ಅನುಷ್ಕಾ ಶಂಕರ್
ಅನುಷ್ಕಾ ಶಂಕರ್
ಅನುಷ್ಕಾ ಶಂಕರ್ ಜಗದೆಲ್ಲೆಡೆ ಮೆಚ್ಚುಗೆ ಗಳಿಸಿರುವ ಮಹಾನ್ ಸಿತಾರ್ ಕಲಾವಿದೆ. ಹಸನ್ಮುಖದ ಅನುಷ್ಕಾ ಶಂಕರ್ ತಮ್ಮ ಪ್ರತಿಯೊಂದು ಮೀಟುವಿಕೆಗಳಲ್ಲೂ ಕಟ್ಟಿಕೊಡುವ ಅನುಭಾವ ವಿಶಿಷ್ಟವಾದದ್ದು. ಅವರು ಸೋಷಿಯಲ್ ಮೀಡಿಯಾಗಳಲ್ಲಿ ಭಿತ್ತರಿಸುವ ಸಂಗೀತದ ತುಣುಕುಗಳಲ್ಲೇ ಆಗಲಿ, ಸುದೀರ್ಘ ಅವಧಿಯ ಕಚೇರಿಗಳಲ್ಲೇ ಆಗಲಿ, ತಮ್ಮ ವಿಶ್ವಜನಪ್ರಿಯ ಸಂಗೀತದ ಆಲ್ಬಂಗಳಲ್ಲೇ ಆಗಲಿ ಕಟ್ಟಿಕೊಡುವ ಸಂಗೀತದ ಗಾಂಭೀರ್ಯದ ಹರಿವು ಆಪ್ತ ಮತ್ತು ಶೋಭಾಯಮಾನ.
ಅನುಷ್ಕಾ ಶಂಕರ್ ಭಾರತರತ್ನ ಪಂಡಿತ್ ರವಿಶಂಕರ್ ಅವರ ಪುತ್ರಿ. ಅವರು ಜನಿಸಿದ್ದು 1981ರ ಜೂನ್ 9ರಂದು. ತಾಯಿ ಸುಕನ್ಯಾ ಶಂಕರ್. ಲಂಡನ್ನಿನಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು ದೆಹಲಿಯಲ್ಲಿ ಕಳೆದರು. ಕ್ಯಾಲಿಫೊರ್ನಿಯದ ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿಯೂ ಓದಿದರು. 1999ರಲ್ಲಿ ಆನರ್ಸ್ ಪದವಿ ಗಳಿಸಿದರು. ಆ ವೇಳೆಗಾಗಲೇ ಸಂಗೀತದಲ್ಲಿ ಸಾಕಷ್ಟು ಬೆಳೆದಿದ್ದ ಅವರು ಸಂಗೀತದಲ್ಲೇ ಪಯಣಿಸುತ್ತಾ ಸಾಗಿದ್ದಾರೆ.
ಅನುಷ್ಕಾ ಏಳು ವರ್ಷ ವಯಸ್ಸಿನಲ್ಲೇ ತಮ್ಮ ತಂದೆ ರವಿಶಂಕರ್ ಅವರ ಬಳಿ ಸಿತಾರಿನಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದರು. ತಮ್ಮ ತರಬೇತಿಯ ಭಾಗವಾಗಿ, ಅವರು ಹತ್ತು ವರ್ಷ ವಯಸ್ಸಿನವರಾಗಿದ್ದಾಗ ತಂಬೂರಿ ಹಿಡಿದು ತಮ್ಮ ತಂದೆಯ ಜೊತೆ ವೇದಿಕೆ ಹಂಚಿಕೊಳ್ಳುತಿದ್ದರು. 1995ರ ಫೆಬ್ರವರಿ 27ರಂದು ತಮ್ಮ 13ನೇ ವಯಸ್ಸಿನಲ್ಲಿ, ದೆಹಲಿಯಯಲ್ಲಿ ತಮ್ಮ ಮೊದಲ ಸಾರ್ವಜನಿಕ ಸಿತಾರ್ ಪ್ರದರ್ಶನವನ್ನು ನೀಡಿದರು. ಅದು ಅವರ ತಂದೆಯವರ 75ನೇ ಹುಟ್ಟುಹಬ್ಬದ ಆಚರಣೆಗೆ ಏರ್ಪಡಿಸಿದ ಕಚೇರಿಯಾಗಿತ್ತು. ಈ ಚೊಚ್ಚಲ ಏಕವ್ಯಕ್ತಿ ಪ್ರದರ್ಶನಕ್ಕಾಗಿ, ತಬಲಾ ಪರಿಣಿತ ಝಾಕೀರ್ ಹುಸೇನ್ ಇವರ ಜೊತೆಗೂಡಿದ್ದರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಜಾರ್ಜ್ ಹ್ಯಾರಿಸನ್ ನಿರ್ಮಾಣದ ತಮ್ಮ ತಂದೆಯವರ 'ಚಾಂಟ್ಸ್ ಆಫ್ ಇಂಡಿಯಾ' ಆಲ್ಬಮ್ಮಿಗೆ ಜೊತೆಯಾದರು. ಹದಿನಾರನೆಯ ವಯಸ್ಸಲ್ಲಿ ‘ಏಂಜೆಲ್/ಇಎಮ್ಐ’ ಜೊತೆ ತಮ್ಮ ಕಾರ್ಯಕ್ರಮ ಧ್ವನಿಮುದ್ರಿಸುವ ಕಾಂಟ್ರಾಕ್ಟ್ ಪಡೆದರು. 1998ರಲ್ಲಿ 'ಅನೂಷ್ಕ್' ಎಂಬ ಅವರ ಪ್ರಥಮ ಆಲ್ಬಂ ಬಂತು. 1999ರಲ್ಲಿ ಅವರು ಪದವೀಧರೆ ಆದರು. 2000ದಲ್ಲಿ ಅವರ 'ಅನುರಾಗ್' ಎಂಬ ಆಲ್ಬಮ್ ಬಂತು. 2003ರಲ್ಲಿ ‘ಲೈವ್ ಅಟ್ ಕಾರ್ನಿಗಿ ಹಾಲ್' ಎಂಬ ತಮ್ಮ ಮೂರನೇ ಆಲ್ಬಮ್ಗೆ ಗ್ರಾಮಿ ಪುರಸ್ಕಾರಕ್ಕೆ ನಾಮಾಂಕಿತಗೊಂಡ ಅತ್ಯಂತ ಕಿರಿಯೆ ಎಂಬ ಕೀರ್ತಿಗೆ ಪಾತ್ರರಾದರು ಮುಂದೆ ಅನುಷ್ಕಾ ವಿಶ್ವದಾದ್ಯಂತ ಕಚೇರಿ ನೀಡಿದ್ದಾರೆ. ಮಾಧ್ಯಮಗಳಲ್ಲಿ ಮತ್ತು ಆಲ್ವಮ್ಗಳಲ್ಲಿ ಅವರ ಸಂಗೀತ ನಿರಂತರವಾಗಿ ಹರಿಯುತ್ತಿದೆ. ಅಭಿನಯ ಕ್ಷೇತ್ರದಲ್ಲೂ ಪಾಲ್ಗೊಂಡಿದ್ದಾರೆ.
ಅನುಷ್ಕಾ ಅವರಿಗೆ ಬ್ರಿಟಿಷ್ ಹೌಸ್ ಆಫ಼್ ಕಾಮನ್ಸ್ ಪುರಸ್ಕಾರ, 2003 ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನ ಸಂದರ್ಭದ ವರ್ಷದ ಮಹಿಳೆ ಪುರಸ್ಕಾರ ಏರಿದಂತೆ ವಿಶ್ವದಾದ್ಯಂತ ಅನೇಕ ಗೌರವಗಳು ಸಂದಿವೆ. ಈ ಹಿಂದೆ ಆರು ಬಾರಿ ಗ್ರಾಮಿ ಪ್ರಶಸ್ತಿಗಳಿಗೆ ನಾಮಾಂಕಿತಗೊಂಡಿದ್ದ ಅವರು, 2021ರಲ್ಲಿ ತಮ್ಮ'ಲವ್ ಲೆಟರ್ಸ್' ಆಲ್ಬಮ್ಮಿಗೆ
ಏಳನೇ ಬಾರಿ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಅನುಷ್ಕಾ ಶಂಕರ್ ಅವರ ಸಿತಾರ್‌ನ ತಂತಿಗಳು ಕೇವಲ ಮಧುರತೆಯನ್ನು ಮಾತ್ರವಲ್ಲ, ಅಪೂರ್ವವಾದ ಕಥೆಗಳನ್ನೂ ಹೇಳುತ್ತವೆ. ಅದರ ನಿನಾದದಲ್ಲಿ ಇಂಪಾದ ಅನೇಕ ಕಥೆಗಳಿವೆ. ಆ ಕಥೆಗಳು ದುಃಖ, ಭಗ್ನ ಪ್ರೇಮ, ಶಾಂತತೆ ಮತ್ತು ಭರವಸೆಗಳನ್ನೂ ಅರುಹುತ್ತವೆ. ಕೇಳುಗರಿಗೆ ಭರವಸೆಯ ಭಾವನೆಗಳನ್ನು ಬಿಂಬಿಸುತ್ತವೆ. ಇವುಗಳಲ್ಲಿ 10 ಟ್ರ್ಯಾಕ್‌ನ ಆಲ್ಬಂ 'ಲ್ಯಾಂಡ್ ಆಫ್ ಗಾಡ್' ಒಂದು. ಇದು ಯುದ್ಧ, ನಿರಾಶ್ರಿತರು, ದಬ್ಬಾಳಿಕೆ ಮತ್ತು ಸಂಕಷ್ಟ ಇತ್ಯಾದಿ ಕಥೆಗಳಿಂದ ಸ್ಫೂರ್ತಿಗೊಂಡಿದೆ. ಈ ಆಲ್ಬಂ 59 ನೇ ಗ್ರ್ಯಾಮಿ ಪ್ರಶಸ್ತಿಗೆ ಬೆಸ್ಟ್ ವರ್ಲ್ಡ್ ಮ್ಯೂಸಿಕ್ ಆಲ್ಬಂ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿತ್ತು.
ತೀವ್ರ ಸಂವೇದನೆಗಳುಳ್ಳ ಅನುಷ್ಕಾ ಶಂಕರ್ "ನಾನು ಬಾಲ್ಯದಲ್ಲಿಯೇ ಶೋಷಣೆಗೊಳಗಾಗಿದ್ದೆ. ಅದು ನನ್ನ ಜೀವನದ ಅತ್ಯಂತ ಕರಾಳ ದಿನಗಳು. ವಯಸ್ಕಳಾದ ಮೇಲೆ ನಾನು ಬಾಲ್ಯದಲ್ಲಿ ಆದ ನೋವಿನಿಂದ ಹೊರಬರಲು ಸಾಕಷ್ಟು ಪ್ರಯತ್ನಪಟ್ಟೆ. ಸಾಮಾನ್ಯವಾಗಿ ಬಹುತೇಕ ಜನರು ಇಂಥ ನೋವುಗಳನ್ನು ದೀರ್ಘ ಕಾಲದವರೆಗೂ ತಮ್ಮ ಬಳಿಯೇ ಇರಿಸಿಕೊಂಡು ಕೊರಗುತ್ತಾರೆ. ನಾನು ಇದನ್ನು ಶಮನಗೊಳಿಸಲು ಯತ್ನಿಸಿದೆ. ಈ ನಿಟ್ಟಿನಲ್ಲಿ ನನಗೆ ಕೆಲವು ಥೆರಪಿಗಳು ಸಹಾಯ ಮಾಡಿದವು. ನನ್ನ ಹೊಸ ಆಲ್ಬಂ ಕೂಡಾ ಇಂಥ ದುಃಖಪೀಡಿತ ಮಕ್ಕಳ ಕುರಿತಾಗಿಯೇ ಇದೆ. ಈ ಮಕ್ಕಳು ತಮ್ಮ ದೇಶದ ಗಡಿಯಾಚೆಯಿಂದ ಬಂದು ಕಳ್ಳಸಾಗಣಿಕೆಯ ಬಲೆಗೆ ಸಿಕ್ಕಿ ಬವಣೆ ಪಡುತ್ತಾರೆ. ನನಗೆ ಇಂಥ ಮಕ್ಕಳ ಬಗ್ಗೆ ಮರುಕವಿದೆ. ಇಂಥ ಮಕ್ಕಳಿಗೆ ಏನಾದರೂ ಮಾಡಿದರೆ ನಮಗೆ ನಮ್ಮ ನೋವು ಮರೆಯಾಗುತ್ತದೆ." ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
On the birthday of great musician Anoushka Shankar
ಕಾಮೆಂಟ್‌ಗಳು