ವಿಷ್ಣು ನಾಯ್ಕ
ವಿಷ್ಣು ನಾಯ್ಕ
ಮಹತ್ವದ ಶಿಕ್ಷಕ, ಸಾಹಿತಿ, ಸಂಪಾದಕ, ಪ್ರಕಾಶಕ, ರಂಗಕರ್ಮಿ, ಯಕ್ಷಗಾನ ಕಲಾವಿದ, ಸಾಹಿತ್ಯ ಸಂಘಟನಕಾರ, ಪತ್ರಕರ್ತ, ಪತ್ರಿಕೋದ್ಯಮಿ ಹೀಗೆ ಬಹುಮುಖಿ ಸಾಧಕರಾಗಿದ್ದ ವಿಷ್ಣು ನಾಯ್ಕ ನಿಧನರಾಗಿದ್ದಾರೆ.
ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ. ತಂದೆ ನಾಗಪ್ಪ. ನಿರಕ್ಷರಿ ಬಡ ತಂದೆ ತಾಯಿಗಳ ಆರು ಮಕ್ಕಳಲ್ಲಿ ಮೂರನೆಯವರಾದ ವಿಷ್ಣು ನಾಯ್ಕರ ಪ್ರಾಥಮಿಕ ಶಿಕ್ಷಣ ಅಂಬಾರಕೊಡ್ಲ ಹಾಗು ಅಂಕೋಲಾದಲ್ಲಿ ಜರುಗಿತು. ಮಾಧ್ಯಮಿಕ ಶಿಕ್ಷಣವನ್ನು ಅಂಕೋಲಾದಲ್ಲಿ ಪೂರ್ಣಗೊಳಿಸಿದ ವಿಷ್ಣು ನಾಯ್ಕರು ಪದವಿಗಾಗಿ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ, ಆ ಬಳಿಕ ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಕನ್ನಡ ಜಾನಪದ ಸಾಹಿತ್ಯವನ್ನು ಪ್ರಧಾನ ವಿಷಯವನ್ನಾಗಿರಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
ವಿಷ್ಣು ನಾಯ್ಕರು ಡಾ| ದಿನಕರ ದೇಸಾಯಿಯವರು ಸ್ಥಾಪಿಸಿದ ಕೆನರಾ ವೆಲ್ಫೇರ್ ಟ್ರಸ್ಟಿನ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಉಪನ್ಯಾಸಕರಾಗಿ ಹಾಗು ಪ್ರಾಚಾರ್ಯರಾಗಿ 43 ವರ್ಷಗಳ ಸೇವೆ ಸಲ್ಲಿಸಿದ್ದರು.
ವಿಷ್ಣು ನಾಯ್ಕ ಅವರು ವಿದ್ಯಾರ್ಥಿ ದೆಸೆಯಿಂದಲೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1963ರಿಂದ ವರ್ಷಕ್ಕೊಂದರಂತೆ ಹೊಸ ನಾಟಕ ಬರೆದು, ನಿರ್ದೇಶಿಸಿದ್ದರು. ಅಲ್ಲದೆ ಕನ್ನಡದ ಪ್ರಸಿದ್ಧ ನಾಟಕಕಾರರೆಲ್ಲರ ನಾಟಕಗಳಲ್ಲಿ ನಟರಾಗಿ ಮತ್ತು ನಿರ್ದೇಶಕರಾಗಿ ಭಾಗವಹಿಸಿದ್ದರು. 'ರಾಘವೇಂದ್ರ ರಂಗಸಂಗ' ಎಂಬ ಕಲಾತಂಡವನ್ನು ಕಟ್ಟಿ ರಂಗನಾಟಕಗಳನ್ನು, ಬೀದಿನಾಟಕಗಳನ್ನು ಆಡಿಸಿದ್ದರು. ಯಕ್ಷಗಾನದಲ್ಲಿ ನಟರಾಗಿ ಹಾಗು ತಾಳಮದ್ದಲೆಯ ಅರ್ಥಧಾರಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೆಲ್ಲ ಪ್ರದರ್ಶನ ನೀಡಿದ್ದರು. ‘ಚಂದನ’ ವಾಹಿನಿಯಲ್ಲಿ ಪ್ರಸಾರವಾದ ‘ಅಮೃತ ಸಿಂಚನ’ ಧಾರಾವಾಹಿಯಲ್ಲಿ ನಟಿಸಿದ್ದರು.
ವಿಷ್ಣು ನಾಯ್ಕರು ದಿನಕರ ದೇಸಾಯಿ ಅವರ ಜನಸೇವಕ ವಾರಪತ್ರಿಕೆಗಾಗಿ, ಕೆ.ಎಚ್.ಪಾಟೀಲರ ವಿಶಾಲ ಕರ್ನಾಟಕ ಪತ್ರಿಕೆಗೆ, ಶಿರಸಿಯ ಮುನ್ನಡೆ ಪತ್ರಿಕೆಗೆ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮುಂಗಾರು ದೈನಿಕಕ್ಕೆ ವರದಿಗಾರರಾಗಿ ದುಡಿದಿದ್ದರು. ಕರಾವಳಿ ಮುಂಜಾವು ಹಾಗು ಕರಾವಳಿ ಸುಪ್ರಭಾತ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ಸಕಾಲಿಕ ವಾರಪತ್ರಿಕೆಯ ಸಂಪಾದಕರಾಗಿ ಮೂರು ವರ್ಷ ನಡೆಸಿದ್ದರು.
ವಿಷ್ಣು ನಾಯ್ಕರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿಗೈದಿದ್ದರು. ಇವರ ಕವನ ಸಂಕಲನಗಳಲ್ಲಿ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಬತ್ತ, ಕಳಕೊಂಡ ಕವಿತೆ, ಆಲ ಮತ್ತು ಬಾಲ, ನೋವು ಪ್ರೀತಿಯ ಪ್ರಶ್ನೆ, ಮುಚ್ಚಿದ ಬಾಗಿಲು ಮತ್ತು ಮರಿ ಗುಬ್ಬಿ, ಬೆಳಕಿನ ಕರೆ, ಭಾವ, ನೂರೆಂಟು ಕಿಟಕಿಗಳು ಸೇರಿದ್ದವು.
ವಿಷ್ಣು ನಾಯ್ಕರ ನಾಟಕಗಳಲ್ಲಿ ಸರಾಯಿ ಸೂರಪ್ಪ, ಬೋಳುಗುಡ್ಡ, ಬಿನ್ನಹಕೆ ಬಾಯಿಲ್ಲ, ಒಂದು ಹನಿ ರಕ್ತ, ಅಯ್ನೋರ ಪೂಜೆ, ಸಾವಿನ ಹಾದಿ, ಯುದ್ಧ, ಪ್ರೀತಿ, ಜಗತ್ತಿನ ದೊರೆ ಮುಂತಾದವು ಸೇರಿವೆ. 'ಕಣ್ಣೀರ ಕತೆಗಳು' ಇವರ ಕಥಾಸಂಕಲನ. 'ಹದ್ದುಪಾರಿನ ಹಿಂದೆ ಮುಂದೆ', 'ದುಡಿಯುವ ಕೈಗಳ ಹೋರಾಟದ ಕತೆ' ಮುಂತಾದವು ಮಾನವಿಕ ಚರಿತ್ರೆಗಳು. ಪರಿಮಳ, ಕವಿ-ಕರ್ಮಯೋಗಿ ದಿನಕರ ದೇಸಾಯಿ, ಸರ್ವಪಲ್ಲಿ ರಾಧಾಕೃಷ್ಣನ್, ಜನಸೇವಕ ಕವಿ ದಿನಕರ ದೇಸಾಯಿ ಮುಂತಾದವು ವ್ಯಕ್ತಿ ಚಿತ್ರಣಗಳು. ವಿಚಾರ, ವಿಮರ್ಶೆ ಮತ್ತು ಅಂಕಣಗಳಲ್ಲಿ ಮರ್ಯಾದೆ, ಪ್ರಮಾಣ, ಅರೆಖಾಸಗಿ, ವರ್ತಮಾನದ ಕಣ್ಣು , ಕಾಲೋಚಿತ ಮುಂತಾದವು ಸೇರಿವೆ. ಇವರ ಸಂಪಾದನೆಗಳಲ್ಲಿ ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯ (೧೦ ಸಂಪುಟಗಳು), ಅಕಬರ ಅಲಿ ಜೀವನ-ಸಾಹಿತ್ಯ, ಸಾಹಿತ್ಯದಲ್ಲಿ ನವ್ಯತೆ, ದಿನಕರನ ಆಯ್ದ ಚೌಪದಿ, ವಿ.ಎ.ತೊರ್ಕೆ ಸಮಗ್ರ ಸಾಹಿತ್ಯ, ಜಿನದೇವ ನಾಯಕ ಬದುಕು ಬರಹ, ಗೌರೀಶ ಕಾಯ್ಕಿಣಿ ಆಯ್ದ ಬರಹಗಳು, ನೀವೂ ದಾರ ಕಟ್ಟಿ (ವಿವಿಧ ಲೇಖಕರ ಬಹುಮಾನಿತ ಕತೆಗಳು) ಮುಂತಾದವು ಮೂಡಿಬಂದಿದ್ದವು.
ವಿಷ್ಣು ನಾಯ್ಕರು 1973ರಲ್ಲಿ ರಾಘವೇಂದ್ರ ಪ್ರಕಾಶನವನ್ನು ಪ್ರಾರಂಭಿಸಿ 180ಕ್ಕೂ ಹೆಚ್ಚು ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿದ್ದರು. ಈ ಪ್ರಕಾಶನದ ಆಶ್ರಯದಲ್ಲಿ ಸಾಹಿತ್ಯಗೋಷ್ಠಿಗಳು, ಕಮ್ಮಟಗಳು, ಸ್ಪರ್ಧೆಗಳು ಮೊದಲಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.
ವಿಷ್ಣು ನಾಯ್ಕರು ಸುದೀರ್ಘ ಕಾಲ ದಿನಕರ ದೇಸಾಯಿಯವರ ನೇತೃತ್ವದಲ್ಲಿ ನಡೆದ ರೈತ ಆಂದೋಲನದಲ್ಲಿ ಭಾಗವಹಿಸಿದ್ದರು. ಸಮಾಜವಾದಿ ಯುವಕ ಸಂಘವನ್ನು ಸ್ಥಾಪಿಸಿ ಹೋರಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಕರ್ನಾಟಕ ಸಂಘದ ಕಾರ್ಯಸಮಿತಿಯ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಡಾ| ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ದುಡಿದಿದ್ದರು. ನಿರಂತರ ಕಲಿಕೆ ಕಾರ್ಯಕ್ರಮದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಉತ್ತರ ಕನ್ನಡ ಜಿಲ್ಲಾ ಸಮಿತಿ ಸದಸ್ಯರೂ, ರಾಜ್ಯಮಟ್ಟದ ಉನ್ನತ ಆಯ್ಕೆ ಸಮಿತಿಯ ಸದಸ್ಯರೂ, ಹಲವು ಸಾರ್ವಜನಿಕ ಸಂಘಟನೆಗಳ ಸ್ಥಾಪಕರೂ, ಸಕ್ರಿಯ ಸದಸ್ಯರೂ ಆಗಿದ್ದರು.
ವಿಷ್ಣು ನಾಯ್ಕರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ವಿಷ್ಣು ನಾಯ್ಕರು ತಮ್ಮ ಮನೆಯ ಮಹಡಿಯಲ್ಲಿ ಸಾಹಿತ್ಯ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ನಾಡಿನ ಹೆಸರಾಂತ ಸಾಹಿತಿಗಳೊಂದಿಗೆ ನಡೆಸಿದ ಪತ್ರ ವ್ಯವಹಾರ, ಉಭಯ ಕುಶಲೋಪರಿ ವಿನಿಮಯ, ಹೆಸರಾಂತ ಸಾಹಿತಿಗಳ ಕೈಬರಹ, ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿಗಳು ಹಾಗೂ ದೇಶಿ ವಸ್ತುಗಳ ಸಂಗ್ರಹವನ್ನು ಇರಿಸಿದ್ದರು.
ವಿಷ್ಣು ನಾಯ್ಕರು 2024ರ ಫೆಬ್ರುವರಿ 17ರಂದು ನಿಧನರಾದರು.
Respects to great teacher, writer, artiste, activist Vishnu Nayka
ಕಾಮೆಂಟ್‌ಗಳು