ಟಿ. ಎಲ್. ರಾಮಸ್ವಾಮಿ
ಟಿ.ಎಲ್. ರಾಮಸ್ವಾಮಿ
ಟಿ.ಎಲ್. ರಾಮಸ್ವಾಮಿ ಮಹಾನ್ ಛಾಯಾಗ್ರಾಹಕ. ಅವರು ಕನ್ನಡ ಸಾಂಸ್ಕೃತಿಕ ಲೋಕದ ಅನನ್ಯ ಕ್ಯಾಮರಾ ಕಣ್ಣಾಗಿದ್ದವರು . ಅವರ 90ನೇ ಜನ್ಮದಿನವಿದು. ಈ ಮಹಾನ್ ಛಾಯಾಗ್ರಾಹಕರ ದಿನವೇ ವಿಶ್ವಛಾಯಾಗ್ರಹಣ ದಿನವೂ ಆಗಿರುವುದು ಅವರ ಬದುಕಿನ ಸಾರ್ಥಕತೆಯ ವೈಶಿಷ್ಟ್ಯದ ಸೂಚಕವೆಂಬಂತಿದೆ.
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದ ಹಿರಿಯ ಛಾಯಾಗ್ರಾಹಕರು ಟಿ.ಎಲ್.ರಾಮಸ್ವಾಮಿ. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನು ತೋರಿ ದೇಶ ವಿದೇಶಗಳ ಪತ್ರಿಕೆಗಳಲ್ಲೂ ಗೌರವಾದರ ಪಡೆದಿದ್ದರು.
ರಾಮಸ್ವಾಮಿ ಅವರು 1931ರ ಆಗಸ್ಟ್ 19ರಂದು ಜನಿಸಿದರು. ತುಮಕೂರಿನ ತುರುವೆಕೆರೆ ಅವರ ಹುಟ್ಟೂರು. ತಂದೆ ಲಕ್ಷ್ಮೀನರಸಿಂಹಯ್ಯನವರು ಅರಣ್ಯಾಧಿಕಾರಿಗಳಾಗಿದ್ದರು. ರಾಮಸ್ವಾಮಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಸೊರಬ, ಸಾಗರದಲ್ಲಿ ಮುಗಿಸಿದರು. ಓದಿನಲ್ಲಿ ಸದಾ ರ್‍ಯಾಂಕ್ ವಿದ್ಯಾರ್ಥಿಯಾಗಿದ್ದರಿಂದ ಅವರು ಎಲ್ಲ ಶಿಕ್ಷಕರಿಗೆ ತುಂಬಾ ಅಚ್ಚುಮೆಚ್ಚಿನವರಾಗಿದ್ದರು.
ಎಸ‍್ಎಸ್ಎಲ್‍ಸಿ ನಂತರ 1947ರಲ್ಲಿ ರಾಮಸ್ವಾಮಿ ಇಂಟರ್ ಮೀಡಿಯೇಟ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದರು. ಆಗ ಎಚ್.ಬಿ.ಸಮಾಜ ರಸ್ತೆಯಲ್ಲಿ ತಮ್ಮ ಅತ್ತೆ ಮಗನ ಮನೆಯಲ್ಲಿ ಉಳಿದುಕೊಂಡು ಓದಿದರು. ವಿಶ್ವೇಶ್ವರಪುರದಲ್ಲಿರುವ ವಿಜಯಾ ಕಾಲೇಜಿನಲ್ಲಿ ಇಂಟರ್ಮೀಡಿಯೆಟ್ ಪೂರೈಸಿದರು. ಆಗ ಎಲ್ಲೇ ಹೊರಟರೂ ಸೈಕಲ್ ಅವರ ಜತೆಗಿರುತ್ತಿತ್ತು. ನಂತರದ ದಿನಗಳಲ್ಲಿ ಮೋಟಾರ್ ಬೈಕ್ ಅವರ ಸಾಥಿಯಾಯಿತು.
ರಾಮಸ್ವಾಮಿ ವಿಜಯಾ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಮಿನರ್ವ ಸರ್ಕಲ್‌ನಲ್ಲಿದ್ದ ‘ಜನವಾಣಿ’ ಪತ್ರಿಕೆಯ ಸಂಪರ್ಕಕ್ಕೆ ಬಂದರು. ಅಲ್ಲಿ ಛಾಯಾಗ್ರಾಹಣ ವಿಭಾಗದ ಮುಖ್ಯಸ್ಥರಾಗಿದ್ದ ವುಡನ್ ಷರೀಫ್ ಅವರ ಸ್ನೇಹವಾಯಿತು. ಷರೀಫ್ ಅನೇಕ ಕಾರ್ಯಕ್ರಮಗಳಿಗೆ ರಾಮಸ್ವಾಮಿಯನ್ನು ಕರೆದುಕೊಂಡು ಹೋಗುತ್ತಿದ್ದು ಚಿತ್ರ ತೆಗೆಯುವುದರ ಬಗ್ಗೆ ತಿಳಿಸಿಕೊಡುತ್ತಿದ್ದರು. ಕೊನೆಕೊನೆಗೆ ಕೆಲ ಕಾರ್ಯಕ್ರಮಗಳಿಗೆ ಇವರೊಬ್ಬರನ್ನೇ ಕಳುಹಿಸುತ್ತಿದ್ದರು. ಕೆನಡಿ ಬರುತ್ತಾರೆ ಎಂದು ಎಂಜಿನಿಯರಿಂಗ್ ಪರೀಕ್ಷೆ ಬರೆಯದೆ ದೆಹಲಿಗೆ ಪೋಟೋ ತೆಗೆಯಲು ಓಡಿಹೋದ ಪುಣ್ಯಾತ್ಮನೀತ (ಆದರೆ ಕೆನಡಿ ಬರದೆ ಹೆಂಡತಿಯನ್ನು ಪ್ರತಿನಿಧಿಯಾಗಿ ಕಳುಹಿಸಿದ್ದು ನಿರಾಸೆ ಆಯ್ತು ಅನ್ನುತ್ತಿದ್ದರು). ಛಾಯಾಗ್ರಹಣ ಅಂದರೆ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನೇ ತೊರೆದ ಪ್ರೀತಿ ಇವರದ್ದಾಗಿತ್ತು.
ಮುಂದೆ ರಾಮಸ್ವಾಮಿ 'ಡೆಕ್ಕನ್ ಹೆರಾಲ್ಡ್’ ಹಾಗೂ ‘ಪ್ರಜಾವಾಣಿ’ ಆರಂಭಗೊಂಡಾಗ ಅಲ್ಲಿ ಛಾಯಾಗ್ರಾಹಕರಾಗಿ ಸೇರಿಕೊಂಡರು. ಬೆಂಗಳೂರಿನಲ್ಲಿದ್ದ ವಿವಿಧ ಕಾನ್ಸುಲೇಟ್‌ಗಳು ಮತ್ತು ಬೇರೆ ಬೇರೆ ಪತ್ರಿಕೆಗಳಲ್ಲೂ ಕೆಲಸ ಮಾಡುತ್ತಿದ್ದರು.
ಅ.ನ. ಸುಬ್ಬರಾಯರು ನಡೆಸುತ್ತಿದ್ದ ಕಲಾಮಂದಿರದಲ್ಲಿ ರಾಮಸ್ವಾಮಿ ಚಿತ್ರಕಲೆ ತರಬೇತಿಯನ್ನೂ ಪಡೆದರು. ವಯೊಲಿನ್ ಸಹಾ ನುಡಿಸುತ್ತಿದ್ದರು. ಸಂಗೀತ ಹಾಗೂ ಕಲೆಯ ಬಗ್ಗೆ ಅಪಾರ ಪ್ರೀತಿ ಇದ್ದ ಡಿವಿಜಿ ಅವರಿಗೆ ವಯೊಲಿನ್ ನುಡಿಸುವುದನ್ನು ಕಲಿತಿದ್ದ ರಾಮಸ್ವಾಮಿ ಹತ್ತಿರವಾಗಿದ್ದರು.
ರಾಮಸ್ವಾಮಿ ಅವರಿಗೆ ಸರ್ ಸಿ ವಿ ರಾಮನ್ ಅವರೊಂದಿಗೂ ಒಡನಾಟವಿತ್ತು. ಛಾಯಾಚಿತ್ರಗಳ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದ್ದ ರಾಮನ್ ರಾಮಸ್ವಾಮಿ ಅವರಿಗೆ ತಮ್ಮ ಪ್ರಯೋಗಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಿದ್ದರು. ವಿಶ್ವಪ್ರಸಿದ್ಧ ವಿಜ್ಞಾನಿಗಳು ರಾಮನ್ ಕಾಣಲು ಬಂದಾಗಲೆಲ್ಲ ರಾಮಸ್ವಾಮಿ ಅವರಿಗೂ ತಪ್ಪದೆ ಕರೆ ಹೋಗುತ್ತಿತ್ತು.
ರಾಮಸ್ವಾಮಿ ಅವರು ಬೆಂಗಳೂರಿನ ಹಲವಾರು ವಿಶಿಷ್ಟತೆಗಳಿಗೆ ಸಾಕ್ಷಿ ಆಗಿದ್ದರು. ಜಯನಗರದ ಅಶೋಕ ಪಿಲ್ಲರ್ ಉದ್ಘಾಟನೆಯ ಚಿತ್ರ ಕ್ಲಿಕ್ಕಿಸಿದ್ದರು. ಟೌನ್ ಹಾಲ್ ಒಂದು ಬಿಟ್ಟು ಅಲ್ಲಿನ ಸುತ್ತಮುತ್ತಲಿನ ಬೇರೆಲ್ಲಾ ಕಟ್ಟಡಗಳ ಉದ್ಘಾಟನೆ ಸಂದರ್ಭದಲ್ಲಿ ಅವರು ಹಾಜರಿದ್ದರು. ವಿಧಾನ ಸೌಧಕ್ಕೆ 1951ರಲ್ಲಿ ನೆಹರು ಅವರು ಅಡಿಗಲ್ಲು ಹಾಕಿದ್ದಕ್ಕೂ ಸಾಕ್ಷಿಯಾಗಿದ್ದರು. ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಎಲ್ಲ ಮುಖ್ಯಮಂತ್ರಿಗಳವರೆಗಿನ ಪ್ರಮಾಣ ವಚನ ಕಾರ್ಯಕ್ರಮದ ಛಾಯಾಚಿತ್ರ ತೆಗೆದಿದ್ದರು. ಶಾಸಕಾಂಗದ ಸದಸ್ಯರಲ್ಲದಿದ್ದರೂ ಅಲ್ಲಿ ನಡೆದ 60 ಶಾಸಕಾಂಗ ಸಭೆಯನ್ನು ನೋಡಿದ ಕೀರ್ತಿ ಇವರದ್ದಾಗಿತ್ತು. ಸಾರ್ಕ್, ಯುನಿಸೆಫ್ ಸಭೆಗಳಲ್ಲಿಯೂ ಹಾಜರಿದ್ದರು.
ರಾಮಸ್ವಾಮಿ ಅವರು 1950ರಿಂದ 1985ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ನಂತರ ಮುಕ್ತಪತ್ರಿಕಾ ಛಾಯಾಚಿತ್ರ ವರದಿಗಾರರಾದರು. ಅವರು ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದ್ದರು. ರಾಮಸ್ವಾಮಿ ಅವರು ಜಪಾನ್‌ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು. ಜಪಾನ್‌ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದರು. ಫ್ಲೀಟ್ ಸ್ಟ್ರೀಟ್‌ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಇವರದು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸುತ್ತಿತ್ತು. ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಸಹಾ ಪಡೆದಿದ್ದರು.
ರಾಮಸ್ವಾಮಿ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದ್ದವು. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿದ್ದವು. ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿತ್ತು.
ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ರಾಮಸ್ವಾಮಿ ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಅವರು ತಮ್ಮ ಜೀವಿತಪೂರ್ತಿ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದರು.
ರೀಲ್ ಕ್ಯಾಮೆರಾ ಕಾಲದಿಂದ ಇಂದಿನ ರಿಯಲ್ ಕ್ಯಾಮರಾಗಳವರೆಗೆ ಸಾಂಗತ್ಯ ಬೆಳೆಸಿದ್ದ ರಾಮಸ್ವಾಮಿ ತಮ್ಮನ್ನು 'ನೆಗೆಟಿವ್ ಮಿಲಿಯನೇರ್' ಎಂದು ಕರೆದುಕೊಳ್ಳುತ್ತಿದ್ದರು. 'ಏನು ಕೇಳಿದರೂ ನೆಗೆಟೀವಲ್ಲಿ ಉತ್ತರಿಸುವಾತ' ಎಂದು ವೈಎನ್ಕೆ ಹೆಸರಿಸಿದ್ದರು.
ನಾವು ಎಚ್ಎಮ್‍ಟಿ ಕನ್ನಡ ಸಂಪದದ ಮೂಲಕ ನೀನಾಸಂ ಸಾಹಿತ್ಯ ಶಿಬಿರ ಏರ್ಪಡಿಸಿದ ಸಂದರ್ಭದಲ್ಲಿ ನಮ್ಮೊಡನಿದ್ದು ಅನೇಕ ಚಿತ್ರಗಳನ್ನು ತೆಗೆದರು. ಆತ್ಮೀಯವಾಗಿ ಹರಟುವಾಗ ನೆಹರೂ ಎಚ್ಎಮ್‍ಟಿ ಪ್ರಾರಂಭೋತ್ಸವಕ್ಕೆ ಬಂದಾಗ ಮತ್ತು ಮೊರಾರ್ಜಿ ದೇಸಾಯಿ 25 ನೇ ವರ್ಷದ ಕಾರ್ಯಕ್ರಮಕ್ಕೆ ಬಂದಾಗ ಫೋಟೋ ತೆಗೆದದ್ದನ್ನು ಆಪ್ತವಾಗಿ ಹೇಳುತ್ತಿದ್ದರು.
ಟಿ. ಎಲ್. ರಾಮಸ್ವಾಮಿ 2020ರ ಏಪ್ರಿಲ್ 3ರಂದು ಈ ಲೋಕವನ್ನಗಲಿದರು. ಅವರು ಕಟ್ಟಿಕೊಟ್ಟ ಬೆಂಗಳೂರಿನ ಭವ್ಯತೆಗಳೆಲ್ಲ ಇಂದು ನೆನಪು ಮಾತ್ರಾ! ಅಂತೆಯೇ ಟಿ. ಎಲ್. ರಾಮಸ್ವಾಮಿ ಅವರು ಸಹಾ.
On the 90th birth anniversary of great photographer T. L. Ramaswamy
ಕಾಮೆಂಟ್‌ಗಳು