ಟಿ. ಎಸ್. ರಾಮಚಂದ್ರ
ಟಿ. ಎಸ್. ರಾಮಚಂದ್ರ
ಈ ವಿಶ್ವದ ಬದುಕಿನಲ್ಲಿನ ಶ್ರೇಷ್ಠತೆ ಅಂದ್ರೆ ಇಲ್ಲಿ ನಡೆದಾಡಿರುವ ಉತ್ತಮ ಜೀವಿಗಳದ್ದು ಅಂತ ಅನಿಸುತ್ತೆ. ಅದಕ್ಕೇ ನನಗೆ ಯಾವುದೇ ರೀತಿಯ ಸಾಧನೆ ಮಾಡಿರುವವರನ್ನಾದರೂ ಪ್ರತಿನಿತ್ಯ ಸ್ಮರಿಸುವುದು ರೂಢಿ. ಆದರೆ ನಮ್ಮ ಬದುಕಿಗೇ ಮುಖ್ಯರಾದವರನ್ನು ನಾವು taken for granted ಆಗಿ ಚಿಂತಿಸಲಿಕ್ಕೆ ಹೋಗಿರುವುದಿಲ್ಲ. ಜೊತೆಗೆ, ಕೆಲವೊಂದು ವ್ಯಕ್ತಿಗಳ ಕುರಿತಾಗಿ ಇರುವ ಹೃದಯದಾಳದ ಭಾವಕ್ಕೆ, ಅಭಿವ್ಯಕ್ತಿ ಕಷ್ಟ ಸಾಧ್ಯದ್ದು. ಬಹುಶಃ ನಾ ಹೇಳುತ್ತಿರುವುದು ಹೀಗಿರುವ ಅವ್ಯಕ್ತ ಭಾವದ ಸಂಬಂಧ ಇದ್ದರೂ ಇರಬಹುದು. ಈಗ ನಾನು ತೋಡಿಕೊಳ್ಳ್ಳುತ್ತಿರುವ ಭಾವ ನನ್ನ ಅಣ್ಣ ದಿವಂಗತ ಟಿ. ಎಸ್. ರಾಮಚಂದ್ರ ಅವರ ಕುರಿತಾದದ್ದು.
ನಮ್ಮ ಅಪ್ಪ ಅಮ್ಮನಿಗೆ ನಾನು ಕೊನೆಯ ಮಗ. ನಾನು ನಾಲ್ಕನೇ ತರಗತಿ ಓದುವಾಗ ಬಡ ಮೇಷ್ಟ್ರು ನಮ್ಮ ಅಪ್ಪ ಪಂಡಿತ ತಿರು ಶ್ರೀನಿವಾಸಾಚಾರ್ ಅವರಿಗೆ ಹಾಸನದಲ್ಲಿ 58 ವರ್ಷದ ಸರ್ಕಾರಿ ಶಿಕ್ಷಕ ಹುದ್ದೆಯಿಂದ ನಿವೃತ್ತಿ ಆಯ್ತು. ಅಮ್ಮ ಸೀತಮ್ಮ ಎಲ್ಲವನ್ನೂ ಹೇಗೋ ಸಂಬಾಳಿಸಿಕೊಂಡು ಹೋಗುತ್ತಿದ್ದಾಕೆ. ಹಿರಿಯಕ್ಕ ಮದುವೆಯಾಗಿದ್ದರೂ ಕಷ್ಟದಲ್ಲಿದ್ದರು. ಎರಡನೇ ಅಕ್ಕ ಎಸ್ ಎಸ್ ಎಲ್ ಸಿ ಓದಿಗೆ ಸುಸ್ತಾಗಿ ಮದುವೆ ವಯಸ್ಸಿಗೆ ಬಂದಿದ್ದಳು. ಉಳಿದ ನಾಲ್ಕು ಜನ ಓದಿನ ಹಂತದಲ್ಲಿದ್ದೆವು. ಈ ನಾಲ್ಕರಲ್ಲಿ ಅಣ್ಣ ಟಿ. ಎಸ್. ರಾಮಚಂದ್ರ ಪ್ರಥಮ ಬಿ.ಎಸ್‍ಸಿ ಓದುತ್ತಿದ್ದ.
ರಾಮಚಂದ್ರ ನಮ್ಮ ಮನೆಯಲ್ಲಿ ಎಲ್ಲರಿಗಿಂತ ರೂಪವಂತ. ತುಂಬಾ ಸದ್ಗುಣಿ. ಪ್ರೀತಿವಾತ್ಸಲ್ಯಗಳು ಆತನಲ್ಲಿ ಸಹಜವೋ ಎಂಬಂತೆ ಒಂದಾಗಿಹೋಗಿದ್ದವು. ಅತೀ ಮಕ್ಕಳಿರುತ್ತಿದ್ದ ಅಂದಿನ ದಿನಗಳಲ್ಲಿ ನಮ್ಮ ಹಿರಿಯರುಗಳಿಗೆ ಮಕ್ಕಳು ಹೇಗೋ ಬೆಳೆದುಕೊಳ್ಳುತ್ತಾರೆ ಎಂಬ ನಿರ್ಭಾವುಕತೆ ಇತ್ತೇನೋ. ಹಾಗಾಗಿ ಮಕ್ಕಳಾಗಿ ಅಪ್ಪ ಅಮ್ಮನಿಂದ ಮುದ್ದು ಮಾಡಿಸಿಕೊಂಡ ಭಾವ ನನ್ನಲ್ಲಿಲ್ಲವೇ ಇಲ್ಲ ಎಂಬುದು ಸುಳ್ಳಲ್ಲ. ಮಗುವಾಗಿ ನನಗೆ ಬೇಕಿತ್ತು ಎನಿಸಿದ ಪ್ರೀತಿ ತೋರಿದ ವ್ಯಕ್ತಿಗಳಲ್ಲಿ ಮೊದಲು ನೆನಪಾಗುವವನು ನನಗೆ ನನ್ನ ಅಣ್ಣ ಟಿ. ಎಸ್. ರಾಮಚಂದ್ರ.
ಅಪ್ಪನಿಗೆ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ನಿವೃತ್ತಿ ನಂತರದ ಎರಡು ವರ್ಷ ತಾತ್ಕಾಲಿಕ ಹುದ್ದೆ ದೊರೆತು, ಅದರ ಅವಧಿ ಮುಗಿದಾಗ ಅಣ್ಣ ಟಿ. ಎಸ್. ರಾಮಚಂದ್ರ ಬಿ.ಎಸ್‍ಸಿ ಪದವಿ ಮುಗಿಸಿದ್ದ. ಸುಂದರ ಯುವಕನಾಗಿ, ಬುದ್ಧಿವಂತನಾಗಿದ್ದರೂ ಈತ, ಯಾವುದೇ ರೀತಿಯ ಸ್ವಾರ್ಥವನ್ನೂ ಚಿಂತಿಸದೆ ಮನೆಗೆ ಬೆನ್ನೆಲುಬಾಗಿ ನಿಂತ.
ಅಣ್ಣ ಟಿ. ಎಸ್. ರಾಮಚಂದ್ರ ಮೈಸೂರಿನ ಕೃಷ್ಣರಾಜೇಂದ್ರ ಮಿಲ್ಸ್ ಎಂಬ ಬಟ್ಟೆ ಗಿರಣಿಯಲ್ಲಿ 1970 ವರ್ಷ ನೂರೈವತ್ತು ರೂಪಾಯಿ ಸಂಭಳಕ್ಕೆ ಮೂರು ಶಿಫ್ಟುಗಳಿದ್ದ ಕೆಮಿಸ್ಟ್ ಹುದ್ದೆಗೆ ಸೇರಿಕೊಂಡ. ಒಂದೈವತ್ತು ಕೊಟ್ಟು ಸೆಕೆಂಡ್ ಹ್ಯಾಂಡ್ ಸೈಕಲ್ ಕೊಂಡ. ಅದೋ ರಾತ್ರಿ ಅಣ್ಣ ಮನೆಗೆ ಚಳಿಯಲ್ಲೋ ಮಳೆಯಲ್ಲೋ. ಮಧ್ಯರಾತ್ರಿ ಹಿಂದಿರುಗುವಾಗಲೇ ಪಂಕ್ಚರು ಇಲ್ಲ ಚೈನ್ ಕಟ್ಟಾಗಿ ತೊಂದರೆ ಕೊಡುತ್ತಿತ್ತು. ಕಾರ್ಖಾನೆಯಲ್ಲಿನ ಬಣ್ಣಗಳ ಜೊತೆ ಸೈಕಲ್ ಸೇರಿಸುತ್ತಿದ್ದ ಮಸಿ ಇವೆಲ್ಲ ಅವನ ಬಟ್ಟೆಗಳಿಗೆ ಅಂದವಿಲ್ಲದಂತೆ ವರ್ಣ ನೀಡುತ್ತಿದ್ದವು.
ಅಂದಿನ ದಿನಗಳಲ್ಲಿ ಅಣ್ಣನ ಸುಂದರ ಮಾತು ಮತ್ತು ಆಪ್ತತೆ ಅವನ ಹೃದಯದಲ್ಲಿ ಕಡಿಮೆ ಆಗಿರಲಿಲ್ಲವಾದರೂ ಅದು ನೇರ ನಮಗೆ ದಕ್ಕುವುದು ದುರ್ಲಭವಿತ್ತು. ಕಾರಣ ಆತ ಯಾವಾಗಲೋ ಯಾವುದೋ ಶಿಫ್ಟಲ್ಲಿ ಕೆಲಸ ಮಾಡುವವನಾಗಿದ್ದರಿಂದ ಅವನ ಕೆಲಸ ಮತ್ತು ನಿದ್ರೆಗಳ ಮಧ್ಯೆ ನಮಗೆ ಸಮಯ ಕೊಡುವುದು ಅವನಿಗೆ ಕಷ್ಟವಿತ್ತು. ಅದರೂ ಆತ ಸಮಯ ಕೊಟ್ಟಾಗ ನಮಗದು ಅಮೂಲ್ಯ ಅಂತರಂಗಯುಕ್ತವಾಗಿದ್ದು ಅನಿಸುತ್ತಿತ್ತು.
ಈ ಮಧ್ಯೆ ಮದುವೆಗೆ ನಿಂತಿದ್ದ ಅಕ್ಕನಿಗೆ ಮದುವೆ ಆಯ್ತು. ಅಣ್ಣ ರಾಮಚಂದ್ರ ಪಾಂಡಿಚೇರಿಯಲ್ಲಿ ಪ್ರಸಿದ್ಧ ಬಟ್ಟೆ ಗಿರಣಿಯಲ್ಲಿ ಆಯ್ಕೆ ಆಗಿ ಕೆಲಸಕ್ಕೆ ಸೇರಿಕೊಂಡ ಸಮಯದಲ್ಲೇ ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಆಯ್ಕೆ ಆಗಿ ಅಲ್ಲಿ ಕೆಲಸಕ್ಕೆ ಸೇರಿದ.
ಮತ್ತೊಬ್ಬ ಅಕ್ಕ ಬಿಎ, ಬಿಎಡ್ ಮುಗಿಸಿದರು. ಇನ್ನೊಬ್ಬ ಅಣ್ಣ ಬಿಎ, ಎಂಎ ಪದವಿ ಗಳಿಸಿ ಅಧ್ಯಾಪನಕ್ಕಿಳಿದರು. ನಾನು 'ಪಂಡಿತ ಪುತ್ರ' ಎಂದೆನಿಸಿದ್ದರೂ ಹಾಗೂ ಹೀಗೂ ಅಂತ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜು ಏರುವ ಹಂತಕ್ಕೆ ಬಂದೆ.
ಅಣ್ಣ ಟಿ. ಎಸ್. ರಾಮಚಂದ್ರ ಬೆಂಗಳೂರಿನಲ್ಲಿದ್ದು ಕಠಿಣ 'ಎಸ್ಎಎಸ್' ಪರೀಕ್ಷೆಗಳನ್ನೂ ಪೂರೈಸಿ ಒಳ್ಳೆಯ ಹೆಸರು ಸಂಪಾದಿಸಿ ಕರ್ನಾಟಕದ ಎಲ್ಲ ಭಾಗಗಳಲ್ಲಿ ಆಡಿಟ್ಗೆ ಸಂಚರಿಸಿ ಅಲ್ಲಿನ ವಿಶಿಷ್ಟ ಅನುಭವಗಳನ್ನು ಹೇಳುತ್ತಿದ್ದ. ಒಳ್ಳೆಯ ಸಾಹಿತ್ಯ, ರಂಗಭೂಮಿ, ಸಿನಿಮಾ ಮುಂತಾದವುಗಳ ಬಗ್ಗೆ, ಮೈಸೂರಿನಲ್ಲಿದ್ದ ನಮ್ಮನ್ನು ನೋಡಲು ಬಂದಾಗಲೆಲ್ಲ ಅಕ್ಕರೆಯಿಂದ ಹೇಳುತ್ತಿದ್ದ. ಮನೆಯ ಸಂಸಾರ ಬಹುವರ್ಷ ಅವನ ಗಳಿಕೆಯಿಂದ ನಡೆದರೂ, ಹಾಗೆ ತನ್ನಿಂದಲೇ ನಡೆಯುತ್ತಿದೆ ಎಂಬ ಯಾವುದೇ ಹಮ್ಮು ಬಿಮ್ಮುಗಳ ಅಹಮಿಕೆ, ಎಂದೂ ಅವನಲ್ಲಿ ಮೂಡಿರಲಿಲ್ಲ. ನಮ್ಮನ್ನೆಲ್ಲ ಸರಿಯಾಗಿ ಓದಿ ಎಂದು ಕೂಡಾ ಆತ ಎಂದೂ ಬುದ್ಧಿವಾದ ಹೇಳಿದವನಲ್ಲ. ಒಂದು ರೀತಿಯ ನಿಷ್ಕಲ್ಮಷ ಪ್ರೀತಿ ಅವನಲ್ಲಿತ್ತು. ತನ್ನ ತಂಗಿಯ ಮದುವೆಗೆ ತನ್ನ ಮೇಲೆಯೇ ಸಾಲ ಎಳೆದುಕೊಂಡ. ಒಬ್ಬ ತಂಗಿ ಮತ್ತು ಒಬ್ಬ ತಮ್ಮನ ಮದುವೆ ಆದ ನಂತರ, ಮತ್ತೊಬ್ಬ ಕೊನೆಯ ತಮ್ಮನಾದ ನನ್ನ ಬಿ.ಕಾಮ್ ಪದವಿ ಮುಗಿದ ನಂತರ ತಾನು ಮದುವೆ ಮಾಡಿಕೊಂಡ.
ನನ್ನ ಪದವಿ ಓದು ಮುಗಿದ ನಂತರ ಅಪ್ಪ, ಅಮ್ಮ ಮತ್ತು ನಾನು, ಅಣ್ಣ ಟಿ. ಎಸ್. ರಾಮಚಂದ್ರ ಮತ್ತು ಅತ್ತಿಗೆ ನಳಿನಿ ಅವರೊಂದಿಗೆ ಬೆಂಗಳೂರಿನ ಪುಟ್ಟ ಮನೆಯಲ್ಲಿ ಬಾಡಿಗೆಗೆ ಇದ್ದೆವು. ನಂತರ ಅವರಿಗೆ ಮಗ ಶ್ರೀಹರಿ ಹುಟ್ಟಿದ. ನನಗೂ ಸ್ವಲ್ಪ ಕಾಲ ನಿರುದ್ಯೋಗದ ನಂತರ ಎಚ್ ಎಮ್ ಟಿಯಲ್ಲಿ ಉದ್ಯೋಗ ದೊರಕಿತು. ನಾನು ಎಚ್ ಎಮ್ ಟಿಯಲ್ಲಿ ಕನ್ನಡ ಸಂಪದ, ಕಾರ್ಮಿಕ ಸಂಘ ಮತ್ತು ಕಚೇರಿ ಕೆಲಸಗಳ ಮಧ್ಯೆ ಉಂಡಾಂಡಿ ಗುಂಡನಂತೆ ತಿರುಗುತ್ತಿದ್ದೆ. ಅಣ್ಣ ರಾಮಚಂದ್ರನೇ ಮನೆಗೆ ಬೇಕಿದ್ದದ್ದೆಲ್ಲ ನೋಡುತ್ತಿದ್ದ. ನನ್ನ ಆರೋಗ್ಯ ಅಂದಿನ ದಿನದಲ್ಲಿ ಅಷ್ಟು ಚೆನ್ನಾಗಿರಲಿಲ್ಲ. ಅಗಾಗ ಅಣ್ಣನೇ ಮುಂದೆ ನಿಂತು ಡಾಕ್ಟರ್ ಬಳಿ ಕರೆದೊಯ್ಯುತ್ತಿದ್ದ.
1987ರಲ್ಲಿ ನನ್ನ ವಿವಾಹವಾಯಿತು. ಪುಟ್ಟ ಎರಡು ಕೊಟಡಿ ಬಾಡಿಗೆ ಮನೆಯಲ್ಲಿ ನಾವೆಲ್ಲ ಒಟ್ಟಿಗಿದ್ದೆವು.
ಎಲ್ಲವೂ ಬದುಕಲ್ಲಿ ಒಂದು ಹಂತದಲ್ಲಿದೆ ಅಂದಾಗ ಅಪ್ಪ 1989 ವರ್ಷದಲ್ಲಿ ಗಂಟಲಿನ ಕ್ಯಾನ್ಸರಿಗೆ ಗುರಿಯಾದರು. ಅವರನ್ನು ಆಸ್ಪತ್ರೆಗೆ ಆಗಾಗ ಕರೆದು ರೇಡಿಯೋ ತೆರಪಿ ಕೊಡಿಸುವುದು, ರಾತ್ರಿ ಆಗಾಗ ಎದ್ದು ಹಣ್ಣಿನ ರಸ ಸಿದ್ಧ ಮಾಡಿಕೊಡುವುದು ಹೀಗೆ ಅಪ್ಪನಿಗೆ ಅಪೂರ್ವ ಸೇವೆ ಮಾಡಿದ ಅಣ್ಣ ಟಿ. ಎಸ್. ರಾಮಚಂದ್ರ.
ಅಕ್ಟೋಬರ್ 29, 1989 ದಿನ ಮಧ್ಯರಾತ್ರಿ ಅಪ್ಪ ತನ್ನ ಕೈಯಿಂದ ಹಣ್ಣಿನ ರಸ ಕುಡಿಯುವಾಗ ಕೊನೆ ಉಸಿರೆಳೆದಾಗ 'ಅಪ್ಪ ಏಳಪ್ಪ' ಎಂದು ಆತ ಅತ್ತ ರೀತಿ, ಹೀಗೂ ತಂದೆ ತಾಯಿಗಳಿಗೆ ಒಬ್ಬ ಉತ್ತಮ ಮಗ ಇರುವುದು ಸಾಧ್ಯವೇ ಎಂಬ ಅಚ್ಚರಿಯನ್ನು ನನ್ನಲ್ಲಿ ಇಂದೂ ಅಳಿಯದಂತೆ ಉಳಿಸಿದೆ.
ಅದಾದ ಒಂದು ಆರೇಳು ತಿಂಗಳು ಹಾಗೂ ಹೀಗೂ ಬದುಕು ಸಾಗುತ್ತಿತ್ತು. ನನಗೆ ಕಚೇರಿ ಕೆಲಸದಲ್ಲಿ ವೇಳೆ ಹೆಚ್ಚು ಕಡಿಮೆ ಆಗಿ ಕೆಲವೊಂದು ರಾತ್ರಿಗಳು ಕೂಡಾ ಕೆಲಸಮಾಡುವ ದಿನಗಳಿದ್ದವು. ಒಂದು ದಿನ ಬೆಳಿಗ್ಗೆ ಅಣ್ಣ ಟಿ. ಎಸ್. ರಾಮಚಂದ್ರ ನಾನು ಬೆಳಗಾಗೆದ್ದು ಹೊರಡಲು ಅನುವಾದಾಗ ಮಲಗಿದ್ದ ಜಾಗದಿಂದಲೇ ಹೇಳಿದ, "ಶ್ರೀಧರ, ಮಗು ಶ್ರೀಹರಿಯನ್ನು ಮಾತನಾಡಿಸಿ ಹೋಗು, ಅದು ನಿನ್ನನ್ನು ನಿನ್ನೆ ಕೇಳುತ್ತಿತ್ತು" ಎಂದು. ಅದೇ ಅಣ್ಣ ನನ್ನೊಡನೆ ಆಡಿದ ಕೊನೆಯ ಮಾತು.
ಅದೇ ದಿನ ಜೂನ್ 19, 1990 (ಇಂದಿಗೆ ಸರಿಯಾಗಿ 33 ವರ್ಷದ ಹಿಂದೆ) ಆಫೀಸಿನಲ್ಲಿದ್ದಾಗ ಸುಮಾರ ಸಂಜೆ 6.45 ವೇಳೆಗೆ ಅಣ್ಣನಿಗೆ ಅಪಘಾತವಾಗಿದೆ ಎಂಬ ಕರೆ ಬಂತು. ಕೆ ಸಿ ಜನರಲ್ ಆಸ್ಪತ್ರೆಗೆ ಬಂದಾಗ ಅಣ್ಣನ ನಗೆಮುಖದಲ್ಲಿ ಮಂದಾಹಾಸವೇನೋ ಇತ್ತು. ಉಸಿರಿರಲಿಲ್ಲ. ಕಚೇರಿಯಿಂದ ಮನೆ ಕಡೆ ತನ್ನ ಸ್ಕೂಟರಿನಲ್ಲಿ ಬರುವಾಗ ಫ್ಯಾಕ್ಟರಿಯ ಬಸ್ ಒಂದು ಹೊಡೆದ ಡಿಕ್ಕಿ, (ಕೇವಲ 39 ವಯಸ್ಸಿನ) ಅಣ್ಣ ಶ್ರೀ ಟಿ. ಎಸ್. ರಾಮಚಂದ್ರನ ಬದುಕಿಗೆ ಕೊನೆ ಹಾಡಿತ್ತು.
"ಬದುಕೆಂದರೇನು, ಸಾವು ಅಂದರೇನು, ಸಾವೇ ಮುಕ್ತಿಯೇ, ಬದುಕಿನಲ್ಲಿ ಆಗಾಗ ನಲುಗುವುದೇ ಸಾವೇ" ಇದೆಲ್ಲ ನನಗೆ ಗೊತ್ತಿಲ್ಲ. ಆದರೆ ಬದುಕಿನಲ್ಲಿ ತಾಳ್ಮೆ, ಪ್ರೀತಿ, ವಿಶ್ವಾಸಗಳಿದ್ದ ಜೀವವೊಂದರ ತಮ್ಮನಾಗಿ ಬಾಳಿದ ಸೌಭಾಗ್ಯ ನನಗಿತ್ತು ಎಂಬುದನ್ನು ನೆನೆದಾಗ ಹೃದಯ ನಮ್ರವಾಗುತ್ತಿದೆ.
My brother Late T. S. Ramachandra
ಕಾಮೆಂಟ್‌ಗಳು