ಭೀಷ್ಮ ಸಾಹ್ನಿ
ಭೀಷ್ಮ ಸಾಹ್ನಿ
ಭೀಷ್ಮ ಸಾಹ್ನಿ ಅವರ 'ತಮಸ್' ಕೃತಿಯನ್ನು ಅರಿಯದವರಿಲ್ಲ. ಭೀಷ್ಮ ಸಾಹ್ನಿ ಕಾದಂಬರಿ, ನಾಟಕ, ಸಣ್ಣ ಕಥೆ ಮುಂತಾದವುಗಳಲ್ಲಿ ಉತ್ತಮ ಬರಹಗಳನ್ನು ಮೂಡಿಸಿದವರು. ಅವರೊಬ್ಬ ಮಾನವತಾವಾದಿ, ಶಿಕ್ಷಣತಜ್ಞ, ಸಾಮಾಜಿಕ ಕಾರ್ಯಕರ್ತ ಹಾಗೂ ನಟ.
ಭೀಷ್ಮ ಸಾಹ್ನಿ 1915ರ ಅಗಸ್ಟ್ 8ರಂದು
ಈಗಿನ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಿಸಿದರು. ತಂದೆ ಹರಬನ್ಸ್ ಲಾಲ್ ಸಾಹ್ನಿ. ತಾಯಿ ಲಕ್ಷ್ಮೀದೇವಿ. ಸಾಹಿತ್ಯದಲ್ಲಿ ಚಿಕ್ಕಂದಿನಲ್ಲೇ ಆಸಕ್ತಿ ಮೂಡಿಸಿಕೊಂಡ ಭೀಷ್ಮ ಸಾಹ್ನಿ 1935ರಲ್ಲಿ ಲಾಹೋರಿನ ಸರ್ಕಾರಿ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿ ಪಡೆದರು. ನಂತರ ಇಂದ್ರನಾಥ್ ಮದಾನ್ ಅವರ ಮಾರ್ಗದರ್ಶನದಲ್ಲಿ ‘ಕಾದಂಬರಿಯಲ್ಲಿ ನಾಯಕ ಪಾತ್ರದ ಪರಿಕಲ್ಪನೆ’ ಎಂಬ ಪ್ರೌಢ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದರು.
ವಿದ್ಯಾರ್ಥಿಯಾಗಿದ್ದಾಗಲೇ ಭೀಷ್ಮ ಸಾಹ್ನಿ ಕಥೆಗಳ ರಚನೆಗೆ ತೊಡಗಿದರು. ಅವರ ಮೊದಲ ಕಥೆ ‘ಅಬಲಾ’ ಪ್ರಕಟಗೊಂಡದ್ದು ಕಾಲೇಜು ಪತ್ರಿಕೆ ‘ರಾವಿ’ಯಲ್ಲಿ. ಎರಡನೆಯ ಕಥೆ ‘ನೀಲೀ ಆಂಖೆ’ ಪ್ರಕಟವಾದದ್ದು ಅಮೃತ ರಾಯ್ ಸಂಪಾದಕತ್ವದ ‘ಹಂಸ’ ಪತ್ರಿಕೆಯಲ್ಲಿ. ಆ ವೇಳೆಗಾಗಲೇ ಮಹಾತ್ಮಾ ಗಾಂಧಿಯವರ ಚಳವಳಿ ಬಿರುಸು ಪಡೆದಿತ್ತು. ಭೀಷ್ಮ ಸಾಹ್ನಿ ಅದರತ್ತ ಆಕರ್ಷಿತರಾದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ಭೀಷ್ಮ ಸಾಹ್ನಿ 1942ರ ‘ಚಲೇ ಜಾವ್’ ಚಳವಳಿಯಲ್ಲಿ ಪಾಲ್ಗೊಂಡರು. 1944ರಲ್ಲಿ ಅವರ ವಿವಾಹ ಶೀಲಾ ಅವರೊಡನೆ ನೆರವೇರಿತು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಉಂಟಾದ ಕೋಮುಗಲಭೆಗಳ ಸಂದರ್ಭದಲ್ಲಿ ಅವರು ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡರು. ಆ ಅನುಭವದ ಮೂಸೆಯಲ್ಲಿ ಮೂಡಿದ್ದು ಅವರ ‘ತಮಸ್’ ಕಾದಂಬರಿ.
ಭೀಷ್ಮ ಸಾಹ್ನಿ ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಲು ಅವರ ಅಣ್ಣ ಬಲರಾಜ್ ಸಾಹ್ನಿಯವರೇ ಪ್ರೇರಣೆ. ಬಲರಾಜ್ ಸಾಹ್ನಿ ಮುಂಬಯಿಯಲ್ಲಿ 'ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್ನಿನ' ಪ್ರಮುಖ ಸದಸ್ಯರಾಗಿದ್ದರು. 1949-50ರ ಅವಧಿಯಲ್ಲಿ ಭೀಷ್ಮ ಸಾಹ್ನಿ ಈ ಸಂಸ್ಥೆಯಲ್ಲಿ ತರಬೇತಿ ಪಡೆದರು. ಈ ಸಂದರ್ಭದಲ್ಲಿ ಅವರು ಮಾರ್ಕ್ಸ್ ವಾದದ ಕಡೆಗೆ ಆಕರ್ಷಿತರಾದರು.
1950ರಲ್ಲಿ ಭೀಷ್ಮ ಸಾಹ್ನಿ ದೆಹಲಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರದರು. ಮಾತೃಭಾಷೆ ಪಂಜಾಬಿಯಾದರೂ ಅವರು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಸಂಸ್ಕೃತ ಮತ್ತು ರಶಿಯನ್ ಭಾಷೆಗಳಲ್ಲೂ ಅಷ್ಟೇ ಸುಲಲಿತವಾಗಿ ವ್ಯವಹರಿಸಬಲ್ಲವರಾಗಿದ್ದ ಅವರು ಹಿಂದಿಯಲ್ಲಿ ಸೃಜನಶೀಲ ಬರವಣಿಗೆಯನ್ನು ಕೈಗೊಂಡರು.
1953ರಲ್ಲಿ ಭೀಷ್ಮ ಸಾಹ್ನಿ ಅವರ ಮೊದಲ ಕಥಾಸಂಕಲನ 'ಭಾಗ್ಯರೇಖಾ' ಪ್ರಕಟವಾಯಿತು. ಅಲ್ಲಿಂದಾಚೆ ಅವರು ನಿರಂತರ ಕಥೆ, ಕಾದಂಬರಿ, ನಾಟಕ ಈ ಮೂರೂ ಪ್ರಕಾರಗಳಲ್ಲೂ ಕೃಷಿ ಮಾಡಿದರು.
ಭೀಷ್ಮ ಸಾಹ್ನಿ ಅವರ 'ತಮಸ್' 1947ರ ದೇಶ ವಿಭಜನೆಯ ನಂತರ ರಾವಲ್ಪಿಂಡಿಯಲ್ಲಿ ಕಂಡ ಘಟನಾವಳಿಗಳ ನೈಜ ಚಿತ್ರಣ. ಆ ಘಟನಾವಳಿಗಳಲ್ಲಿ ಸ್ವತಃ ಒಬ್ಬ ನಿರಾಶ್ರಿತನಾಗಿ ಲೇಖಕ ಎದುರಿಸಿದ ಯಥಾವತ್ ನಿರೂಪಣೆ ಇದರಲ್ಲಿದೆ. ಅದು 1974ರಲ್ಲಿ ಪ್ರಕಟಗೊಂಡು, ಭಾರತದ ಎಲ್ಲ ಭಾಷೆಗಳಿಗೂ ಅಷ್ಟೇ ಅಲ್ಲದೆ, ಇಂಗ್ಲಿಷ್, ಜರ್ಮನ್, ಜಪಾನಿ, ಇತ್ಯಾದಿ ವಿದೇಶಿ ಭಾಷೆಗಳಿಗೂ ಅನುವಾದಗೊಂಡಿತು. ಈ ಕೃತಿಗೆ 1975ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. ಅವರ ‘ಪಲಿ’ ಮತ್ತು ‘ಅಮೃತಸರ್ ಆಗಯಾ ಹೈ’ ಎಂಬ ಎರಡು ಸಣ್ಣ ಕಥೆಗಳ ವಸ್ತು ಕೂಡ ದೇಶ ವಿಭಜನೆಯ ನಂತರದ ಸಂಕಷ್ಟಗಳ ಕುರಿತಾಗಿದೆ.
ಭೀಷ್ಮ ಸಾಹ್ನಿ ತಮ್ಮ ಕೃತಿಗಳಲ್ಲಿ ಭಾರತದ ಸಾಮಾಜಿಕ, ರಾಜನೈತಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಸ್ಪಷ್ಟ ಚಿತ್ರವನ್ನು ನೀಡುತ್ತ ಬಂದರು. ತಾವು ಬದುಕಿದ ರೀತಿ, ಎದುರಿಸಬೇಕಾಗಿ ಬಂದ ಪರಿಸ್ಥಿತಿ ಮತ್ತು ಆ ಪರಿಸ್ಥಿತಿಯಲ್ಲಿನ ಸಂಘರ್ಷ ಇವೆಲ್ಲವೂ ಅವರ ಕೃತಿಗಳಲ್ಲಿ ನಿರೂಪಿತಗೊಂಡಿವೆ. ಅವರು ಬರೆದಂತೆ ಬದುಕಿದರು; ಬದುಕನ್ನೇ ಬರೆದರು.
1957ರಿಂದ 1963ರವರೆಗೆ ಭೀಷ್ಮ ಸಾಹ್ನಿ ಮಾಸ್ಕೋದ ‘ಫಾರಿನ್ ಲ್ಯಾಂಗ್ವೇಜ್ ಪಬ್ಲಿಷಿಂಗ್ ಹೌಸ್’ನಲ್ಲಿ ರಶಿಯನ್ ಕೃತಿಗಳನ್ನು ಹಿಂದಿಗೆ ಅನುವಾದಿಸುವ ಹೊಣೆ ನಿರ್ವಹಿಸಿದರು. ಜೊತೆ ಜೊತೆಗೆ, ಸ್ವಂತ ಕೃತಿ ರಚನೆಗಳನ್ನೂ ಮುಂದುವರೆಸಿದರು.
ಭೀಷ್ಮ ಸಾಹ್ನಿ ಅವರ ಬರಹಗಳಲ್ಲಿ ಕಥೆಗಳೇ ಹೆಚ್ಚು. ‘ಭಾಗ್ಯರೇಖಾ’, ‘ಪಟರಿಯಾ’, ‘ಪೆಹಲಾ ಪಾಠ್’, ‘ಭಟಕತೀ ರಾಖ್’, ‘ವಾಡ್‍ಚೂ’, ‘ಶೋಭಾಯಾತ್ರಾ’, ‘ನಿಶಾಚರ್’, ‘ಪಾಲಿ’, 'ಪ್ರತಿನಿಧಿ ಕಹಾನಿಯಾಂ’, ಮತ್ತು 'ಮೇರೀ ಪ್ರಿಯ ಕಹಾನಿಯಾಂ' ಅವರ ಕಥಾ ಸಂಗ್ರಹಗಳು.
'ಝರೋಖೇ’, ‘ಕಡಿಯಾಂ’, ‘ತಮಸ್’, ‘ಬಸಂತೀ’, ‘ಮಯ್ಯಾದಾಸ್ ಕಿ ಮಾಡೀ’, ‘ಕುಂತೋ’ ಹಾಗೂ ‘ನೀಲೂ ನೀಲಿಮಾ ನಿಲೋಫರ್’ ಇವು ಭೀಷ್ಮ ಸಾಹ್ನಿಯವರ ಕಾದಂಬರಿಗಳು.
'ಹಾನೂಶ್’, ‘ಕಬಿರಾ ಖಡಾ ಬಜಾರ್ ಮೇಂ’, ‘ಮಾಧವಿ’, ‘ಮುಆವಜೇ’ ಮತ್ತು ‘ಆಲಮ್ ಗೀರ್’ ಭೀಷ್ಮ ಸಾಹ್ನಿ ಅವರ ನಾಟಕಗಳು.
ಭೀಷ್ಮ ಸಾಹ್ನಿಯವರು ತಮ್ಮ ಕೊನೆಯ ದಿನಗಳಲ್ಲಿ ‘ಆಜ್ ಕೇ ಅತೀತ್’ ಹೆಸರಿನಲ್ಲಿ ಆತ್ಮಕಥೆ ಬರೆದರು. ತಮ್ಮ ಕೃತಿಗಳಲ್ಲಿ ಅವರು ಮಹಿಳೆಯ ವ್ಯಕ್ತಿತ್ವ ವಿಕಾಸ, ಮಹಿಳೆಯ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ, ಸ್ತ್ರೀ ಶಿಕ್ಷಣ ಮತ್ತು ಆಕೆಯ ಸಾಮಾಜಿಕ ಹೊಣೆಗಳಲ್ಲದೇ, ಆಕೆ ಯಾವ ಅಂಜಿಕೆಯೂ ಇಲ್ಲದೆ ಮರ್ಯಾದೆಯಿಂದ ಬಾಳುವಂಥ ಸ್ಥಿತಿಯ ನಿರ್ಮಾಣದ ಕುರಿತು ಪ್ರತಿಪಾದಿಸಿದ್ದಾರೆ.
ರಾಜಕೀಯ ಗುಂಪುಗಳಿಂದ ದೂರವಿದ್ದವರು ಭೀಷ್ಮ ಸಾಹ್ನಿ. ಆದರೆ ಭಾರತೀಯ ರಾಜನೀತಿಯಲ್ಲಿ ನಿರಂತರವಾಗಿ ವೃದ್ಧಿಸುತ್ತಿದ್ದ ಭ್ರಷ್ಟಾಚಾರ, ಪುಢಾರಿಗಳ ಉಪಟಳ, ಚುನಾವಣೆ ಸಂದರ್ಭಗಳ ಸೋಗುಗಳು, ರಾಜನೀತಿಯಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುವಿಕೆ, ಮೂಲಭೂತವಾದ, ಜಾತಿವಾದದ ದುರುಪಯೋಗ, ಕುಟುಂಬ ರಾಜಕಾರಣ, ನೈತಿಕ ಮೌಲ್ಯಗಳ ಪತನ, ತೀರ ಕೆಳಸ್ತರದಿಂದಲೇ ಭ್ರಷ್ಟಾಚಾರದ ಬೀಜ ಬಿತ್ತಿ ಅದನ್ನು ನೀರೆರೆದು ಪೋಷಿಸುವುದು, ಪೊಳ್ಳು ಆದರ್ಶಗಳನ್ನು ಬಿಂಬಿಸುವಿಕೆ, ಸುಳ್ಳು ಭರವಸೆಗಳನ್ನು ನೀಡುವಿಕೆ ಇವೇ ಮುಂತಾದವುಗಳ ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ನೀಡುತ್ತ ಬಂದರು.
ತಮ್ಮ 69ನೆಯ ವಯಸ್ಸಿನಲ್ಲಿ ಭೀಷ್ಮ ಸಾಹ್ನಿ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಹೊಸ ಅಲೆಯ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾರ ‘ಮೋಹನ್ ಜೋಶಿ ಹಾಜಿರ್ ಹೋ’ ಭೀಷ್ಮಜೀ ಅಭಿನಯದ ಮೊದಲ ಚಿತ್ರ (1984). ಕೊನೆಯ ಚಿತ್ರ ಅಪರ್ಣಾ ಸೆನ್ ನಿರ್ದೇಶನದ ಬಹುಪ್ರಶಂಸಿತ ‘ಮಿ. ಅಂಡ್ ಮಿಸೆಸ್ ಅಯ್ಯರ್’ (2002). ಈ ಚಿತ್ರದಲ್ಲಿ ಅವರದು ಒಂದು ಬಸ್ಸಿನಲ್ಲಿ ತನ್ನ ಪತ್ನಿಯೊಂದಿಗೆ ಪಯಣಿಸುತ್ತಿರುವಾಗ ಗಲಭೆಯಾಗಿ ಹಿಂದು ಮೂಲಭೂತವಾದಿಯೊಬ್ಬನ ಗುಂಡಿಗೆ ಬಲಿಯಾಗುವ ಸಹೃದಯಿ ಮುಸ್ಲಿಂ ವೃದ್ಧನ ಪಾತ್ರ. ಕುಮಾರ್ ಸಾಹ್ನಿಯ ‘ಕಸಬಾ’ (1969) ಸಿನಿಮಾದ ಚಿತ್ರಕಥಾ ಲೇಖಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಇದು ಆಂಟನ್ ಚೆಕೊವ್ ಬರೆದ ‘ಇನ್ ದಿ ಗಲಿ’ ಕಥೆಯನ್ನು ಆಧರಿಸಿದ್ದು.
ಭೀಷ್ಮ ಸಾಹ್ನಿ ಅವರ ಕೃತಿಗಳು 'ತಮಸ್’, ‘ಮೈಯಾದಾಸನ ವಾಡೆ’, ‘ಬಸಂತಿ’, ‘ಗವಾಕ್ಷಿ’, 'ಸಂತೆಯಲ್ಲಿ ನಿಂತ ಕಬೀರ', 'ಸಂತ್ಯಾಗ ನಿಂತಾನ ಕಬೀರ' ಮುಂತಾದ ಹೆಸರುಗಳಲ್ಲಿ ಕನ್ನಡದಲ್ಲೂ ಬಂದಿದೆ. ಇಲ್ಲಿನ ಕೆಲವು ನಾಟಕಗಳಾಗಿ ಮತ್ತು ಸಿನಿಮಾಗಳಾಗಿ ಸಹಾ ಮೂಡಿವೆ.
ಭೀಷ್ಮ ಸಾಹ್ನಿ ಅವರಿಗೆ ‘ಪದ್ಮಶ್ರೀ’, ‘ಪದ್ಮಭೂಷಣ’ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಭೀಷ್ಮ ಸಾಹ್ನಿ 2002ರ ಜುಲೈ 11ರಂದು ದೆಹಲಿಯಲ್ಲಿ ನಿಧನರಾದರು.
On the birth anniversary of great writer Bhisham Sahni
ಕಾಮೆಂಟ್‌ಗಳು