ಅನನ್ಯ ರಾಘವೇಂದ್ರ
ಅನನ್ಯ ರಾಘವೇಂದ್ರ
ಭೂ-ರಸಾಯನಶಾಸ್ತ್ರ ತಜ್ಞರಾದ ಡಾ. ಆರ್.ವಿ. ರಾಘವೇಂದ್ರ ಅವರು ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಅನನ್ಯ ಕೊಡುಗೆಯಾದ 'ಅನನ್ಯ' ಸಂಸ್ಥೆಯ ದೆಸೆಯಿಂದಾಗಿ 'ಅನನ್ಯ ರಾಘವೇಂದ್ರ' ಎಂದು ಖ್ಯಾತರು.
ರಾಘವೇಂದ್ರ ಅವರು 1952 ರಲ್ಲಿ ಚಿತ್ರದುರ್ಗದಲ್ಲಿ ಆರ್.ಎನ್. ವಿಪ್ರಕಲ್ಲಾಚಾರ್ ಮತ್ತು ಸುಶೀಲಾ ಬಾಯಿ ದಂಪತಿಗೆ ಜನಿಸಿದರು. 1973 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ರಾಘವೇಂದ್ರ ಅವರು ಬೆಂಗಳೂರಿನ ಐಐಎಸ್ಸಿಯಿಂದ ಭೂ-ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು. ಅವರು 1980 ರಲ್ಲಿ ವಿವಿಧ ಕೈಗಾರಿಕಾ ಸಾಮಗ್ರಿಗಳಿಗೆ ಕೈಗಾರಿಕಾ ಪರೀಕ್ಷಾ ಕೇಂದ್ರವಾದ 'ಜಿಯಲಾಜಿಕಲ್ ಅಂಡ್ ಮೆಟಲರ್ಜಿಕಲ್ ಲ್ಯಾಬೊರೇಟರಿಸ್ (ಜಿಎಮ್‍ಎಲ್) ಎಂಬ ಸಂಸ್ಥೆ ಪ್ರಾರಂಭಿಸಿದರು.
ರಾಘವೇಂದ್ರ ಅವರ ಸಂಗೀತ ಪ್ರೀತಿ ಅಪಾರವಾದದ್ದು. ಅವರು ಸಂಗೀತದ ಹಿನ್ನೆಲೆಯಿಂದ ಬಂದವರಲ್ಲದಿದ್ದರೂ, ಮನೆಯಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದ
ತಮ್ಮ ತಾಯಿಯವರಿಂದಾಗಿ ಪ್ರಭಾವ ಪಡೆದರು. ರಾಘವೇಂದ್ರ ಅವರು ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ಸಂದರ್ಭದಲ್ಲಿ, ಅಲ್ಲಿನ ಎಲ್ಲ ಸಂಗೀತ ಕಚೇರಿಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಬೆಂಗಳೂರಿಗೆ ಬಂದ ನಂತರ ಸಂಗೀತ ಮತ್ತು ನೃತ್ಯದ ಎಲ್ಲಾ ಪ್ರಕಾರಗಳ ಬಗ್ಗೆ ಇವರ ಹಂಬಲ ಇನ್ನೂ ಹೆಚ್ಚಾಯಿತು. ಹೀಗಾಗಿ ಅಂದಿನ ಪ್ರತಿಯೊಂದು ಸಂಭಾವ್ಯ ಸಂಗೀತ ಸಭೆಗಳಿಗೂ ಅವರು ಸದಸ್ಯರಾಗುತ್ತ ಬಂದರು.
ಯಶಸ್ವಿ ಉದ್ಯಮಿಯಾದ ರಾಘವೇಂದ್ರ ಅವರು 1995ರಲ್ಲಿ ತಮ್ಮ ಸ್ವಂತ ಉದ್ದಿಮೆಯಲ್ಲಿನ ಗಳಿಕೆಯನ್ನು ಬಳಸಿ, ಹಲವು ಆಪ್ತ ಹಿತೈಷಿಗಳೊಂದಿಗೆ 'ಅನನ್ಯ' ಎಂಬ ಲಾಭರಹಿತ ಸಂಸ್ಥೆಯನ್ನು ಆರಂಭಿಸಿದರು. ಪ್ರದರ್ಶನ ಮತ್ತು ದೃಶ್ಯ ಕಲೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಈ 'ಅನನ್ಯ' ಸಂಸ್ಥೆ ಕಳೆದ 30 ವರ್ಷಗಳಲ್ಲಿ ಕಲೆ ಮತ್ತು ಕಲಾವಿದರನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುವ ಸಮಗ್ರ ಸಂಸ್ಥೆಯಾಗಿ ವಿಕಸನಗೊಂಡಿದೆ. ಅನನ್ಯ ಸಂಸ್ಥೆ ತನ್ನ ಈ ಸುದೀರ್ಘ ಪಯಣದಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ಬಹುಸಂಖ್ಯೆಯಲ್ಲಿ ಯುವ ಮತ್ತು ಹಿರಿಯ ಕಲಾವಿದರನ್ನು ಪ್ರೋತ್ಸಾಹಿಸಿ ಬೆಂಬಲಿಸುತ್ತಾ ಸಾಗಿದೆ. ಅನನ್ಯ ಸಂಸ್ಥೆ ಹಲವಾರು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಿ ನಡೆಸುತ್ತಿದೆ, ಸೃಜನಶೀಲತೆಯನ್ನು ಬೆಳೆಸುತ್ತಿದೆ ಮತ್ತು ಕಲಾವಿದರು ಮತ್ತು ಕಲಾಸಕ್ತರನ್ನು ಹೆಚ್ಚು ಹೆಚ್ಚು ಒಳಗೊಳ್ಳುವಂತೆ ಮಾಡಿದೆ. ಪ್ರತಿಭಾನ್ವಿತರಿಗೆ ಹಾಗೂ ಶ್ರೇಷ್ಠ ಸಾಧಕರಿಗೆ "ಅನನ್ಯ" ಪುರಸ್ಕಾರವನ್ನು ನೀಡುತ್ತಿದೆ. ಇದು ಬೆಂಬಲದ ಅಗತ್ಯವಿರುವ ಕಲಾವಿದರಿಗೆ ಆರೋಗ್ಯ ಸಹಾಯವಾಣಿಯನ್ನು ಒದಗಿಸಲು ಅನನ್ಯ ಆರೋಗ್ಯಾಧಾರ ಎಂಬ ವಿಶಿಷ್ಟ ಯೋಜನೆ ರೂಪಿಸಿತು. ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಅನನ್ಯ 400 ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡಿತು.
ರಾಘವೇಂದ್ರ ಅವರು ಹಲವು ವರ್ಷಗಳಿಂದ ಶಾಸ್ತ್ರೀಯ ಸಂಗೀತಗಾರರ ಪುಸ್ತಕಗಳು, ಆಡಿಯೊ-ಕ್ಲಿಪ್‌ಗಳು ಮತ್ತು ಫೋಟೋಗಳನ್ನು ಸಂಗ್ರಹಿಸಿದ್ದಾರೆ. ಸಾರ್ವಜನಿಕರಿಗೆ ಈ ಸಂಗ್ರಹವನ್ನು ಲಭ್ಯವಾಗುವಂತೆ ಮಾಡಲು ಅವರು ಮಲ್ಲೇಶ್ವರದ ವೆಸ್ಟ್ ಪಾರ್ಕ್ ರಸ್ತೆಯಲ್ಲಿ 'ಅನನ್ಯ ಸಂಗ್ರಹ' ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದರು. ಅನನ್ಯ ಸಂಗ್ರಹವು ಸಂಗೀತ ಮತ್ತು ನೃತ್ಯ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾದ ಅಪರೂಪದ ಮತ್ತು ಅಮೂಲ್ಯವಾದ ಪುಸ್ತಕಗಳು, ಆಡಿಯೋ, ವಿಡಿಯೊ, ಡಿಜಿಟಲ್ ಸಂಪನ್ಮೂಲಗಳ ಗ್ರಂಥಾಲಯವಾಗಿದೆ. ಅನನ್ಯ ತನ್ನ ಸಾಂಸ್ಕೃತಿಕ ಸದುದ್ದೇಶದೆಡೆಗಿನ ಅನೇಕ ಪ್ರಕಟಣೆಗಳನ್ನು ಹೊಂದಿದ್ದು, ನೃತ್ಯ ಸಿಡಿಗಳಿಂದ ಹಿಡಿದು ಕಲೆಗೆ ಸಂಬಂಧಿಸಿದ ನಿಯತಕಾಲಿಕೆಗಳವರೆಗೆ, ಬ್ಲಾಗ್‌ಗಳವರೆಗೆ, ಲಭ್ಯವಿರುವ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಂಡು ಕಲಾವಿದರು ಮತ್ತು ಅಭಿಮಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಸಮಯದಲ್ಲಿ ಅನನ್ಯ ಡಿಜಿಟಲ್ ಮಾಧ್ಯಮವನ್ನು ಅಳವಡಿಸಿಕೊಂಡು ಆನ್‌ಲೈನ್‌ನಲ್ಲಿ ಸಂಗೀತ ಕಚೇರಿಗಳನ್ನು ಪ್ರಸಾರ ಮಾಡುವುದನ್ನು ಆರಂಭಿಸಿತು. ಇದು ಕಲೆಗೆ ಸಂಬಂಧಿಸಿದ ಲೇಖನಗಳನ್ನು 'ಕಲಾಸಿಂಚನ' ಎಂಬ ಬ್ಲಾಗ್ ಮುಖೇನ ಪ್ರಕಟಿಸುತ್ತಿದೆ.
ರಾಘವೇಂದ್ರ ಅವರ ಸಾಹಿತ್ಯ ಮತ್ತು ಇತರ ಲಲಿತಕಲೆಗಳ ಜೊತೆಗಿನ ಒಡನಾಟ ಮತ್ತು ಅಭಿರುಚಿಯೂ ಅಪಾರ. ಅವರಿಗಿರುವ ಪ್ರಕೃತಿ ಪ್ರೀತಿ ಮತ್ತು ಛಾಯಾಗ್ರಹಣ ನೈಪುಣ್ಯತೆ ವಿಶೇಷವಾದದ್ದು.
ನಾಡಿನ ಅನನ್ಯ ಸಾಂಸ್ಕೃತಿಕ ಪೋಷಕರೂ ರಾಯಭಾರಿಗಳೂ ಆದ ಡಾ. ರಾಘವೇಂದ್ರ ಅವರಿಗೆ ಗೌರವಯುತ ಶುಭಹಾರೈಕೆಗಳು. ನಮಸ್ಕಾರ.
R V Raghavendra 🌷🙏🌷

ಕಾಮೆಂಟ್‌ಗಳು