‘ಸಿಸು’ ಸಂಗಮೇಶ
‘ಸಿಸು’ ಸಂಗಮೇಶ
‘ಸಿಸು’ ಸಂಗಮೇಶ ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದವರು.
'ಸಿಸು’ ಸಂಗಮೇಶರು ವಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮದಲ್ಲಿ 29ನೇ ಏಪ್ರಿಲ್ 1929ರಂದು ಜನಿಸಿದರು. ಇವರ ಮೊದಲ ಹೆಸರು ಸಂಗಮೇಶ ಸಿದ್ಧರಾಮಪ್ಪ ಮನಗೊಂಡ. ತಂದೆ ಸಿದ್ಧರಾಮಪ್ಪ. ತಾಯಿ ಗೌರಮ್ಮ. ಅವರ ಶಿಕ್ಷಣ ವಿಜಾಪುರ ಜಿಲ್ಲೆಯ ಹಲವೆಡೆಗಳಲ್ಲಿ ನೆರವೇರಿತು.
ಸಂಗಮೇಶರು ಶಾಲಾ ಅಧ್ಯಾಪಕರಾಗಿ 1948ರಲ್ಲಿ ಉದ್ಯೋಗಕ್ಕೆ ಸೇರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1984ರಲ್ಲಿ ನಿವೃತ್ತರಾದರು. ಸಂಗಮೇಶರು ವೃತ್ತಿಯಲ್ಲಿ ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕವಿತೆ, ಅನುವಾದ, ಪ್ರೌಢಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಮಹತ್ತರವಾದ ಸಾಹಿತ್ಯ ಕೃಷಿ ಮಾಡಿದರು. ತಮ್ಮಂತೆಯೇ ಶಿಕ್ಷಕರಲ್ಲಿ ಹುದುಗಿದ್ದ ಸಾಹಿತ್ಯವನ್ನು ಪ್ರಕಾಶಿಸಲು ಅವರು ಪ್ರಾರಂಭಿಸಿದ್ದು ‘ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನ’ ಎಂಬ ಸಂಸ್ಥೆ. ಈ ಸಂಸ್ಥೆಗೆ ಪೂರಕವಾಗಿ 1964ರಲ್ಲಿ ಪ್ರಾರಂಭಿಸಿದ್ದು ಶಕ್ತಿ ಮುದ್ರಣಾಲಯ. ತಮ್ಮ ಕೃತಿಗಳನಷ್ಟೇ ಅಲ್ಲದೆ ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನದಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದರು. ಸಾಹಿತಿಗಳಿಗೆ ಮಕ್ಕಳ ಸಾಹಿತ್ಯ ರಚಿಸಲು ಪ್ರೇರೇಪಿಸಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದೇ ಅಲ್ಲದೆ, ಅಗಾಧ ನೆರವನ್ನು ಕೂಡಾ ನೀಡಿದರು. ಬಾಲಭಾರತಿ ಪ್ರಕಾಶನದಡಿ ಸುಮಾರು 80ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆ ಸಂಗಮೇಶರದು. ಇವುಗಳಲ್ಲಿ ಹನ್ನೆರಡು ಕೃತಿಗೆ ರಾಷ್ಟ್ರ ಪ್ರಶಸ್ತಿ, ಹದಿನಾರು ಕೃತಿಗಳಿಗೆ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ. 1978ರ ಅಂತಾರಾಷ್ಟ್ರೀಯು ಮಕ್ಕಳ ವರ್ಷದಲ್ಲಿ ಮಕ್ಕಳ ಮಾಸಪತ್ರಿಕೆ ‘ಬಾಲಭಾರತಿ’ ಆರಂಭಿಸಿ ನಾಲ್ಕು ವರ್ಷ ನಡೆಸಿದರು. ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಅಕಾಡಮಿಯನ್ನು 1983ರಲ್ಲಿ ಸ್ಥಾಪಿಸಿದರು.
ಸಂಗಮೇಶರ ಸಾಹಿತ್ಯ ಕೃಷಿಯಲ್ಲಿ ಮಕ್ಕಳಿಗಾಗಿ ರಚಿಸಿದ ಕೃತಿಗಳು ನಾಯಿ ಫಜೀತಿ, ಯಾರು ಜಾಣರು? ಮಂಕು ಮರಿ, ಆಶೆಬುರುಕಿ ಆಶಾ, ಹೇಗಿದ್ದರು ಹೇಗಾದರು, ದಾರಿಯ ಬುತ್ತಿ ಮುಂತಾದುವು. ಕವಿತಾ ಸಂಕಲನಗಳು ಸವಿ ಸಾಹಿತ್ಯ, ಕಾಡಿನ ಕಲಿಗಳು, ಶಾಲೆಗಿಂತ ಚೀಲಭಾರ, ಚುಟುಕು-ಗುಟುಕು, ಸೂರ್ಯ ಚಂದ್ರರ ನಡುವೆ ಮೊದಲಾದುವು. ಅನುವಾದಿತ ಕೃತಿಗಳು ಗೋಮುಖಯಾತ್ರೆ, ಕನಸಿನ ಲೋಕ, ಚತುರ ಚಾಣಾಕ್ಷ. ಪುಟಿಚೆಂಡು, ಆಣೆಕಲ್ಲು, ನಾವು ನಮ್ಮವರು ಮೊದಲಾದುವು ಸಂಪಾದಿತ ಕೃತಿಗಳು. ಅವರು ರಾಜ್ಯಮಟ್ಟದಲ್ಲಲ್ಲದೆ ದೇಶದ ವಿವಿಧೆಡೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಮ್ಮೇಳನ, ಕಮ್ಮಟ, ವಿಚಾರ ಗೋಷ್ಠಿಗಳಲ್ಲಿ ಭಾಗಿಯಾದರು.
ಸಂಗಮೇಶರಿಗೆ ಹಲವಾರು ಗೌರವ ಪುರಸ್ಕಾರಗಳು ಸಂದಿದ್ದವು. ಇವುಗಳಲ್ಲಿ ಪ್ರಮುಖವೆಂದರೆ ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ, ಚನ್ನಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ, ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದವು ಸೇರಿವೆ.
ಮಹಾನ್ ಕ್ರಿಯಾಶೀಲರಾದ ಸಂಗಮೇಶರು 2001ರ ಮೇ 29ರಂದು ಈ ಲೋಕವನ್ನಗಲಿದರು.
On the birth anniversary of writer Sisu Sangamesha
ಕಾಮೆಂಟ್‌ಗಳು