ಜುಬಿನ್ ಮೆಹ್ತಾ
ಜುಬಿನ್ ಮೆಹ್ತಾ
ಭಾರತೀಯರಾದ ಜುಬಿನ್ ಮೆಹ್ತಾ ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖರು.
ಜುಬಿನ್ ಮೆಹ್ತಾ 1936ರ ಏಪ್ರಿಲ್ 29ರಂದು ಮುಂಬೈನ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಮೆಹ್ಲಿ ಪಿಟೀಲು ವಾದಕರಲ್ಲದೆ ಬಾಂಬೆ ಸಿಂಫೋನಿ ವಾದ್ಯಗೋಷ್ಟಿಯನ್ನು ನಡೆಸುತ್ತಿದ್ದರು. ಜುಬಿನ್ ಮೆಹ್ತಾರ ವಿದ್ಯಾಭ್ಯಾಸ ಮುಂಬೈನ ಸೈಂಟ್ ಮೇರಿ ಶಾಲೆ ಮತ್ತು ಸೈಂಟ್ ಗ್ಸೇವಿಯರ್ ಕಾಲೇಜುಗಳಲ್ಲಿ ನೇರವೇರಿತು. ಜುಬಿನ್ ಮೆಹ್ತಾರು ಶಾಲೆಯಲ್ಲಿದ್ದ ದಿನಗಳಲ್ಲಿ ಜೋಸೆಫ್ ಡಿ ಲೈಮಾ ಅವರಿಂದ ಪಿಯಾನೋ ವಾದನವನ್ನು ಕಲಿತರು.
ಮೆಹ್ತಾರವರಿಗೆ ಮೊದ ಮೊದಲಿಗೆ ವೈದ್ಯರಾಗಬೇಕೆಂಬ ಅಭಿಲಾಶೆಯಿತ್ತು. ಆದರೆ ಅವರ ಹಾದಿ ತೆರೆದಿದ್ದು ಸಂಗೀತದತ್ತ. ಅವರು ತಮ್ಮ ಹದಿನೆಂಟನೆಯ ವಯಸ್ಸಿನ ವೇಳೆಗೆ ವಿಯೆನ್ನಾದಲ್ಲಿ ಸಂಗೀತ ವಿದ್ಯಾರ್ಥಿಯಾದರು. ಹ್ಯಾನ್ಸ್ ಸ್ವರೋಸ್ಕಿ ಅವರ ಗುರುಗಳಾಗಿದ್ದರು.
ಜುಬಿನ್ ಮೆಹ್ತಾ 1958ರಲ್ಲಿ ವಿಯೆನ್ನಾದಲ್ಲಿ ತಮ್ಮ ಪ್ರಥಮ ಸಂಗೀತ ಪ್ರದರ್ಶನವನ್ನು ನೀಡಿದರು. ಅದೇ ವರ್ಷ ಅವರು ಲಿವರ್ ಪೂಲ್ನಲ್ಲಿ ನಡೆದ ಅಂತರರಾಷ್ಟ್ರೀಯ ಸಂಗೀತ ನಿರ್ವಹಣಾ ಸ್ಪರ್ಧೆಯಲ್ಲಿ ಜಯಶೀಲರಾಗಿ ರಾಯಲ್ ಲಿವರ್ ಪೂಲ್ ಫಿಲ್ ಹಾರ್ಮೋನಿಕ್ ತಂಡದ ಸಹ ನಿರ್ವಾಹಕರಾಗಿ ಗೌರವಾನ್ವಿತ ಹುದ್ಧೆಯನ್ನು ಅಲಂಕರಿಸಿದರು. ಅದಾದ ಶೀಘ್ರದಲ್ಲೇ ಅವರು 1960ರ ವರ್ಷದಲ್ಲಿ ಮಾಂಟ್ರಿಯಲ್ ಸಿಂಫೋನಿ ಸಂಗೀತ ಗೋಷ್ಟಿಯ ಸಂಗೀತ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದರು. ಈ ಹುದ್ದೆಯಲ್ಲಿ ಅವರು 1962ರಿಂದ 1978ರವರೆಗೆ ಮುಂದುವರೆದರು. 1978-1991 ಅವಧಿಯಲ್ಲಿ ಮೆಹ್ತಾರು ನ್ಯೂಯಾರ್ಕ್ ಫಿಲ್ ಹಾರ್ಮೋನಿಕ್ ಸಮೂಹದ ಸಂಗೀತ ನಿರ್ದೇಶಕರು ಮತ್ತು ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸುವುದರ ಮೂಲಕ ಆ ಪ್ರತಿಷ್ಟಿತ ಹುದ್ಧೆಯನ್ನು ಅತ್ಯಂತ ಸುದೀರ್ಘ ಕಾಲದವರೆಗೆ ಅಲಂಕರಿಸಿದ್ದ ಕೀರ್ತಿಗೆ ಪಾತ್ರರಾದರು.
ದಿ ಇಸ್ರೇಲ್ ಫಿಲ್ಹಾರ್ಮೋನಿಕ್ ಸಂಗೀತ ಗೋಷ್ಠಿಯು, ಮೆಹ್ತಾರನ್ನು 1969ರ ವರ್ಷದಲ್ಲಿ ತನ್ನ ಮಾರ್ಗದರ್ಶಕರನ್ನಾಗಿಯೂ, 1977ರಲ್ಲಿ ಸಂಗೀತ ನಿರ್ದೇಶಕರನ್ನಾಗಿಯೂ, 1981ರಲ್ಲಿ ಜೀವಾವಧಿಯ ಸಂಗೀತ ನಿರ್ದೇಶಕರನ್ನಾಗಿಯೂ ಹೆಸರಿಸಿ ಆದರಿಸಿತು.
1985ರಿಂದ ಮೊದಲ್ಗೊಂಡಂತೆ ಮೆಹ್ತಾ ಅವರು ಫ್ಲಾರೆನ್ಸಿನ ಟೀತ್ರೋ ಡೆಲ್ ಮಗ್ಗಿಯೋ ಮ್ಯೂಸಿಕಲ್ ಫಿಯೋರೆನ್ಶಿಯೋದ ಪ್ರಧಾನ ನಿರ್ವಾಹಕರಾದರು. ಇದಲ್ಲದೆ 1998ರಿಂದ 2006ರ ಅವಧಿಯಲ್ಲಿ ಅವರು ಮ್ಯೂನಿಚ್ಚಿನ ಬವೇರಿಯನ್ ಸ್ಟೇಟ್ ಒಪೇರಾದ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ಮ್ಯೂನಿಚ್ ಫಿಲ್ ಹಾರ್ಮೋನಿಕ್ ಸಮೂಹವು ಮೆಹ್ತಾರನ್ನು ತನ್ನ ಗೌರವ ನಿರ್ವಾಹಕರನ್ನಾಗಿಸಿಕೊಂಡಿತು. ಇದಲ್ಲದೆ ಸ್ಪೈನ್ ದೇಶದ ಸಂಗೀತ ಗೋಷ್ಠಿಗಳ ನಿರ್ವಾಹಕತ್ವದ ಗೌರವ ಸಹಾ ಮೆಹ್ತಾರಿಗೆ ಲಭಿಸಿತು.
ಮೆಹ್ತಾರವರು ವಿಯೆನ್ನಾದಲ್ಲಿ ಜರುಗುವ ಪ್ರತಿಷ್ಟಿತ ನವ ವರ್ಷೋತ್ಸವದ ಕಚೇರಿಗಳನ್ನು 1990, 1995, 1998 ಮತ್ತು 2007ರ ವರ್ಷಗಳಲ್ಲಿ ನಡೆಸಿಕೊಟ್ಟಿದ್ದರು. ಜುಬಿನ್ ಮೆಹ್ತಾ ಅವರು ಸಿತಾರ್ ಮಾಂತ್ರಿಕ ರವಿಶಂಕರ್ ಅವರ ಸಿತಾರ್ ಕಚೆರಿಯನ್ನು ಸಹಾ ಶಂಕರ ಮತ್ತು ಲಂಡನ್ ಫಿಲ್ ಹಾರ್ಮೋನಿಕ್ ಗೋಷ್ಠಿಯ ಜೊತೆಗೂಡಿ ಧ್ವನಿಮುದ್ರಿಸಿದ್ದರು.
1990ರ ವರ್ಷದಲ್ಲಿ ಜುಬಿನ್ ಮೆಹ್ತಾರವರು ರೋಮ್ ನಗರದಲ್ಲಿ ನಡೆದ ಪ್ರಪ್ರಥಮ ಮೂರು ಟೆನರ್ಸ್ ಕಛೇರಿಗಳಲ್ಲಿ ಪ್ರಖ್ಯಾತವಾಗಿರುವ ಡೆಲ್ ಮ್ಯಾಗಿಯೋ ಮ್ಯೂಸಿಕಲ್ ಫಿಯೋರೆನ್ಟಿನೋ ಸಂಗೀತ ಗೋಷ್ಠಿ ಮತ್ತು ಟಿಯೇಟ್ರೋ ಡೆಲ್ ಒಪೇರಾ ಡಿ ರೋಮಾ ವಾದ್ಯಗೋಷ್ಠಿಗಳನ್ನು ನಿರ್ವಹಿಸಿದರು. 1994ರಲ್ಲಿ ಅವರು ಮತ್ತೊಮ್ಮೆ ಟೆನರ್ಸ್ ಜೊತೆಗೂಡಿ ಲಾಸ್ ಏಂಜೆಲಿಸ್ ಡಾಡ್ಜರ್ಸ್ ಅಂಗಣದಲ್ಲಿ ನಡೆದ ಕಚೇರಿಯನ್ನು ನಿರ್ವಹಿಸಿದರು. 1992ರಲ್ಲಿ ಪ್ರತಿಯೊಂದು ಅಭಿವ್ಯಕ್ತಿಯೂ ಪ್ರಕಟಪಡಿಸಿದ ನಿರ್ದಿಷ್ಟ ವೇಳೆಯಲ್ಲಿ ಕ್ರಮಬದ್ಧವಾಗಿ ಜರುಗುವಂತಹ ಅದ್ಭುತ ಟೋಸ್ಕ ಎಂಬ ಪ್ರದರ್ಶನವನ್ನು ನಿರ್ವಹಿಸಿದರು. ಈ ಪ್ರದರ್ಶನದಲ್ಲಿ ಕ್ಯಾಥೆರಿನ್ ಮಾಲ್ಫಿಟಾಂಗೋ, ಪ್ಲಾಸಿಡೋ ಡೊಮಿಂಗೋ, ರುಗ್ಗೆರೋ ರೈಮೊಂಡಿ ಮುಂತಾದ ಪ್ರಖ್ಯಾತ ಕಲಾವಿದರಿದ್ದರು. ಈ ಕಾರ್ಯಕ್ರಮ ರೋಮ್ ಬ್ಯಾಸಿಲಿಕಾದ ಸೈಂಟ್ ಅಂಡ್ರಿಯಾ ಡೆಲ್ಲಾ ವಲ್ಲೆಯಿಂದ ನೇರಪ್ರಸಾರಗೊಂಡಿತು.
1994ರ ವರ್ಷದಲ್ಲಿ ಮೆಹ್ತಾ ಅವರು ಪುರಾತನ ಸರ್ಜೇವೋ ನ್ಯಾಷನಲ್ ಲೈಬ್ರರಿ ಸ್ಮಾರಕದ ಬಳಿ ಯುಗೋಸ್ಲಾವಿಯಾದ ಯುದ್ಧಗಳಲ್ಲಿ ಸಂತ್ರಸ್ತರಾದವರ ನೆರವಿಗಾಗಿ ಸರ್ಜೇವೋ ಸಿಂಫೋನಿ ಆರ್ಕೆಸ್ಟ್ರಾ ಜೊತೆಗೂಡಿ ‘ಮೊಜರತ್ ರೆಖೀಮ್’ ಪ್ರದರ್ಶನವನ್ನು ನಡೆಸಿದರು. ಮುಂದೆ 1999ರಲ್ಲಿ ಜರ್ಮನಿ, 1984ರಲ್ಲಿ ಮುಂಬೈ, 1994ರಲ್ಲಿ ನ್ಯೂಯಾರ್ಕ್ ಮುಂತಾದೆಡೆ ಕಾರ್ಯಕ್ರಮಗಳನ್ನು ಅವರು ನಡೆಸಿದರು. 1997 ಮತ್ತು 1998ರ ಅವಧಿಯಲ್ಲಿ ಅವರು ಚೀನಾದ ಸಿನಿಮಾ ನಿರ್ದೇಶಕ ಜಾಂಗ್ ಯಿಮೌ ಅವರ ಜೊತೆಗೂಡಿ ಇಟಲಿ ಮತ್ತು ಚೀನಾದ ಫರ್ಬಿಡನ್ ಸಿಟಿಯ ನೈಜ ಆವರಣದಲ್ಲಿ ಜಿಯಾಕೊಮಿ ಪುಸ್ಸಿನಿ ಅವರ ಕೃತಿಯಾಧಾರಿತ ಟುರಾನ್ ಡಾಟ್ ಒಪೇರಾ ಎಂಬ ರೂಪಕವಾಗಿ 300 ಸಹಾಯಕರು ಮತ್ತು 300 ಸೇನಾನಿಗಳನ್ನು ಒಳಗೊಂಡ 9 ಚಾರಿತ್ರಿಕ ಪ್ರದರ್ಶನಗಳನ್ನು ನಿರ್ವಹಿಸಿದರು. ಈ ಕಾರ್ಯಕ್ರಮದ ಕುರಿತಾದ ಸಾಕ್ಷಚಿತ್ರವು ಮೆಹ್ತಾ ಅವರ ನಿರೂಪಣೆಯಲ್ಲಿ ಟುರಾನ್ ಡಾಟ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಮೂಡಿಬಂದಿದೆ.
2005ರ ವರ್ಷದಲ್ಲಿ ಮೆಹ್ತಾ ಅವರು ರಾಯಲ್ ಕನ್ಸರ್ಟ್ ಆರ್ಕೆಸ್ಟ್ರಾ ಅವರ ಜೊತೆಗೂಡಿ ಬಕ್ನರ್ಸ್ ಸಿಂಫೋನಿಯ ಎಂಟು ಕಾರ್ಯಕ್ರಮಗಳನ್ನು ನಡೆಸಿದರು. ಡಿಸೆಂಬರ್ 26, 2005ರಂದು ಅವರು ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಆಶ್ರಯದಲ್ಲಿ ಬವೇರಿಯನ್ ಸ್ಟೇಟ್ ಆರ್ಕೆಸ್ಟ್ರಾದೊಂದಿಗೆ ಹಿಂದೂ ಮಹಾಸಾಗರದ ಸುನಾಮಿ ಸಂತ್ರಸ್ತರ ನೆರವಿಗಾಗಿ ಕಾರ್ಯಕ್ರಮವೊಂದನ್ನು ನಡೆಸಿದರು.
ಮೆಹ್ತಾ ಅವರು ತಮ್ಮ ಬೃಹತ್ ವಾದ್ಯಗೊಷ್ಟಿಯ ನಿರ್ವಹಣಾ ಸಾಮರ್ಥ್ಯಗಳಿಗಾಗಿ ಪ್ರಾರಂಭದಿಂದಲೂ ವಿಶ್ವದಾದ್ಯಂತ ಪಂಡಿತರ ಮತ್ತು ಸಂಗೀತಪ್ರಿಯರ ಮೆಚ್ಚುಗೆ ಗಳಿಸಿದ್ದರು.
ಮೆಹ್ತಾ ಅವರ ಅಪ್ರತಿಮ ಸಾಮರ್ಥ್ಯವು 1972ರ ವರ್ಷದ ಬಿಲ್ಲಿ ದಿ ಮೌಂಟನ್ ಎಂಬ ಗೀತೆಯಲ್ಲಿ ಸ್ತುತಿಸಲ್ಪಟ್ಟಿದೆ. 1991ರಲ್ಲಿ ಇಸ್ರೇಲ್ ದೇಶದ ಗೌರವ ಅವರಿಗೆ ಸಂದಿದೆ. 1995ರ ವರ್ಷದಲ್ಲಿ ಲಾರಿಯೇಟ್ ಆಫ್ ವುಲ್ಫ್ ಪ್ರೈಜ್ ಇನ್ ಆರ್ಟ್ಸ್ ಗೌರವ ಮೆಹ್ತಾರಿಗೆ ಸಂದಿದೆ. 1999ರ ವರ್ಷದಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ‘ಶಾಂತಿ ಮತ್ತು ಸೌಹಾರ್ದತೆಯ ಜೀವಮಾನ ಸಾಧನೆಗಾಗಿನ ಗೌರವ’ ಅವರಿಗೆ ಸಂದಿದೆ. ಭಾರತ ಸರ್ಕಾರವು 1966ರ ವರ್ಷದಲ್ಲಿ ಪದ್ಮಭೂಷಣ ಮತ್ತು 2001ರ ವರ್ಷದಲ್ಲಿ ಅವರಿಗೆ ಪದ್ಮವಿಭೂಷಣ ಗೌರವವನ್ನು ಅರ್ಪಿಸಿತಯ. ಇದಲ್ಲದೆ ಅವರಿಗೆ ವಿಶ್ವದಾದ್ಯಂತ ನೂರಾರು ಪ್ರತಿಷ್ಟಿತ ಗೌರವಗಳು ಸಂದಿವೆ.
ಜುಬಿನ್ ಮೆಹ್ತಾರ ಜೀವಮಾನ ಸಾಧನೆಗಳನ್ನು ಬಿಂಬಿಸುವ ‘ಪೋರ್ಟರೈಟ್ ಆಫ್ ಜುಬಿನ್ ಮೆಹ್ತಾ’ ಎಂಬ ಸಾಕ್ಷಚಿತ್ರವನ್ನು ಟೆರ್ರಿ ಸ್ಯಾಂಡರ್ಸ್ ಅವರು ನಿರ್ಮಿಸಿದ್ದಾರೆ.
2009ರ ವರ್ಷದಿಂದ ಮೊದಲುಗೊಂಡಂತೆ ಮೆಹ್ತಾ ಅವರ ಹೆಸರಿನಲ್ಲಿ ಇಸ್ರೇಲಿನ ಹಲವೆಡೆಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
On the birth day of conductor of western and eastern classical music Zubin Mehta
ಕಾಮೆಂಟ್‌ಗಳು