ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶ್ವತ್ಥ


 ಅಶ್ವತ್ಥ


ಅಶ್ವತ್ಥ ಕನ್ನಡದ ನವೋದಯದ ಕಾಲದ  ಮಹತ್ವದ ಕಥೆಗಾರರಲ್ಲೊಬ್ಬರು.  

ಅಶ್ವತ್ಥ 1912ರ  ಜೂನ್ 18ರಂದು ಜನಿಸಿದರು.     ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿ ಅಶ್ವತ್ಥರ ಊರು. 1934ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ. ಇ. (ಸಿವಿಲ್) ಇಂಜಿನಿಯರಿಂಗ್ ಪದವಿ ಪಡೆದರು. 

1935-38ರ ಅವಧಿಯಲ್ಲಿ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರ 'ಜೀವನ' ಮಾಸಪತ್ರಿಕೆಯಲ್ಲಿ ಅಶ್ವತ್ಥರ ಕತೆಗಳು ಪ್ರಕಟವಾದವು.  ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವತ್ಥರು,  1942ರಲ್ಲಿ ಗಾಂಧೀಜಿಯವರು, ಬ್ರಿಟಿಷರ ವಿರುದ್ಧ  ‘ಕ್ವಿಟ್ ಇಂಡಿಯ’ ಚಳುವಳಿಗೆ  ನೀಡಿದ ಕರೆಗೆ ಬೆಂಬಲವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.  

ಹಲವು ಕಾಲ ಮುಂಬೈನಲ್ಲಿ ಖಾಸಗಿ ಸೇವೆಯಲ್ಲಿ ಮತ್ತು ಸಿಮ್ಲಾದಲ್ಲಿ ಮಿಲಿಟರಿ ಸೇವೆಯಲ್ಲಿ  ಇಂಜಿನಿಯರ್ ಆಗಿ ನಿರತರಾಗಿದ್ದ ಅಶ್ವತ್ಥ ಅವರು, ಮುಂದೆ  ಪಂಡಿತ್ ಮದನ ಮೋಹನ ಮಾಳವೀಯರ ಆಹ್ವಾನದ ಮೇರೆಗೆ 'ಬನಾರಸ್ ಹಿಂದೂ ವಿಶ್ವವಿದ್ಯಾಲಯ’ ದಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. 

ಅಶ್ವತ್ಥರ ಕೃತಿಗಳಾದ ‘ಮುನಿಯನ ಮಾದರಿ’, ‘ರಂಗನಾಯಕಿ’ ಮತ್ತು ‘ಮರ್ಯಾದೆ ಮಹಲು’ಗಳು ಚಲನಚಿತ್ರಗಳಾಗಿ ಮೂಡಿಬಂದವು.   ಮಾಸ್ತಿ ಅವರ ‘ಜೀವನ’ ಪತ್ರಿಕೆಯ ಮೂಲಕ ಬೆಳಕಿಗೆ ಬಂದ ಅಶ್ವತ್ಥರ ಅನೇಕ ಕತೆಗಳು ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿಬರುತ್ತಿದ್ದವು. ‘ದೂರದ ಕಾಶಿಯಲ್ಲಿ’, ‘ಬಾಳೆ ಹೊಳೆ’, ‘ಅಗ್ನಿ ಸಾಕ್ಷಿ’, ‘ಜಯಂತಿ’, ‘ನೋವು ನಲಿವು’ ಅವರ ಪ್ರಸಿದ್ಧ ಕಥಾ ಸಂಕಲನಗಳು. 

ಮೂಗಿನ ಮೇಲೆ,  ಇಂದಿನ ಪತ್ರಿಕೆ ನೋಡಿದ್ದೀರಾ?, ಬನ್ನಿ ನನ್ನ ಉಪವನಕೆ, ನವ್ಯವಾಗಿ, ಬಡ ಮುತ್ತೈದೆ, ಹಾರ್ಮೋನಿಯಂ, ಕ್ರಿಕೆಟ್ ಓದೋಣ, ಸಮಿತಿಮಯ ಜಗತ್, ರೋಗಿಷ್ಟರು ಮುಂತಾದವು  ಅಶ್ವತ್ಥ ಅವರ ಅವರ ಪ್ರಸಿದ್ಧ ಲಲಿತ ಪ್ರಬಂಧಗಳು.  ‘ಮಹಾಯುದ್ಧ’ ಖಂಡ ಕಾವ್ಯ.  ಅವರು ಹದಿನೆಂಟು ನಾಟಕಗಳನ್ನೂ ರಚಿಸಿದ್ದರು.  

ಕಥೆ ಬರೆಯುವುದರಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ  ಅಶ್ವತ್ಥರು 1963ರಲ್ಲಿ ಪ್ರಾಧ್ಯಾಪಕವೃತ್ತಿಗೆ ರಾಜೀನಾಮೆ ನೀಡಿ ನಂಜನಗೂಡು ಮೈಸೂರುಗಳಲ್ಲಿ  ಗಾಂಧಿವಾದಿಯಂತೆ  ಶಿಸ್ತು ಮತ್ತು ಸಂಯಮಗಳ ಸರಳಜೀವನವನ್ನು ನಡೆಸಿ 1994ರ  ಜನವರಿ 16ರಂದು ನಿಧನರಾದರು. 

ಪ್ರಶಸ್ತಿಗಳು ಪ್ರಚಾರಗಳಿಂದ ಸದಾ ದೂರವಾಗಿದ್ದ ಅಶ್ವತ್ಥರು ಅಶ್ವತ್ಥರು ತಮಗೆ ನೀಡಲಾದ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಸ್ವೀಕರಿಸಲಿಲ್ಲ.  

ಅಶ್ವತ್ಥರಿಗೆ ಮೂಢನಂಬಿಕೆಗಳಲ್ಲಿ  ವಿಶ್ವಾಸವಿರಲಿಲ್ಲ. ಒಂದು ರೀತಿಯಲ್ಲಿ ಅಜ್ಞಾತದಲ್ಲಿದ್ದುಕೊಂಡು ಯಾರಕಣ್ಣಿಗೂ, ಬೀಳದೆ ಬರವಣಿಗೆಯ ಕಾಯಕದಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದರು. 

ಗಾಂಧೀವಾದಿಯಾಗಿದ್ದ ಅಶ್ವತ್ಥ ಅವರದು ಅತ್ಯಂತ ಸರಳ ಮತ್ತು ತತ್ವಬದ್ಧವಾದ ಬದುಕು.  ಅವರಿಗೊಬ್ಬ ಪುತ್ರರಿದ್ದಾರೆ. ಸಾಮಾನ್ಯವಾಗಿ ತಾವು ಗಳಿಸಿದ್ದನ್ನೆಲ್ಲಾ ತಮ್ಮ ಮಕ್ಕಳಿಗೆ ಆಸ್ಥಿ ಮಾಡಿಡುವ ಪ್ರಾಪಂಚಿಕವಾದ ಪ್ರವೃತ್ತಿಗೆ ತೊಡಗದ ಅಶ್ವತ್ಥರು ತಾವು ಗಳಿಸಿದ್ದನ್ನೆಲ್ಲಾ 'ಲಲಿತಾ ಅಶ್ವತ್ಥ ಟ್ರಸ್ಟ್ ಫಂಡ್' ಸ್ಥಾಪಿಸಿ ಅದರ ಮೂಲಕವಾದ ಪ್ರತಿಫಲವನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು  ಮೈಸೂರಿನ ರಾಮಕೃಷ್ಣಾಶ್ರಮ ವಸತಿ ಶಾಲೆಗೆ ನೀಡುವ ವ್ಯವಸ್ಥೆ ಮಾಡಿ ಹೋದರು. 

On the birth anniversary of great novelist Ashwatha 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ