ವಿಶ್ವ ಸಾಗರ ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ: ವಿಶ್ವ ಸಮುದ್ರ ದಿನ
On World Ocean Day
ಸಾಗರ ಸಂಪತ್ತಿನ ಸಂರಕ್ಷಣೆಯ ಧ್ಯೇಯವನ್ನಿಟ್ಟುಕೊಂಡು ಪ್ರತಿವರ್ಷ ಜೂನ್ 8ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತಿದೆ. ಸಾಗರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು, ಸಮುದ್ರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಸಾಗರ ಸಂಪತ್ತಿನ ರಕ್ಷಣೆ, ಮತ್ತಿತರ ಚಿಂತನಾತ್ಮಕ ಕಾರ್ಯಗಳನ್ನು ಈ ದಿನ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಚಿಂತನೆಗೂ ವಾಸ್ತವಕ್ಕೂ ತಾಳೆ ಇದೆಯೆ ಎಂದು ನಮಗೆ ಚಿಂತಿಸುವುದಕ್ಕೆ ಮತ್ತೊಂದು ನಿಟ್ಟುಸಿರು ಬಿಡುವ ಅಸಹಾಯಕ ಘಳಿಗೆ ಈ ದಿನ!
ವಿಶ್ವ ಸಾಗರ ದಿನ ಆಚರಿಸುವ ಬಗ್ಗೆ 1992ರಲ್ಲಿ ಕೆನಡಾದ ಸಾಗರ ಅಭಿವೃದ್ಧಿ ಅಂತರರಾಷ್ಟ್ರೀಯ ಕೇಂದ್ರ (ಐಸಿಒಡಿ) ಮತ್ತು ಕೆನಡಾದ ಸಾಗರ ಸಂಸ್ಥೆ (ಒಐಸಿ) ವಿಶ್ವಸಂಸ್ಥೆಗೆ ಪ್ರಸ್ತಾವ ಸಲ್ಲಿಸಿದ್ದವು. ಪರಿಸರ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಬ್ರೆಜಿಲ್‌ನಲ್ಲಿ ನಡೆದಿದ್ದ ಭೂ ಶೃಂಗಸಭೆಯಲ್ಲಿ ಈ ಪ್ರಸ್ತಾವ ಸಲ್ಲಿಕೆ ಆಗಿತ್ತು. ವಿಶ್ವಸಂಸ್ಥೆಯು 2008ರಲ್ಲಿ ವಿಶ್ವ ಸಾಗರ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿತು.
ಭೂಮಿ ಸುಮಾರು ಮುಕ್ಕಾಲು ಭಾಗ ಹೆಚ್ಚು ನೀರೇ ತುಂಬಿದ್ದು ಕೇವಲ ಕಾಲು ಭಾಗವಷ್ಟೇ ಗಟ್ಟಿ ನೆಲವಿದೆ. ಭೂಮಿಯ ಸುತ್ತ ಶೇ.72 ರಷ್ಟು ನೀರಿದೆ, ಉಳಿದ ಕೇವಲ ಶೇ.28 ಗಟ್ಟಿ ನೆಲವನ್ನು ಏಳು ಖಂಡಗಳಾಗಿ ಇನ್ನೂರಕ್ಕೂ ಹೆಚ್ಚು ದೇಶಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಸುಮಾರು 800 ಕೋಟಿ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಮನುಷ್ಯ ತಾನು ನಿಂತಿರುವ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುವುದಷ್ಟೇ ಅಲ್ಲದೆ, ತಾನು ಸೃಷ್ಟಿಸುತ್ತಿರುವ ಕಸವನ್ನು ತುಂಬುತ್ತಾ ಹೆಚ್ಚು ಹೆಚ್ಚು ಸಮುದ್ರವನ್ನು ಕಲುಷಿತಗೊಳಿಸುತ್ತಲೇ ಇದ್ದಾನೆ. ಇದರ ಭವಿಷ್ಯದ ಪರಿಣಾಮ ಭೀಕರ. 2004ರಲ್ಲಿ ಸುನಾಮಿ ಬಂದಾಗ ಮನುಷ್ಯ ತನ್ನ ಬುದ್ಧಿ ಶಕ್ತಿಯಿಂದ ಮಾಡಿದ್ದೇನು? ಓ ಇದಕ್ಕೆ ಹೆಸರು ಸುನಾಮಿ ಅಂದ. ಕರೋನಾ ಎಂದು ವೈರಾಣುವಿಗೆ ನಾಮಕರಣ ಮಾಡಿದಂತೆ.
ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ಧಮಾಲಿನ್ಯದಂತೆ ಸಾಗರ ಮಾಲಿನ್ಯವೂ ಇಂದು ಬಗೆಹರಿಸಲಾಗದ ಒಂದು ದೊಡ್ಡ ಸಮಸ್ಯೆಯಾಗಿ ಮನುಷ್ಯನ ಕೈಮೀರಿ ಹೋಗಿದೆ. ಇಂದು ಸಾಮಾನ್ಯವಾಗಿ ಎಲ್ಲಾ ದೇಶಗಳ ದೊಡ್ಡ ಸಮಸ್ಯೆ ಎಂದರೆ ಕಸ ವಿಲೇವಾರಿ. ಪ್ರತಿಯೊಂದು ರಾಷ್ಟ್ರವೂ ಪ್ರತಿನಿತ್ಯ ಸಾವಿರಾರು ಟನ್ ಕಸವನ್ನು ಉತ್ಪತ್ತಿ ಮಾಡುತ್ತಿದೆ. ಅದರಲ್ಲೂ ಅಮೇರಿಕಾ, ರಷ್ಯಾ, ಚೀನಾ ಹಾಗೂ ಭಾರತಗಳು ಕಸ ಉತ್ಪತ್ತಿಯಲ್ಲೂ ಮುಂಚೂಣಿಯ ರಾಷ್ಟ್ರಗಳೇ. ಹೀಗೆ ಉತ್ಪತ್ತಿ ಮಾಡಲಾಗುತ್ತಿರುವ ಕಸಗಳ ಪೈಕಿ ಪ್ಲಾಸ್ಟಿಕ್ ಹಾಗೂ ಎಲೆಕ್ಟ್ರಾನಿಕ್ಸ್ ಕಸಗಳದ್ದೆ ಸಿಂಹಪಾಲು. ಒಂದು ಅಂದಾಜಿನ ಪ್ರಕಾರ ನಾವು ದಿನನಿತ್ಯ ನೀರು ಕುಡಿಯಲು ಬಳಸಿ ಬಿಸಾಡುವ ನೀರಿನ ಪ್ಲಾಸ್ಟಿಕ್ ಬಾಟಲ್ ಮಾತ್ರ 300 ಟನ್‍ನಷ್ಟು ತ್ಯಾಜ್ಯವಾಗಿ ಬದಲಾಗುತ್ತಿದೆ. ಇವನ್ನು ಪುನರ್‍ಬಳಕೆ ಮಾಡುವುದು ಸಾಧ್ಯವಿಲ್ಲ ಅಲ್ಲದೆ ಪ್ಲಾಸ್ಟಿಕ್ ಅನ್ನು ನಾಮಾವಶೇಷ ಮಾಡುವುದಂತೂ ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲಾ ರಾಷ್ಟ್ರಗಳು ಈ ಕಸವನ್ನು ಸದ್ದಿಲ್ಲದೆ ಸಮುದ್ರಕ್ಕೆ ಸುರಿಯುವ ಕೆಲಸದಲ್ಲಿ ತೊಡಗಿವೆ. ಒಂದು ಅಂದಾಜಿನ ಪ್ರಕಾರ ದಿನನಿತ್ಯ ಸಾವಿರಾರು ಟನ್ ಪ್ಲಾಸ್ಟಿಕ್ ಹಾಗೂ ಎಲೆಕ್ಟ್ರಾನಿಕ್ಸ್ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯಲಾಗುತ್ತಿದೆ.
ವಾಯುಮಾಲಿನ್ಯದಿಂದ ಈಗಾಗಲೇ ಭೂಮಿಯ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಸಾಗರದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಸಾಗರಗಳ ನಕ್ಷೆಯೇ ಬದಲಾಗುತ್ತಿದೆ. ಪರಿಣಾಮ ಅಂಟಾರ್ಟಿಕ್ ಸೇರಿದಂತೆ ಸಾಗರದ ಉತ್ತರ ಹಾಗೂ ದಕ್ಷಿಣ ಧೃವಗಳಲ್ಲಿ ಹೆಪ್ಪುಗಟ್ಟಿರುವ ಸಾವಿರಾರು ಟನ್‍ನಷ್ಟು ಮಂಜುಗಡ್ಡೆಗಳು ಕರಗುತ್ತಿವೆ. ಈಗಾಗಲೇ 8 ಸಾವಿರ ಬಿಲಿಯನ್ ಟನ್‍ನಷ್ಟು ಮಂಜು ಕರಗಿರುವ ಕುರಿತು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯಾದ “ನಾಸಾ” ಸ್ಪಷ್ಟಪಡಿಸಿದೆ. ಇದರಿಂದ ಸಮುದ್ರದ ನೀರಿನ ಮಟ್ಟ ಪ್ರತಿನಿತ್ಯ ಏರುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಧೃವ ಪ್ರದೇಶಗಳಲ್ಲಿ ಮಂಜುಗಡ್ಡೆಗಳೇ ಇಲ್ಲದಾಗಿ ಅಮೇರಿಕದ ನ್ಯೂಯಾರ್ಕ್ ಸೇರಿದಂತೆ ಪ್ರಮುಖ ನಗರಗಳು ನೀರಿನಲ್ಲಿ ಮುಳುಗಲಿವೆ.
ಭಾರತದಲ್ಲೂ ಮಂಗಳೂರು, ಕೇರಳ ಹಾಗೂ ತಮಿಳುನಾಡಿನ ಅನೇಕ ನಗರಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುತ್ತಿಲ್ಲ. ಯಾರು, ಯಾರಿಗೆ ಹೇಳುವುದು?
ಆದರೆ, ಪರಿಸ್ಥಿತಿ ಹೀಗೆ ಮುಂದುವರೆದರೆ ಸಮುದ್ರ ಮತ್ತಷ್ಟು ಭೂ ಭಾಗವನ್ನು ಕಬಳಿಸುವುದು ಮಾತ್ರ ಖಚಿತ.
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀರಿನಲ್ಲಿ ಸುರಿಯುತ್ತಿರುವುದರಿಂದ ಆಗುತ್ತಿರುವ ಮತ್ತೊಂದು ದೊಡ್ಡ ಪ್ರಮಾದವೆಂದರೆ ಜಲ ಜೀವರಾಶಿಗಳ ಮಾರಣ ಹೋಮ. ಈಗಾಗಲೇ ಭೂಮಿಯಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ಅನೇಕ ಪ್ರಾಣಿಗಳು ದಿನೇ ದಿನೇ ಪ್ರಾಣ ಕಳೆದುಕೊಳ್ಳುತ್ತಿದ್ರೆ, ಇದೀಗ ಆ ಸಾಲಿಗೆ ಸಮುದ್ರದ ಜೀವರಾಶಿಗಳು ಸೇರ್ಪಡೆಗೊಂಡಿವೆ. ಪ್ಲಾಸ್ಟಿಕ್ ಅಳಿಸಲಾಗದ ಉತ್ಪನ್ನ. ಇದರ ತ್ಯಾಜ್ಯಗಳನ್ನು ನಿರ್ಮೂಲ ಮಾಡುವುದು ಸಾಧ್ಯವೇ ಇಲ್ಲ. ಹೀಗಾಗಿ ಎಲ್ಲಾ ದೇಶಗಳು ಇದನ್ನು ಸಲೀಸಾಗಿ ಸಮುದ್ರದಲ್ಲಿ ಸುರಿದುಬಿಡುತ್ತಿದ್ದಾರೆ. ಆದರೆ ಸಮುದ್ರದ ಗರ್ಭ ಸೇರುತ್ತಿರುವ ಈ ತ್ಯಾಜ್ಯಗಳು ಜಲಜೀವರಾಶಿಗಳ ಹೊಟ್ಟೆ ಸೇರುತ್ತಿವೆ. ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳಲಾಗದೆ, ದೈತ್ಯ ಗಾತ್ರದ ತಿಮಿಂಗಿಲಗಳು ಸಹ ಇಂದು ಸತ್ತು ದಡ ಸೇರುತ್ತಿವೆ. ಇದು ನಿಜಕ್ಕೂ ಯೋಚಿಸಬೇಕಾದ ವಿಚಾರ.
ಪ್ರಕೃತಿಯ ವಿಕೋಪಗಳು ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತವೆ. ಹಾಗೆ ಆದಾಗಲೆಲ್ಲ ಮನುಷ್ಯ ಮೊಸಳೆ ಕಣ್ಣೀರಿಟ್ಟು ಆ ಘಳಿಗೆ ಮುಗಿದೊಡನೆ ತನ್ನ ಪಾಡಿಗೆ ತನ್ನ ಬೇಜವಾಬ್ದಾರಿ ಆಟಗಳನ್ನು ಮುಂದುವರೆಸುತ್ತಾನೆ.
ಅಪ್ಪಾ ಪರಮಾತ್ಮ ಎಲ್ಲೋ. ಒಮ್ಮೊಮ್ಮೆ ಕೋಪ ಮಾಡ್ಕೊಂಡು ಜೀವಗಳನ್ನು ಚೂರು ಚೂರು ನುಂಗ್ತೀಯ. ಒಟ್ಟಿಗೆ ನುಂಗಿ ನಿರ್ಮೂಲ ಮಾಡದೆ ಹೀಗೆ ಚೂರು ಚೂರು ಎಲ್ಲೆಲ್ಲೋ ಆಟ ಆಡಿ ಸುಮ್ನೆ ಇರೋದು ಸರಿಯೆ!
ಕಾಣದ ಕಡಲಿಗೆ ಹಂಬಲಿಸಿದೆ ಮನ. ಸೇರಬಲ್ಲೆವೆ ಒಂದು ದಿನ!
ಕಾಮೆಂಟ್‌ಗಳು