ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈ. ಕೆ. ಶ್ರೀಕಂಠಯ್ಯ


 ವೈ. ಕೆ. ಶ್ರೀಕಂಠಯ್ಯ


ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರರಾಗಿ ಮತ್ತು ಚಿತ್ರಕಲಾವಿದರಾಗಿ ಅಪಾರ ಸಾಧನೆ ಮಾಡಿದವರು. 

ವೈ. ಕೆ. ಶ್ರೀಕಂಠಯ್ಯನವರು ಕಡೂರು ಬಳಿಯ ಗ್ರಾಮವೊಂದರಲ್ಲಿ 1921ರ ಆಗಸ್ಟ್ 2ರಂದು ಜನಿಸಿದರು. ತಂದೆ ಕೃಷ್ಣಸ್ವಾಮಯ್ಯ. ತಾಯಿ ಸೀತಮ್ಮ.  ಇವರ ಬಹುತೇಕ ಬದುಕು ಶಿವಮೊಗ್ಗದಲ್ಲಿ ನಡೆಯಿತು.

ಶ್ರೀಕಂಠಯ್ಯನವರಿಗೆ ಚಿಕ್ಕಂದಿನಿಂದಲೇ ಸಂಗೀತ ಮತ್ತು ಲಲಿತಕಲೆಗಳಲ್ಲಿ ಅಭಿರುಚಿ ಮೂಡಿತು. ಈ ಆಸಕ್ತಿ ಅವರನ್ನು ವೃತ್ತಿಯಿಂದ ಚಿತ್ರಕಲಾಕಾರರನ್ನಾಗಿಯೂ, ಪ್ರವೃತ್ತಿಯಿಂದ ಸಂಗೀತಜ್ಞರನ್ನಾಗಿಯೂ ರೂಪಿಸಿತು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಅವರದು ಭಕ್ತಿಪರವಶತೆ ತುಂಬಿದ ಏಕಮಾತ್ರ ಉತ್ತರ "ದೈವಕೃಪೆ" ಎಂಬುದಾಗಿತ್ತು.  ಅವರ ರಚನೆಗಳಲ್ಲಿ ಆ ಕೃಪೆ ಶೋಭಿಸಿದೆ ಎಂಬುದು ವಿದ್ವಜ್ಜನರ ಅಭಿಮತ.

ವೈ. ಕೆ. ಶ್ರೀಕಂಠಯ್ಯನವರು ಸುಮಾರು ನಾಲ್ಕೈದು ದಶಕಗಳ ಕಾಲದಲ್ಲಿ ತಾವು ಕೇಳಿದ ಅಸಂಖ್ಯಾತ ಕಚೇರಿಗಳಿಂದ ಪ್ರಭಾವಿತರಾದುದು ಮಾತ್ರವಲ್ಲದೆ, ಹಿರಿಯ ವಿದ್ವಾಂಸರ ಸ್ನೇಹ,  ಒಡನಾಟ ಮತ್ತು ಮಾರ್ಗದರ್ಶನಗಳನ್ನೂ ಗಳಿಸಿ,  ಶಾಸ್ತ್ರೀಯ ಚೌಕಟ್ಟಿನಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಅವರ ಚಿತ್ರಕಲೆ ಮತ್ತು ಸಂಗೀತಾಭಿರುಚಿಗಳೆರಡೂ ಒಂದಕ್ಕೊಂದು ಪೂರಕವೆನಿಸುವಷ್ಟು ಜೊತೆ ಜೊತೆಯಾಗಿತ್ತು. ಶ್ರೀಕಂಠಯ್ಯನವರು ತಾವು ಭಾಗವಹಿಸುತ್ತಿದ್ದ ಪ್ರಸಿದ್ಧ ಸಂಗೀತಗಾರರ ಕಚೇರಿಗಳಲ್ಲಿನ ಹಾಡುಗಾರರು ಮತ್ತು ವಾದ್ಯಗಾರರ ಹಾವಭಾವಗಳನ್ನು ಕಚೇರಿಯ ಸಮಯದಲ್ಲೇ ಬಿಡಿಸಿ ಆ ಕಲಾವಿದರ ಹಸ್ತಾಕ್ಷರಗಳನ್ನು,  ಅದರ ಮೇಲೆ ಪಡೆಯುತ್ತಿದ್ದುದು ವಿಶಿಷ್ಟವಾಗಿತ್ತು.  ಆಧ್ಯಾತ್ಮ ಮತ್ತು ವಿವಿಧ ಕಲೆಗಳಲ್ಲಿ ಅಪಾರ ಸಂವೇದನೆ ಹೊಂದಿದ್ದ ಶ್ರೀಕಂಠಯ್ಯನವರು ಅನೇಕ ಸಾಧು ಸಂತರು ಮತ್ತು ಕಲಾತಪಸ್ವಿಗಳ ಚಿತ್ರಗಳನ್ನು ಭಾವಪೂರ್ಣವಾಗಿ ತಮ್ಮ ವರ್ಣಕಲಾಕುಂಚದಿಂದ ಹೊರಹೊಮ್ಮಿಸಿದ್ದರು.  

ಶೃಂಗೇರಿ ಜಗದ್ಗುರುಗಳ ಹಾಗೂ ಹಲವಾರು ಹಿರಿಯ ವಿದ್ವಾಂಸರ ಆಶೀರ್ವಾದ ಮತ್ತು ಸೌಹಾರ್ದಗಳಿಂದ ಇವರ ರಚನೆಗಳು ಜನಪ್ರಿಯಗೊಂಡವು.  ಮಂಗಳಂಪಲ್ಲಿ ಬಾಲಮುರಳಿಕೃಷ್ಣ ಅವರು ವೈ. ಕೆ. ಶ್ರೀಕಂಠಯ್ಯನವರ ಏಳು ರಚನೆಗಳನ್ನು ‘ಶೃಂಗೇರಿ ಶಾರದೆ’ ಎಂಬ ಶೀರ್ಷಿಕೆಯ ಧ್ವನಿ ಸುರುಳಿಯಲ್ಲಿ ಹಾಡಿ ಪ್ರಸಿದ್ಧ ಪಡಿಸಿದ್ದಾರೆ. ಇವರ ರಚನೆಗಳು ಲಾಲ್ಗುಡಿ ಜಯರಾಮನ್ ಅವರ ಪ್ರಸ್ತುತಿಗಳಲ್ಲೂ ಶೋಭಿಸಿವೆ.  ಇದಲ್ಲದೆ ಇವರ ಭಕ್ತಿ ವರ್ಣನೆಗಳು ತುಂಬಿದ ಸಕಲ ದೇವಾದಿದೇವತೆಗಳ ಕುರಿತಾದ ನೂರಕ್ಕೂ ಹೆಚ್ಚು ಕೃತಿಗಳು ನಾಡಿನ ಅನೇಕ ಪ್ರಸಿದ್ಧ ಸಂಗೀತ ವಿದ್ವಾಂಸರುಗಳ ಪ್ರಸ್ತುತಿಗಳಲ್ಲಿ ಶೋಭಿಸುತ್ತಾ ಬಂದಿವೆ.

ವೈ. ಕೆ. ಶ್ರೀಕಂಠಯ್ಯನವರು ಮಹಾನ್  ವಿದ್ವಾಂಸರುಗಳಿಂದ ಸಂಗೀತ ಮತ್ತು ಸಾಹಿತ್ಯದ ಪರಿಶೋಧನೆ ಮಾಡಿಸಿ ತಾವೇ ರಾಗ ತಾಳಗಳನ್ನೂ ಅಳವಡಿಸಿದ್ದರು. 

ಶ್ರೀಧರಸ್ವಾಮಿಗಳ ಪರಮಭಕ್ತರಾಗಿದ್ದ ಶ್ರೀಕಂಠಯ್ಯನವರು ತಮ್ಮ ಬಹುತೇಕ ರಚನೆಗಳಿಗೆ ಶ್ರೀಧರದಾಸ ಎಂಬ ಅಂಕಿತ ಬಳಸುತ್ತಿದ್ದರು.

ವೃತ್ತಿಪರ ಚಿತ್ರಕಲಾವಿದರಾಗಿಯೂ ವೈ. ಕೆ. ಶ್ರೀಕಂಠಯ್ಯನವರದು ಮಹಾನ್ ಸಾಧನೆ. ಅವರ ಸುಪುತ್ರರಾದ ವೈ. ಎಸ್. ನಂಜುಂಡಸ್ವಾಮಿ ಅವರು ಇಂದು ನಮ್ಮ ನಡುವಿನ ಪ್ರಸಿದ್ಧ ಚಿತ್ರಕಾರರಾಗಿದ್ದಾರೆ.

ವೈ. ಕೆ. ಶ್ರೀಕಂಠಯ್ಯನವರ ಪ್ರತಿಭೆಗಾಗಿ ಅನೇಕ ಸಂಘ ಸಂಸ್ಥೆಗಳ ಸನ್ಮಾನಗಳು ಸಂದವು. ಹಾಗೆಯೇ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯೂ ಸಹ 1994-95ರ ಸಾಲಿನಲ್ಲಿ ಇವರಿಗೆ ‘ಕರ್ನಾಟಕ ಕಲಾ ತಿಲಕ’ ಬಿರುದನ್ನಿತ್ತು ಗೌರವಿಸಿತು.

ಮಹಾನ್ ಕಲಾವಿದರೂ, ವಾಗ್ಗೇಯಕಾರರೂ ಆದ ವೈ. ಕೆ. ಶ್ರೀಕಂಠಯ್ಯನವರು 2002ರ ಡಿಸೆಂಬರ್ 18ರ ದತ್ತಜಯಂತಿಯ ದಿನದಂದು  ತಮ್ಮ ದಿನನಿತ್ಯದ ಪೂಜಾವಿಧಿಗಳನ್ನು ಮುಗಿಸಿ ಈ ಲೋಕದ ಬಾಳ್ವೆಯನ್ನು ಮುಗಿಸಿದರು. ಅವರು ಉಳಿಸಿ ಹೋದ ಕೊಡುಗೆಗಳು ಅವರನ್ನು ಚಿರಸ್ಮರಣೀಯರನ್ನಾಗಿಸಿವೆ.

On the birth centenary of great music scholar and artiste Y. K. Srikantaiah 

ಕಾಮೆಂಟ್‌ಗಳು

  1. ವೈ ಕೆ ಶ್ರೀಕಂಠಯ್ಯನವರ ರಚನೆ ಮತ್ತು ಶ್ರೀ ಬಾಲಮುರಳಿಕೃಷ್ಣರ ಕಂಠದಲ್ಲಿ ಮೂಡಿಬಂದ 'ಶೃಂಗೇರಿ ಶಾರದೆ' ಧ್ವನಿಸುರುಳಿಯನ್ನು ಇಲ್ಲಿ ಆಲಿಸಬಹುದು: https://youtu.be/O-AZDYHLF8c

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ