ಚಾತುರ್ಮಾಸ್ಯ
ಚಾತುರ್ಮಾಸ್ಯ
ಚಾತುರ್ಮಾಸ್ಯ ಎಂಬುದು ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ. ಈ ವ್ರತನೇಮಗಳ ಪಾಲನೆಯಿಂದ ನಿದ್ರಾಸಕ್ತನಾದ ವಿಷ್ಣು ಸಂತೃಪ್ತನಾಗುತ್ತಾನೆ ಎಂದು ಒಂದು ನಂಬಿಕೆ.
ಆಷಾಢ ಶುಕ್ಲ ಏಕಾದಶೀ, ದ್ವಾದಶೀ ಹುಣ್ಣಿಮೆ, ಕರ್ಕಾಟಕ ಸಂಕ್ರಮಣ ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಪ್ರಾರಂಭದ ಕಾಲ ಭಿನ್ನವಾಗಿದ್ದರೂ ವ್ರತಸಮಾಪ್ತಿಯ ಕಾಲ ಮಾತ್ರ ಕಾರ್ತಿಕ ಶುಕ್ಲ ದ್ವಾದಶೀಯೇ. ಶೈವ-ವೈಷ್ಣವರಾದಿಯಾಗಿ ಎಲ್ಲರಿಗೂ ವ್ರತದ ವಿಧಿನಿಯಮಗಳು ಸಮಾನ. ಜೈನ ಮತ್ತು ಬೌದ್ಧರಲ್ಲೂ ಇದು ಆಚರಣೆಯಲ್ಲಿದೆ. ಈ ವ್ರತದಲ್ಲಿ ನಿತ್ಯ ಮತ್ತು ಕಾಮ್ಯ ಎಂದು ಎರಡು ವಿಧ.
ತರಕಾರಿ, ಮೊಸರು, ಹಾಲು, ದ್ವಿದಳಧಾನ್ಯ ಇವುಗಳಲ್ಲಿ ಕ್ರಮವಾಗಿ ಒಂದೊಂದನ್ನು ಒಂದೊಂದು ತಿಂಗಳಿನಲ್ಲಿ ಬಳಸದಿರುವುದು ನಿತ್ಯವ್ರತ. ಈ ವ್ರತ ಸಂಕಲ್ಪಕ್ಕೆ ಮೊದಲು ಭಗವಂತನನ್ನು ಪೂಜಿಸಿ 'ನಿನ್ನ ನಿದ್ರೆಯೇ ಜಗತ್ತಿಗೆ ನಿದ್ರೆ, ನಿನ್ನ ಎಚ್ಚರವೇ ಜಗತ್ತಿಗೆ ಎಚ್ಚರ. ಎಲೈ ಅಚ್ಯುತನೇ, ನೀನು ಪ್ರಸನ್ನನಾಗು ಎಂದು ಪ್ರಾರ್ಥಿಸುತ್ತಾರೆ. ಬೇರೆ ಬೇರೆ ಫಲಗಳನ್ನುದ್ದೇಶಿಸಿ ಬೆಲ್ಲ ಎಣ್ಣೆ ಮೊದಲಾದ ಪದಾರ್ಥಗಳನ್ನು ಬಳಸದಿರುವುದು, ಒಂದು ಹೊತ್ತು ಅಥವಾ ದಿನ ಬಿಟ್ಟು ದಿನ ಊಟಮಾಡುವುದು-ಇವೇ ಮೊದಲಾದ ನಿಯಮಗಳಿಂದಿರುವುದು ಕಾಮ್ಯವ್ರತ.
ಚಾತುರ್ಮಾಸ್ಯದ ಕಾಲ ಮಳೆಗಾಲ. ಆಗ ಅನೇಕ ಜಂತುಗಳು ಹಾದಿಬೀದಿಗಳಲ್ಲಿ ಹೆಚ್ಚಾಗಿ ಸಂಚರಿಸುವುದರಿಂದ ಅವು ಕಾಲಿಗೆ ಸಿಕ್ಕಿ ಸಾಯಬಾರದೆಂಬ ಉದ್ದೇಶದಿಂದಲೂ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾದ್ದರಿಂದಲೂ ಸಂನ್ಯಾಸಿಗಳು ಈ ಕಾಲದಲ್ಲಿ ಸಂಚಾರವನ್ನು ನಿಲ್ಲಿಸಿ ಒಂದೆಡೆ ತಂಗುತ್ತಾರೆ. ಹುಣ್ಣಿಮೆಯಂದು ಯತಿಗಳಾದವರು ಈ ನಾಲ್ಕು ತಿಂಗಳುಗಳಲ್ಲಿ ಒಂದೆಡೆಯಲ್ಲೆ ವಾಸಿಸುತ್ತೇವೆ ಎಂದು ಸಂಕಲ್ಪಮಾಡಿ ಶ್ರೀಕೃಷ್ಣ ವ್ಯಾಸ ಮತ್ತು ಭಾಷ್ಯಕಾರರನ್ನು ಪರಿವಾರದೊಡನೆ ಪೂಜಿಸಿ ಶಾಸ್ತ್ರಪುರಾಣೇತಿಹಾಸಾದಿ ಪ್ರವಚನಗಳನ್ನು ನಡೆಸುತ್ತ ಕಾಲ ಕಳೆಯುತ್ತಾರೆ.
Chaturmasya
ಕಾಮೆಂಟ್‌ಗಳು