ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಸಿ. ರೆಡ್ಡಿ


 ಕೆ. ಸಿ. ರೆಡ್ಡಿ


ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ ಅವರು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಗಳು(1947-52). ಅವರು ಕೇಂದ್ರದಲ್ಲಿ ಮಂತ್ರಿಗಳೂ,  ಮಧ್ಯಪ್ರದೇಶದ ರಾಜ್ಯಪಾಲರೂ ಆಗಿದ್ದರು. 

ಚೆಂಗಲರಾಯ ರೆಡ್ಡಿ ಅವರು ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯಲ್ಲಿ 1902ರ ಮೇ 4ರಂದು ಜನಿಸಿದರು. ತಂದೆ ಬಿ. ವೆಂಕಟರೆಡ್ಡಿ. ಚಿಕ್ಕಂದಿನಿಂದ ಪರೀಕ್ಷೆಗಳಲ್ಲಿ ಉನ್ನತ ವರ್ಗಗಳಲ್ಲಿ ತೇರ್ಗಡೆಯಾದ ಇವರು ಮದರಾಸಿನ ಪಚ್ಚಯಪ್ಪ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನು ಪಾರಿತೋಷಕದೊಂದಿಗೆ ಪಡೆದರು. ಅನಂತರ ಅಲ್ಲಿಯೇ ಕಾನೂನು ವ್ಯಾಸಂಗ ಮಾಡಿ ಎಲ್‍ಎಲ್.ಬಿ. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿದರು. 

ಮುಂದೆ ಕೆ. ಸಿ. ರೆಡ್ಡಿ ಅವರು ವಕೀಲಿವೃತ್ತಿ ಆರಂಭಿಸಿದರಲ್ಲದೆ ಸಾರ್ವಜನಿಕ ಜೀವನವನ್ನೂ ಪ್ರವೇಶಿಸಿದರು. ಕೋಲಾರ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ (1934-40) ಇವರು ಮೈಸೂರು ಸಂಸ್ಥಾನದ ಪ್ರಜಾಪಕ್ಷದ ಅಧ್ಯಕ್ಷರೂ ಆಗಿದ್ದರು (1935-37). ತರುವಾಯ ರಾಜ್ಯ ಶಾಸನ ಸಭೆಗೆ ಚುನಾಯಿತರಾದರು. ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟ ಬಿರುಸಾದಾಗ ಮಹಾರಾಜರ ಆಶ್ರಯದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಬೇಡಿಕೆಯನ್ನು ಮೈಸೂರು ಕಾಂಗ್ರೆಸ್ ಮಂಡಿಸಿತು. ಇವರು ಆ ಪಕ್ಷದ ಮುಂಚೂಣಿ ನಾಯಕರಾದರು. ರಾಜ್ಯಾದ್ಯಂತ ಜನತೆಯಲ್ಲಿ ಹೊಸ ಚೇತನ ತುಂಬಿ, ಹೋರಾಟಕ್ಕೆ ತೀವ್ರಗತಿ ಬರುವಂತೆ ಮಾಡುವಲ್ಲಿ ಇವರು ವಹಿಸಿದ ಪಾತ್ರ ಮುಖ್ಯವಾದುದು. 1937-38ರಲ್ಲಿ ಇವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು; ಸೆರೆಮನೆ ವಾಸ ಅನುಭವಿಸಿದರು. ಮಹಾತ್ಮ ಗಾಂಧೀಯವರ ಸೇವಾಗ್ರಾಮ ಆಶ್ರಮದಲ್ಲಿ ಮೈಸೂರು ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ಸ್ವಲ್ಪಕಾಲ ಇರುವ ಅವಕಾಶ ಇವರಿಗೆ ಲಭಿಸಿತ್ತು. 1944-45ರಲ್ಲಿ ಅಖಿಲಭಾರತ ದೇಶೀಯ ಸಂಸ್ಥಾನಗಳ ಪ್ರಜಾ ಪರಿಷತ್ತಿನ ಕಾರ್ಯಕಾರೀ ಮಂಡಲಿ ಸದಸ್ಯರಾಗಿ ಇವರು ಚುನಾಯಿತರಾಗಿದ್ದರು. 1946-47ರಲ್ಲಿ ಇವರು ಮತ್ತೆ ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ ದೇಶೀ ಸಂಸ್ಥಾನಗಳಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗಾಗಿ ಹೋರಾಟ ಉಗ್ರರೂಪ ತಾಳಿತು. 1947 ಸೆಪ್ಟೆಂಬರ್ 19ರಂದು ಇವರ ನಾಯಕತ್ವದಲ್ಲಿ ಸತ್ಯಾಗ್ರಹ ಆರಂಭವಾಯಿತು. ಕೊನೆಗೆ ಸಂಸ್ಥಾನ ಸರ್ಕಾರ ಮಣಿದು, ಪ್ರಜೆಗಳ ಬೇಡಿಕೆಗಳನ್ನು ಈಡೇರಿಸಬೇಕಾಯಿತು. ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಇವರಿಗೂ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರರಿಗೂ ರಾಜಕೀಯ ಒಪ್ಪಂದವಾಗಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿಗಳ ಮಂತ್ರಿಮಂಡಲ ರಚನೆಯಾಯಿತು. ಇವರು ಮೈಸೂರಿನ ಪ್ರಥಮ ಮುಖ್ಯಮಂತ್ರಿಗಳಾಗಿ ಸಚಿವ ಸಂಪುಟ ರಚಿಸಿ 1952ರ ವರೆಗೂ ಅಧಿಕಾರದಲ್ಲಿದ್ದರು. ಮುಂದೆ ಇವರು ರಾಜ್ಯ ಸಭೆ (1952-57) ಮತ್ತು ಲೋಕಸಭೆ (1957-64) ಸದಸ್ಯರಾಗಿದ್ದರು. ಇವರು 1952-61ರಲ್ಲಿ ಗೃಹನಿರ್ಮಾಣ ಮತ್ತು ಸರಬರಾಯಿ ಸಚಿವರಾಗಿ, 1961-63ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದರು. 1963-64ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಚುನಾಯಿತರಾಗಿದ್ದರು. 1965-71ರ ವರೆಗೆ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು.

ಕೆ. ಸಿ. ರೆಡ್ಡಿ ಅವರು ಅರ್ಥಶಾಸ್ತ್ರದಲ್ಲಿ ನಿಪುಣರೂ ಅನುಭವಿಗಳೂ ಆದವರೆಂದು ಹೆಸರಾಗಿದ್ದು ದೆಹಲಿ ಅರ್ಥಶಾಸ್ತ್ರ ಶಾಲೆಯ (ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್) ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ಕನ್ನಡ ಪತ್ರಿಕೋದ್ಯಮದಲ್ಲೂ ಇವರು ಕೆಲಸ ಮಾಡಿದ್ದರು. ಸ್ವಲ್ಪ ಕಾಲ ಜನವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿದ್ದರು. 

ಕೆ. ಸಿ. ರೆಡ್ಡಿ ಅವರು 1976ರಲ್ಲಿ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಿಧನರಾದರು.

On the birth anniversary of of first chief minister of Mysore State K. C. Reddy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ