ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಡರೀಬಾಯಿ

 ಪಂಡರೀಬಾಯಿ 

ಮಹಾನ್ ಕಲಾವಿದೆ ಪಂಡರೀಬಾಯಿ  ಕನ್ನಡ, ತಮಿಳು, ತೆಲುಗು ಭಾಷೆಗಳ ಚಲನಚಿತ್ರ ಅಭಿಮಾನಿಗಳ ಹೃದಯದಲ್ಲಿ ತುಂಬಾ ತುಂಬಾ ಹತ್ತಿರವಾಗಿ ನಿಲ್ಲುವವರು. 

ತಾಯಿಗಿಂತ ಹೃದಯಕ್ಕೆ ಹತ್ತಿರರಾದವರು ಯಾರಿರಲು ಸಾಧ್ಯ!  ನಾವು ಸಿನಿಮಾರಂಗದಲ್ಲಿ ಎಷ್ಟೆಷ್ಟೋ ತಾರೆಯರನ್ನು ನೋಡಿರುತ್ತೇವೆ.  ಆದರೆ ಸಿನಿಮಾ ರಂಗದಲ್ಲಿನ ಶ್ರೇಷ್ಠ ತಾಯಿ ಮಾತ್ರ ಪಂಡರೀಬಾಯಿ.  ವಿವೇಕಾನಂದರ  ಮಾತು ಆಗಾಗ ನೆನಪಾಗುತ್ತದೆ:  "ವಿದೇಶಿ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ಪ್ರಮುಖ ವೆತ್ಯಾಸವೆಂದರೆ ಹೆಣ್ಣನ್ನು ನೋಡುವ ದೃಷ್ಟಿ.  ನಮ್ಮ ಭಾರತೀಯ ಹೃದಯಕ್ಕೆ ಹೆಣ್ಣಿನ ಬಗ್ಗೆ ಮೂಡುವ ಆದ್ಯ  ಪರಿಕಲ್ಪನೆ ಎಂದರೆ ತಾಯಿ".  ಪಂಡರೀಬಾಯಿ ಅವರು  ಅಭಿನಯಿಸಿರುವ  ನಾಯಕಿ ಪಾತ್ರಗಳನ್ನು ಸಹಾ ನಾವು ಸಾಕಷ್ಟು ನೋಡಿದ್ದೇವೆ.  ಆ ಪಾತ್ರಗಳಲ್ಲೂ ನಮಗೆ ಪಂಡರೀಬಾಯಿಯವರು ಮೂಡಿಸುವ ಭಾವನೆ ಎಂದರೆ ಅವರೊಬ್ಬ ಮಮತಾಮಯಿ ತಾಯಿ.  ಹೀಗಾಗಿ ಜನ ಅವರನ್ನು ಪಂಡರೀಬಾಯಿ ಎಂದು ಮಾತ್ರವಲ್ಲ ಪಂಡರೀತಾಯಿ ಎಂದೂ ಗುರುತಿಸುವುದುಂಟು.

ಪಂಡರೀಬಾಯಿ ಅವರು ನಿರ್ವಹಿಸಿದ ಅನೇಕ ಪಾತ್ರಗಳು  ನೆನಪಾಗುತ್ತವೆ.  ‘ಲೀಲಾಮಯ ಹೇ ದೇವ ನೀ ತೋರು ದಯಾ ಭಾವ ಗುರಿ ಕಾಣದಿದೆ ಜೀವ ನೆರವಾಗೆಲೊ ದೇವ’ ಎಂದು ಹಾಡುವ ಪಾತ್ರದಲ್ಲಿ ಅವರು ಬೇಡುವಾಗ ಆ ಕರೆಯಲ್ಲಿನ ಅವರ ಆರ್ತತೆ  ನಮ್ಮೊಳಗೆ ಅಡಗಿರುವ ಆಧ್ಯಾತ್ಮ ಭಾವಕ್ಕೆ ಶಾಂತಸ್ವರೂಪದ ಹಿತ ನೀಡುತ್ತದೆ. ಈ ಗೀತೆಯಿರುವ   ‘ನವಜೀವನ’ ಚಿತ್ರದಲ್ಲಿ ವೈದ್ಯರಾಗಿ ಜನಸೇವೆಯ ಕುರಿತು ಚಿಂತಿಸುವ ಅವರ ಪಾತ್ರ ಕರುಣೆಯೇ ಮೂರ್ತಿವೆತ್ತಂತ ಅನುಭವ ಕೊಡುತ್ತದೆ.  ‘ಸಂಧ್ಯಾರಾಗ’ ಚಿತ್ರದಲ್ಲಿ ಮಲತಾಯಿಯಾದರೂ ಲಕ್ಷಣ ಪಾತ್ರಧಾರಿಯಾದ ರಾಜ್‍ಕುಮಾರ್ ಅವರಿಗೆ ತಮ್ಮ ಹೃದಯವನ್ನೇ ಮುಡಿಪಾಗಿಟ್ಟ ತಾಯಿಯಂತೆ ಅವರು ಕಾಣುವ ರೀತಿ ಹೇಗೆ ತಾನೇ ಮರೆಯಲು ಸಾಧ್ಯ.  'ನಮ್ಮ ಮಕ್ಕಳು' ಚಿತ್ರ.  ಓಹ್.  ಆ ಪುಟ್ಟ ಮಕ್ಕಳ ತಾಯಿಯಾಗಿ ‘ನಿನ್ನೊಲುಮೆ ನಮಗಿರಲಿ ತಂದೆ’ ಎಂದು ತನ್ನ ಕುಟುಂಬ, ಮಕ್ಕಳು, ದೇವರಿಗಾಗಿನ ಒಲುಮೆ ಇವೆಲ್ಲವನ್ನೂ ತಮ್ಮ ಅಭಿವ್ಯಕ್ತಿಯಲ್ಲಿ ಮೂಡಿಸುವ ಅವರ ತನ್ಮಯತೆ  ಹೃದಯಕ್ಕೆ ತುಂಬಾ ಹತ್ತಿರವಾಗುತ್ತದೆ.  ಅವರ ಮತ್ತೊಂದು ಅಂತದೇ ಪಾತ್ರ  ಅನುರಾಧಾ ಚಿತ್ರದ್ದು.  ‘ಸತ್ಯಹರಿಶ್ಚಂದ್ರ’ ಚಿತ್ರದಲ್ಲಿನ ಅವರ ಪಾತ್ರ ನಿರ್ವಹಣೆ, ರಾಜ್‍ಕುಮಾರ್, ಉದಯ ಕುಮಾರ್, ಎಂ. ಪಿ. ಶಂಕರ್, ನರಸಿಂಹರಾಜು ಇವರುಗಳ ಮೇರು ಮಟ್ಟದ ಅಭಿನಯಕ್ಕೆ ಸರಿ ಸಮಾನವಾಗಿ ನಿಲ್ಲುತ್ತದೆ.   ಹೀಗೆ ಪಂಡರೀತಾಯಿ ಅವರ ಅಭಿನಯವನ್ನು ಒಂದಾದ ಮೇಲೊಂದರಂತೆ ಹೆಸರಿಸುತ್ತಾ ಹೋಗಬಹುದು.  

ಪಂಡರೀಬಾಯಿ 1928ರ ಸೆಪ್ಟೆಂಬರ್ 18ರಂದು ಭಟ್ಕಳದಲ್ಲಿ ಜನಿಸಿದರು.  ತಂದೆ ರಂಗವಿಠಲ, ಕೀರ್ತನಕಾರರು. ತಾಯಿ ಕಾವೇರಿಬಾಯಿ ಶಿಕ್ಷಕಿ. ಪಂಡರೀಬಾಯಿಯವರ ಜನ್ಮನಾಮ ಗೀತಾ. ಅದೊಮ್ಮೆ ಪಂಡರಪುರಕ್ಕೆ ಹೋಗಿ ಬಂದ ರಂಗರಾಯರು, ವಿಠಲನ ಮೇಲಿನ ಭಕ್ತಿಯಿಂದ ಮಗಳಿಗೆ ಪಂಡರೀಬಾಯಿ ಎಂದು ಕರೆದರು. ಅದೇ ಶಾಶ್ವತವಾಯಿತು. 

ಪಂಡರೀಬಾಯಿ ಚಿಕ್ಕ ವಯಸ್ಸಿನಲ್ಲೇ ಸೊಗಸಾಗಿ ಹರಿಕಥೆ ಮಾಡುತ್ತಿದ್ದರು.  ಅದು ಅವರ ತವರು ಮನೆಗೆ ಬಂದ ಬಳುವಳಿ.   ನಾನು ಪುಟ್ಟವನಿದ್ದಾಗ ಪ್ರಖ್ಯಾತ ಹರಿಕಥಾ ವಿದ್ವಾಂಸರಾಗಿದ್ದ ಅವರ ಸಹೋದರ ವಿಮಲಾನಂದ ದಾಸರು ಹಾಸನದಲ್ಲಿ ನಮ್ಮ ಮನೆಯಲ್ಲಿ ಹಲವು ದಿನ ಇದ್ದು ನಮ್ಮ ಮನೆ ಬಳಿ ಇದ್ದ ರಾಮ ಮಂದಿರದಲ್ಲಿ ಹರಿಕಥಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದುದು ಚೆನ್ನಾಗಿ ನೆನಪಿದೆ.  ಸೋದರ ವಿಮಲಾನಂದದಾಸರ 'ಆದರ್ಶ ನಾಟಕ ಸಭಾ'ದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟಿಯೊಬ್ಬರು ಗೈರುಹಾಜರಾದಾಗ ಆ ಪಾತ್ರವನ್ನು ನಿರ್ವಹಿಸಲು ಪಂಡರೀಬಾಯಿಯವರು ಬಣ್ಣ ಹಚ್ಚಿಕೊಳ್ಳಬೇಕಾಯಿತು. ಅದೇ ಅವರ ರಂಗಭೂಮಿ ಪ್ರವೇಶಕ್ಕೆ ಕಾರಣವಾಯಿತು. ಬೆಂಗಳೂರಿನ ವರದಾಚಾರ್ ಮೆಮೊರಿಯಲ್ ಸಂಸ್ಥೆಯ ನಾಟಕಗಳಲ್ಲೂ ಅಭಿನಯಿಸುತ್ತಿದ್ದರು.

ಒಮ್ಮೆ ಪಂಡರೀಬಾಯಿ ಹರಿಕಥಾ ಕಾರ್ಯಕ್ರಮ ನೀಡಿದಾಗ ಆ ಕಾರ್ಯಕ್ರಮದಲ್ಲಿ ಅಜ್ಞಾತವಾಗಿ ಪ್ರೇಕ್ಷಕ ವರ್ಗದಲ್ಲಿ ಸೇರಿಕೊಂಡಿದ್ದವರು ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರು.  ಈ ಹುಡುಗಿಯ ಸಾಮರ್ಥ್ಯವನ್ನು ಕಂಡು ತಾವು ನಿರ್ಮಿಸಿದ  ‘ವಾಣಿ’ ಚಿತ್ರದಲ್ಲಿ ಅವರಿಗೆ ಅಭಿನಯಿಸಲು ಆಹ್ವಾನ ನೀಡಿದರು.  ಹೀಗೆ ಅನಿರೀಕ್ಷಿತವಾಗಿ ಪಂಡರೀಬಾಯಿ  1943ರಲ್ಲಿ ಚಲನಚಿತ್ರರಂಗವನ್ನು ಪ್ರವೇಶಿಸಿದರು.  ಮುಂದೆ ಹೊನ್ನಪ್ಪ ಭಾಗವತರ್ ಅವರ ‘ಗುಣಸಾಗರಿ’ ಪಂಡರೀಬಾಯಿ ಅವರು  ಮೊದಲು ನಾಯಕಿಯಾಗಿ ನಟಿಸಿದ ಚಿತ್ರ.  ರಾಜ್‍ಕುಮಾರ್ ಅವರ ಮೊದಲ ಚಿತ್ರ ಎಚ್. ಎಲ್. ಎನ್ ಸಿಂಹ ಅವರ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಪಂಡರೀಬಾಯಿ ಅವರೇ ನಾಯಕಿ.  ತಮಿಳಿನ ಮೇರುನಟ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರದಲ್ಲಿ ಕೂಡಾ ಪಂಡರೀಬಾಯಿ ಅವರೇ ನಾಯಕಿಯಾಗಿದ್ದರು.  ಸೋದರಿ, ಹರಿಭಕ್ತ, ರಾಯರ ಸೊಸೆ, ಬಂಗಾರದ ಹೂವು, ಜೇನುಗೂಡು ಪಂಡರೀಬಾಯಿ ಅವರು ಅಂದಿನ ದಿನಗಳಲ್ಲಿ ನಟಿಸಿದ ಇನ್ನಿತರ ಕೆಲವು ಪ್ರಮುಖ ಚಿತ್ರಗಳು.   ಸಂತ ಸಖು, ಅನ್ನಪೂರ್ಣ, ಅನುರಾಧಾ, ರಾಯರ ಸೊಸೆ, ಮುಂತಾದವು ಅವರೇ ನಿರ್ಮಿಸಿದ ಚಿತ್ರಗಳು.  ತಾವು ಗಳಿಸಿದ್ದನ್ನೆಲ್ಲಾ ಕನ್ನಡ ಚಿತ್ರ ನಿರ್ಮಾಣದಲ್ಲಿ ಸುರಿದು ಕಳೆದುಕೊಂಡರು. 

ಪಂಡರೀಬಾಯಿಯವರು ಕನ್ನಡ, ತಮಿಳು, ಹಿಂದಿ ಬಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ ಚಿತ್ರಗಳು ಐನೂರಕ್ಕೂ ಹೆಚ್ಚು.  ರಾಜ್‍ಕುಮಾರ್, ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್,  ಎನ್. ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ರಾಜೇಶ್ ಖನ್ನ ಹೀಗೆ ಅವರ ಕಾಲದ ನಾಯಕನಟರಿಗೆ ಮತ್ತು ಮುಂದಿನ ತಲೆಮಾರಿನ ನಟರಿಗೆ ಕೂಡಾ ಅವರು ತಾಯಿಯ ಪಾತ್ರಗಳಲ್ಲಿ ಅಭಿನಯಿಸಿದ್ದರು.   ಹಿಂದಿಯ ಪ್ರಸಿದ್ಧ  'ಭಾಬಿ' ಚಿತ್ರದಲ್ಲಿ ನಟಿಸಿ ಅಲ್ಲಿ ಎಲ್ಲರ ಪಾಲಿನ ಭಾಬಿಯೂ ಆದರು

ಪಾಂಡುರಂಗನ ಭಕ್ತರಾದ ಪಂಡರೀಬಾಯಿಯವರು ಚನ್ನೈನ ಕೋಡಂಬಾಕ್ಕಂನಲ್ಲಿ  ತಮ್ಮ ಇಷ್ಟದೇವನಾದ ಪಾಂಡುರಂಗನಿಗಾಗಿ ಗುಡಿಯನ್ನು ನಿರ್ಮಿಸಿದ್ದರು. 

ಪಂಡರೀಬಾಯಿಯವರು `ಶ್ರೀಕೃಷ್ಣ ಚೈತನ್ಯ ನಾಟಕ ಸಭಾ ಸಂಸ್ಥೆಯ ಮೂಲಕ ಕರ್ನಾಟಕಾದ್ಯಂತ ಪ್ರವಾಸ ಮಾಡಿ, ನಾಟಕಗಳನ್ನು ಪ್ರದರ್ಶಿಸಿದ್ದರು. ನಟಿ ಸಹಸ್ರನಾಮಂ ಅವರ 'ಸೇವಾ ಸ್ಟೇಜ್ ಕಂಪೆನಿ'ಯ ತಮಿಳು ನಾಟಕಗಳಲ್ಲಿಯೂ ಅಭಿನಯಿಸಿ ಜನಪ್ರಿಯರಾಗಿದ್ದರು. ಪಂಡರೀಬಾಯಿಯವರ ಖ್ಯಾತಿ ಉತ್ತುಂಗದಲ್ಲಿದ್ದಾಗ, ಇಡೀ ಕುಟುಂಬವನ್ನು ಸಾಕುವ ಹೊಣೆಗಾರಿಕೆ ಅವರ ಮೇಲೆ ಬಿತ್ತು. ಇಡೀ ಕುಟುಂಬವನ್ನು ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬಲಿಗೊಟ್ಟು, ಅಮ್ಮನಾಗಿ ಕಾಪಾಡಿದರು. ಕುಟುಂಬ ಎಲ್ಲರದೂ ಒಂದೊಂದು ದಾರಿಯಾದ ಮೇಲೆ ಅವರು ರಾಮರಾಯರನ್ನು ಪತಿಯಾಗಿ ಆರಿಸಿಕೊಂಡರು. 

ಪಂಡರೀಬಾಯಿಯವರು 1994ರ ಡಿಸೆಂಬರ್‍ನಲ್ಲಿ ಮದರಾಸಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಆಕಸ್ಮಾತ್ತಾಗಿ ತಮ್ಮ ಎಡಗೈಯನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಜರ್ಝರಿತವಾದ ಮಾನಸಿಕ ಸ್ಥಿತಿಯಿಂದ ಚೇತರಿಸಿಕೊಂಡ ಪಂಡರೀಬಾಯಿಯವರು ಮುಂದೆ ಕೆಲವು ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ಅಭಿನಯಿಸಿದ್ದರು. ಅವರ ತಂಗಿ ಮೈನಾವತಿ ಅವರು ನಿರ್ಮಿಸಿದ್ದ ಅಮ್ಮ, ಮನೆತನ ಎಂಬ ದೂರದರ್ಶನದ ಧಾರವಾಹಿಗಳಲ್ಲಿ ಕೂಡಾ ಪಂಡರೀಬಾಯಿ ಕಾಣಿಸಿಕೊಂಡಿದ್ದರು. ಎಂತಹವರಿಗೂ ಗೌರವ ತರುವ ಅವರ ಗುಣ ಚಿತ್ರರಂಗದ ಹಲವರಿಗೆ ಕೂಡ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ನೀಡಿತು ಎಂದು ನನಗನ್ನಿಸಿದೆ.  ಅವರು ತಮ್ಮ ಕೈ ಸಾಮರ್ಥ್ಯ ಕಳೆದುಕೊಂಡಿದ್ದ ದಿನದಲ್ಲಿ ಕೂಡಾ ಅವರಿಗೆ ಕೆಲವು ಪಾತ್ರಗಳನ್ನು ಕನ್ನಡ ಚಿತ್ರರಂಗ ಕೊಟ್ಟು ಅವರಿಗೆ ಸಹಾನುಭೂತಿ ಮತ್ತು ಗೌರವಗಳನ್ನು ಅರ್ಪಿಸಿತು.  ರಾಜ್‍ಕುಮಾರ್ ಅವರು ಶ್ರೀಕಂಠ ವಿಷಕಂಠ ಎಂದು ಹಾಡುವ ಒಂದು ಗೀತೆಯಲ್ಲಿ ಒಂದೆಡೆ ತಾಯಿಯಾಗಿ ಕುಳಿತಿರುವ ಸನ್ನಿವೇಶ ಈಗಲೂ ಕಣ್ಣಲ್ಲಿ ನೆಲೆ ನಿಂತ ಹಾಗಿದೆ.  

ಪಂಡರೀಬಾಯಿ ಅವರು 'ಬೆಳ್ಳಿಮೋಡ', 'ನಮ್ಮಮಕ್ಕಳು' ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪುರಸ್ಕೃತರಾದರು. ಅವರಿಗೆ 1994-95ನೇ ಸಾಲಿನ ಡಾ||ರಾಜಕುಮಾರ್ ಪ್ರಶಸ್ತಿ ಸಂದಿತು.

ಪಂಡರೀಬಾಯಿ 2003ರ ಜನವರಿ 29ರಂದು ಈ ಲೋಕವನ್ನಗಲಿದರು. 

ಡಾ. ರಾಜ್‍ಕುಮಾರ್ ಅವರು “ಚಿತ್ರರಂಗದಲ್ಲಿ ಪಂಡರೀಬಾಯಿ ಅಂತಹವರು ಸಿಗುವುದು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು. ರಾಜ್ ಅವರ ಹೇಳಿರುವ ಮಾತಾದರೋ ಇಡೀ ಜನಸ್ತೋಮದ ಹೃದಯದ ಮಾತು ಕೂಡಾ ಆಗಿದೆ.  ಕೆಲವರನ್ನು ಒಳ್ಳೆಯವರೆನ್ನಲು ಪುರಾವೆಗಳೇ ಬೇಕಾಗುವುದಿಲ್ಲ.  ಅದು ಅವರ ವ್ಯಕ್ತಿತ್ವವೇ ಅಥವಾ  ಅವರಿರುವ ರೀತಿಯೇ ಹಾಗೆ ಹೇಳಿಬಿಡುತ್ತದೆ.  ಅದಕ್ಕೆ ಮಾತುಗಳು ಕೂಡಾ ಬೇಕಿರುವುದಿಲ್ಲ.  ಖಂಡಿತ ಪಂಢರೀಬಾಯಿಯವರು ಆ ಉತ್ತಮತೆಗೆ ಸೇರಿದವರು.  ಬಣ್ಣದ ಲೋಕದಲ್ಲಿದ್ದರೂ ಸಂತ ಹೃದಯಿ, ಮಾತೃಶಿರೋಮಣಿ ಆಕೆ.    ಈ ತಾಯಿಯ ಆತ್ಮೀಯ ಭಾವಕ್ಕೆ  ನಮ್ಮ ನಲ್ಮೆಯ ನಮನಗಳು.

On Remembrance Day of our great actress Pandaribai

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ