿಶ್ವ ಸಾಹಿತ್ಯ ವಲಯಗಳಲ್ಲಿಯೂ ಆಸಕ್ತಿ ಮೂಡಿಸಿದವು.  ಅವರು ಸಾಹಿತ್ಯಲೋಕದಲ್ಲಿ ಕೈಯಾಡಿಸಿದ್ದು, ಮುಕ್ತ ಛಂದಸ್ಸಿನಲ್ಲಿ, ಕಾವ್ಯ-ಸಣ್ಣ ಕಥೆ-ಕಾದಂಬರಿಗಳ ಉದ್ಯಾನದಲ್ಲಿ. ಅಲ್ಲಿ ಬೀಸಿದ ಹೊಸ ತಂಗಾಳಿಗೆ ತಮ್ಮ ಮೈಯೊಡ್ಡಿ ಅವರು ಮುಂದೆ ಸಾಗಿದರು. ಪುನರ್ಜನ್ಮದಲ್ಲಿ ನಂಬಿಕೆಯಿದ್ದ, ಕಮಲಾದಾಸ್ ನಿಸರ್ಗದ ಕಾಡುಗಳಲ್ಲಿ ಸ್ವಚ್ಛಂದವಾಗಿ ಮುಗಿಲಿನೆತ್ತರಕ್ಕೆ ಹಾರುವ ಪಕ್ಷಿಯಾಗಬೇಕೆಂದು ಆಶಿಸುತ್ತಾರೆ.

ಕಮಲಾದಾಸ್ ಅವರ ಕೃತಿಗಳಲ್ಲಿ 'ಎಂಡೆಕಥಾ', 'ಪಕ್ಷಿಯುಡೆ ಮಣಂ', 'ಸಮ್ಮರ್ ಇನ್ ಕಲ್ಕತ್ತಾ', 'ದ ಡಿಸಿಡೆಂಟ್ಸ್',  'ದ ಓಲ್ಡ್ ಪ್ಲೇ ಹೌಸ್ ಅಂಡ್ ಅದರ್ ಪೊಯೆಮ್ಸ್', 'ಮೈ ಸ್ಟೋರಿ',  'ಆಲ್ಫಬೆಟ್ ಆಫ್ ಲಸ್ಟ್', 'ಎ ಡಾಲ್ ಫಾರ್ ದ ಚೈಲ್ಡ್ ಪ್ರಾಸ್ಟಿಟ್ಯೂಟ್',  'ದ ಅಣ್ಣಾಮಲೈ ಪೊಯೆಮ್ಸ್',  'ಪಾಲಯನ್', 'ನೆಯ್ ಪಾಯಸಮ್',  'ಡೈರಿ ಕುರುಪ್ಪುಗಳ್', 'ಪದ್ಮಾವತಿ ದ ಹಾರ್ಲೆಟ್ ಅಂಡ್ ಅದರ್ ಸ್ಟೋರೀಸ್',  'ಓನ್ಲಿ ದ ಸೋಲ್ ನೋಸ್ ಹೌ ಟು ಸಿಂಗ್', 'ನೀರ್ ಮಾದಲಮ್ ಪೂತಕಾಲಂ', 'ಚಂದನ ಮರಂಗಳ್', 'ಮಾಧೈ ಕುಟ್ಟಿಯುಡೆ ಉನ್ಮಕ್ಕಥಕ್ಕಳ್',  'ಬಾಲ್ಯಕಾಲ ಸ್ಮರಣಂಗಳ್'  (ಕೊನೆಯ ಕಥೆ) ಮುಂತಾದವು ಸೇರಿವೆ.

ಕಮಲಾದಾಸ್ ಅವರಿಗೆ ಏಷಿಯನ್ ಪೊಯೆಟ್ರಿ ಪ್ರೈಜ್, ಕೆಂಟ್ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಕಮಲಾದಾಸ್ ಅವರು 2009ರ ಮೇ 31ರಂದು ಈ ಲೋಕವನ್ನಗಲಿದರು.

On the birth anniversary of Kamala Das (Kamala Surayya)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ