ಎನ್. ಜಗನ್ನಾಥ ಪ್ರಕಾಶ್
ಎನ್. ಜಗನ್ನಾಥ ಪ್ರಕಾಶ್
ಎನ್. ಜಗನ್ನಾಥ ಪ್ರಕಾಶ್ ಕನ್ನಡ ಸಾಂಸ್ಕೃತಿಕ ಲೋಕದ ಒಬ್ಬ ಅಮೂಲ್ಯ ಸಂಪರ್ಕ ಸೇತುವಿನಂತಹವರು. ಸಾಹಿತ್ಯ, ರಂಗಭೂಮಿ, ಚಿತ್ರರಂಗ, ಲಲಿತ ಕಲೆ, ಪತ್ರಿಕೋದ್ಯಮ ಹೀಗೆ ಎಲ್ಲೆಡೆ, ಎಲ್ಲರಿಗೂ ಆಪ್ತರಾಗಿ ಬೆರೆತು ತಮ್ಮನ್ನು ಹೆಚ್ಚು ಪ್ರದರ್ಶನಕ್ಕಿಟ್ಟುಕೊಳ್ಳದೆಯೇ ಎಲ್ಲವನ್ನೂ ಆಗುಮಾಡುವಂತಹ ವ್ಯವಸ್ಥಾಪನ ಕೌಶಲ ಅವರದ್ದು.
ಎನ್. ಜಗನ್ನಾಥ ಪ್ರಕಾಶ್ ಮೂಲತಃ ಕೋಲಾರದವರು. ಅವರು 1955ರ ಮೇ 25ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಜಗನ್ನಾಥ ಪ್ರಕಾಶ್ ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರಾದರು.
ಪತ್ರಿಕೋದ್ಯಮದಲ್ಲಿ ವೃತ್ತಿ ಆರಂಭಿಸಿದ ಪ್ರಕಾಶ್ ಅವರು ಮುಂಜಾನೆ ಮತ್ತು ಕೋಲಾರ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ವಾರ್ತಾ ಇಲಾಖೆಯಲ್ಲಿ ಇನ್ಫರ್ಮೇಷನ್ ಅಸಿಸ್ಟೆಂಟ್ ಎಂದು ಕೆಲಸಕ್ಕೆ ಸೇರಿದ ಅವರು ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೆಲಕಾಲ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಆಗಿದ್ದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಸಹಾ ಕಾರ್ಯನಿರ್ವಹಿಸಿ ನಿವೃತ್ತರಾದರು.
ಜಗನ್ನಾಥ ಪ್ರಕಾಶ್ ಅವರು ’ಕೋಲಾರ ಸಿರಿಸಂಪುಟ’, ’ನಂದಿಬೆಟ್ಟ’, ’ಶಿವಾರಪಟ್ಟಣ ಶಿಲ್ಪಿಗಳು’, ’ವಿಧಾನಸೌಧ ಶಿಲಾಕಾವ್ಯ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಚಲನಚಿತ್ರೊದ್ಯಮಕ್ಕೆ ಅರವತ್ತು ತುಂಬಿದ ಸಂದರ್ಭದಲ್ಲಿ 'ಅರವತ್ತರ ವಸಂತ - ವಜ್ರಪ್ರಭೆಯಲ್ಲಿ ಕನ್ನಡ ಸಿನಿಮಾ' ಎಂಬ ಕೃತಿಯನ್ನು ಸೊಗಸಾಗಿ ಕೃತಿಯಾಗಿಸಿ ಹೊರತಂದಿದ್ದಾರೆ.
ವಾರ್ತಾ ಇಲಾಖೆ ಮತ್ತು ಚಲನಚಿತ್ರ ಅಕಾಡೆಮಿಗಳ ವಿಶಿಷ್ಟ ಕಾರ್ಯಗಳಲ್ಲಿ ಮತ್ತು ಅಮೂಲ್ಯ ಪ್ರಕಟಣೆಗಳಲ್ಲಿನ ಅಚ್ಚುಕಟ್ಟುತನಗಳಲ್ಲಿ ಜಗನ್ನಾಥ್ ಪ್ರಕಾಶರ ಶ್ರಮ ವ್ಯಾಪಿಸಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಹಲವಾರು ಯೋಜನೆಗಳು, ಪ್ರಕಟಣೆಗಳು, ಕಾರ್ಯಕ್ರಮಗಳು ಮತ್ತು ಅಲ್ಲಿನ ಕಣಜ ಮಾಹಿತಿ ಕೇಂದ್ರದಲ್ಲಿ ಸಹಾ ಅವರ ಕಾರ್ಯನಿರ್ವಹಣೆಗಳು ಹೆಸರಾಗಿತ್ತು.
ಅಂಚೆ ಚೀಟಿ ಸಂಗ್ರಹ, ಇತಿಹಾಸ ಅಧ್ಯಯನ ಮತ್ತು ಪ್ರವಾಸಗಳು ಜಗನ್ನಾಥ್ ಪ್ರಕಾಶ್ ಅವರ ಆಸಕ್ತಿಯ ಕ್ಷೇತ್ರಗಳು. ತಾವು ಮಾಡುವ ಕಾರ್ಯಕ್ಷೇತ್ರದಲ್ಲಿ ಸದಾ ಹೊಸ ಹೊಸ ಕಾರ್ಯಯೋಜನೆಗಳ ರೂಪುರೇಷೆಗಳನ್ನು ಚಿಂತಿಸುತ್ತಾ ಕಾರ್ಯಪ್ರವೃತ್ತರಾಗುವ ಸೃಜನಶೀಲ ಮನ ಅವರದ್ದು.
ನನಗೆ ಜಗನ್ನಾಥ ಪ್ರಕಾಶ್ ಅವರ ಆಪ್ತಸ್ನೇಹ ಮಾರ್ಗದರ್ಶನ ಅನೇಕ ಬಾರಿ ಸಂದಿದೆ. ಅವರ ಹೃದಯ ವೈಶಾಲ್ಯತೆ ಬಹಳ ಹಿರಿದು. ಅವರ ಕಾರ್ಯವ್ತಾಪ್ತಿ ಕೂಡ.
ಆತ್ಮೀಯ ಹಿರಿಯರಾದ ಎನ್. ಜಗನ್ನಾಥ ಪ್ರಕಾಶರ ಕುರಿತಾದ ಈ ಬರಹ ಅವರ ಕುರಿತಾದ ಸಣ್ಣ ಗೌರವಪೂರ್ವಕ ಅಭಿವ್ಯಕ್ತಿಯಾಗಿದೆ. ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of great name in Kannada and Culture N. Jagannatha Prakash Sir 🌷🙏🌷
ಕಾಮೆಂಟ್‌ಗಳು