ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೇಷನಾರಾಯಣ


 ಶೇಷನಾರಾಯಣ


ಶೇಷನಾರಾಯಣ ಪ್ರಸಿದ್ಧ ಕತೆಗಾರರು.

ಶೇಷನಾರಾಯಣ 1927ರ ಆಗಸ್ಟ್ 18ರಂದು ಜನಿಸಿದರು.  ಅವರ ಊರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯ ಎಂಬ ಗ್ರಾಮ. ತಂದೆ ಸುಬ್ರಹ್ಮಣ್ಯ. ತಾಯಿ ಕಾವೇರಿ.  ಕುಟುಂಬದ ಬಡತನದಿಂದಾಗಿ ಓದು ನಾಲ್ಕನೇ ತರಗತಿಗೆ ನಿಂತುಹೋಯಿತು. ಉದ್ಯೋಗ ಅರಸುತ್ತ ಊರೂರು ಅಲೆಯ ತೊಡಗಿದರು.

ಮೊದಲು ಲಾರಿ ಕಂಪೆನಿಯೊಂದರಲ್ಲಿ ಕೂಲಿ  ಕೆಲಸ ಮಾಡಿದರು. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ,  ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿ ಕೆಲಸ ಹೀಗೆ ಅನೇಕ ರೀತಿ ಕೆಲಸ ಮಾಡಿದರು. 

ಮುಂದೆ ಮೈಸೂರಿನ ಮುದ್ರಣಾಲಯವೊಂದರಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು ಮುದ್ರಿಸುವುದರವರೆಗೆ, ಬೈಂಡಿಂಗ್‌ವರೆಗೆ ಮುದ್ರಣ ತಂತಜ್ಞಾನದಲ್ಲಿ ಪರಿಣಿತರಾದರು. ಒಂದಷ್ಟು ಕಾಲ ಪತ್ರಕರ್ತರಾಗಿ ‘ಚಿತ್ರಗುಪ್ತ’ ಪತ್ರಿಕೆಯಲ್ಲಿ ದುಡಿದರು. 1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ.ಶ್ರೀ ಅಚ್ಚುಕೂಟ ಸೇರಿ ಅದರ ಮುಖ್ಯಸ್ಥರಾದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ಪ್ರಕಟನೆ ಯೋಜನೆಯಲ್ಲಿ ಭಾಗಿಯಾದರು. ಈ ಮಧ್ಯೆ ಎಪ್ಪತ್ತರ ದಶಕದಲ್ಲಿ ತಮ್ಮದೇ ಆದ ವಿಕಾಸ ಮುದ್ರಣಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಈ ಮುದ್ರಣಾಲಯ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಹೆಸರುವಾಸಿಯಾಯಿತು. ಪ್ರಖ್ಯಾತ ಲೇಖಕರ ಗ್ರಂಥಗಳನ್ನು ಮುದ್ರಿಸಿದರು. ಆದರೆ ಒಂದು ಮುಂಜಾನೆ ಹಠಾತ್ತನೆ ವಿಕಾಸ ಮುದ್ರಣಾಲಯ ಬಂದ್ ಆಯಿತು. ಶೇಷನಾರಾಯಣರು ಕಾಣದಾದರು. ಮದ್ರಾಸಿನಲ್ಲಿದ್ದಾರೆಂದು ಸ್ವಲ್ಪಕಾಲದ ನಂತರ ಬೆಂಗಳೂರಿನ ಗೆಳೆಯರಿಗೆ ಸುದ್ದಿ ಬಂತು. ಒಂದಷ್ಟುಕಾಲದ ಅಜ್ಞಾತ ವಾಸದ ನಂತರ ಶೇಷನಾರಾಯಣ ಬೆಂಗಳೂರಿಗೆ ಹಿಂದಿರುಗಿದರು.

ಬದುಕಿನ ಕಷ್ಟಕಾರ್ಪಣ್ಯಗಳ ನೋವುಂಡು ಅಲಿಪ್ತನಂತೆ ಇರುತ್ತಿದ್ದ ಶೇಷನಾರಾಯಣರ ಮಾಗಿದ ಜೀವನಾನುಭವವೇ ಅವರ ಸಾಹಿತ್ಯ ಕೃತಿಗಳ ಮೂಲಸ್ರೋತ. ಸುಮಾರು ಐವತ್ತು ಕೃತಿಗಳ ಕರ್ತೃವಾದ ಶೇಷನಾರಾಯಣರಿಗೆ ಕರತಲಾಮಲಕವಾಗಿ ಒಲಿದದ್ದು ಕಥಾಸಾಹಿತ್ಯ. ಅವರ ಮೊದಲ ಕಾದಂಬರಿ ‘ಮೂಲಾ ನಕ್ಷತ್ರ’ 1954ರಲ್ಲಿ ಮೈಸೂರಿನ ಕಾವ್ಯಾಲಯ ಪ್ರಕಾಶನದಿಂದ ಪ್ರಕಟವಾಯಿತು. ಮನುಷ್ಯನ ಸ್ವಾರ್ಥ, ಅಹಂಕಾರ, ದುರಾಸೆ, ಗ್ರಾಮೀಣ ಬಡತನ ಇವು ಶೇಷನಾರಾಯಣ ಕೃತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು. ಹದಿನೇಳಕ್ಕೂ ಹೆಚ್ಚುಕಾದಂಬರಿಗಳು ಮತ್ತು ಎಂಟು ಕಥಾ ಸಂಕಲನಗಳು ಶೇಷನಾರಾಯಣರ ಸಾಹಿತ್ಯ ಮಲ್ಲಾರದ ಪ್ರಮುಖ ಕೃತಿಗಳು. ‘ಅನೆಕೊಂಬು’ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು. ‘ವಿಭೀಷಣ’, 'ಅಹಲ್ಯೆ ಕಲ್ಲಾಗಲಿಲ್ಲ', 'ಅಯೋಧ್ಯೆಯಲ್ಲಿ ರಾಮನು ಇಲ್ಲ’ ಇವು ರಾಮಾಯಣ ಮಹಾ ಕಾವ್ಯ ಕುರಿತ ಶೇಷನಾರಾಯಣ ವಿಭಿನ್ನದೃಷ್ಟಿಕೋನದ ಕೃತಿಗಳು. 

ಶೇಷನಾರಾಯಣರ ಅನೇಕ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಸೀಳುನಾಯಿ, ಮೊಲ್ಲೆ ಮಲ್ಲಿಗೆ ಕುಮುದ, ಅಹಲ್ಯೆ ಕಲ್ಲಾಗಲಿಲ್ಲ, ಕೃಷ್ಣನ ಬಲಗಾಲು, ಶಕುನಿಮಾವ ಅವರ ಕಥಾ ಸಂಕಲನಗಳು.  ಮೂಲನಕ್ಷತ್ರ, ಕಪಿಲೆ, ಪದ್ಮರಂಗು, ನೊರೆ, ಎರಡು ಉಂಗುರ, ಬೆಳಗಾಯಿತು, ಸೌಮ್ಯ ಮುಂತಾದುವು ಅವರ ಕಾದಂಬರಿಗಳು. ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆಗಳು ಸಹಾ ಅವರ ಲೇಖನಿಯಿಂದ ಮೂಡಿಬಂದವು. 

ಕಾವೇರಿ ನದಿ ನೀರಿನ ವಿವಾದ ವಿಕೋಪ ಘಟ್ಟ ತಲುಪಿ ಬೆಂಗಳೂರು-ಮೈಸೂರು-ಮಂಡ್ಯಗಳು ಹೊತ್ತಿ ಉರಿಯುತ್ತಿದ್ದ ಸಮಯದಲ್ಲಿ ಶೇಷನಾರಾಯಣರು ಬರೆದ ಕೃತಿ ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು -ನಮ್ಮ ನದಿಗಳು ಮತ್ತು ಸಮಸ್ಯೆಗಳು’. ಕಾವೇರಿ ನದಿ ನೀರಿನ ವಿವಾದವನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಕಾನೂನು- ನ್ಯಾಯಶಾಸ್ತ್ರಗಳ ಆಯಾಮಗಳಲ್ಲಿ ಶೋಧಿಸುವ ಈ ಕೃತಿ ಶೇಷನಾರಾಯಣರ ಮಹತ್ವಪೂರ್ಣವಾದ ಕಥಾಸಾಹಿತ್ಯೇತರ ಕೃತಿ. ವೈಚಾರಿಕ ಕೃತಿಯಾದರೂ ಕಾದಂಬರಿಯಂತೆಯೇ ಓದಿಸಿಕೊಳ್ಳುವುದು ಇದರ ಇನ್ನೊಂದು ಹಿರಿಮೆ. ನದಿ ನೀರಿನ ವಿವಾದ ಕುರಿತ ಅವರ ಗಾಢ ಅಧ್ಯಯನಕ್ಕೆ ಇದೊಂದು ನಿದರ್ಶನ.

ಶೇಷನಾರಾಯಣ ಉತ್ತಮ ಭಾಷಾಂತರಕಾರರೂ ಆಗಿದ್ದರು. ತಮಿಳು ನೆಲದಲ್ಲಿ ಜನಿಸಿದ ಅವರು ತಮಿಳು ಭಾಷೆಯನ್ನು ಮಾತೃಭಾಷೆ ಕನ್ನಡದಂತೆಯೇ ಚೆನ್ನಾಗಿ ಕಲಿತಿದ್ದರು. ತಮಿಳಿನಲ್ಲಿ ಕೃತಿ ರಚಿಸುವಷ್ಟು ಸಾಮರ್ಥ್ಯವಿತ್ತು. ಅವರು ಕನ್ನಡದಿಂದ ತಮಿಳಿಗೆ ಹಾಗೂ ತಮಿಳಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅನೇಕ ಸಣ್ಣ ಕತೆಗಳನ್ನು,ಭೈರಪ್ಪನವರ ‘ದಾಟು’ ಕಾದಂಬರಿಯನ್ನು ತಮಿಳಿಗೆ ಭಾಷಾಂತರಿಸಿದ್ದಾರೆ. ತಮಿಳಿನ ಪ್ರಮುಖ ಸಾಹಿತಿಗಳಾದ ರಾಜಾಜಿ, ಕಲ್ಕಿ, ಅಖಿಲನ್, ಜಯಕಾಂತನ್, ಅಶೋಕಮಿತ್ರನ್, ಎಂ.ಪಿ. ಸೋಮಸುಂದರಂ ಮೊದಲಾದವರ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಶೇಷನಾರಾಯಣ ಅವರ 'ಬೀಸು' ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು.‍ ತಮಿಳುನಾಡು ಸರ್ಕಾರ 'ಕುರುಳ್ ಪೀಠಂ' ಗೌರವ ಅರ್ಪಿಸಿತ್ತು.  ಅವರು ಕನ್ನಡಕ್ಕೆ ಅನುವಾದಿಸಿದ ಅಶೋಕಮಿತ್ರನ್ ಅವರ 'ಹದಿನೆಂಟನೆ ಅಕ್ಷರೇಖೆ' ಕೃತಿಗೆ ಅತ್ಯತ್ತಮ ಭಾಷಾಂತರ ಪ್ರಶಸ್ತಿ ಸಂದಿತ್ತು.  ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.‍

ಶೇಷನಾರಾಯಣ ಅವರು 2019ರ ಆಗಸ್ಟ್ 7ರಂದು ಈ ಲೋಕವನ್ನಗಲಿದರು.

On the birth anniversary of great novelist Sheshanarayana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ