ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಿರಣ್ ರಾಜನಹಳ್ಳಿ



 ಕಿರಣ್ ಪ್ರಸಾದ್ ರಾಜನಹಳ್ಳಿ


ಕಿರಣ್ ಪ್ರಸಾದ್ ರಾಜನಹಳ್ಳಿ ಅವರದ್ದು ಅಪಾರ ಉತ್ಸಾಹಿ ಬಹುಮುಖಿ ಪ್ರತಿಭೆ.  ಅವರ ಬರವಣಿಗೆಯಲ್ಲಿ  ಕಲಿಕೆ, ಶಿಸ್ತು ಮತ್ತು ಅಭಿವ್ಯಕ್ತಿ ವೈಶಿಷ್ಟ್ಯಗಳು ಎದ್ದು ಕಾಣುವಂತದ್ದು.  ಕಿರಣ್ ಅವರು ವೈಜ್ಞಾನಿಕ ಹಿನ್ನೆಲೆಯ ಕಥೆ, ಮಕ್ಕಳ ಕಥೆ, ಆರ್ಥಿಕ ವಿಚಾರದ ಬರಹ, ದಿನನಿತ್ಯದ ಬದುಕಿನ ಕುರಿತಾದ ಬರಹ, ಸಾಧಕರ ಕುರಿತಾದ ಪರಿಚಯ, ಅಂಕಣ ಬರಹ ಹೀಗೆ ಅನೇಕ ರೀತಿಯ ಬರಹಗಳಲ್ಲಿ ಪರಿಶ್ರಮ ಮಾಡುತ್ತಾ ಬಂದಿದ್ದಾರೆ.  ಅವರು ಪರಿಣಿತ ಚಿತ್ರಕಲಾವಿದೆಯೂ ಆಗಿದ್ದಾರೆ.

ಕಿರಣ್ ಪ್ರಸಾದ್ ರಾಜನಹಳ್ಳಿ ಅವರ ಹುಟ್ಟು ಹಬ್ಬ  ಜೂನ್ 9ರಂದು.  ಅವರು ಜನಿಸಿದ್ದು ಚಿತ್ರದುರ್ಗದಲ್ಲಿ.  ತಂದೆ ವೈ. ವಿ. ಕೃಷ್ಣ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್.  ತಾಯಿ ಸರೋಜಾ. ಇವರ ಬಾಲ್ಯ ಮತ್ತು ವಿದ್ಯಾಭ್ಯಾಸಗಳು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಮತ್ತು ಬೆಂಗಳೂರುಗಳಲ್ಲಿ ನಡೆಯಿತು.  

ಕಿರಣ್ ಓದಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದುದರ ಜೊತೆಗೆ ಸಾಹಿತ್ಯದ ಓದು ಮತ್ತು ಕ್ರೀಡೆಗಳಲ್ಲೂ ಮುಂದು.  ಪ್ರಬಂಧ ರಚನೆ, ಚಿತ್ರರಚನೆಗಳಂತಹ ಸ್ಪರ್ಧೆಗಳಲ್ಲಿ ಶಾಲೆಯ ದಿನಗಳಲ್ಲಿ ಇವರಿಗೆ ಬಹುಮಾನ ಗ್ಯಾರಂಟಿ ಇರುತ್ತಿತ್ತು.  ಇವರು ಕೋಕೋ ಆಟಗಾರ್ತಿ ಕೂಡಾ.  ವಿಜ್ಞಾನದ ವಿಚಾರಗಳಲ್ಲಿ ಅಪಾರ ಆಸಕ್ತಿ.  ಇವೆಲ್ಲವೂ ಒಂದೆಡೆ ಸಮನ್ವಯಿಸಿದಂತೆ ಇವರ ಬರವಣಿಗೆಯ ಕೃಷಿ ಕೂಡಾ ರೂಪುಗೊಂಡಿದೆ.

ಕಿರಣ್ ಪ್ರಸಾದ್ ರಾಜನಹಳ್ಳಿ ಅವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಬಿ.ಎಸ್ಸಿ ಮತ್ತು ಸಮಾಜಶಾಸ್ತ್ರದಲ್ಲಿ ಎಂ. ಎ. ಪದವಿಗಳನ್ನು ಪಡೆದಿದ್ದಾರೆ. ಜೊತೆಗೆ ಕೆನ್ ಕಲಾಶಾಲೆಯಲ್ಲಿ ಪ್ರದರ್ಶನ ಕಲೆಯಲ್ಲಿ ಡಿಪ್ಲೊಮಾ, ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಕೋರ್ಸ್, ವಜ್ರ ಪರಿಶೀಲನೆಯಲ್ಲೊಂದು ಡಿಪ್ಲೊಮಾ, ನ್ಯಾಷನಲ್ ಕಾಲೇಜಿನಲ್ಲಿ ಎಸ್ಪಿರಾಂಟೊ ಭಾಷಾ ತಜ್ಞತೆಯ ಕೋರ್ಸ್ ಮುಂತಾದವು ಇವರ ಕಲಿಕಾ ಉತ್ಸಹಕ್ಕೆ ಕನ್ನಡಿ ಹಿಡಿದಂತಿವೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆಯಾಗಿ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಅಧ್ಯಯನ ಸಹಾ ಮಾಡಿ ಬಂದಿದ್ದಾರೆ. ಅಮೆರಿಕಾದ ಸ್ಥಳೀಯ ಪತ್ರಿಕೆಗಳಲ್ಲಿ ಇವರ ಅನೇಕ ಲೇಖನಗಳು ಪ್ರಕಟವಾಗಿವೆ. ಅಮೇರಿಕಾದ ದೂರದರ್ಶನದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಹವ್ಯಾಸಿಯಾಗಿ ಹ್ಯಾಂ ಕೂಡಾ ಕಲಿತಿದ್ದಾರೆ.

ಕಿರಣ್ ಎಂಟನೇ ತರಗತಿಯಲ್ಲಿರುವಾಗಲೇ ಬರೆದ ಮಿನಿಕಥೆ 'ಹೀಗೂ ಸಾಧ್ಯ' ತರಂಗದಲ್ಲಿ ಪ್ರಕಡಗೊಂಡಿತ್ತು.   ಮುಂದೆ ಅವರು ಬರೆದ ಸಣ್ಣಕಥೆಗಳು, ಪದ್ಯಗಳು ಮತ್ತು ಲೇಖನಗಳು ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲೂ ನಿರಂತರವಾಗಿ ಮೂಡಲಾರಂಭಿಸಿದವು.  ಕಾಲೇಜಿಗೆ ಬಂದ ನಂತರ ವೈಜ್ಞಾನಿಕ ಅಂಶಗಳಿರುವ ಕಥೆಗಳತ್ತ ಇವರ ಚಿತ್ತ ಹರಿಯಿತು.

ಕಿರಣ್ ಪ್ರಸಾದ್ ರಾಜನಹಳ್ಳಿ  ಅವರ ಹಲವು ನೂರು ಲೇಖನಗಳು ವಿವಿಧ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿವೆ. ಆರ್ಥಿಕ ಕ್ಷೇತ್ರದ ಬಗ್ಗೆ ಇವರು ಬರೆದ ಅಂಕಣ ಹಲವು ತಿಂಗಳುಗಳ ಕಾಲ ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾಗಿದೆ.  ‘ನೀ ನಡೆವ ಹಾದಿಯಲ್ಲಿ’ (ಕಾದಂಬರಿ), ಮಕ್ಕಳ ಕಥಾಲೋಕ, ನಕ್ಷತ್ರಲೋಕದಲ್ಲಿ ನಚಿಕೇತ (ಶಿಶುಸಾಹಿತ್ಯ), ಹಿಮಕಿನ್ನರಿ, ಸರಿಸೃಪಗಳ ಜೀವನಚರಿತ್ರೆ, ಸೂರ್ಯ ಅಪಾರ್ಟ್‌ಮೆಂಟ್ (ಮಕ್ಕಳ ಪತ್ತೆದಾರಿ ಕಾದಂಬರಿ), ಅಮೆರಿಕಾದಲ್ಲಿ ಅಧ್ಯಯನದ ಅನುಭವ (ಪ್ರವಾಸಕಥನ), ಶಿಶುಪ್ರಾಸಗಳು, ಒಂಟಿ ನಕ್ಷತ್ರದ ನಾಡಿನಲ್ಲಿ, ಅಮ್ಮ ಏಕೆ ನಗಲಿಲ್ಲ (ಲೇಖನ ಸಂಗ್ರಹ), ಗರಿ-ಅನನ್ಯ ಸಾಧಕಿಯರು, ಗೆಲುವು ನನ್ನದೇ, ಸಮರ್ಪಕ ಸಮಯ ಪಾಲನೆ, ದಾವಣಗೆರೆಯ ಧಿಮ್ಮೆನಿಸುವ ತಿನಿಸುಗಳು, ಅವಲಕ್ಕಿ ೫೦ ಬಗೆ, ಉದ್ಯೋಗ ಲೋಕ ಮುಂತಾದವು  ಇವರ ಕೃತಿ ವೈವಿಧ್ಯಗಳಲ್ಲಿ ಸೇರಿವೆ.

ವ್ಯವಸ್ಥಿತವಾಗಿ ಚಿತ್ರಕಲೆಯನ್ನು ಅಭ್ಯಾಸ ಮಾಡಿರುವ ಕಿರಣ್ ಪ್ರಸಾದ್ ರಾಜನಹಳ್ಳಿ ಬೆಂಗಳೂರಿನ ಬಾಲಭವನದಲ್ಲಿ ಕಲಾಶಿಕ್ಷಕಿಯಾಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದರು.  ಅವರು ಬೀದಿಮಕ್ಕಳಿಗೆ ಚಿತ್ರಕಲೆ ಮತ್ತು ಕುಶಲಕಲೆ ಕಲಿಸಿದ ಸಹೃದಯಿ ಕೂಡಾ. ಅವರ ಕಲಾಕೃತಿಗಳು ಅನೇಕ ಕಲಾಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿವೆ. ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರಚಿಸಿದ ಮಕ್ಕಳ ಕಾದಂಬರಿಗಳು ಹೆಸರಾಂತ ಪತ್ರಿಕೆಗಳಲ್ಲಿ ಧಾರವಾಹಿಯಾಗಿ ಪ್ರಕಟವಾಗಿವೆ. ಇವರು ರಚಿಸಿದ ಲೇಖನವು ಬೆಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ ಪದವಿಯ ಕನ್ನಡ ಪುಸ್ತಕದಲ್ಲಿ ಪಠ್ಯವಾಗಿದೆ. ಇವರು ಬರೆದ ಪ್ರಬಂಧವು ವಿಜಾಪುರ ಮಹಿಳಾ ವಿಶ್ವವಿದ್ಯಾನಿಲಯದ ಸಂಪುಟದಲ್ಲಿ ಪ್ರಕಟವಾಗಿದೆ. ದೂರದರ್ಶನದಲ್ಲಿ ಕಾರ್ಯಕ್ರಮ ನಿರೂಪಕಿಯಾಗಿಯೂ ಹೆಸರಾಗಿದ್ದಾರೆ. ಕನ್ನಡದ ಹೆಸರಾಂತ ಪತ್ರಿಕೆಯಾದ “ದಿಕ್ಸೂಚಿ”ಯ ಸಹಾಯಕ ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕಿರಣ್ ಪ್ರಸಾದ್ ರಾಜನಹಳ್ಳಿ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಜೇಸಿಸ್ನ ಓ.ವೈ.ಪಿ ಪ್ರಶಸ್ತಿ, ಕನ್ನಡ ಕೌಸ್ತುಭ ಪ್ರಶಸ್ತಿ, ಪ್ರೇಮಾಭಟ್ ದತ್ತಿನಿಧಿ ಪ್ರಶಸ್ತಿ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಶಸ್ತಿ, ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. 

ಆತ್ಮೀಯರೂ ಬಹುಮುಖಿ ಪ್ರತಿಭಾನ್ವಿತ ಸಾಧಕರೂ ಆಗಿರುವ ಕಿರಣ್ ಪ್ರಸಾದ್ ರಾಜನಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday of our multifaceted talent friend Kiran Rajanahally

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ