ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೇಖಾ ಕಾಖಂಡಕಿ


 ರೇಖಾ ಕಾಖಂಡಕಿ


ರೇಖಾ ಕಾಖಂಡಕಿ ಕನ್ನಡ ಕಥಾಲೋಕದಲ್ಲಿ ಹೆಸರಾದವರು.

ರೇಖಾ ಕಾಖಂಡಕಿಯವರು 1951ರ  ಜೂನ್ 9ರಂದು ಬಾಗಲಕೋಟೆಯಲ್ಲಿ ಜನಿಸಿದರು. ತಂದೆ ಮಧ್ವರಾವ್ ಕುಲಕರ್ಣಿ.  ತಾಯಿ ವತ್ಸಲಾ ಬಾಯಿ.  ಅವರಿಗೆ  ಬಾಗಲಕೋಟೆಯ ಪಾಣಿಮಹಲ್ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ ನಡೆಯಿತು. ಪ್ರೌಢಶಾಲಾ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ಮದುವೆಯ ನಂತರ ಅಚಾರ್ಯ ಪಾಠಶಾಲಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಎರಡನೆಯ ಮಗಳು ಹುಟ್ಟಿದ ನಂತರ ಎಂ.ಎ. ಕನ್ನಡ ಪದವಿಯನ್ನೂ ಪಡೆದರು. 

ಚಿಕ್ಕ ವಯಸ್ಸಿನಲ್ಲಿ ತಂದೆಯವರು ಹೇಳುತ್ತಿದ್ದ ಕಥೆಗಳು ಹಾಗೂ ಮುಂದಿನ ದಿನಗಳಲ್ಲಿ ಭೈರಪ್ಪ, ತ.ರಾ.ಸು., ತ್ರಿವೇಣಿ, ಅ.ನ.ಕೃ. ಮುಂತಾದವರುಗಳ ಕೃತಿಗಳನ್ನೋದಿ ಪ್ರಭಾವಿತರಾದರು. 

ರೇಖಾ ಕಾಖಂಡಕಿ ಅವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ 'ಕೋಟಿ' ಕಾದಂಬರಿಯು ಬಾಗಲಕೋಟೆಯ ಪರಿಸರದ ವಸ್ತುವುಳ್ಳ ಕಾದಂಬರಿ. ಇದು 'ಮಲ್ಲಿಗೆ' ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಅವರು ಬರೆದ ಕಾದಂಬರಿಗಳು ಬಂಧನ, ಅರುಣ ರಾಗ, ಹೊಸಹೆಜ್ಜೆ, ತ್ರಸ್ತ ಮುಂತಾದವುಗಳು. ಅರುಣ ರಾಗ ಚಲನಚಿತ್ರವಾಗಿ ಪ್ರಖ್ಯಾತಿಯನ್ನು ಪಡೆದಿದ್ದರೆ ಲಂಬಾಣಿಗಳ ಬದುಕಿನ ನೈಜ ಚಿತ್ರಣವನ್ನು ನೀಡಿರುವ ‘ಹೊಸ ಹೆಜ್ಜೆ’ ಕಾದಂಬರಿಯು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಪಡೆದು ಧಾರವಾಹಿಯಾಗಿಯೂ ಮೆಚ್ಚುಗೆ ಗಳಿಸಿತು. ಸಂಬಂಧಗಳು ಕಾದಂಬರಿಯು ‘ಮಹಾನವಮಿ’ ಎಂಬ ಹೆಸರಿನಿಂದ ಈಟೀವಿಯಲ್ಲಿ ಧಾರಾವಾಹಿಯಾಗಿ ಜನಪ್ರಿಯತೆ ಗಳಿಸಿತು.  ಹೊಸ ಹೆಜ್ಜೆ, ಬಂಧನ, ತೇಲಿ ಹೋದ ನೌಕೆ, ಕಪ್ಪುತೆರೆ, ಆಡಿಸಿದಳು ಯಶೋಧೆ ಕೃತಿಗಳೂ ಧಾರವಾಹಿಯಾಗಿ ಪ್ರಸಾರಗೊಂಡಿವೆ. ‘ದತ್ತು ಮಾಸ್ತರ’ ಕೃತಿಯು ಹಿಂದಿ ಭಾಷೆಗೆ ಭಾಷಾಂತರವಾಗಿ ಆಕಾಶವಾಣಿಯಲ್ಲಿ ನಾಟಕ ರೂಪದಲ್ಲಿ ಪ್ರಸಾರಗೊಂಡು ಪ್ರಥಮ ಬಹುಮಾನ ಪಡೆಯಿತು. ‘ಸದು ಎಂಬ ಬ್ರಹ್ಮಾಂಡ’ ಮತ್ತು ‘ಬದುಕು ಪಾರಿಜಾತದ ಹೂವಲ್ಲ’ ಕೃತಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಇದಲ್ಲದೆ ಬಯಲು ಭೂಮಿ, ಬಯಲು ಆಲಯ, ಪೃಥೆ, ವೈವಸ್ವತ ಮುಂತಾದ ಸುಮಾರು 35 ಕಾದಂಬರಿಗಳು ಪ್ರಕಟವಾಗಿವೆ. 

ರೇಖಾ ಕಾಖಂಡಕಿ ಅವರು ಆಗಾಗ್ಗೆ ಬರೆದ ಸಣ್ಣ ಕಥೆಗಳು ಋತುಮಾನದ ಕಥೆಗಳು, ಬದುಕು ಪಾರಿಜಾತದ ಹೂವಲ್ಲ, ರಿಂದಕ್ಕನ ಸ್ವಗತ ಮುಂತಾದ  ಕಥಾ ಸಂಗ್ರಹಗಳಲ್ಲಿ ಸೇರಿವೆ.   ಇದಲ್ಲದೆ ಇವರ 3 ಗ್ರಂಥ ಸಂಪಾದನೆ ಮತ್ತು ಹಲವಾರು ಕವನಗಳು ಪ್ರಕಟವಾಗಿವೆ.

ದಾಸ ಸಾಹಿತ್ಯದಲ್ಲೂ ಕೊಡುಗೆ ನೀಡಿರುವ ರೇಖಾ ಕಾಖಂಡಕಿ ಅವರು ಪಸನ್ನ ವೆಂಕಟದಾಸರ ಸಾಹಿತ್ಯ-ಸಿಂಚನ, ಕೃತಿಗಳು, ಅಪ್ರಕಟಿತ ಕೃತಿಗಳು ಮುಂತಾದ ಹಲವು ಸಂಪುಟಗಳನ್ನು ಪ್ರಕಟಿಸಿದ್ದಾರೆ.

ವೈವಸ್ವತ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾರಾಂ ಪ್ರಶಸ್ತಿ, ಎಸ್.ಆರ್. ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಹಾವನೂರು ಸಾಹಿತ್ಯ ಪ್ರಶಸ್ತಿ, ಸುಧಾಮೂರ್ತಿ ಸಾಹಿತ್ಯ ಪ್ರಶಸ್ತಿ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಗೀತಾದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ನವರತ್ನ ಸಾಹಿತ್ಯ ಪ್ರಶಸ್ತಿ, ಭಾರತಿಸುತ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ನಾರ್ಥ್ ಕ್ಯಾಲಿಫೋರ್ನಿಯಾ ಕನ್ನಡ ಸಂಘ, ಮಿನಿಯಾ ಪೊಲೀಸ್ ಕನ್ನಡ ಸಂಘ ಮುಂತಾದ ವಿದೇಶಿ ಸಂಘ, ಸಂಸ್ಥೆಗಳಿಂದಲೂ ಇವರಿಗೆ ಗೌರವಗಳು ಸಂದಿವೆ.

On the birth day of novelist Rekha Kakhandaki

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ