ಎಸ್. ಆರ್. ರಾವ್
ಎಸ್. ಆರ್. ರಾವ್
ಕನ್ನಡಿಗರಾದ ಡಾ. ಶಿಕಾರಿಪುರ ರಂಗನಾಥ ರಾವ್ ಭಾರತದ ಮಹಾನ್ ಪುರಾತತ್ವ ಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ರಾವ್ ಅವರು ಸಿಂಧೂಕಣಿವೆ ನಾಗರಿಕತೆಯ ಹರಪ್ಪ ಪಟ್ಟಣಕ್ಕೆ ಸಂಬಂಧಿಸಿದ ಉತ್ಖನನಗಳನ್ನು ನೆಡೆಸಿದ ಹಲವಾರು ತಂಡಗಳ ನೇತೃತ್ವ ವಹಿಸಿದ್ದರು. ಈ ಪ್ರಮುಖ ಉತ್ಖನನಗಳಲ್ಲಿ ಗುಜರಾತಿನ ಸಮುದ್ರ ತೀರದ ನಗರ ಲೋಥಾಲ್ ಮತ್ತು ದ್ವಾರಕಾ ಸೇರಿವೆ.
ಶಿಕಾರಿಪುರ ರಂಗನಾಥ ರಾವ್ 1922ರ ಜುಲೈ 1ರಂದು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ ಆನಂದಪುರಂ ಎಂಬಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದರು.
ರಂಗನಾಥ ರಾವ್ ಅಂದಿನ ಬರೋಡಾ ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಭಾರತದ ಪುರಾತತ್ವ ಇಲಾಖೆಯಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಡಾ ರಾವ್ ಅವರು ರಂಗ್ಪುರ್, ಆಮ್ರೇಲಿ , ಭಗತ್ರವ್, ದ್ವಾರಕಾ, ಹನೂರ್, ಐಹೊಳೆ, ಕಾವೇರಿಪಟ್ಟಣಂ ಮತ್ತು ಇತರ ಅನೇಕ ಪ್ರಮುಖ ಪ್ರದೇಶಗಳ ಉತ್ಖನನಗಳ ನಾಯಕತ್ವ ವಹಿಸಿದ್ದರು. ಇವರ ಸಂಶೋಧನೆ ಮತ್ತು ಉತ್ಖನನಗಳಲ್ಲಿ ಇತಿಹಾಸದಲ್ಲಿ ಮರೆಯಾಗಿ ಹೋಗಿದ್ದ, ಅತ್ಯಂತ ಪ್ರಾಚೀನ ಬಂದರು ಮತ್ತು ಸಿಂಧೂಕಣಿವೆಯ ಸಂಸ್ಕೃತಿಯ ಪ್ರಮುಖ ತಾಣವಾದ ಲೋಥಾಲ್ ಸೇರಿದೆ. ಡಾ ರಾವ್ ಅವರು ಜವಹರಲಾಲ್ ನೆಹರೂ ಫೆಲೋಶಿಪ್ ಪುರಸ್ಕೃತರಾಗಿದ್ದರಲ್ಲದೆ, ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ಡಾಕ್ಟರೇಟ್ ಗಳಿಸಿದ್ದರು. ರಾವ್ ಅವರು ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿನ ಅನೇಕ ಐತಿಹಾಸಿಕ ತಾಣಗಳ ಉತ್ಖನನದ ಮೇಲ್ವಿಚಾರಣೆ ನಿರ್ವಹಿಸಿದ್ದರು.
ರಂಗನಾಥ ರಾವ್ ಅವರು ತಾಜಮಹಲ್ ಮತ್ತು ಅನೇಕ ಕೋಟೆಗಳಂತಹ ಸ್ಮಾರಕಗಳ ಸಂರಕ್ಷಣೆಯಲ್ಲೂ ಪಾಲ್ಗೊಂಡಿದ್ದರು. ಅಧಿಕೃತವಾಗಿ 1980ರಲ್ಲಿ ನಿವೃತ್ತರಾದರೂ ಸಹ, ಡಾ ರಾವ್ ಅವರನ್ನು ಪ್ರಮುಖ ಭಾರತೀಯ ಪುರಾತತ್ವ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಕೋರಿಕೊಳ್ಳಲಾಯಿತು. ಡಾ. ರಾವ್ ಅವರ ಪರಿಶರಮದ ದೆಸೆಯಿಂದಾಗಿ 1981ರಲ್ಲಿ ಭಾರತದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನಾಗ್ರಫಿ ರೂಪುಗೊಂಡಿತು. ಡಾ ಎಸ್ ಝಹರುಲ್ ಕಾಸಿಂ ಅವರು ನಿರ್ದೇಶಕರಾಗಿದ್ದ ಈ ಸಂಸ್ಥೆ ವಿಶ್ವಮಾನ್ಯ ಸಂಸ್ಥೆಯಾಗಿ ರೂಪುಗೊಂಡಿತು. ರಾವ್ ಅವರು ಭಾರತದ ಸೊಸೈಟಿ ಅಫ್ ಮೆರಿನ್ ಆರ್ಕಿಯಾಲಜಿಯ ಸಂಸ್ಥಾಪಕರು.
ಹಲವಾರು ದಶಕಗಳ ಕಾಲ ಭಾರತೀಯ ಪುರಾತತ್ವ ಸಂಶೋಧನೆಗಳಲ್ಲಿ ಮುಂಚೂಣಿಯಲ್ಲಿದ್ದ ರಾವ್ ಅವರು ಸಿಂಧೂಕಣಿವೆ ನಾಗರಿಕತೆಯ ಪ್ರದೇಶಗಳಿಂದ ಮೊದಲುಗೊಂಡು ಕುರುಕ್ಷೇತ್ರ ಯುದ್ಧಕ್ಕೆ ಸಂಬಂಧಿಸಿದ ಉತ್ಖನನಗಳವರೆಗೆ ಭಾರತದ ಪ್ರಾಚೀನ ಇತಿಹಾಸದ ಬಗೆಗಿನ ವ್ಯಾಪಕ ಸಂಶೋಧನೆಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು.
ರಾವ್ ಅವರು 1992ರಲ್ಲಿ ಸಿಂಧೂಲಿಪಿಯನ್ನು ಅರ್ಥೈಸಿರುವುದಾಗಿ ಘೋಷಿಸಿದರು. ಸಿಂಧೂಕಣಿವೆ ನಾಗರಿಕತೆಯ ಕಾಲದಲ್ಲಿ ಸಮಾನವಾಗಿ ಕಂಡುಬರುವ ಲಿಪಿಯನ್ನು ಪೊನೆಷಿಯನ್ ವರ್ಣಮಾಲೆಗೆ ಹೋಲಿಸಿದ ರಾವ್ ಅವರು ಆ ಆಧಾರದ ಮೇಲೆ ಸ್ವರಗಳನ್ನು ಜೋಡಿಸಿದಾಗ ಅವುಗಳಿಗೆ ಸಂಸ್ಕೃತದ ಧ್ವನಿಗಳಾದ ಏಕ, ತ್ರ, ಚತುಷ್, ಪಂತ, ಹಪ್ತ (ಸಪ್ತ), ದಶ, ದ್ವಾದಶ, ಶತ ಮುಂತಾದವು ಮೂಡಿದವು ಎನ್ನಲಾಗಿದೆ. ಇವರ ಹೋಲಿಕೆ ವಿಧಾನವನ್ನು ಬಹುತೇಕವಾಗಿ ಒಪ್ಪಲಾಗಿದ್ದರೂ ಅರ್ಥೈಕೆಯ ಪೂರ್ಣ ವಿಧಾನದ ಬಗ್ಗೆ ಕೆಲವೊಂದೆಡೆ ಒಮ್ಮತ ಕಂಡುಬಂದಿಲ್ಲದ ಕಾರಣ ಸಿಂಧೂಲಿಪಿಯು ಇನ್ನೂ ಅಂಗೀಕೃತ ಲಿಪಿಯಾಗದೆ ಮುಂದುವರೆದಿದೆ.
ದ್ವಾರಕೆಯ ಹತ್ತಿರದ ಕುಶಸ್ಥಲಿ ಎಂಬ ಸ್ಥಳದಲ್ಲಿ ರಾವ್ ಮತ್ತು ಅವರ ತಂಡವು ಸಮುದ್ರದ ದಂಡೆಯಿಂದಲೇ ಕಾಣುವ 560 ಮೀಟರ್ ಉದ್ದದ ಗೋಡೆಯನ್ನು ಕಂಡರು. ಅಲ್ಲಿ ಸಿಕ್ಕ ಮಡಿಕೆಯ ಕಾಲನಿರ್ಣಯದಿಂದ ಅದು ಕ್ರಿ.ಪೂ. 1528ರ ಕಾಲದ್ದೆಂದು
ತಿಳಿದುಬಂತು. ಅಲ್ಲಿ ಒಂದು ಮುದ್ರೆಯೂ ಕಂಡುಬಂತು. ದ್ವಾರಕೆಯ ನೀರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದ ಮೂರು ರಂಧ್ರವಿರುವ ತ್ರಿಕೋನಾಕಾರದ ಕಲ್ಲಿನ ಲಂಗರುಗಳು, ಲೋಥಾಲ್ ಮತ್ತು ಮೊಹೆಂಜೋದಾರೋಗಳಲ್ಲಿ ಸಿಕ್ಕ ಒಂದು ಒಂದು ರಂಧ್ರವನ್ನು ಹೊಂದಿದ್ದ ಲಂಗರುಗಳ ವಿಕಸನದಲ್ಲಿ ಮುಂದುವರಿಕೆಯನ್ನು ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರಲ್ಲದೆ, ದ್ವಾರಕೆಯಲ್ಲಿ ಕಂಡು ಬಂದ ಹರಪ್ಪನ್ ಕಾಲದ ಲಂಗರುಗಳು, ಸೈಪ್ರಸ್ ಮತ್ತು ಸಿರಿಯಾ ಪ್ರದೇಶಗಳಲ್ಲಿನ ಕಂಚುಯುಗದ ಲಂಗರುಗಳಿಗಿಂತ ಹಲವು ಶತಮಾನಗಳಷ್ಟು ಹಿಂದಿನವು ಎಂದು ಸ್ಪಷ್ಟವಾಗುತ್ತವೆ ಎಂದಿದ್ದಾರೆ. ರಾವ್ ಅವರು ತಾವು ದ್ವಾರಕೆಯಲ್ಲಿ ಕಂಡ ಅವಶೇಷಗಳ ಆಧಾರದ ಮೇಲೆ, ಅದು ಕೃಷ್ಣನ ಐತಿಹಾಸಿಕ ನಗರವಾದ ದ್ವಾರಕೆಯೇ ಎಂದು ಪ್ರತಿಪಾದಿಸಿದ್ದಾರೆ.
ಎಸ್. ಆರ್. ರಾವ್ ಅವರ ಕಾರ್ಯ ಮತ್ತು ಚಿಂತನೆಗಳು ಈ ಕೃತಿಗಳಲ್ಲಿ ಮೂಡಿವೆ:
1. Lothal and the Indus Civilisation, Bombay:Asia Publishing House, (1973);
2. Lothal: A Harappan Port Town (1955 - 1962), Vols.I and II,
3. Memoirs of the Archaeological Survey of India(1979 and 1985);
4. Lothal, Archaeological Survey of India (1985);
5. Dawn and Devolution of the Indus Civilization, Delhi:Aditya Prakashan (1991);
6. New Trends in Indian Art and Archaeology: S.R. Rao's 70th Birthday Felicitation Volumes, edited by B.U. Nayak and N.C. Ghosh, 2 vols. (1992);
7. New Frontiers of Archaeology, Bombay:Popular Prakashan, (1994);
8. The Lost City of Dvaraka, National Institute of Oceanography;
9. Marine Archaeology in India, Delhi: Publications Division(2001)
ಡಾ. ಎಸ್. ಆರ್. ರಾವ್. ಅವರು 2013ರ ಜನವರಿ 3ರಂದು ಈ ಲೋಕವನ್ನಗಲಿದರು.
On the birth anniversary of great archaeologist Dr. S. R. Rao
ಕಾಮೆಂಟ್‌ಗಳು