ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಎನ್. ಪಣಿಕ್ಕರ್


 ಕಾವಾಲಂ ನಾರಾಯಣ ಪಣಿಕ್ಕರ್‌ 


ಕಾವಾಲಂ ನಾರಾಯಣ ಪಣಿಕ್ಕರ್‌ ಭಾರತೀಯ ರಂಗಭೂಮಿಗೆ ಹೊಸ ಸಾಧ್ಯತೆಗಳನ್ನು ತೆರೆದುಕೊಟ್ಟವರು. 

ಕಾವಾಲಂ ನಾರಾಯಣ ಪಣಿಕ್ಕರ್  ಕೇರಳದ‍ ಟ್ರಾವಂಕೂರಿನ ಕಾವಾಲಂ ಎಂಬಲ್ಲಿ 1928ರ ಏಪ್ರಿಲ್ 28ರಂದು ಜನಿಸಿದರು.

ಕಾವಾಲಂ ಕೇವಲ ರಂಗನಿರ್ಮಾತೃಗಳಾಗಿರಲಿಲ್ಲ. ಅವರು ರಂಗ ಪರಂಪರೆಯ ನಿಮಾರ್ತೃಗಳು ಕೂಡ. ಹಲವು ಜನ ಯುವ ನಿರ್ದೇಶಕರಿಗೆ ಸ್ಫೂರ್ತಿ ನೀಡಿದರು. ಕೇರಳದ ರಂಗಭೂಮಿಯಲ್ಲಿ ಸದಾ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿರುವ ಮುಂದಿನ ತಲೆಮಾರಿನ ನಿರ್ದೇಶಕರುಗಳಾದ ಚಂದ್ರದಾಸನ್‌, ಸ್ಯಾಮ್‌ ಕುಟ್ಟಿ, ಜ್ಯೋತಿಷ್‌ ಅವರೆಲ್ಲರೂ ಗಣನೀಯ ಮಟ್ಟದಲ್ಲಿ ಕಾವಾಲಂ ಅವರಿಂದ ಪ್ರೇರಿತರಾದವರು. 

ಕಾವಾಲಂ ಹಲವು ದಶಕಗಳ ಕಾಲ ತಿರುವನಂತಪುರದ ಸೋಪಾನಂ ರಂಗಸಂಸ್ಥೆಯನ್ನು ನಡೆಸಿ ಅನೇಕ ಮಂದಿ ಯುವ ರಂಗಕರ್ಮಿಗಳಿಗೆ ಶಿಕ್ಷ ಣ ನೀಡಿದರು. ಅಲ್ಲದೆ, ಕೇರಳ ಸಂಗೀತ ನಾಟಕ ಅಕಾಡೆಮಿಯ ಆಧ್ಯಕ್ಷ ರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷ ರಾಗಿ ಭಾರತೀಯ ರಂಗಕಲೆಗಳಿಗೆ ಸೇವೆ ಸಲ್ಲಿಸಿದರು.

ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಕಾವಾಲಂ ಅವರು ಪ್ರಧಾನವಾಗಿ ಛಾಪು ಮೂಡಿಸಿದ್ದು ಎಂಬತ್ತರ ದಶಕದ ಸ್ವದೇಶಿ ರಂಗಪರಿಕಲ್ಪನೆಯ ಭಾಗವಾಗಿ.
ಸಂಸ್ಕೃತ ನಾಟಕಗಳನ್ನು ಇಂದಿನವರ ಕಣ್ಮನಗಳನ್ನು ಸೆಳೆಯುವಂತೆ ರಂಗಕ್ಕೆ ತರಬಹುದೆಂದು ಸಾಧಿಸಿ ತೋರಿಸಿದವರಲ್ಲಿ ಕಾವಾಲಂ ಅಗ್ರಗಣ್ಯರು. ಅವರು ನಿರ್ಮಿಸಿದ 'ಮಧ್ಯಮವ್ಯಾಯೋಗ' ಉತ್ತಮ ಪ್ರಯೋಗ. ಕಾವಾಲಂ ಸಂಸ್ಕೃತ ನಾಟಕಗಳನ್ನು ಸಂಸ್ಕೃತದಲ್ಲಿಯೇ ಪ್ರಯೋಗಿಸಿದರೂ ಅವರು ಪ್ರಯೋಗಿಸುತ್ತಿದ್ದ ವಾಚಿಕಾಭಿನಯ ಸಂಸ್ಕೃತ ಬಲ್ಲದವರಿಗೂ ಅರ್ಥಗಳನ್ನು ಮುಟ್ಟಿಸುವಷ್ಟು ಸಮರ್ಥವಾಗಿರುತ್ತಿತ್ತು. ಅವರ 'ಭಗವದುಜ್ಜುಕೀಯಂ' ಅತ್ಯಂತ ಶಕ್ತಿಶಾಲಿಯಾದ ವಾಚಿಕಾಭಿನಯದ ಕಾರಣದಿಂದಲೇ ಅವರ ಅತ್ಯುತ್ತಮ ರಂಗಪ್ರಯೋಗಗಳಲ್ಲಿ ಒಂದಾಯಿತು. 

ಕಾವಾಲಂ ಅವರಿಂದ ಪ್ರಭಾವಿತರಾಗಿ ಈಗ ತಮ್ಮದೇ ಭಿನ್ನ ದೇಸೀ ಶೈಲಿಯನ್ನು ರೂಪಿಸಿಕೊಂಡಿರುವ ಚಂದ್ರದಾಸನ್‌ ಪ್ರಕಾರ ಕಾವಾಲಂ ಅವರ ಭಗವದುಜ್ಜುಕೀಯಂ ಪ್ರಯೋಗ ಆದರ್ಶ ವಾಚಿಕಾಭಿನಯದ ಅತ್ಯಂತ ಅನುಕರಣೀಯ ಮಾದರಿ.
ಆಧುನಿಕ ರಂಗಭೂಮಿಯಲ್ಲಿ ಹಲವು ಶ್ಲಾಘನೀಯ ಪ್ರಯೋಗಗಳಿಗೆ ಗುರಿಯಾಗಿರುವ ಭಾಸನ 'ಕರ್ಣಭಾರಂ'ನ ಕಾವಾಲಂ ಅವರ ರಂಗಕೃತಿ ಅನುಪಮವಾದುದು. ಇದೇ ನಾಟಕವನ್ನು ಮಣಿಪುರದ ರತನ್‌ ಥಿಯಾಂ ಕೂಡ ನಿರ್ದೇಶಿಸಿದ್ದಾರೆ.

ಒಮ್ಮೆ ದೆಹಲಿಯ ರಾಷ್ಟ್ರೀಯ ರಂಗಶಾಲೆಯ ಭಾರತೀಯ ರಂಗಮಹೋತ್ಸವದಲ್ಲಿ ಕಾವಾಲಂ ತಮ್ಮ ಕರ್ಣಭಾರವನ್ನು ಪ್ರಯೋಗಿಸಿದಾಗ ಕರ್ಣನ ಪಾತ್ರವನ್ನು ಅದ್ಭುತವಾಗಿ ನಟಿಸಿದವರು ಮಲಯಾಳಂ ಸಿನೆಮಾದ ಸುಪರ್‌ ಸ್ಟಾರ್‌ ಮೋಹನ್‌ ಲಾಲ್‌. ಅದು ಬಹು ಯಶಸ್ಸು ಕಂಡಿತು. ಕಾವಾಲಂ ಅವರ ಸಂಸ್ಕೃತ ನಾಟಕಗಳ ವಿಶೇಷವೆಂದರೆ ಅವುಗಳ ಕಲಾತ್ಮಕ ಗುಣ. ಭರತೋಕ್ತ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕಾಭಿನಯಗಳ ಜೊತೆಗೆ ಆಧುನಿಕ ರಂಗತಂತ್ರಗಳಾದ ಸಂಗೀತಾತ್ಮಕತೆ ಮತ್ತು ದೃಶ್ಯಾತ್ಮಕತೆಗಳನ್ನು ಒಟ್ಟುಗೂಡಿಸಿ ಅತ್ಯಂತ ಸುಂದರವಾದ ರಂಗಶೈಲಿಯನ್ನು ಅವರು ಕಟ್ಟಿಕೊಂಡಿದ್ದರು.

ರಾಷ್ಟ್ರೀಯ ರಂಗ ಶಾಲೆಯ ದುಬಾರಿ ಶೈಲಿ ಕಾವಾಲಂ ಅವರಿಗೆ ಸಮ್ಮತವಾಗಿರಲಿಲ್ಲ. ಅವರ ಪ್ರದರ್ಶನಕ್ಕೆ ಎಷ್ಟು ಹಣ ಬೇಕು ಎಂದು ರಂಗಶಾಲೆಯವರು ಕೇಳಿದಾಗ ಕಾವಾಲಂ ಇಪ್ಪತ್ತು ಸಾವಿರ ಸಾಕು ಅಂದರಂತೆ. ಆದರೆ ರಂಗಶಾಲೆಯವರಿಗೆ ಇದು ತಮಾಷೆಯಾಗಿ ಕಂಡಿತು. ಅವರು ಒಂದೋ ಎರಡೋ ಲಕ್ಷ ಮಂಜೂರುಮಾಡಿದ್ದೇವೆ ಅಂದಾಗ ಕಾವಾಲಂ ಹೇಳಿದರಂತೆ: 'ಅರೆ, ಇಷ್ಟು ದೊಡ್ಡ ಮೊತ್ತ ನನ್ನ ಸಂಸ್ಥೆಗೆ ನೀವು ಕೊಟ್ಟರೆ ಅದೇ ಹಣದಲ್ಲಿ ನಾನು ಹತ್ತು ನಾಟಕಗಳನ್ನು ಮಾಡಿಸಬಲ್ಲೆ.'

ಕಾವಾಲಂ ಅವರು ಭಾರತೀಯ ರಂಗಭೂಮಿಗೆ ನೀಡಿದ ಕೊಡುಗೆ ಅತ್ಯಂತ ಮೌಲಿಕವಾದುದು. ಅವರು ನಾಟ್ಯಶಾಸ್ತ್ರದ ತಮ್ಮ ತಿಳಿವಳಿಕೆಯ ಬುನಾದಿಯ ಮೇಲೆ ರಚಿಸಿದ ನವಶಾಸ್ತ್ರೀಯ ರಂಗಶೈಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆಯಿತು. ಬಿ. ವಿ. ಕಾರಂತ್‌ ಮತ್ತು ರಾಮಾನುಜಂ ಅವರ ಜೊತೆಗೆ ಕಾವಾಲಂ ಆ ತಲೆಮಾರಿನ ದಕ್ಷಿಣ ಭಾರತದ ಮೂವರು ಉತ್ಕೃಷ್ಠ ರಂಗನಿರ್ದೇಶಕರಲ್ಲಿ ಒಬ್ಬರಾಗಿ ಹಲವು ಜನ ಯುವ ರಂಗಕರ್ಮಿಗಳನ್ನು ಪ್ರಭಾವಿಸಿದರು. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯ ದಕ್ಷಿಣದ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು.

ಕಾವಾಲಂ ನಾರಾಯಣ ಪಣಿಕ್ಕರ್‌ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಕಾವಾಲಂ ನಾರಾಯಣ ಪಣಿಕ್ಕರ್‌ ಅವರು 2016ರ ಜೂನ್ 26ರಂದು ನಿಧನರಾದರು.

ಮಾಹಿತಿ ಆಧಾರ: ಡಾ. ಎಚ್. ಎಸ್. ಶಿವಪ್ರಕಾಶರ 'ಆತ್ಮಸಂಗಾತ'


On the birth anniversary of great name in Indian theatre Kavalam Narayana Panikkar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ