ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಕೃಷ್ಣ ರಾವ್



 ಎಚ್. ಆರ್. ರಾಮಕೃಷ್ಣ ರಾವ್


ಪ್ರೊ. ಎಚ್. ಆರ್. ರಾಮಕೃಷ್ಣ ರಾವ್
ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಮತ್ತು ಚಿಂತಕರಾಗಿ ಪ್ರಸಿದ್ಧರಾದವರು.

ಹೊಳಲ್ಕೆರೆ ರಂಗರಾವ್ ರಾಮಕೃಷ್ಣ ರಾವ್ 1935ರ ಮೇ 31ರಂದು ಜನಿಸಿದರು. ತಂದೆ ಚಿತ್ರದುರ್ಗದ ಚೀರನಹಳ್ಳಿ ಮತ್ತು ಕುಡಿನೀರಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ ಎಚ್. ವಿ. ರಂಗರಾವ್. ತಾಯಿ ರಾಧಮ್ಮ.

ತಮ್ಮ ಗ್ರಾಮದಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ನಡೆಸಿದ ರಾಮಕೃಷ್ಣ ರಾವ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಿಂದ ಇಂಟರ್ ಮೀಡಿಯೇಟ್, ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನದಲ್ಲಿನ ಪದವಿ ಮತ್ತು ಸ್ನಾತಕೊತ್ತರ ಪದವಿಗಳನ್ನು ಪಡೆದರು. ವಿದ್ಯಾರ್ಥಿ ದೆಸೆಯಲ್ಲಿ ಎಚ್. ನರಸಿಂಹಯ್ಯ, ಜಿ.ಪಿ. ರಾಜರತ್ನಂ, ವಿ. ಸೀತಾರಾಮಯ್ಯ ಅಂತಹ ಮಹಾನ್ ಗುರುಗಳ ಆಪ್ತ ಶಿಷ್ಯರಾಗಿ ಭೇಷ್ ಎನಿಸಿಕೊಂಡದ್ದಷ್ಟೇ ಅಲ್ಲದೆ ಪ್ರತಿಷ್ಟಿತ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿಗಳಾಗಿ ಮಹತ್ವದ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡರು.

ಅಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಕ್ರೈಸ್ತ್ ಕಾಲೇಜಿನಲ್ಲಿ ಅಧ್ಯಾಪನ ಪ್ರಾರಂಭಿಸಿದ ರಾಮಕೃಷ್ಣ ರಾವ್, ಅಲ್ಲಿ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳ ಪ್ರಭಾವಿ ಶಿಕ್ಷಕರೆಂದು ಪ್ರಸಿದ್ಧಿ ಪಡೆದರು. ಗೆಳೆಯ ಮತ್ತು ಸಹೋದ್ಯೋಗಿಗಳಾದ ಚಿ. ಶ್ರೀನಿವಾಸ ರಾಜು, ರಾಘವೇಂದ್ರ ರಾವ್ ಮುಂತಾದ ಕ್ರಿಯಾಶೀಲರೊಡಗೂಡಿ ಕ್ರೈಸ್ತ್ ಕಾಲೇಜ್ ಕನ್ನಡ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂದಿನ ದಿನಗಳಲ್ಲಿ ಕ್ರೈಸ್ತ್ ಕಾಲೇಜು ಕನ್ನಡ ಸಂಘವು ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ ಪ್ರಸಿದ್ಧಿ ಹೊಂದಿದೆ.

ವಿಜ್ಞಾನವನ್ನು ಕನ್ನಡದ ವಾತಾವರಣದಲ್ಲಿ ಪಸರಿಸುತ್ತಾ ಬಂದವರಲ್ಲಿ ಪ್ರೊ. ರಾಮಕೃಷ್ಣರಾವ್ ಪ್ರಮುಖರಾಗಿದ್ದಾರೆ. ಅವರ ಓದಿನ ದಿನಗಳು, ಪ್ರಾಧ್ಯಾಪನದ ದಿನಗಳು ಮತ್ತು ನಂತರದ ದಿನಗಳಲ್ಲಿ, ಅವರ ಹಿರಿಯ ವಯಸ್ಸಿನಲ್ಲೂ ಸಹಾ ಅವರ ಈ ಕಾರ್ಯ ಮುಂದುವರೆದಿತ್ತು. ಬೆಂಗಳೂರಿನ ಆಕಾಶವಾಣಿಯಿಂದ ಪ್ರಸಾರಗೊಂಡ ವಿಜ್ಞಾನ ಕಾರ್ಯಕ್ರಮದಲ್ಲಿ ರಾವ್ ಅವರು 150ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದರು. ಇವುಗಳಲ್ಲಿ ಬಹಳಷ್ಟು ಖಗೋಳಶಾಸ್ತ್ರ, ಮತ್ತು ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ್ದವು. ದೂರದರ್ಶನದಲ್ಲಿ ಹಿರಿಯ ವಿಜ್ಞಾನಿಗಳಾದ, ರಾಜಾರಾಮಣ್ಣ, ಸಿ. ಎನ್. ಆರ್ ರಾವ್, ಯು. ಆರ್. ರಾವ್, ಎಮ್. ಆರ್. ಶ್ರೀನಿವಾಸನ್, ಮುಂತಾದವರ ಜೊತೆ ಮಹತ್ವದ ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. 'ರಾಮನ್ ಶತಮಾನೋತ್ಸವ'ದ ವಿಶೇಷ ಸಮಾರಂಭದಲ್ಲಿ 'ದೆಹಲಿ ದೂರದರ್ಶನಕ್ಕಾಗಿ ರಾಮಕೃಷ್ಣರಾವ್ ಅವರು ಮಾಡಿದ "Raman, the natural Philosopher" ಎಂಬ ಸಾಕ್ಷಚಿತ್ರ ಎಲ್ಲೆಡೆ ಮನ್ನಣೆ ಗಳಿಸಿತ್ತು.

ರಾಮಕೃಷ್ಣ ರಾವ್ ನಿವೃತ್ತಿಯ ಬಳಿಕವೂ ಅನೇಕ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ, 'ವಿಜ್ಞಾನ ಲೇಖನಗಳ ಪರಿಶೋಧಕ'ರಾಗಿಯೂ ಸೇವೆಸಲ್ಲಿಸಿದ್ದರು.

ಓದುವುದರ ಜೊತೆಗೆ ನೈಸರ್ಗಿಕ ಪ್ರದೇಶಗಳಿಗೆ ಚಾರಣ ಮತ್ತು ಆಸಕ್ತ ವಿಷಯಗಳ ವಿಶೇಷ ಅಧ್ಯಯನಕ್ಕೆ ವಿಶ್ವಪರ್ಯಟನೆ ಕೈಗೊಳ್ಳುವುದು ರಾಯರ ಇತರ ಹವ್ಯಾಸಗಳಾಗಿದ್ದವು. 'ಉದಯಭಾನು ಸಂಸ್ಥೆ' ನಡೆಸಿದ ಉಚಿತ ಪದವಿ ಪೂರ್ವ ತರಗತಿಗಳಿಗೆ ಭೌತಶಾಸ್ತ್ರದ ಗೌರವ ಪ್ರಾಧ್ಯಾಪಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ದುಡಿದಿದ್ದರು. 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ'ಯ ಅಧ್ಯಕ್ಷರಾಗಿ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಜನ ವಿಜ್ಞಾನ ಅಂದೋಳನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಬೆಂಗಳೂರಿನ ಬಸವನಗುಡಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ 'ನ್ಯಾಷನಲ್ ಕಾಲೇಜ್ ಸೈನ್ಸ್ ಫೋರಂ' ನ ಕಾರ್ಯಕಾರಿ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ರಾವ್ ಅವರು ವಿಜ್ಞಾನ ಕೃತಿಕಾರರಾಗಾಗಿ 'ನಿಶ್ಯಬ್ದದೊಳಗಿನ ಶಬ್ದ', 'ಶಕ್ತಿಗಾಥೆ', 'ಪರಮಾಣು ಪ್ರಪಂಚ', 'ಅದೃಶ್ಯ ಬೆಳಕು - ಎಕ್ಸ್-ರೇ', ಭೌತಶಾಸ್ತ್ರದ ಪಠ್ಯ ಪುಸ್ತಕಗಳು, 'The Quest'- A Biography of a Scientist, 'ಅಂತರಿಕ್ಷ', 'ಶುಕ್ರ ಸಂಕ್ರಮ', 'ಒಲವಿನ ಶಿಲೆ-ಅಯಸ್ಕಾಂತ', 'ನಂಬಿಕೆ-ಮೂಢನಂಬಿಕೆ', 'ಕಲಾಂ ಮೇಷ್ಟ್ರು', 'ಸರ್ ಐಸಾಕ್ ನ್ಯೂಟನ್, 'ಇತಿಹಾಸದಲ್ಲಿ ವಿಜ್ಞಾನ, 'ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ', 'ಪ್ರಳಯ-೨೦೧೨', 'ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್' , 'Running through the storm'-Biography of Dr. S. S. Iyengar ಮುಂತಾದ ಕೃತಿ ರಚಿಸಿದ್ದರು. 'ಕಾಸ್ಮಾಸ್' ಮತ್ತು 'ನಮ್ಮ ವಿಶ್ವ' ಎಂಬ ಸಾಕ್ಷ್ಯಚಿತ್ರವನ್ನೂ ಮಾಡಿದ್ದರು. 'ನಿಮಗೆ ತಿಳಿದಿರಲಿ' ಎಂಬ ಧ್ವನಿ ಸುರಳಿ ಮಾಡಿದ್ದರು. 'ಬಿಗ್ ಬ್ಯಾಂಗ್' !? ಎಂಬ ಮಾನೋಗ್ರಾಫ್ ಮಾಡಿದ್ದರು. 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಪುಸ್ತಕದ ಸಂಪಾದನೆಯನ್ನು ಟಿ. ಅರ್. ಅನಂತರಾಮು ಅವರ ಜೊತೆಗೂಡಿ ಮಾಡಿದ್ದರು. ಅಮೆರಿಕ ದೇಶದ ಬಾನುಲಿ ಕೇಂದ್ರದಲ್ಲಿ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಿ, ಅಲ್ಲಿನ ಜನರ ಆಸಕ್ತಿಗಳಿಗೂ ಸ್ಪಂದಿಸಿದ್ದರು. 'ಅಂಬಿಗಾ! ದಡ ಹಾಯಿಸು' ಅವರ ಆತ್ಮಕತೆ.

ಹೀಗೆ ಕನ್ನಡದ ವಾತಾವರಣದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದ ನಮ್ಮ ಕನ್ನಡ ನಾಡಿನ ಹಿರಿಯರಾದ ಪ್ರೊ. ರಾಮಕೃಷ್ಣರಾವ್ ಅವರು 2022ರ ಸೆಪ್ಟೆಂಬರ್ 12ರಂದು ಈ ಲೋಕವನ್ನಗಲಿದರು. ಅಂತಹ ತುಂಬಿದ ಕೊಡದಂತಿದ್ದ ನಿಷ್ಠಾವಂತ ಸರಳ ಸಾಧಕ ಸಜ್ಜನ ಉದಯಿಸುವುದು ಲೋಕದಲ್ಲಿ ತುಂಬಾ ಕಡಿಮೆ. ವಯಸ್ಸಾದ ಮೇಲೆ ಸಾವು ಅನಿವಾರ್ಯ ಮತ್ತು ದೇಹದ ಭಾದೆಗಳಿಂದ ಮುಕ್ತಿ ಕೂಡ. ಈ ಮರೆಯಲಾಗದ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.

ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||

“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”

On the birth day of our great science writer Prof. H. R. Ramakrishna Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ