ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಚಂದ್ರ ಹಡಪದ್


 ರಾಮಚಂದ್ರ  ಹಡಪದ್


ರಂಗ ಸಂಗೀತ, ಸುಗಮ ಸಂಗೀತ, ಚಲನಚಿತ್ರ ಹಿನ್ನೆಲೆ ಗಾಯನ,  ಹೀಗೆ ಎಲ್ಲ ಸಂಗೀತ ವೈವಿಧ್ಯಗಳಲ್ಲಿ ರಾಮಚಂದ್ರ  ಹಡಪದ್ ಇಂದು ಜನಪ್ರಿಯ  ಹೆಸರು.  ಅವರು ತಾವು ಸಂಗೀತ ಕಾಯಕ ಮಾಡುತ್ತಿರುವ ಈ ಎಲ್ಲ ನೆಲೆಗಳಲ್ಲಿ ಅಪ್ತತೆ ಶ್ರದ್ಧೆಗಳಿಂದ ಗಮನ ಸೆಳೆದಿದ್ದಾರೆ.  ಇವರು ತಮ್ಮದೇ  ಸಂಗೀತತಂಡದ‍ ಮೂಲಕ  ವಿನೂತನ ಮತ್ತು  ವೈವಿಧ್ಯಮಯ ಸಂಗೀತ  ಕಾರ್ಯಕ್ರಮಗಳಿಂದಲೂ  ಗಾನಪ್ರಿಯ ಕಿವಿಗಳನ್ನು  ಎಲ್ಲೆಡೆ  ತಣಿಸುತ್ತ ಬಂದಿದ್ದಾರೆ.      

ರಂಗಲೋಕದಲ್ಲಂತೂ  ರಾಮಚಂದ್ರ  ಹಡಪದ್ ಅವರ ಸಂಗೀತ  ಸಂಯೋಜನೆ  ಮತ್ತು  ಗಾಯನ  ಅಪಾರ  ಸಂಖ್ಯೆಯ  ರಂಗಪ್ರಯೋಗಗಳ ಸಹಸ್ರಾರು  ಪ್ರದರ್ಶನಗಳಿಗೆ  ಹರಿದಿರುವುದಲ್ಲದೆ  ರಾಷ್ಟ್ರೀಯ  ಮಟ್ಟದ  ಸ್ಪರ್ಧೆಗಳಲ್ಲಿ  ಶ್ರೇಷ್ಠ  ಪ್ರಶಸ್ತಿಗಳಿಗೆ  ಪಾತ್ರವಾಗಿವೆ.  ಹೀಗಾಗಿ  ಅವರು ಬೆಂಗಳೂರಿನ  ರಂಗತಂಡಗಳಿಗೆಲ್ಲಾ  ಅಚ್ಚುಮೆಚ್ಚಿನ ಸಂಗೀತಗಾರರಾಗಿದ್ದಾರೆ.

ರಾಮಚಂದ್ರ  ಹಡಪದ್  ಗುಲ್ಬರ್ಗಾ ಜೆಲ್ಲೆಯ  ಹಳ್ಳಿಯೊಂದರಿಂದ  ಬಂದ  ಪ್ರತಿಭೆ.  ಅವರು 1979ರ ಜೂನ್  18ರಂದು  ಗುಲ್ಬರ್ಗ  ಜಿಲ್ಲೆಯ  ಚಿತ್ತಾಪುರ  ತಾಲೂಕಿನ  ಭಂಕುರ್  ಗ್ರಾಮದಲ್ಲಿ  ಜನಿಸಿದರು.  ಅವರ ವಿಧ್ಯಾಭ್ಯಾಸ  ಭಂಕುರ್,  ಶಹಾಬಾದುಗಳಲ್ಲಿ  ನೆರವೇರಿ, ಪದವೀಧರರಾದರು.  ಹೀಗೆ  ವಿದ್ಯಾಭ್ಯಾಸವನ್ನು ನಡೆಸಿದರಾದರೂ ರಾಮಚಂದ್ರ  ಹಡಪದ್ ಅವರಿಗೆ  ಶಾಸ್ತ್ರೀಯ ಸಂಗೀತದಲ್ಲಿ  ಅಪಾರ  ಆಸಕ್ತಿ.  ಸಂಗೀತದಲ್ಲಿ ಅವರಿಗೆ  ಮೊದಲು ಗುರುಗಳಾದವರು  ಎಂ. ಆರ್.  ರುದ್ರಯ್ಯ  ಮತ್ತು  ರೇವಯ್ಯ ವಸ್ತ್ರದ್ ಮಠ ಅವರುಗಳು.  ಮುಂದೆ  ಸಂಗೀತದಲ್ಲಿ  ಹೆಚ್ಚಿನ  ಕಲಿಕೆಯ  ಆಶಯದಿಂದ  ಬೆಂಗಳೂರಿಗೆ  ಬಂದ  ರಾಮಚಂದ್ರ  ಹಡಪದ ಅವರಿಗೆ ಗುರುಗಳಾದವರು ಪ್ರಸಿದ್ಧ  ಸಂಗೀತಗಾರರಾದ  ಉಸ್ತಾದ್  ಫಯಾಜ್  ಖಾನ್  ಅವರು.  

ರಂಗಭೂಮಿಯಲ್ಲಿ  ರಾಮಚಂದ್ರ  ಹಡಪದ್  ಸಂಗೀತ  ಮೊದಲಿಗೆ  ಸಂದದ್ದು  ‘ನಾಗರಬೆತ್ತ’  ನಾಟಕಕ್ಕೆ.  ಅಲ್ಲಿಂದ ಸಾಗಿದ  ಅವರ  ರಂಗಪಯಣದಲ್ಲಿ  ಬಹಳಷ್ಟು  ಗಮನಸೆಳೆದ  ‘ಅನಭಿಜ್ಞ ಶಾಕುಂತಲ’ದಂತಹ  ನಾಟಕಗಳನ್ನೂ  ಒಳಗೊಂಡು,   ಇತ್ತೀಚಿನ 'ಸೂರ್ಯಾಸ್ತದಿಂದ  ಸೂರ್ಯೋದಯದವರೆಗೆ’ ದಂತಹ  ನಾಟಕಗಳವರೆಗೆ  ಅಪಾರ  ರಂಗಪ್ರಯೋಗಗಳಿಗೆ  ಅವರ ಸಂಗೀತ ಹರಿದು  ಸಹಸ್ರಾರು  ಪ್ರದರ್ಶನಗಳಲ್ಲಿ  ಮೂಡಿಬಂದಿದೆ.  

ಮುಂಬೈನಲ್ಲಿ  ನಡೆದ  ರಾಷ್ಟ್ರೀಯ  ನಾಟಕಪ್ರದರ್ಶನದಲ್ಲಿ  ಇವರ  ಸಂಗೀತವನ್ನೊಳಗೊಂಡ ‘ಸೂರ್ಯಾಸ್ತದಿಂದ  ಸೂರ್ಯೋದಯದವರೆಗೆ’  ನಾಟಕ, ಸಂಗೀತವನ್ನೂ  ಒಳಗೊಂಡಂತೆ    ಎಲ್ಲಾ ಹನ್ನೊಂದು ವಿಭಾಗಳಲ್ಲೂ  ಪ್ರಥಮ  ಬಹುಮಾನ ಗಳಿಸಿತು.   

ರಾಮಚಂದ್ರ ಹಡಪದ್ ಚಲನಚಿತ್ರಗಳಲ್ಲಿನ ಹಿನ್ನೆಲೆಗಾಯನಕ್ಕೂ    ನಿರಂತರ ಬೇಡಿಕೆಯಲ್ಲಿದ್ದಾರೆ.

ರಾಮಚಂದ್ರ  ಹಡಪದ್ ಅವರು  ತಮ್ಮ  ಸಂಗೀತ  ತಂಡದೊಂದಿಗೆ  ನೀಡುವ  ಕಾರ್ಯಕ್ರಮಗಳು  ಸಾಂಪ್ರದಾಯಿಕ ಶಾಸ್ತ್ರೀಯ  - ಸುಗಮಸಂಗೀತ - ಸಿನಿಮಾಧುರ್ಯ  ಬೆಸುಗೆಗಳಿಂದ  ಮಾಧುರ್ಯಕ್ಕೆ  ಹೆಸರಾಗಿರುವುದರ ಜೊತೆ ಜೊತೆಗೆ ಕಾರ್ಯಕ್ರಮ ವೈವಿಧ್ಯವನ್ನು  ಸೂಚಿಸುವ    ‘ಹಾಡುಪದ’,  ‘ರಂಗವಲ್ಲಿ’, ‘ಬೇಂದ್ರೆ ಬೆಳಗು’,   ‘fb ಹಾಡುಗಳು’, 'ಹಾಡುಪದ', 'ಸೂಫೀಯಾನ' ಮುಂತಾದ  ವೈವಿಧ್ಯಮಯ ಆಯ್ಕೆಗಳಿಂದಲೂ  ಜನಮನದ  ಕದವನ್ನು  ತಟ್ಟುತ್ತಿವೆ.  ಅವರು  ತಾವೇ ಹಾಡುಗಾರರಾಗಿರುವುದರ  ಜೊತೆಗೆ ಅನೇಕ  ಯುವ ಪ್ರತಿಭೆಗಳನ್ನೂ  ಕನ್ನಡದ  ಶ್ರೋತೃವರ್ಗಕ್ಕೆ  ಪರಿಚಯ ಮಾಡಿಕೊಡುತ್ತಾ  ಸಾಗಿದ್ದಾರೆ.

ಹೀಗೆ  ಎಲ್ಲೆಡೆ  ತಮ್ಮ  ಸಂಗೀತ ಕಾಂತಿಯನ್ನು  ಪ್ರಖರಿಸುತ್ತಿರುವ  ರಾಮಚಂದ್ರ ಹಡಪದ್ ಅವರ  ಸುಮಧುರ  ಗಾನದ  ಪಯಣ  ಔನ್ನತ್ಯದ  ಹಾದಿಯಲ್ಲಿ  ಸಾಗುತ್ತಿರಲಿ,  ಅಂತೆಯೇ  ಅವರ  ಬದುಕೂ ಸುಮಧುರವಾಗಿರಲಿ  ಎಂದು  ಆಶಿಸುತ್ತಾ  ಅವರಿಗೆ  ಜನ್ಮದಿನದ  ಶುಭಹಾರೈಕೆಗಳನ್ನು  ಸಲ್ಲಿಸೋಣ.   

Happy birthday G Ramachandra Hadapad Sir 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ