ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್‌.ಜಿ. ಚೈತ್ರಾ


 ಎಚ್‌.ಜಿ. ಚೈತ್ರಾ


ಎಚ್‌.ಜಿ. ಚೈತ್ರಾ ಗಾಯನದಲ್ಲಿ ಹೆಸರಾಗಿರುವ ಕನ್ನಡ ನೆಲದ ಪ್ರತಿಭೆ. ಕನ್ನಡವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಿಗೂ ಅವರು ಹಿನ್ನೆಲೆ ಗಾಯನ ನೀಡಿದ್ದಾರೆ.

ಚೈತ್ರಾ 1984ರ ಜೂನ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಂಡಿತ್ ಎಚ್. ಎಸ್. ಗೋಪೀನಾಥ್ ತಬಲಾ ವಾದಕರು ಮತ್ತು ಹಿಂದೂಸ್ಥಾನಿ ಸಂಗೀತ ಸಾಧಕರು.  ದಯಾನಂದ ಸಾಗರ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಚೈತ್ರಾ, ಜಿಮ್ನಾಸ್ಟಿಕ್ಸ್ ಮತ್ತು ಫೆನ್ಸಿಂಗ್ ಕ್ರೀಡೆಯಲ್ಲೂ ಸಾಧನೆ ಮಾಡಿದ್ದಾರೆ.

ಚೈತ್ರಾ  ಐದನೆಯ ವಯಸ್ಸಿನಲ್ಲೇ ಟಿವಿಯಲ್ಲಿ ಬರುವ ಜಾಹೀರಾತುಗಳ ಹಾಡುಗಳನ್ನು ಗುನುಗುತ್ತಾ ಅಮ್ಮ ಹಾಡುತ್ತಿದ್ದ ದೇವರನಾಮಗಳನ್ನು ಕಲಿಯತೊಡಗಿದಳು. ತಂದೆಯಿಂದ ಹಿಂದೂಸ್ಥಾನಿ ಸಂಗೀತ ಕಲಿತರು.

ಹಿನ್ನೆಲೆ ಗಾಯಕಿಯಾಗಿ ಚೈತ್ರಾ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೃತಧಾರೆ’ ಚಿತ್ರದ ‘ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ...’ ಹಾಡಿನಿಂದ ಪ್ರಸಿದ್ಧರಾದರು. 'ಬೇಡ ಕೃಷ್ಣ ರಂಗಿನಾಟ’ ಸಿನಿಮಾದ ಹಾಡಿಗೆ ಕಂಠದಾನ ಮಾಡಿದಾಗ ಅವರಿಗೆ ಎಂಟರ ಪ್ರಾಯ. ಪುರಂದರದಾಸರ ‘ಕೃಷ್ಣ ಎನಬಾರದೆ’ ಹಾಡನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿಯಾದ ಚೈತ್ರಾ ಸಿನಿಮಾ ಹಾಡುಗಳನ್ನು ಅವುಗಳ ಅಗತ್ಯಕ್ಕೆ ತಕ್ಕಂತೆ ಹಾಡಿದ್ದಾರೆ. ‘ಗಜ' ಚಿತ್ರದ 'ಬಂಗಾರಿ ಯಾರೇ ನೀ ಬುಲ್‌ಬುಲ್‌', 'ಸಂತೋಷ್‌' ಚಿತ್ರದ 'ಓ ಮೈ ಲವ್‌... ' ಮುಂತಾದ ಹಾಡುಗಳ ಪ್ರಾರಂಭದ ನಂತರ ಚೈತ್ರಾ ಹಾಡಿರುವ ಗೀತೆಗಳು ಹಲವು ನೂರು.  'ಸಿಹಿರ್’ ಚೈತ್ರಾ ಅವರು ಸಂಗೀತ ಸಂಯೋಜಿಸಿದ ಮೊದಲ ಚಿತ್ರ.

ಚೈತ್ರಾ ಅವರು ತಮ್ಮ ಅವಳಿ ಸಹೋದರ ಎಚ್. ಜಿ. ಚೈತನ್ಯ ಜೊತೆ ಗಾಯನ ಹಾಗೂ ತಂದೆ ಗೋಪೀನಾಥ್ ವಾದ್ಯಸಂಗೀತದ ಜೊತೆಯಾಗಿ ಅನೇಕ ಸಂಗೀತ ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ. ಚೈತ್ರಾ 'ಬಿಗ್ ಬಾಸ್' ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.

ಅಮೃತಧಾರೆ ಚಿತ್ರದ 'ಹುಡುಗ ಹುಡುಗ' ಗೀತೆಗೆ 2005-2006 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಹಿನ್ನೆಲೆ ಗಾಯಕಿ ಪ್ರಶಸ್ತಿ, 'ಜೋಕಾಲಿ'ಯಲ್ಲಿನ ಗಾಯನಕ್ಕಾಗಿ ಉದಯ ಟಿವಿಯ ಕುಟುಂಬ ಬಹುಮಾನ ಮುಂತಾದ ಹಲವು ಗೌರವಗಳೂ ಎಚ್. ಜಿ. ಚೈತ್ರಾ ಅವರೊಂದಿಗಿವೆ.  

ಚೈತ್ರಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of playback singer H. G. Chaitra

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ