ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಾ ಮೂರ್ತಿ


 ಪದ್ಮಾ ಮೂರ್ತಿ


ಡಾ. ಪದ್ಮಾ ಮೂರ್ತಿ ಸಂಗೀತ ಮತ್ತು ಸಂಗೀತ ಮನಃಶಾಸ್ತ್ರದಲ್ಲಿ ಹಿರಿಯ ಹೆಸರು.

ಪದ್ಮಾ ಮೂರ್ತಿ 1932ರ ಜುಲೈ 24ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಟಿ. ಎಸ್. ರಾಜಗೋಪಾಲ ಅಯ್ಯಂಗಾರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಶಿಕ್ಷಣ ತಜ್ಞರಾಗಿ, ಸುಪ್ರೀಂ ಕೋರ್ಟ್ ವಕೀಲರಾಗಿ ಮತ್ತು ಮೈಸೂರಿನಲ್ಲಿ ಕಲಾಪೋಷಕರಾಗಿ ಹೆಸರಾದವರು.  ತಾಯಿ ಜಯಲಕ್ಷ್ಮಿ. 
ಪತಿ ಪಿಟೀಲು ವಿದ್ವಾಂಸರಾದ ಟಿ.ಎಸ್‌. ಮೂರ್ತಿ. 

ಪದ್ಮಾ ಅವರಿಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಅಭಿರುಚಿ. ಮೈಸೂರು ವಾಸುದೇವಾಚಾರ್ಯರು, ಟಿ ಚೌಡಯ್ಯ, ಟಿ. ಪುಟ್ಟಸ್ವಾಮಯ್ಯ, ಶೆಲ್ವಪಿಳ್ಳೆ ಅಯ್ಯಂಗಾರ್, ತಿಟ್ಟೆ ಕೃಷ್ಣ ಅಯ್ಯಂಗಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮುಂತಾದವರಿಂದ ಸಂಗೀತ ಗಾಯನ ಶಿಕ್ಷಣ ಪಡೆದರು. ಎಚ್‌. ಎಸ್‌. ಕೃಷ್ಣಮೂರ್ತಿ, ಆರ್. ಎಸ್‌. ಕೇಶವಮೂರ್ತಿ ಅವರುಗಳಿಂದ  ವೀಣಾವಾದನ ಶಿಕ್ಷಣ ಪಡೆದರು. ಮೈಸೂರು ಆರ್. ಪದ್ಮಾ ಎಂದು ಪ್ರಸಿದ್ಧರಾಗಿದ್ದ ಇವರು ಎಂಟನೇ ವಯಸ್ಸಿನಲ್ಲಿ ಮೊದಲ ಕಚೇರಿ ನೀಡಿದಾಗ ಸ್ವಯಂ ಚೌಡಯ್ಯನವರು ಪಿಟೀಲು ವಾದನ ನೀಡಿದರು.

ಪದ್ಮಾ ಅವರು ಸೈಕಾಲಜಿ ಆಫ್‌ ಮ್ಯೂಸಿಕ್‌ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಗಳಿಸಿದರು. ಅಮೆರಿಕದಲ್ಲಿ ಮ್ಯೂಸಿಕಾಲಜಿ ಕುರಿತ ಡಾಕ್ಟರಲ್ ಪದವಿ ಮತ್ತು ಬೆಲ್ಜಿಯಂ ದೇಶದ ಡಾಕ್ಟರ್ ಆಫ್ ಎಡುಕೇಷನ್ ಪದವಿ ಸಹಾ ಗಳಿಸಿದರು. 

ಡಾ. ಪದ್ಮಾ ಮೂರ್ತಿ ನಾಡಿನೆಲ್ಲೆಡೆ ಹಾಗೂ  ವಿದೇಶಗಳಲ್ಲೂ ಕಚೇರಿಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಿದರು. 1945-46 ರಲ್ಲಿ ಇವರ ಕನ್ನಡ ದೇವರನಾಮಗಳ ಗ್ರಾಮಾಫೋನ್ ರೆಕಾರ್ಡು ಬಿಡುಗಡೆಗೊಂಡಿತು. ಇದಲ್ಲದೆ ಹಲವಾರು ಗ್ರಾಮಫೋನ್‌ ರೆಕಾರ್ಡ್‌‌ಗಳಿಗೆ ಮತ್ತು ಧ್ವನಿಸುರುಳಿಗಳಿಗೆ ಗಾಯನ ಮತ್ತು ವೀಣಾವಾದನ ನೀಡಿದರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ ಮತ್ತು ಅನೇಕರಿಗೆ ಸಂಗೀತ ಮತ್ತು ಸುಗಮಸಂಗೀತದ ಗುರುವಾದರು.

ಡಾ. ಪದ್ಮಾ ಮೂರ್ತಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿ, ಮದರಾಸು ಮ್ಯೂಸಿಕ್‌ ಅಕಾಡಮಿ ತಜ್ಞಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಮ್ಯೂಸಿಕ್‌ ಥೆರಪಿ ವಿಭಾಗದ ಮುಖ್ಯಸ್ಥರಾಗಿಯೂ ಅವರ ಸೇವೆ ಸಲ್ಲುತ್ತಿದೆ.

ಡಾ. ಪದ್ಮಾ ಮೂರ್ತಿ ಅವರು ಬರಹಗಾರ್ತಿಯಾಗಿ 'ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ'ವನ್ನು ಎರಡು ಭಾಗಗಳಲ್ಲಿ ಪ್ರಕಟಿಸಿದರು. ಎರಡು ಸಂಪುಟಗಳಲ್ಲಿ ಪ್ರಕಟಗೊಂಡ‍ 'ಪುರಂದರ ಕೃತಿಮಾಲ' ಅವರ ಮತ್ತೊಂದು ಮಹತ್ವದ ಕೃತಿ. ಪ್ರಮುಖ ಪತ್ರಿಕೆಗಳಿಗೆ ಸಂಗೀತದ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. 

ಡಾ. ಪದ್ಮಾ ಮೂರ್ತಿ ಅವರಿಗೆ ಮದರಾಸು ಪಾರ್ಥಸಾರಥಿ ಸಭಾ, ಮ್ಯೂಸಿಕ್‌ ಅಕಾಡೆಮಿ, ಗಾಯನ ಸಮಾಜ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ವಿವಿಧ ಗೌರವಗಳು ಸಂದಿವೆ.

On the birthday of musician and music psychologist Dr. Padma Murthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ