ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಜ್ಜಂಪುರ ಸೂರಿ


 ಅಜ್ಜಂಪುರ ಜಿ ಸೂರಿ


ಅಜ್ಜಂಪುರ ಜಿ ಸೂರಿ ಅವರು ಕವಿ, ವಚನಕಾರ, ಕಾದಂಬರಿಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದವರು.

ಜಿ. ಸೂರ್ಯನಾರಾಯಣ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939ರ ಏಪ್ರಿಲ್‌ 17ರಂದು ಜನಿಸಿದರು. ತಂದೆ ಗೋವಿಂದಪ್ಪ,  ತಾಯಿ ಪಾರ್ವತಮ್ಮ. ತಂದೆಯವರದು ಮೂಲತಃ ಬಳೆಮಾರುವ ಕಾಯಕ ಪ್ರವೃತ್ತಿಯಾದರೂ,  ಆಯುರ್ವೇದ ಚಿಕಿತ್ಸಕರಾಗಿ ಮತ್ತು ಅಧ್ಯಾತ್ಮಿಗಳಾಗಿ ಗೋವಿಂದಾರ್ಯ ಎಂದು ಹೆಸರಾಗಿದ್ದರು.

ಸೂರಿ ಅವರು ಅಜ್ಜಂಪುರದಲ್ಲಿ ಪ್ರೌಢಶಾಲೆಯವರೆಗೆ ಓದಿ ನಂತರ ಕೃಷಿಕ್ಷೇತ್ರದಲ್ಲಿ  ಡಿಪ್ಲೊಮ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯವರೆಗೂ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು.

ಬಾಲ್ಯದಿಂದಲೇ ಸಣ್ಣ ಕಥೆ, ಕಾದಂಬರಿ ಬರೆಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಅಜ್ಜಂಪುರ ಸೂರಿ  ಅವರು  ಹಲವಾರು ಕಾದಂಬರಿಗಳನ್ನು ಬರೆದರು. ಅವರ ಬಹುಪಾಲು ಕಾದಂಬರಿಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಶಾಪ, ಹೊಸಚಿಗುರು, ತೋಟದಮನೆ, ಎರಡು ಮನಸು, ಅನುಬಂಧ ಕಾದಂಬರಿಗಳು ಪ್ರಕಟವಾಗಿದ್ದರೆ ಮಾರ್ಗದರ್ಶಿ, ಶ್ವೇತಾಗ್ನಿ, ವಿಮುಕ್ತಿ, ನೇಗಿಲಗೆರೆ ಮುಂತಾದ ಕಾದಂಬರಿಗಳು ‘ಗಿರಿವಾರ್ತೆ’, ‘ಮನ್ವಂತರ’,  ‘ಅಭಿಮಾನಿ’,  ‘ಗೆಳತಿ’ ಮುಂತಾದ ಪತ್ರಿಕೆಗಳಲ್ಲಿ  ಧಾರಾವಾಹಿಯಾಗಿ ಪ್ರಕಟಗೊಂಡವು.

ಸೂರಿಯವರು ಬಾನುಲಿಗಾಗಿ ಬರೆದ ಹಲವಾರು ನಾಟಕಗಳು ಬೆಂಗಳೂರು, ಭದ್ರಾವತಿ ನಿಲಯಗಳಿಂದ ಪ್ರಸಾರಗೊಂಡಿವೆ. ಅವುಗಳಲ್ಲಿ ಕೊನೆಯಾಸೆ, ಕುಳ್ಳರು, ಬೋನಿಗೆ ಬಿದ್ದ ಹುಲಿ, ಮರಗಡುಕ, ಪ್ರೇತಗಳು, ಸುಮಂಗಲಿಯರು, ಧನ್ಯಭಿಕ್ಷು, ಒಂದೇ ಜನ ಒಂದೇ ಮನ ಹಲವಾರು ಬಾರಿ ಪ್ರಸಾರವಾಗಿದ್ದರೆ ‘ಪರಿವರ್ತನೆ’ ಮತ್ತು ‘ಅಂತರ’ ರಂಗನಾಟಕಗಳು ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನೂ ಪಡೆದವು.

ತೆಲುಗು ಸಾಹಿತ್ಯವನ್ನೂ ಬಾಲ್ಯದಿಂದಲೇ ಓದುತ್ತಿದ್ದ ಅಜ್ಜಂಪುರ ಸೂರಿ ಅವರು, ಅವುಗಳಲ್ಲಿ ತಮಗೆ ಇಷ್ಟವಾಗಿದ್ದನ್ನು  ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ‘ಸಂಸ್ಕರಣ’ ಮತ್ತು  ‘ಸೀತೆಯ ಕತೆಯಲ್ಲಿ ಸ್ತ್ರೀಪಾತ್ರಗಳು’  ಧಾರಾವಾಹಿಯಾಗಿ ಪ್ರಕಟಗೊಂಡವು.  ‘ತರಂಗ’ದಲ್ಲಿ  ಮನ್ಮಥರೇಖೆ, ಷಾಂಗ್ರೀಲಾ, ಲೇಡೀಸ್‌ ಹಾಸ್ಟೆಲ್‌, ಅರಣ್ಯ ಮೃದಂಗ, ಜ್ವಾಲಾಮುಖಿ, ಭೂಮಿ ಬಾಯ್ಬಿಟ್ಟಾಗ, ಕ್ರಿಕೆಟ್‌-ಕ್ರಿಕೆಟ್‌ ಕಾದಂಬರಿಗಳು; ಸುಧಾ, ಮಯೂರ ಪತ್ರಿಕೆಗಳಲ್ಲಿ ವೂಡು, ಕಾಲರುದ್ರ, ಒಬ್ಬ ಸೂರ್ಯ ಕಾದಂಬರಿಗಳು;  ‘ವಾರಪತ್ರಿಕೆ’ಯಲ್ಲಿ (ವೈಕುಂಠರಾಜುಪತ್ರಿಕೆ) ಕರ್ಮಸಾಕ್ಷಿ, ಕಿನ್ನರಸಾನಿ, ಹಿಮಜ್ವಾಲೆ, ಅನ್ವೇಷಿ ಕಾದಂಬರಿಗಳು ಪ್ರಕಟಗೊಂಡವು.  ಇಷ್ಟೇ  ಅಲ್ಲದೆ ಪ್ರಜಾಮತ, ಅಭಿಮಾನಿ, ಲೋಕವಾಣಿ, ಮಂಗಳಾ, ಕರ್ಮವೀರ ಮುಂತಾದ ಪತ್ರಿಕೆಗಳೂ ಸೇರಿ ಒಟ್ಟು 40ಕ್ಕೂ ಹೆಚ್ಚು ಸ್ವತಂತ್ರ ಹಾಗೂ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿಯೇ ಪ್ರಕಟಗೊಂಡು ದಾಖಲೆಯನ್ನೇ ನಿರ್ಮಿಸಿದವು.

ಅಲೆಗಳು, ಧ್ವನಿಗಳು, ಸ್ನೇಹವಾರ್ತೆ, ಹಸಿರು ತೋರಣ ಮುಂತಾದ 10ಕ್ಕೂ ಹೆಚ್ಚು ವಿವಿಧ ವಿಷಯಗಳ ಮೇಲೆ ಇತರರೊಡನೆ ಸೇರಿ ಸಂಪಾದಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಸ್ವತಂತ್ರ ಕಥೆಗಳು ಪ್ರಕಟವಾಗಿರುವುದರ ಜೊತೆಗೆ 200ಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ಅನುವಾದಿಸಿದ್ದರು.

ಹೀಗೆ ಸದಾ ಸಾಹಿತ್ಯ ಚಟುವಟಿಕೆಯಲ್ಲಿಯೇ ತೊಡಗಿಸಿಕೊಂಡಿದ್ದು, ಭಾರ್ಗವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಮಲೆನಾಡ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಸೂರಿಯವರು 2008ರ ಮೇ 25ರಂದು ಈ ಲೋಕವನ್ನಗಲಿದರು.

On the birth anniversary of Ajjampura G Suri 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ