ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಸ್. ಸಣ್ಣಯ್ಯ


 ಬಿ. ಎಸ್ ಸಣ್ಣಯ್ಯ


ಬಿ. ಎಸ್. ಸಣ್ಣಯ್ಯ ಹಸ್ತಪ್ರತಿ ಶಾಸ್ತ್ರದ ಭೀಷ್ಮರೆಂದು ಗೌರವಾನ್ವಿತರಾಗಿದ್ದರು. ಸಂಶೋಧನೆ ಮತ್ತು ಹಸ್ತಪ್ರತಿ ಶಾಸ್ತ್ರದಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು.

ಸಣ್ಣಯ್ಯ 1926ರ ಜೂನ್ 18ರಂದು
ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭೋಗನಹಳ್ಳಿಯಲ್ಲಿ ಜನಿಸಿದರು. ತಂದೆ ಸಣ್ಣೇಗೌಡ.  ತಾಯಿ ಬೋರಮ್ಮ. ಅವರ ಪ್ರಾರಂಭಿಕ ಶಿಕ್ಷಣ ರಾವಂದೂರಿನಲ್ಲಿ ಮತ್ತು ಪ್ರೌಢಶಾಲಾ ಶಿಕ್ಷಣ ಕೃಷ್ಣರಾಜನಗರದಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಆನರ್ಸ್, ಎಂ.ಎ., ಬಿ.ಲಿಬ್ ಪದವಿಗಳ ಜೊತೆಗೆ ಡಿಪ್ಲೊಮ ಇನ್‌ ಆರ್ಕೈವ್ಸ್‌ ಪದವಿ ಗಳಿಸಿದರು. 

ಸಣ್ಣಯ್ಯ  ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನಾಲಯದಲ್ಲಿ ತಮ್ಮ ವೃತ್ತಿಯನ್ನಾರಂಭಿಸಿದ್ದು 1956ರಲ್ಲಿ. ನಂತರ ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥ ಸಂಪಾದನಾ ವಿಭಾಗದ ನಿರ್ದೇಶಕರಾಗಿ ದುಡಿದು ನಿವೃತ್ತರಾದರು. ನಿವೃತ್ತಿಯ ನಂತರವೂ ಹಲವಾರು ಯೋಜನೆಗಳಲ್ಲಿ ತೊಡಗಿಸಿಕೊಂಡು ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ‘ಗೋಮ್ಮಟಸಾರ’ ಕೃತಿಗೆ ಕನ್ನಡ ವ್ಯಾಖ್ಯಾನ ಬರೆದಿರುವ ಕೇಶವಣ್ಣನ ‘ಗೊಮ್ಮಟ ಸಾರ’ ಕೃತಿಯ ಪರಿಷ್ಕರಣೆಯಂತಹ ಬೃಹತ್‌ ಯೋಜನೆಯನ್ನೂ ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು. 

ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಸಣ್ಣಯ್ಯನವರು ಸಾತ್ವಿಕ ಜೀವನಕ್ಕೆ ಒಲಿದಿದ್ದರು. ಪರಮಹಂಸ, ಸ್ವಾಮಿ ವಿವೇಕಾನಂದ, ಗಾಂಧೀಜಿ ಮುಂತಾದ ಮಹನೀಯರ ಪ್ರಭಾವ ಅವರ ಜೀವನದಲ್ಲಿತ್ತು. ಸಣ್ಣಯ್ಯನವರು ಕುವೆಂಪು, ಡಿ.ಎಲ್‌.ಎನ್‌., ಎಸ್‌.ವಿ. ಪರಮೇಶ್ವರಭಟ್ಟರು, ತ.ಸು. ಶಾಮರಾಯರಂತಹ ಘನ ವಿದ್ವಾಂಸರ ಶಿಷ್ಯರಾಗಿದ್ದರ ಜೊತೆಗೆ  ಡಿ.ಎ‌ಲ್‌.ಎನ್‌ ಅವರು ಬೋಧಿಸುತ್ತಿದ್ದ ಪ್ರಾಚೀನ ಕಾವ್ಯಗಳ ಪಾಠಕ್ಕೆ ಮನಸೋತು ಹಸ್ತಪ್ರತಿ ಶಾಸ್ತ್ರದ ಕಡೆ ಅಧ್ಯಯನವನ್ನಾರಂಭಿಸಿದರು. 

ಸಣ್ಣಯ್ಯನವರು ನಾಡಿನಾದ್ಯಂತ ಸಂಚರಿಸಿ ಹಸ್ತಪ್ರತಿ ಸಂಗ್ರಹಣೆಯಲ್ಲಿ ತೊಡಗಿ ಹಲವಾರು ಹಸ್ತಪ್ರತಿಗಳ ಮೈಕ್ರೊ ಫಿಲಂ ತಯಾರಿಸಿದ್ದಲ್ಲದೆ ಚಂಪೂ, ವಚನ, ಷಟ್ಪದಿ, ಸಾಂಗತ್ಯ ಮತ್ತು ಗದ್ಯ ಸಾಹಿತ್ಯಗಳನ್ನೊಳಗೊಂಡಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದರು. ನೇಮಿನಾಥಪುರಾಣ, ಹರಿವಂಶಾಭ್ಯುದಯಂ ಮೋಹನತರಂಗಿಣಿ, ರಾಜಾವಳಿ ಕಥಾಸಾರ, ವರ್ಧಮಾನ ಪುರಾಣ, ತೊರವೆ ರಾಮಾಯಣ, ಕಾವ್ಯಾವಲೋಕನ, ಸಾಹಸಭೀಮ ವಿಜಯ, ಅಜಿತ ಪುರಾಣ, ಖಗೇಂದ್ರಮಣಿದರ್ಪಣಂ ಮುಂತಾದವುಗಳನ್ನೂ ಸಂಪಾದಿಸಿದರು. 

ಸಣ್ಣಯ್ಯನವರು ಆಗಾಗ್ಗೆ ಪತ್ರಿಕೆಗಳಲ್ಲೂ ಸಂಶೋಧನಾ ಲೇಖನಗಳನು ಬರೆದರು. ಕನ್ನಡ ಹಸ್ತಪ್ರತಿ ವರ್ಣನಾತ್ಮಕ ಸೂಚಿಯನ್ನು ಸಹೋದ್ಯೋಗಿಗಳೊಡನೆ ಸೇರಿ 10 ಸಂಪುಟಗಳಲ್ಲಿ ಪ್ರಕಟಿಸಿದರು. ‘ಗ್ರಂಥ ಸಂರಕ್ಷಣೆ’, ‘ಹಸ್ತಪ್ರತಿಶಾಸ್ತ್ರ ಪರಿಚಯ’ ಗ್ರಂಥಗಳ ಜೊತೆಗೆ ಇವರು ಸಂಪಾದಿಸಿರುವ ಅತಿ ಮಹತ್ವದ ಕೃತಿ ಎಂದರೆ ‘ಪ್ರಾಚೀನ ಗ್ರಂಥ ಸಂಪಾದನೆ’.  ಇದು ಕನ್ನಡ ಸಾಹಿತ್ಯಕ್ಕೊಂದು ವಿಶಿಷ್ಟ ಕೊಡುಗೆ. 

ಸಣ್ಣಯ್ಯನವರಿಗೆ ಮೈಸೂರು ವಿಶ್ವವಿದ್ಯಾಲಯದ ತೀ.ನಂ.ಶ್ರೀ ಬಹುಮಾನ, ದೇವರಾಜ ಬಹದ್ದೂರ್ ಬಹುಮಾನ, ಶ್ರೀದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿಯವರ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಐದು ಬಾರಿ ಬಹುಮಾನ (1961, 74, 85, 88, 92), ಶ್ರವಣಬೆಳಗೊಳದ ಶ್ರೀಗೋಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ (1998), ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ (1999), ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ (2005) ಮತ್ತು ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಶಾಸ್ತ್ರದ ಸಮ್ಮೇಳನಾಧ್ಯಕ್ಷತೆಯ ಗೌರವಗಳೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದವು.

ಮಹಾನ್ ವಿದ್ವಾಂಸರೂ ಮತ್ತು ಸಂಶೋಧಕರೂ ಆದ ಬಿ. ಎಸ್. ಸಣ್ಣಯ್ಯನವರು 2021ರ ಮೇ 12ರಂದು ತಮ್ಮ 95ನೆಯ ವಯಸ್ಸಿನಲ್ಲಿ ನಿಧನರಾದರು.

ಕಾಮೆಂಟ್‌ಗಳು

  1. ಹಿರಿಯರಾದ ಬಿ.ಎಸ್.ಸಣ್ಣಯ್ಯನವರು ಹತ್ತಿರದ ಸಂಬಂಧಿಕರಾಗಿದ್ದರು. ಹಾಗಾಗಿ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಒಂದಿಷ್ಟು ಸಮಯ ಅವರೊಟ್ಟಿಗೆ ಕುಳಿತು ಮಾತನಾಡುವುದು ಖುಷಿ ಕೊಡುತ್ತಿತ್ತು. ಎದುರು ಕಂಡ ತಕ್ಷಣ ನಿನ್ನ ಲೇಖನಗಳನ್ನು ಗಮನಿಸುತ್ತಿರುತ್ತೇನೆ. ಸಾಂದರ್ಭಿಕ ಲೇಖನಗಳನ್ನು ಚೆನ್ನಾಗಿ ಬರೆಯುತ್ತೀಯ ಎಂದು ಬೆನ್ನುತಟ್ಟುತ್ತಿದ್ದರು. ಆ ಹೊಗಳಿಕೆ ನನಗೆ ರಾಷ್ಟ್ರ ಪ್ರಶಸ್ತಿ ಬಂದಷ್ಟು ಖುಷಿ ನೀಡುತ್ತಿತ್ತು. ಅವರು ತೀರಿ ಹೋಗುವ ಒಂದೆರಡು ತಿಂಗಳ ಹಿಂದೆ ಭೇಟಿಯಾಗಿದ್ದೆವು. ಆಗ ನಿಮ್ಮ ಪುಸ್ತಕಗಳನ್ನು ಓದುವ ಆಸೆ ಇದೆ, ಕೆಲವು ಪುಸ್ತಕಗಳನ್ನು ಕೊಡ್ತೀರಾ? ಎಂದಿದ್ದೆ. ಮನೆಗೆ ಬಾ ಯಾವುದು ಬೇಕು ತೆಗೆದುಕೊಂಡು ಹೋಗಿ ಓದು. ಯಾವಾಗ ಬರ್ತೀಯ ಅಂದಿದ್ರು. ಅದೇ ಕೊನೆ ಅವರೊಟ್ಟಿಗೆ ಮಾತನಾಡಿದ್ದು.
    ಶ್ರವಣಬೆಳಗೊಳದ ಹಸ್ತಪ್ರತಿ ಅಧ್ಯಾಯನ ಪೀಠಕ್ಕೆ ಭೇಟಿ ನೀಡಿದ್ದೆ ಆಗಲೂ ಬಹಳಷ್ಟು ಸಮಯ ಕನ್ನಡದ ಬರಹಗಾರರ ಪರಿಚಯ ಮಾಡಿದ್ದರು. ರಾಶಿ ರಾಶಿ ಹಸ್ತಪ್ರತಿಗಳನ್ನು ನೋಡುವ ಭಾಗ್ಯವೂ ಸಿಕ್ಕಿತ್ತು. ಜ್ಞಾನ ಭಂಡಾರವಾಗಿದ್ದ ಸಣ್ಣಯ್ಯನವರ ಕೊಡುಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದದ್ದು.
    ಹಿರಿಯರನ್ನು ನೆನೆಯಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ