ಉಡುಪಿ ಶ್ರೀನಿವಾಸ
ಡಾ.ಉಡುಪಿ ಶ್ರೀನಿವಾಸ
ಡಾ.ಉಡುಪಿ ಶ್ರೀನಿವಾಸ ಅವರು ಕರ್ನಾಟಕದಲ್ಲಿ ಜೈವಿಕ ಇಂಧನ ಆಂದೋಲನದ ಪಿತಾಮಹರೆಂದೆನಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಹೊರದೇಶಗಳಲ್ಲೂ ಉಡುಪಿ ಶ್ರೀನಿವಾಸರ ಪರಿಶ್ರಮದ ಪ್ರಯೋಜನವನ್ನು ಪಡೆಯಲಾಗಿದೆ, ಭಾರತ ಸರ್ಕಾರದ ಜೈವಿಕ ಇಂಧನ ನೀತಿನಿರೂಪಣೆಯಲ್ಲೂ ಶ್ರೀನಿವಾಸರ ಪಾತ್ರವಿದೆ.
1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ನಿತ್ಯಜೀವನಕ್ಕೆ ಉಪಯುಕ್ತವಾದ ವೈಜ್ಞಾನಿಕ ಸಾಧನಗಳನ್ನು ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ತರಲು ಯೋಜನೆಗಳನ್ನು ಹಮ್ಮಿಕೊಳ್ಳಲು ಯೋಚಿಸತೊಡಗಿದ್ದರು. ಪ್ರೊ. ಸತೀಶ್ ಧವನ್ ನಿರ್ದೇಶಕರಾಗಿದ್ದ ಆ ಅವಧಿಯಲ್ಲಿ ಎ.ಕೆ.ಎನ್.ರೆಡ್ಡಿ, ಮಾಧವ ಗಾಡಗೀಳ್, ರೊದ್ದಂ ನರಸಿಂಹ ಮೊದಲಾದವರು ಹಳ್ಳಿಗರಿಗೆ ಪ್ರಯೋಜನವಾಗುವಂಥ ಯಾವುದಾದರೂ ಉಪಯುಕ್ತ ಕಾರ್ಯಗಳನ್ನು ಆಯಾ ಹಳ್ಳಿಗಳಲ್ಲೇ ಜಾರಿಗೆ ತರುವ ಚಿಂತನೆಯಿಂದ'ಅಸ್ತ್ರ' ASTRA (center for Application of Science and Technology for Rural Areas) ಎಂಬ ಕೇಂದ್ರವನ್ನು ಪ್ರಾರಂಭಿಸಿದ್ದರು. ಈ ಕೇಂದ್ರವು ಹಳ್ಳಿಗಳಲ್ಲಿ ವಿದ್ಯುಚ್ಛಕ್ತಿಯ ಪೂರೈಕೆ ಮತ್ತು ಕಟ್ಟಡ ನಿರ್ಮಾಣ ತಂತ್ರಜ್ಞಾನಗಳನ್ನು ಒದಗಿಸುವ ಉದ್ದೇಶ ಹೊಂದಿದ್ದಿತು. ಅದರಂತೆ ಗಾಳಿಯಂತ್ರ ಯೋಜನೆಯ ಸಂಯೋಜಕರಾಗಿ ಪ್ರೊ.ರೊದ್ದಂ ನರಸಿಂಹ ಅವರೊಡನೆ 'ಅಸ್ತ್ರ' ಕೇಂದ್ರದಲ್ಲಿ ಕೆಲಸಮಾಡಿದವರು ಡಾ. ಉಡುಪಿ ಶ್ರೀನಿವಾಸ್.
ಉಡುಪಿಯ ಮೀನುಗಾರ ಕುಟುಂಬವೊಂದರಲ್ಲಿ ಜನಿಸಿದ ಶ್ರೀನಿವಾಸ(1948) ದೇವಿಬಾಯಿ-ರಾಮ ಮೊಗವೀರರ ಮಗ. ಮೊಗವೀರನಾಗಿ ಹುಟ್ಟಿದರೂ ಈಜುವುದನ್ನೂ ಕಲಿಯದ ಶ್ರೀನಿವಾಸನಿಗೆ ತನ್ನ ಹಿರಿಯ ಅಕ್ಕ ಗಿರಿಜಾಬಾಯಿಯ ಪ್ರೋತ್ಸಾಹದಿಂದಾಗಿ ವಿದ್ಯಾಭ್ಯಾಸದಲ್ಲಿ ಮುಂದುವರೆಯುವುದು ಸಾಧ್ಯವಾಯಿತು. ಉಡುಪಿಯಲ್ಲಿ ಪಿ.ಯು.ಸಿ.ವರೆಗೆ ಓದಿ ಬೆಂಗಳೂರಿನಲ್ಲಿ ವ್ಯಾಸಂಗ ಮುಂದುವರೆಸಿದ ಶ್ರೀನಿವಾಸ ಓದಿನಲ್ಲಿ ಎಂದೂ ಹಿಂದೆ ನೋಡಿದವರಲ್ಲ. ಮದರಾಸಿನ ಐ.ಐ.ಟಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್, ಎಂ.ಟೆಕ್ಗಳನ್ನು ಮುಗಿಸಿದ ಶ್ರೀನಿವಾಸ್ ಅಸ್ತ್ರ ಸೇರುವ ವೇಳೆಗೆ (1976) ಪ್ರೊ.ಜಗದೀಶ್ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್ಡಿ ಮುಗಿಸಿ ಮೂರು ವರ್ಷಗಳ ಅವಧಿಗೆ ಸೀನಿಯರ್ ರೀಸರ್ಚ್ ಫೆಲೋ ಆಗಿ ಭಾರತೀಯ ವಿಜ್ಞಾನ ಮಂದಿರದಲ್ಲಿದ್ದರು. ಮುಂದಿನ ಮೂವತ್ತು ವರ್ಷ ಬೆಂಗಳೂರಿನ ವಿಜ್ಞಾನ ಮಂದಿರದಲ್ಲೇ ಮೆಕ್ಯಾನಿಕಲ್ ವೈಬ್ರೇಶನ್ಸ್ ಮತ್ತು ಸ್ಟ್ರಕ್ಚರಲ್ ಮೆಕ್ಯಾನಿಕ್ಸ್ ವಿಷಯವನ್ನು ಬೋಧಿಸಿದ ಶ್ರೀನಿವಾಸರು 31 ಜುಲೈ 2012 ರಂದು ಸೇವೆಯಿಂದ ನಿವೃತ್ತರಾದರು.
1976 ರ ವೇಳೆಗೆ ವಿದ್ಯುಚ್ಛಕ್ತಿಯ ಕೊರತೆ ತೀವ್ರವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಪಂಪುಗಳು ಸ್ಥಗಿತಗೊಳ್ಳುವಂತಾಗಿತ್ತು. ಆ ಸಮಯದಲ್ಲಿ 200 ವರ್ಷಗಳಷ್ಟು ಪ್ರಾಚೀನವಾದ ಗ್ಯಾಸಿಫೈಯರ್ ತಂತ್ರಜ್ಞಾನವನ್ನು ಪರಿಷ್ಕರಿಸಿ ಅಳವಡಿಸುವ ಬಗೆಗೆ ಶ್ರೀನಿವಾಸರ ತಂಡ ಆಲೋಚನೆ ನಡೆಸಿತು. ಜೈವಿಕ ತ್ಯಾಜ್ಯಗಳನ್ನು (ಬಯೋಮಾಸ್) ಬಳಸಿ ಗ್ಯಾಸಿಫೈಯರ್ ವಿಧಾನದ ಮೂಲಕ ಐದು ಅಶ್ವಶಕ್ತಿಯ ಡೀಸೆಲ್ ಇಂಜಿನ್ಅನ್ನು ನಡೆಸುವ ಈ ಪ್ರಯೋಗ ಬಹಳ ಯಶಸ್ವಿಯಾಯಿತು. ಈ ಯಂತ್ರದ ಪರಿಷ್ಕೃತರೂಪ ಇಂದು ಜಗತ್ಪ್ರಸಿದ್ಧವಾಗಿದೆ. ಸ್ವಿಡ್ಜರ್ಲ್ಯಾಂಡ್, ಮೆಕ್ಸಿಕೋ ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿದೆ. ಆಗ್ರೋ ಬಯೋಮಾಸ್ ಎನರ್ಜಿ ಟೆಕ್ನಾಲಜಿ ಸೊಸೈಟಿ ಎಂಬ ವಾಣಿಜ್ಯಸಂಸ್ಥೆಯೇ ಹುಟ್ಟಿಕೊಂಡಿದೆ. ಜನರಲ್ ಎಲೆಕ್ಟ್ರಿಕಲ್ ಕಂಪೆನಿಯ ಸಹಯೋಗದೊಡನೆ 100 ಕಿಲೋವ್ಯಾಟ್, 1.5 ಮೆಗಾವ್ಯಾಟ್ಸಾಮರ್ಥ್ಯವಿರುವ ದೊಡ್ಡಪ್ರಮಾಣದ ಗ್ಯಾಸಿಫೈಯರ್ ತಯಾರಿಕೆಗಾಗಿ ಪ್ರಯೋಗಗಳೂ ನಡೆದಿವೆ.
ಭಾರತೀಯ ವಿಜ್ಞಾನಮಂದಿರದ ಆಶ್ರಯದಲ್ಲಿ ಉತ್ತಮಗುಣಮಟ್ಟದ ಅಡುಗೆ ಒಲೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ ಶ್ರೀನಿವಾಸರ ತಂಡ ಈ ಪ್ರಯತ್ನದಲ್ಲೂ ಯಶಸ್ಸು ಸಾಧಿಸಿತು. 'ಸ್ವಸ್ತಿ' ಎಂಬ ಹೆಸರಿನ ಈ ಒಲೆ, ಕಡಿಮೆ ಸೌದೆ ಚೂರುಗಳನ್ನು ಇಂಧನವಾಗಿ ಉರಿಸಿ ಹೆಚ್ಚು ಶಾಖ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು.ಇದರ ಗುಣಮಟ್ಟವನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಡಚ್ ಮೂಲದ ಷೆಲ್ಕಂಪೆನಿ ಅಪಾರಪ್ರಮಾಣದ ಒಲೆಗಳನ್ನು ತಯಾರಿಸಿ ಮಾರಾಟಮಾಡುತ್ತಿದೆ.
1989 ರಲ್ಲಿ ಅಸ್ತ್ರಕೇಂದ್ರದ ಮುಖ್ಯಸ್ಥರಾಗಿ ನೇಮಕಗೊಂಡ ಶ್ರೀನಿವಾಸ್ ಏಳು ವರ್ಷಗಳವರೆಗೆ ಈ ಜವಾಬ್ದಾರಿಯನ್ನು ನಿರ್ವಹಿಸಿದರು.
1996ರಲ್ಲಿ ಗ್ರಾಮಾಭಿವೃದ್ಧಿ ಇಲಾಖೆ (RDPI) ಮತ್ತು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳ(MNRE) ಸಂಯುಕ್ತ ಆಶ್ರಯದಲ್ಲಿ ಗ್ರಾಮಗಳಲ್ಲಿ ಬಳಕೆಯಲ್ಲಿರುವ ಇಂಧನಮೂಲಗಳಿಂದಲೇ ಕಡಿಮೆ ವೆಚ್ಚದ ಪರಿಣಾಮಕಾರಿ ಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಲು ಭಾರತೀಯ ವಿಜ್ಞಾನ ಮಂದಿರ ಉದ್ದೇಶಿಸಿತು. Sustainable Transformation Of Rural Areas (SuTRA) ಎಂಬ ಹೆಸರಿನ ಈ ಯೋಜನೆಯನ್ನು ಡಾ. ಉಡುಪಿ ಶ್ರೀನಿವಾಸರು ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದರು. ಗ್ರಾಮಗಳಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಕ ಇಂಧನ ಮೂಲಗಳನ್ನೇ ಬಳಸಿಕೊಳ್ಳುವುದು, ಆಸುಪಾಸಿನ ಗ್ರಾಮಗಳಲ್ಲಿ ಕಡಿಮೆ ವೆಚ್ಚದಲ್ಲಿ ಪುನರಾವರ್ತಿಸಬಹುದಾದ ಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು,ಇದರಿಂದ ಹಳ್ಳಿಗರಿಗೆ ಅನುಕೂಲ ದೊರಕುವುದರ ಜೊತೆಗೆ ಅವರ ಆದಾಯವೂ ಹೆಚ್ಚುವಂತಿರಬೇಕು- ಇವು 'ಸೂತ್ರ' ಯೋಜನೆಯ ಮುಖ್ಯ ಅಂಶಗಳು.
ಹೊಂಗೆ, ಹಿಪ್ಪೆ, ಬೇವು ಮೊದಲಾದ ಸಸ್ಯಜನ್ಯ ತೈಲಗಳ ಬಳಕೆ ನಮ್ಮವರಿಗೇನೂ ಹೊಸತಲ್ಲ. ವಿದೇಶಿ ಚಿಮಿಣಿ ಎಣ್ಣೆ ಬರುವ ಮೊದಲು ಎಲ್ಲರ ಮನೆಯ ದೀಪಗಳು ಉರಿಯುತ್ತಿದ್ದುದೇ ಹೊಂಗೆ ಮತ್ತಿತರ ಎಣ್ಣೆಗಳಿಂದ. ಜೈವಿಕ ಇಂಧನ ಎಂದು ನಾವು ಇವತ್ತು ನಾಮಕರಣ ಮಾಡಿರುವುದೂ ಇವೇ ಸಸ್ಯ ತೈಲಗಳಿಗೆ. ಇವೇ ಎಣ್ಣೆಗಳನ್ನು ಬಳಸಿ ಜನರೇಟರ್ ಇಂಜಿನ್ ನಡೆಸುವುದು, ಜೈವಿಕ ತ್ಯಾಜ್ಯಗಳನ್ನು ಉಪಯೋಗಿಸಿ ಗ್ಯಾಸಿಫೈಯರ್ ತಂತ್ರಜ್ಞಾನದ ಮೂಲಕ ವಿದ್ಯುಚ್ಛಕ್ತಿ ತಯಾರಿಸುವುದು. ಕುಡಿಯುವ ನೀರು ಒದಗಿಸಲು, ರಾತ್ರಿಯ ವೇಳೆ ಗ್ರಾಮಗಳಿಗೆ ವಿದ್ಯುಚ್ಛಕ್ತಿ ಒದಗಿಸುವುದು- ಶ್ರೀನಿವಾಸರ ತಂಡದ ಗುರಿಯಾಗಿತ್ತು. ಇದಕ್ಕಾಗಿ ಅವರು ಆರಿಸಿಕೊಂಡ ಪ್ರದೇಶ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನ ಪುರ, ಸಜ್ಜನಹಳ್ಳಿ, ಸುಗ್ಗೇನಹಳ್ಳಿ, ಉಂಗ್ರ ಮತ್ತಿತರ ಐದಾರು ಹಳ್ಳಿಗಳು.
ಈ ಗ್ರಾಮಾಂತರ ಪ್ರದೇಶದಲ್ಲಿ ಮೊದಲಿಗೇ 60 ಎಕರೆಗಳಷ್ಟು ಪ್ರದೇಶದಲ್ಲಿ ಕ್ಷೇತ್ರಕಾರ್ಯ ನಡೆದಿತ್ತು. 1974ರಲ್ಲೇ ಸಮುದಾಯ ಜೈವಿಕ ಅನಿಲ ಘಟಕವನ್ನುಸ್ಥಾಪಿಸಲಾಗಿತ್ತು. ಗ್ರಾಮಗಳಿಂದ ಸಂಗ್ರಹಿಸಿದ ಸಗಣಿಯಿಂದ ಇಲ್ಲಿ ವಿದ್ಯುಚ್ಛಕ್ತಿ ತಯಾರಿಸಲಾಗುತ್ತಿತ್ತು. ಈ ಪ್ರದೇಶದಲ್ಲಿ ಬೇಕಾದಷ್ಟು ಹೊಂಗೆ ಮರಗಳಿದ್ದುದರಿಂದ ಶ್ರೀನಿವಾಸರ ತಂಡಕ್ಕೆ ಗ್ರಾಮಸ್ಥರಿಂದ ಹೊಂಗೆ ಬೀಜಗಳನ್ನು ಸಂಗ್ರಹಿಸುವುದಕ್ಕೇನೂ ಕಷ್ಟವಿರಲಿಲ್ಲ. ಹೊಂಗೆ ಹಿಪ್ಪೆಗಳ ಜೊತೆಗೆ ಬಿಜಾಪುರದ ಹೊರಟ್ಟಿ ಪ್ರದೇಶದಿಂದ ಎರಡು ಟ್ರಕ್ ಲೋಡುಗಳಷ್ಟು ಬೇವಿನ ಬೀಜಗಳನ್ನೂ ತರಿಸಲಾಯಿತು. ಜೈವಿಕ ತೈಲದಿಂದ ಜನರೇಟರ್ ನಡೆಸಿ 30 ಕೆವಿಎ-60ಕೆವಿಎ ಸಾಮರ್ಥ್ಯದ ಎಂಜಿನ್ನಿಂದ 250 ಕಿಲೋವ್ಯಾಟ್ ನಷ್ಟು ವಿದ್ಯುತ್ ತಯಾರಿಸಿ 14 ಬೋರ್ ವೆಲ್ ಗಳಿಂದ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಐದಾರು ಹಳ್ಳಿಗಳಿಗೆ ರಾತ್ರಿಯ ವೇಳೆ ವಿದ್ಯುತ್ ಸೌಲಭ್ಯವನ್ನೂ ಕಲ್ಪಿಸಲಾಯಿತು. ನಿತ್ಯಜೀವನಕ್ಕೆ ಅತ್ಯಗತ್ಯವಾದ ನೀರು, ಬೆಳಕುಗಳನ್ನು ಪೂರೈಸುವಂತಾದರೆ ಹಳ್ಳಿಗರ ಪ್ರೀತಿ ವಿಶ್ವಾಸ ಬೆಳೆಯದಿರುವುದೇ!
ಈ ಯೋಜನೆಗಿದ್ದ ಕಾಲಾವಧಿ ಮೂರು ವರ್ಷ. ಐದು ವರ್ಷಗಳವರೆಗೂ ವಿಸ್ತರಿಸಬಹುದಾಗಿದ್ದು ಮೂರುಕೋಟಿ ರೂಪಾಯಿಗಳ ಅನುದಾನ ಲಭ್ಯವಿದ್ದಿತು. ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಸಲಹಾ ಸಮಿತಿಯ ಮುಂದೆ ಹಾಜರಾಗಿ ತ್ರ್ರೈಮಾಸಿಕ ವರದಿ ಸಲ್ಲಿಸಬೇಕು. ಯೋಜನೆಯು ದೀರ್ಘಾವಧಿ ಮುಂದುವರೆಯುವಂತಾಗಲು ಫಲಾನುಭವಿ ಹಳ್ಳಿಗರಿಂದ ಪ್ರತಿ ತಿಂಗಳು ಕನಿಷ್ಠ ವಂತಿಗೆ ಪಡೆಯಬೇಕು. ಮುಂದಕ್ಕೆ ಯಂತ್ರಗಳನ್ನು ಗ್ರಾಮಸ್ಥರ ಸುಪರ್ದಿಗೇ ಒಪ್ಪಿಸಿ ಯೋಜನೆಯನ್ನು ಅವರೇ ನಿರಂತರ ಮುಂದುವರೆಸಿಕೊಂಡು ಹೋಗಬೇಕು- ಇದು ಯೋಜನೆಯ ಮೂಲೋದ್ದೇಶ.
ಕುಣಿಗಲ್ ಗ್ರಾಮಾಂತರ ಪ್ರದೇಶದ ಹಳ್ಳಿಗರು ಈ ವಿದ್ಯುತ್ ಸೌಲಭ್ಯಕ್ಕಾಗಿ ತಿಂಗಳಿಗೆ ಐವತ್ತುರೂಪಾಯಿ ಶುಲ್ಕ ನೀಡುತ್ತಿದ್ದರು. ಮೂರು ನಾಲ್ಕು ವರ್ಷ ಈ ಯೋಜನೆ ಚೆನ್ನಾಗಿ ನಡೆಯಿತು. ಅಷ್ಟರಲ್ಲಿ ಚುನಾವಣೆ ಬಂದಿತು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ ಹಳ್ಳಿಗಳಿಗೆ ಬಂದಾಗ, ಬಿಟ್ಟಿ ಸಿಗಬೇಕಾದ ವಿದ್ಯುತ್ತಿಗೂ ನೀರಿಗೂ ಯಾರಾದರೂ ಹಣ ಕೇಳುತ್ತಾರೆಯೇ, ಇದ್ಯಾವ ನ್ಯಾಯ ಎಂದು ಡಂಗುರ ಸಾರಿದರು. ತಮ್ಮನ್ನು ಗೆಲ್ಲಿಸಿದರೆ 24 ಗಂಟೆ ಉಚಿತ ನೀರು, ವಿದ್ಯುತ್ ಒದಗಿಸುವುದಾಗಿಯೂ ಘೋಷಿಸಿದರು. ಅವರೇನು ಹೇಳಿದರೋ ಬಿಟ್ಟರೋ, ಆ ಪ್ರದೇಶದಲ್ಲಿ ನಡೆಯುತ್ತಿದ್ದ ಮಾದರಿ ಅಭಿವೃದ್ಧಿ ಕಾರ್ಯವೊಂದಂತೂ ಕೊನೆಗೊಂಡಿತು.
ಆದರೆ, ಈ ಯೋಜನೆಗೆ ವ್ಯಾಪಕ ಪ್ರಚಾರ ಸಿಕ್ಕಿದುದೇ ಅಲ್ಲದೆ 65 ರಾಷ್ಟ್ರಗಳಲ್ಲಿ ಇದೇ ಬಗೆಯ ಯೋಜನೆಯನ್ನು ಆರಂಭಿಸಲು ಉತ್ತೇಜನವೂ ದೊರಕಿದಂತಾಯಿತು. ಇದೇ ವೇಳೆಗೆ ಶ್ರೀನಿವಾಸ್ ಮತ್ತವರ ತಂಡಕ್ಕೆ ಆಂಧ್ರ ಪ್ರದೇಶದಿಂದ ಆಹ್ವಾನ ಬಂದಿತು. ಅಲ್ಲಿನ ಅದಿಲಾಬಾದ್ಜಿಲ್ಲೆಯ ಉತನೂರು, ಗೊಂಡ ಬುಡಕಟ್ಟುಜನರೇ ಹೆಚ್ಚಾಗಿರುವ ಪ್ರದೇಶ. ಅಲ್ಲಿನ ಕಾಡಿನ ನಡುವೆ ಇದ್ದ ಚಾಲಪಾಡಿ, ಜೋಡೆಘಾಟ್ ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ ಮಾಡಲು ಸರ್ಕಾರಿ ಕಂಪೆನಿಯೇ ಹಣ ಪಡೆದುಕೊಂಡಿದ್ದರೂ ನಿರುತ್ಸಾಹ ತೋರಿಸಿ ಸುಮ್ಮನಾಗಿತ್ತು. ಶ್ರೀನಿವಾಸ ಅಲ್ಲಿನ ಕೆಲವರು ಹಳ್ಳಿಗರನ್ನು ಕರೆದು ತಂದು ಕುಣಿಗಲ್ ಹಳ್ಳಿಗಳಲ್ಲಿ ನಡೆಯುತ್ತಿದ್ದ ವಿದ್ಯುಚ್ಛಕ್ತಿ ಘಟಕಗಳನ್ನು ಪರಿಚಯಮಾಡಿಕೊಟ್ಟರು. ಮುಂದೆ, ಘಟಕಗಳನ್ನು ನಡೆಸಿ ನಿರ್ವಹಿಸಬೇಕಾದವರು ಅವರೇ ತಾನೇ!
ಬುಡಕಟ್ಟು ಜನರಿಗೆ ಹೊಂಗೆ, ಹಿಪ್ಪೆ, ಬೇವುಗಳೆಲ್ಲ ಪರಿಚಿತವಾದವುಗಳೇ. ಹಿಪ್ಪೆ ಎಂದರೆ ಅವರ ಮುಖ ಇನ್ನಷ್ಟು ಅರಳುತ್ತದೆ. ಹಿಪ್ಪೆ ಹೂಬಿಡುವ ಮಾರ್ಚ್ ತಿಂಗಳಲ್ಲಿ ಇವರ ಚಟುವಟಿಕೆಯೂ ಹೆಚ್ಚು. ಹಿಪ್ಪೆ ಹೂವುಗಳನ್ನು ಸಂಗ್ರಹಿಸಿ ತಂದು ಒಣಗಿಸುತ್ತಾರೆ. ದೊಡ್ಡ ಮಣ್ಣಿನ ಪಾತ್ರೆಗೆ ನೀರು ತುಂಬಿಸಿ ಒಣಗಿದ ಹಿಪ್ಪೆ ಹೂವುಗಳನ್ನು ಅದರಲ್ಲಿ ಹಾಕುತ್ತಾರೆ. ನಮ್ಮ ಕರಿಬೇವಿನಂತಿರುವ ಸಾತ್ಪತ್ರ ಎಂಬ ಎಲೆಗಳನ್ನು ಹಾಕಿ ಪಾತ್ರೆಯನ್ನು ಮುಚ್ಚಿಟ್ಟರೆ ಕೆಲಸವಾಯಿತು.ಕೆಲವು ದಿನಕ್ಕೆ ಒಳ್ಳೆಯ ಹೆಂಡ ಲಭ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಪಾನ ನಿಷೇಧಜಾರಿಯಲ್ಲಿದ್ದಾಗ ಜನರ ಸುರಾಪಾನ ಸ್ವಾತಂತ್ರ್ಯವನ್ನು ಸಹಿಸಲಾರದೆ ಮುಂಬೈ ಗುಜರಾತ್ ಪ್ರಾಂತ್ಯಗಳಲ್ಲಿದ್ದ ಹಿಪ್ಪೆ ಮರಗಳನ್ನೆಲ್ಲ ಕಡಿಸಿಹಾಕಿದರಂತೆ.
ಗೊಂಡ ಬುಡಕಟ್ಟು ಗ್ರಾಮಗಳಲ್ಲಿ ಶ್ರೀನಿವಾಸರ ತಂಡ 7.5 ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನೂ ಅದಕ್ಕೆ ಬದಲಿ ಬ್ಯಾಕ್ಅಪ್ ಒಂದನ್ನೂ ಸ್ಥಾಪಿಸಿತು. ಹಳ್ಳಿಗರು ತಾವು ಸಂಗ್ರಹಿಸಿದ ಸಸ್ಯಬೀಜಗಳನ್ನು ದೊಡ್ಡಗೂಡೆಯೊಂದಕ್ಕೆ ತಂದು ಸುರಿಯುತ್ತಿದ್ದರು. ಗಾಣದ ಸೌಲಭ್ಯವಿದ್ದ ಸಮೀಪದ ಗ್ರಾಮಕ್ಕೆ ಹೋಗಿ ಎಣ್ಣೆ ಮಾಡಿಸಿಕೊಂಡು ಬಂದು ಇಂಜಿನ್ ಚಾಲಿಸುತ್ತಿದ್ದರು. ಸಾಧ್ಯವಿದ್ದಕಡೆ ಎಣ್ಣೆ ಅರೆಯುವ ಯಂತ್ರಗಳನ್ನೂ ಸ್ಥಾಪಿಸಲಾಯಿತು. ಈ ಯೋಜನೆಯ ಯಶಸ್ಸನ್ನು ಕಂಡ ಆಂಧ್ರ ಸರ್ಕಾರ ಇನ್ನೂ ಹಲವೆಡೆ ಇಂತಹುದೇ ಯೋಜನೆಗಳನ್ನು ಪ್ರಾರಂಭಿಸಲು ಶ್ರೀನಿವಾಸರ ಸಹಕಾರ ಬಯಸಿತು. ವಿಶ್ವಬ್ಯಾಂಕ್ ನೆರವಿನೊಂದಿಗೆ ಪ್ರಾರಂಭಿಸಲಾದ ವೆಲುಗು ಎಂಬ ಯೋಜನೆಯಡಿ ಆಂಧ್ರದ ಚಿತ್ತೂರ್, ಶ್ರೀಕಾಕುಲಂ, ಶ್ರೀಶೈಲಂ ಮೊದಲಾದ ಕಡೆಗಳಲ್ಲಿ ಆರೇಳು ಘಟಕಗಳನ್ನು ಸ್ಥಾಪಿಸಲಾಯಿತು.
ಕರ್ನಾಟಕದ ಬಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ಹೇರಳವಾಗಿರುವ ಬೇವಿನ ಮರಗಳಿಂದ ಉಪ ಉತ್ಪನ್ನಗಳ ಲಾಭವನ್ನುಅಲ್ಲಿನ ಕ್ರೃಷಿಕರಿಗೆ ದೊರಕಿಸುವ ಸಲುವಾಗಿ ಕವಾಸ್ (ಕರ್ನಾಟಕ ವಾಟರ್ ಷೆಡ್ಡೆವೆಲಪ್ ಮೆಂಟ್ ಸೊಸೈಟಿ) ಯೋಜನೆಯಡಿ ಐದು ಕಡೆಗಳಲ್ಲಿ ಪ್ರಾತ್ಯಕ್ಷಿಕೆಗಾಗಿ ಎಣ್ಣೆತೆಗೆಯುವ ಯಂತ್ರಗಳನ್ನು ಸ್ಥಾಪಿಸಲು ಶ್ರೀನಿವಾಸರ ಮಾರ್ಗದರ್ಶನ ಪಡೆಯಲಾಯಿತು. ಇದರಿಂದ ಬೀಜಸಂಗ್ರಹಣೆ, ಹಿಂಡಿಯ ಉಪಯೋಗ, ತೈಲಮಾರಾಟ, ಮೊದಲಾದ ಚಟುವಟಿಕೆಗಳಿಗೆ ಆಸ್ಪದವೊದಗಿತು.
ಶ್ರೀನಿವಾಸರ ಪ್ರಯತ್ನಗಳಿಂದ ಉತ್ತೇಜಿತರಾದ ಅವರ ಹಲವರು ಬಿ.ಟೆಕ್. ಸಹಪಾಠಿಗಳು ಗ್ರಾಮೀಣ ಮಹಿಳೆಯರ ಸ್ವಯಂಸೇವಾ ಗುಂಪುಗಳಿಗೆ ನೆರವು ಕಲ್ಪಿಸುವ ಸಲುವಾಗಿ ಶ್ರೀನಿವಾಸರ ಮಾರ್ಗದರ್ಶನದಲ್ಲೇ ಕರ್ನಾಟಕ ಗಡಿಭಾಗದ ತಳ್ಳಿ ಮತ್ತು ಆಂಧ್ರದ ಖಾದ್ರಿ ಗ್ರಾಮಗಳಲ್ಲಿ ಎಣ್ಣೆತೆಗೆಯುವ ಯಂತ್ರಗಳನ್ನು ಸ್ಥಾಪಿಸಲು ಮುಂದಾದರು.
ಅಪಾರ ಆರ್ಥಿಕ ಒತ್ತಡಕ್ಕೆ ಎಡೆಗೊಟ್ಟಿರುವ ಪೆಟ್ರೋಲಿಯಂ ಉತ್ಪನ್ನಗಳ ಅತಿಯಾದ ಬಳಕೆಯ ಇಂದಿನ ದಿನಗಳಲ್ಲಿ ಬದಲಿ ಇಂಧನ ಮೂಲಗಳನ್ನು ಅನ್ವೇಷಿಸುವ ಪ್ರಯತ್ನದಲ್ಲಿ ಶ್ರೀನಿವಾಸರ ಸೂತ್ರ ಹಾಗೂ ಸಮಗ್ರ ವಿಕಾಸ ಸಂಘಟನೆಗಳು ಒಗ್ಗೂಡಿ ಅನೇಕ ವಿಚಾರಸಂಕಿರಣಗಳನ್ನು ನಡೆಸಿದವು. ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೂ ಈ ಸಂಕಿರಣಗಳನ್ನು ಬೆಂಬಲಿಸಿದವು. ಜೈವಿಕ ಇಂಧನ ಕೃಷಿಯ ಪ್ರಯೋಜನವನ್ನು ಪ್ರಚುರಪಡಿಸುವುದು ಹಾಗೂ ರಾಷ್ಟ್ರೀಯ ಇಂಧನ ನೀತಿಯ ಕರಡನ್ನು ತಯಾರಿಸುವುದು- ಈ ಸಂಕಿರಣಗಳ ಮುಖ್ಯ ವಿಷಯಗಳಾಗಿದ್ದವು. ಡಾ.ಶ್ರೀನಿವಾಸರೂ ಮಾರ್ಗದರ್ಶಕರಾಗಿ ಭಾಗವಹಿಸಿದ್ದ ಈ ನೀತಿಯ ಕರಡನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸ್ವೀಕರಿಸಿದವು. ಕರಡುಪ್ರತಿಯ ನೀತಿ ನಿರೂಪಣೆಯ ಬಹಳಷ್ಟು ಅಂಶಗಳನ್ನು ಅಂತಿಮ ದಾಖಲೆಯಲ್ಲಿ ಉಳಿಸಿಕೊಳ್ಳಲಾಗಿರುವುದೊಂದು ವಿಶೇಷ. ನೀತಿಯನ್ನು ಅಂತಿಮವಾಗಿ ಸಿದ್ಧಪಡಿಸುವ ಸಮಿತಿಯಲ್ಲೂ ಶ್ರೀನಿವಾಸರು ಭಾಗವಹಿಸಿದ್ದರು.
ಜೈವಿಕ ಇಂಧನ ನೀತಿಯನ್ನು ನಿರೂಪಿಸಿ ಅನುಷ್ಠಾನಕ್ಕೆ ತರುವ ಸಲುವಾಗಿ ಕರ್ನಾಟಕ ಸರ್ಕಾರ ಜೈವಿಕ ಇಂಧನ ಕಾರ್ಯಪಡೆಯನ್ನು ರಚಿಸಿತು. ಶ್ರೀ ವೈ.ಬಿ.ರಾಮಕೃಷ್ಣರ ನೇತೃತ್ವದ ಈ ಪಡೆಯಲ್ಲಿ ಉಡುಪಿ ಶ್ರೀನಿವಾಸರೂ ಇದ್ದು ಮಾರ್ಗದರ್ಶನ ನೀಡಿದರು. 2010ರಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಚನೆಯಾದ ಮೇಲೆ ಅದರ ಸದಸ್ಯರಾಗಿಯೂ ಶ್ರೀನಿವಾಸ ಕಾರ್ಯ ನಿರ್ವಹಿಸಿದರು.
ಬರಿದಾಗುತ್ತಿರುವ ಪೆಟ್ರೋಲಿಯಂ ಇಂಧನದ ಸ್ಥಾನವನ್ನು ತುಂಬುವ ಅವಕಾಶ ಸಾಮರ್ಥ್ಯಗಳು ಜೈವಿಕ ಇಂಧನಕ್ಕೆ ಖಂಡಿತವಾಗಿಯೂ ಇವೆ. ಹಿಂದಿನ ಹಸಿರುಕ್ರಾಂತಿ, ಕ್ಷೀರಕ್ರಾಂತಿಗಳಂತೆ ಜೈವಿಕಇಂಧನಕ್ರಾಂತಿಯೂ ದೇಶಾದ್ಯಂತ ರೂಪುಗೊಳ್ಳುವ ಸಿದ್ಧತೆಯಲ್ಲಿ ತೊಡಗಿದೆ. ಡಾ.ಉಡುಪಿ ಶ್ರೀನಿವಾಸರಂಥ ಮೇಧಾವಿಗಳು ನಮ್ಮ ನಡುವೆಯೆ ಇದ್ದು ಮಾರ್ಗದರ್ಶನ ನೀಡುತ್ತಿರುವಾಗ ಈ ಆಂದೋಲನವೂ ಸ್ಪಷ್ಟರೂಪವನ್ನು ಪಡೆದು ಜಗತ್ತಿನ ಗಮನಸೆಳೆಯುವುದರಲ್ಲಿ ಆಶ್ಚ್ಚರ್ಯವೇನೂ ಇಲ್ಲ.
ಅಡಿಟಿಪ್ಪಣಿ
ಗ್ಯಾಸಿಫೈಯರ್ ಮೂಲಕ ವಿದ್ಯುಚ್ಛಕ್ತಿ
ಹೊಂಗೆ, ಬೇವು ಮೊದಲಾದ ಬೀಜಗಳು ಗಟ್ಟಿ ಕವಚದೊಳಗಿರುತ್ತವೆ. ರೈತ ಕವಚದಿಂದ ಬೀಜವನ್ನು ಬೇರ್ಪಡಿಸಿ ಬೀಜಸಂಗ್ರಹಣಾ ಕೇಂದ್ರಕ್ಕೆ ಮಾರಾಟ ಮಾಡಿದ ಮೇಲೆ ತನ್ನಲ್ಲಿ ತ್ಯಾಜ್ಯವಾಗಿ ಉಳಿದ ಹೊರಕವಚವನ್ನು ಅಡುಗೆ ಇಲ್ಲವೇ ಬಚ್ಚಲುಮನೆಯಲ್ಲಿ ಸುಡುವ ಇಂಧನವಾಗಿ ಬಳಸಿಕೊಳ್ಳುತ್ತಾನೆ. ಈ ಕವಚವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ತಂತ್ರಜ್ಞಾನ ನಮ್ಮಲ್ಲೇ ಇದೆ. ಬೀಜಕವಚವನ್ನು ನಿಯಂತ್ರಿತ ಗಾಳಿ ಹಾಗೂ ನಿಯಂತ್ರಿತ ಶಾಖದೊಡನೆ ಸುಡುವುದರಿಂದ ಪ್ರೊಡ್ಯೂಸರ್ ಗ್ಯಾಸ್ ಎಂಬ ಅನಿಲ ಉತ್ಪನ್ನವಾಗುತ್ತದೆ. ಈ ಪ್ರೊಡ್ಯೂಸರ್ ಗ್ಯಾಸ್ ಎನ್ನುವುದು, ಜಲಜನಕ, ಕಾರ್ಬನ್ ಮಾನಾಕ್ಸೈಡ್ ಮತ್ತು ಮೀಥೇನ್ಗಳ ಸಂಯುಕ್ತವಾಗಿದೆ. ಇದೂ ಒಂದು ಇಂಧನ ಅನಿಲ. ಡೀಸೆಲ್ ಜನರೇಟರ್ನಲ್ಲಿ ತುಸು ಬದಲಾವಣೆ ಮಾಡಿ, ಶೇ.20 ರಷ್ಟು ಡೀಸೆಲ್ ನೊಂದಿಗೆ ಶೇ.80ರಷ್ಟು ಪ್ರೊಡ್ಯೂಸರ್ ಗ್ಯಾಸ್ ಅನ್ನು ಬಳಸಿದಲ್ಲಿ ಗ್ರಾಮಗಳಲ್ಲಿ ದಿನಕ್ಕೆ ಆರು ಗಂಟೆಗಳ ಕಾಲ ಐದು ಕಿಲೋವ್ಯಾಟ್ನಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬೀಜಕವಚ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದನ್ನು ಘನರೂಪಕ್ಕೆ ತಂದು ಕೈಗಾರಿಕೆಗಳ ಬಳಕೆಗೂ ಕಳುಹಿಸಬಹುದು. ಒಂದೆಡೆ ಕೃಷಿತ್ಯಾಜ್ಯದ ಮಾರಾಟದಿಂದ ಆದಾಯವೂ ದೊರಕಿದಂತಾಯಿತು, ಮತ್ತೊಂದೆಡೆ, ವಿದ್ಯುಚ್ಛಕ್ತಿಯೂ ಲಭಿಸುವಂತಾಗುತ್ತದೆ.
ಮೂಲಲೇಖನ: ಟಿ.ಎಸ್.ಗೋಪಾಲ್ Thiru Srinivasachar Gopal ಅವರ
"ಜೈವಿಕ ಇಂಧನದ ಆಧುನಿಕ ಹರಿಕಾರ: ಡಾ. ಉಡುಪಿ ಶ್ರೀನಿವಾಸ"
Great scientist Dr. Udupi Srinivas
ಕಾಮೆಂಟ್ಗಳು