ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಿರಿಜಾ ದೇವಿ


 ಗಿರಿಜಾ ದೇವಿ


ಮಹಾನ್ ಸಂಗೀತಗಾರ್ತಿ ವಿದುಷಿ ಗಿರಿಜಾ ದೇವಿ ಭಾರತೀಯ ಶಾಸ್ತ್ರೀಯ ಸಂಗೀತ ಲೋಕದಲ್ಲಿ ದೊಡ್ಡ ಹೆಸರು. ಬನಾರಸ್ ಘರಾಣದ ಪ್ರಸಿದ್ಧ ಗಾಯಕರಾದ ಅವರು  ಠುಮ್ರಿ  ಸಂಗೀತ ಶೈಲಿಯನ್ನು ಪ್ರಚಾರ ಮಾಡಿದವರಲ್ಲಿ ಅಗ್ರಗಣ್ಯರು. ಖಯಾಲ್, ಠುಮ್ರಿ, ದಾದ್ರಾ ಸೇರಿದಂತೆ ಹಲವು ಪ್ರಕಾರಗಳಲ್ಲಿ ಹಿಡಿತ ಹೊಂದಿದ್ದರೂ, ಗಿರಿಜಾ ಅವರು ಹೆಚ್ಚು ಖ್ಯಾತರಾಗಿದ್ದು ಠುಮ್ರಿ ಶೈಲಿಯ ಸಂಗೀತದಲ್ಲಿ. ಠುಮ್ರಿ ಶೈಲಿಯ ಮಹಾರಾಣಿ ಎಂದೂ ಗಿರಿಜಾ ಅವರನ್ನು ಕರೆಯಲಾಗುತ್ತಿತ್ತು.

ಗಿರಿಜಾ ದೇವಿ ಅವರು 1929ರ ಮೇ 8ರಂದು ವಾರಣಾಸಿಯಲ್ಲಿ ಜನಿಸಿದರು. ತಂದೆ ರಾಮದೇವ್ ರೈ ಗಿರಿಜಾ ಅವರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಕುರಿತಾ ಪ್ರೀತಿಯನ್ನು ಬೆಳೆಸಿದರು. ಹೀಗಾಗಿ ಐದನೆಯ ವಯಸ್ಸಿನಲ್ಲೇ ಗಿರಿಜಾ ಸಂಗೀತ ಕಲಿಯಲು ಆರಂಭಿಸಿದರು. ಸಂಗೀತ ಗುರು ಶ್ರೀಚಂದ್‌ಜಿ ಅವರ ತರಬೇತಿ, ಕಠಿಣ ಅಭ್ಯಾಸದ ಜೊತೆಗೆ ಮುಂದೆ ತಮ್ಮ ಪತಿಯಿಂದ ದೊರೆತ ಬೆಂಬಲಗಳ ದೆಸೆಯಿಂದಾಗಿ ಗಿರಿಜಾ ಅವರು ಸ್ವರಗಳ ಮೇಲೆ ಮಹತ್ವದ ಹಿಡಿತ ಸಾಧಿಸಿದರು.

ಕಾವ್ಯ ಮತ್ತು ಸಾಹಿತ್ಯದ ಪ್ರಾಮುಖ್ಯವನ್ನು ಅರ್ಥ ಮಾಡಿಕೊಂಡ ಗಿರಿಜಾ ದೇವಿ, ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಹಲವು ಕೃತಿಗಳನ್ನೂ ರಚಿಸಿದರು. ಭಾವನೆಗಳ ಅಭಿವ್ಯಕ್ತಿಯೇ ಅವರ ರಚನೆಗಳಲ್ಲಿ ಮುಖ್ಯವಾಗಿದ್ದವು. ಪ್ರೀತಿ, ಬಯಕೆ ಮತ್ತು ಭಕ್ತಿ ಠುಮ್ರಿ ಪ್ರಕಾರದ ಅವಿಭಾಜ್ಯ ಭಾವಗಳು. ಇವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ ಗಿರಿಜಾ ದೇವಿ, ಗೀತಸಾಹಿತ್ಯವು ಜೀವಂತಿಕೆಯಿಂದ ತುಂಬಿರುವಂತೆ ಮಾಡಿದರು.

ಗಿರಿಜಾ ಅವರ ಮೊದಲ ಗಾಯನವು 1949ರಲ್ಲಿ ಅಲಹಾಬಾದ್‌ ರೇಡಿಯೊ ಕೇಂದ್ರದಿಂದ ಪ್ರಸಾರವಾಯಿತು. ಅವರು ವೃತ್ತಿಪರ ಸಂಗೀತಗಾರ್ತಿಯಾದಾಗ ಅವರ ವಯಸ್ಸು ಇನ್ನೂ 20 ದಾಟಿರಲಿಲ್ಲ. ಅಲ್ಲಿಂದ ಮುಂದೆ ಅವರ ಇಡೀ ಜೀವನ ಹೊಸತನ್ನು ಕಲಿಯುವತ್ತ ಮತ್ತು ಸಂಗೀತವನ್ನು ಜನಸ್ತೋಮದ ಬಳಿ ಕೊಂಡೊಯ್ಯುವದರಲ್ಲಿ ಸಾಗಿತು. ಹೀಗೆ ವಿಶ್ವದೆಲ್ಲೆಡೆ ಅವರ ಸಂಗೀತ ಸುಧೆ ಹರಿಯಿತು.

ಗಿರಿಜಾ ದೇವಿ ಅವರಿಗೆ ತಾನ್‌ಸೇನ್‌ ಪ್ರಶಸ್ತಿ, ಪದ್ಮಶ್ರೀ (1972), ಪದ್ಮಭೂಷಣ (1989) ಮತ್ತು ಪದ್ಮವಿಭೂಷಣ (2016) ಮುಂತಾದ ಅನೇಕ ಗೌರವಗಳು ಅರಸಿ ಬಂದಿದ್ದವು.

ಗಿರಿಜಾ ದೇವಿ ತಮ್ಮ 88ನೇ ವಯಸ್ಸಿನಲ್ಲಿ, 2017ರ ಅಕ್ಟೋಬರ್ 24ರಂದು ಈ ಲೋಕವನ್ನಗಲಿದರು.

On the birth anniversary of great musician of Seniya and Banaras gharanas, Girija Devi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ