ಎಲ್. ಸುಬ್ರಮಣಿಯಂ
ಎಲ್. ಸುಬ್ರಮಣಿಯಂ
ಡಾ. ಎಲ್. ಸುಬ್ರಮಣಿಯಂ ವಿಶ್ವಪ್ರಸಿದ್ಧ ಸಂಗೀತಜ್ಞರು ಮತ್ತು ಪಿಟೀಲು ವಾದಕರು.
ಸುಬ್ರಮಣಿಯಂ 1947ರ ಜುಲೈ 23ರಂದು ಜನಿಸಿದರು. ತಂದೆ ವಿ.ಲಕ್ಷ್ಮೀನಾರಾಯಣ ಅಯ್ಯರ್. ತಾಯಿ ಸೀತಾಲಕ್ಷ್ಮಿ. ತಂದೆ ತಾಯಿಯರಿಬ್ಬರೂ ಪರಿಣಿತ ಸಂಗೀತಗಾರರಾಗಿದ್ದರು. ಬಾಲ್ಯದ ದಿನಗಳನ್ನು ಜಾಫ್ನಾದಲ್ಲಿ ಕಳೆದ ಸುಬ್ರಮಣಿಯಂ ಐದು ವರ್ಷವಾಗುವ ಮುಂಚೆಯೇ ತಂದೆಯವರಿಂದ ಪಿಟೀಲುವಾದನ ಕಲಿಕೆ ಪ್ರಾರಂಭಿಸಿದರು. ಆರನೆಯ ವಯಸ್ಸಿನಲ್ಲಿ ಸಾರ್ವಜನಿಕರೆದುರು ಮೊದಲ ಬಾರಿಗೆ ಪ್ರದರ್ಶನ ನೀಡಿದರು. ಸಹೋದರರಾದ ಎಲ್. ಶಂಕರ್ ಮತ್ತು ದಿವಂಗತ ಎಲ್. ವೈದ್ಯನಾಥನ್ ಸಹಾ ಪ್ರಸಿದ್ಧ ಸಂಗಿತಗಾರರಾಗಿ ಮತ್ತು ಸಂಗೀತ ಸಂಯೋಜಕರಾಗಿ ಹೆಸರಾಗಿದ್ದಾರೆ.
ಸುಬ್ರಮಣಿಯಂ ಸಂಗೀತದಲ್ಲಷ್ಟೇ ಅಲ್ಲದೆ ವಿಜ್ಞಾನದ ಓದಿನಲ್ಲಿಯೂ ಆಸಕ್ತಿ ಮೂಡಿಸಿಕೊಂಡು ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದರು.
ಸುಬ್ರಮಣಿಯಂ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕ್ಯಾಲಿಫೋರ್ನಿಯಾ ಕಲಾ ಸಂಸ್ಥೆಯಿಂದ ವಿಶ್ವವಿದ್ಯಾನಿಲಯದ ಪದವಿ ಪಡೆದುಕೊಂಡರು.
ಸುಬ್ರಮಣಿಯಂ 1973ರಿಂದ ಮೊದಲ್ಗೊಂಡು ಹಲವು ನೂರು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಅನೇಕ ಸೋಲೋ ಆಲ್ಬಂಗಳನ್ನೂ ಬಿಡುಗಡೆ ಮಾಡಿದ್ದಾರೆ. ಯೆಹೂದಿ ಮೆನುಹಿನ್, ಸ್ಟಿಫಾನ್ ಗ್ರ್ಯಾಪೆಲ್ಲಿ, ರುಗ್ಗಿರೋ ರಿಸಿ, ಜೀನ್-ಪಿರ್ರೆ ರಾಮ್ ಪಾಲ್ ಮುಂತಾದ ವಿಶ್ವಪ್ರಸಿದ್ಧರೊಂದಿಗೆ ಧ್ವನಿಮುದ್ರಿಕೆಗಳನ್ನು ಮಾಡಿದ್ದಾರೆ. ರುಗ್ಗಿರೋ ರಿಸಿ, ಹರ್ಬೀ ಹ್ಯಾನ್ ಕಾಕ್ , ಜೊ ಸ್ಯಾಂಪಲ್, ಜೀನ್-ಲುಕ್ ಪಾಂಟಿ, ಸ್ಟ್ಯಾನ್ ಲೆ ಕ್ಲಾರ್ಕ್ ಮತ್ತು ಅನೇಕ ಪ್ರತಿಭಾವಂತರೊಂದಿಗೆ ಪ್ರದರ್ಶನ ನೀಡಿದ್ದಾರಲ್ಲದೆ ಅವರೊಂದಿಗೂ ಆಲ್ಬಂಗಳನ್ನೂ ಮೂಡಿಸಿದ್ದಾರೆ. ಚೆಂಬೈ ವೈದ್ಯನಾಥ ಭಾಗವತರ್, ಕೆ. ವಿ. ನಾರಾಯಣಸ್ವಾಮಿ, ಶ್ರೀಪಾದ ಪಿನಕಪಾಣಿ, ಸೆಮ್ಮಂಗುಡಿ ಶ್ರೀನಿವಾಸ ಐಯ್ಯರ್, ಎಂ. ಬಾಲಮುರಳಿಕೃಷ್ಣ ಮತ್ತು ಎಂ. ಡಿ. ರಾಮನಾಥನ್ ಒಳಗೊಂಡಂತೆ ಎಲ್ಲ ಪ್ರಸಿದ್ಧರೊಂದಿಗೆ ಪಿಟೀಲು ನುಡಿಸಿದ್ದಾರೆ. ಪಾಲ್ಘಟ್ ಮಣಿ ಅಯ್ಯರ್ ಅವರ ಮೃದಂಗ ಸಹಯೋಗದಲ್ಲಿ ಅನೇಕ ಕಚೇರಿಗಳನ್ನು ನೀಡಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಅತ್ಯುತ್ತಮ ಪಿಟೀಲು ವಾದಕರೆಂದು ಪ್ರಶಂಸೆ ಗಳಿಸಿರುವುದಲ್ಲದೆ, ಹಿಂದೂಸ್ಥಾನಿ ಸಂಗೀತದ ದಿಗ್ಗಜರುಗಳೊಂದಿಗೂ ಪಿಟೀಲು ನುಡಿಸಿದ್ದಾರೆ. ಬ್ಯಾಲೆ ನೃತ್ಯರೂಪಕಗಳಿಗೆ, ಹಾಲಿವುಡ್ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಸಿಂಫೊನಿ ಮತ್ತು ಕನಾಟಕ ಸಂಗೀತದ ಕೃತಿಗಳಿಗೆ ಸ್ವರಪ್ರಸ್ತಾರ ರಚಿಸಿದ್ದಾರೆ.
ಸುಬ್ರಮಣಿಯಂ 1983ರಲ್ಲಿ, ಪಿಟೀಲು ಮತ್ತು ಕೊಳಲಿಗೆ ಎರಡು ಏಕವಾದ್ಯಗೀತ ಬಂಧವನ್ನು ಸಂಯೋಜಿಸಿದ್ದರು. ಇದು ಪಾಶ್ಚಾತ್ಯ ಸ್ವರವನ್ನು ಸೂಕ್ಷ್ಮ ಸ್ಥಾಯಿಭೇಧದೊಂದಿಗೆ ಮೂಡಿಸಿರುವ ಮಿಶ್ರಧಾಟಿಯೆನಿಸಿದೆ. ಬ್ಯಾಕ್ ಮತ್ತು ಬರೋಕ್ ಸಂಗೀತದ ಗೌರವಾರ್ಥ "ಸ್ಪ್ರಿಂಗ್”, ಜುಬಿನ್ ಮೆಹ್ತಾ ಏರ್ಪಡಿಸಿದ ನ್ಯೂಯಾರ್ಕ್ ಫಿಲ್ ಹಾರ್ಮೊನಿಕ್ನೊಂದಿಗೆ "ಫ್ಯಾಂಟಸಿ ಆನ್ ವೇದಿಕ್ ಚಾಂಟ್", ದಿ ಸ್ವಿಸ್ ರೊಮ್ಯಾಂಡೆ ವಾದ್ಯಮೇಳದೊಂದಿಗೆ "ಟರ್ಬ್ಯುಲೆನ್ಸ್" , ಒಸ್ಲೊ ಫಿಲ್ ಹಾರ್ಮೊನಿಕ್ ನೊಂದಿಗೆ “ದಿ ಕನಸರ್ಟ್ ಆಫ್ ಟೂ ವಯೊಲಿನ್ಸ್”, ಬರ್ಲಿನ್ ಸ್ಟೇಟ್ ಓಪೆರಾದೊಂದಿಗೆ "ಗ್ಲೋಬಲ್ ಸಿಂಫನಿ" ಅಲ್ಲದೆ "ಲಿ ಬೀಜಿಂಗ್ ಸಿಂಫನಿ" ಹೀಗೆ ಎಲ್ಲ ವಿಶ್ವಸಂಗೀತದೊಂದಿಗೆ ಪಾಲ್ಗೊಂಡಿದ್ದಾರೆ.
ಸುಬ್ರಮಣಿಯಂ ಸಂಗೀತ ಸಂಯೋಜನೆಗಳನ್ನು ಸ್ಯಾನ್ ಜೋಸ್ ಬ್ಯಾಲೆ ಕಂಪನಿ ಮತ್ತು ಅಲ್ವಿನ್ ಏಲೆಯ್ ಅಮೇರಿಕನ್ ಡ್ಯಾನ್ಸ್ ಥಿಯೇಟರ್ ಅಂತಹ ಪ್ರಮುಖ ನೃತ್ಯ ಕಂಪನಿಗಳು ತಮ್ಮ ಪ್ರಸ್ತುತಿಗಳಲ್ಲಿ ಬಳಸುತ್ತಿವೆ. ಸುಬ್ರಮಣ್ಯಂ ಮ್ಯಾರಿನಿಸ್ಕಿ ಬ್ಯಾಲೆಗಾಗಿ “ಶಾಂತಿ ಪ್ರಿಯಾ” ಎಂಬ ಸಂಗೀತ ಕೃತಿಯನ್ನು ಸಂಯೋಜಿಸಿದ್ದಾರೆ.
ಸುಬ್ರಮಣಿಯಂ ಅವರ ಸಂಗೀತ ಪ್ರಸ್ತುತಿಗಳು ವಿಶ್ವದಾದ್ಯಂತ ಸಂಗೀತ ವಿಮರ್ಶಕರ ಮೆಚ್ಚುಗೆಯನ್ನು ಪಡೆದಿವೆ. ಇವರು ಲಕ್ಷ್ಮೀನಾರಾಯಣ ಜಾಗತಿಕ ಸಂಗೀತ ಉತ್ಸವವನ್ನು ಆರಂಭಿಸಿದರು. ವಿಶ್ವದೆಲ್ಲೆಡೆಯ ಮಹೋನ್ನತ ವೇದಿಕೆಗಳಲ್ಲಿ ವಾದ್ಯಗೋಷ್ಠಿಗಳನ್ನು ನಡೆಸಿ ಸಂಗೀತದ ಉತ್ಸವದೊಂದಿಗಿನ ವಿಶ್ವ ಪ್ರವಾಸವನ್ನೂ ಪೂರ್ಣಗೊಳಿಸಿದರು. ಇವರ ಕಾರ್ಯಕ್ರಮಗಳಲ್ಲಿ ವಿಶ್ವದ ಶ್ರೇಷ್ಠ ವಾದ್ಯಗಾರರಾದ ಆರ್ವೆ ಟೆಲೆಫ್ಸೆನ್, ಓಸೋಲೋ ಕ್ಯಾಮೆರೆಟಾ, ಸ್ಟ್ಯಾನ್ಲೆ ಕ್ಲಾರ್ಕ್, ಜಾರ್ಜ್ ಡ್ಯೂಕ್, ಅಲ್ ಜ್ಯಾರೆಯೊ, ಎರ್ಲ್ ಕ್ಲುಗ್ ಮತ್ತು ರವಿ ಕೊಲ್ಟ್ರೇನ್ ಸಹಾ ಜೊತೆಯಾಗಿ ಪ್ರದರ್ಶನ ನೀಡಿದ್ದಾರೆ.
ಮಹಾನ್ ಸಂಗೀತಜ್ಞ ಯೆಹೂದಿ ಮೆನುಹಿನ್ ಸುಬ್ರಮಣ್ಯಂರ ಸಂಗೀತದ ಬಗ್ಗೆ “I find nothing more inspiring than the music making of my very great colleague Subramaniam. Each time I listen to him, I am carried away in wonderment.” ಎನ್ನುತ್ತಾರೆ.
ಸುಬ್ರಮಣಿಯಂ ಮೀರಾ ನಾಯರ್ ನಿರ್ದೇಶನದ ಸಲಾಮ್ ಬಾಂಬೆ, ಮಿಸ್ಸಿಸ್ಸಿಪ್ಪಿ ಮಸಾಲಾ, ಕಾಮಸೂತ್ರ - ಎ ಲವ್ ಸ್ಟೋರಿ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಇದಲ್ಲದೆ ಬರ್ನಾರ್ಡೊ ಬೆರ್ಟೊಲುಸ್ಸಿಯ ಅವರ ಲಿಟ್ಟಲ್ ಬುದ್ಧ, ಮರ್ಚೆಂಟ್-ಐವರಿ ಪ್ರೋಡಕ್ಷನ್ಸ್ ನ ಕಾಟನ್ ಮೇರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರ ಸಂಗೀತವಿದೆ.
ಪಿಟೀಲು ಸಾಮ್ರಾಟ ಗೌರವ, ಗ್ರ್ಯಾಮಿ ನಾಮನಿರ್ದೇಶನ, ನಾರ್ವೆ ಬ್ರಾಡ್ಕ್ಯಾಸ್ಟಿಂಗ್ ಕಾರ್ಪೊರೇಷನ್ ಇಂದ ಅತ್ಯುತ್ತಮ ಸಂಗೀತ ಸಂಯೋಜಕ ಗೌರವ, ನೇಪಾಳದ ದೊರೆ ಬೀರೇಂದ್ರ ಅವರಿಂದ ಗೌರವ ಪದಕ, ಸಂಗೀತ ಮತ್ತು ನೃತ್ಯ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ, ಮದ್ರಾಸ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸುಬ್ರಮಣಿಯಂ ಅವರಿಗೆ ಸಂದಿವೆ.
ಸುಬ್ರಮಣಿಯಂ ಅವರ ಮೊದಲ ಪತ್ನಿ ವಿಜಯಶ್ರೀ ಶಂಕರ್ 1995ರಲ್ಲಿ ನಿಧನರಾದರು. ಸುಬ್ರಮಣಿಯಂ 1999ರಲ್ಲಿ ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರನ್ನು ವರಿಸಿದರು. ಸುಬ್ರಮಣಿಯಂ ಅವರ ನಾಲ್ಕೂ ಮಕ್ಕಳೂ ಸಹಾ ಸಂಗೀತ ಲೋಕದ ಸಾಧಕರಾಗಿದ್ದಾರೆ.
ಕಾಮೆಂಟ್‌ಗಳು