ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಣಪತಿ ಲೋಕವ್ಯಾಪ್ತಿ


 ಗಣಪತಿ ಲೋಕವ್ಯಾಪ್ತಿ 


ಗಣಪತಿ ಎಲ್ಲ  ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ ಎಲ್ಲ ಶುಭಕಾರ್ಯಗಳಲ್ಲೂ ಮೊದಲ ಪೂಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ; ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲು. ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕವಾಹನ ಮುಂತಾದ ಹೆಸರುಗಳೂ ಇವೆ. ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. 

ಭಾರತದಲ್ಲೆಲ್ಲ ಊರ ಕೋಟೆಗಳಲ್ಲಿ, ಗಣಪತಿಯ ಮೂರ್ತಿಯನ್ನು ಇಂದೂ ನೋಡಬಹುದು. ಎಲ್ಲ ದೇವಾಲಯ ಗಳಲ್ಲೂ ಶಿವನ ಪರಿವಾರವರ್ಗದಲ್ಲಿ ಗಣಪತಿಯ ಮೂರ್ತಿಯಿದ್ದೇ ಇರುತ್ತದೆ. ಗಣಪತಿ ವಿಶಿಷ್ಟ ಜಾತಿಗಳ ದೇವತೆಯೆನಿಸದೆ ಹಿಂದೂ ಧರ್ಮವನ್ನು ನಂಬುವ ಎಲ್ಲ ಜಾತಿಪಂಥಗಳೂ ಸಮಾನವಾಗಿ ಪುಜಿಸುವ ದೇವತೆಯಾಗಿ ಈಗಲೂ ಮಹಿಮೆ ಪಡೆದಿದ್ದಾನೆ.

ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಋಕ್ಕು ಇದ್ದು ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆಯಾದರೂ ವಿದ್ವಾಂಸರು ಇಲ್ಲಿನ ಗಣಪತಿ ಶಬ್ದಕ್ಕೆ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿಯೆಂದೇ ಅರ್ಥಮಾಡುತ್ತಾರೆ. ನಮಗೆ ಇಂದು ಪ್ರಸಿದ್ಧವಿರುವ ಗಣಪತಿಯ ಮೂರ್ತಿಕಲ್ಪನೆ ಪುರಾಣಕಾಲದ್ದು. ಪುರಾಣಗಳಿಗೂ ಪೂರ್ವದ ಋಗ್ವೇದದಲ್ಲಿ ಆನೆಯ ಮುಖ, ಇಲಿಯ ವಾಹನ, ದೊಡ್ಡ ಹೊಟ್ಟೆ ಮುಂತಾದ ಯಾವ ಪೌರಾಣಿಕ ಕಲ್ಪನೆಗಳೂ ಇಲ್ಲ. ಆತ ಕೇವಲ ವಾಗಭಿಮಾನಿಯಾದ ಮತ್ತೊಬ್ಬ ದೇವನಂತೆ ತೋರುತ್ತಾನೆ. ಅಷ್ಟೇ ಅಲ್ಲದೆ ಇಡೀ ರಾಮಾಯಣದಲ್ಲಿ ಹಾಗೂ ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ನಾಮಸ್ಮರಣೆ ಕೂಡ ಬಾರದು. ಕಾಳಿದಾಸನಿಗೆ ಸಹ ಗಣಪತಿಯ ಅರಿವಿದ್ದಂತೆ ಕಾಣಿಸುವುದಿಲ್ಲ. ಮಹಾಭಾರತ ವನ್ನು ಬರೆಯಲು ವ್ಯಾಸರು ಗಣೇಶನನ್ನು ಲಿಪಿಕಾರನನ್ನಾಗಿ ಮಾಡಿಕೊಂಡ ಕಥೆ ಈಚೆಗೆ ಮಹಾಭಾರತಕ್ಕೆ ಯಾರೋ ಸೇರಿಸಿದ್ದೆಂದು ವಿದ್ವಾಂಸರು ಭಾವಿಸುತ್ತಾರೆ. ಈ ಕೆಲವು ಕಾರಣಗಳಿಂದ ಗಣಪತಿ ಆರ್ಯರ ದೇವತೆ ಯಾಗಿರದೆ ಮೊಟ್ಟಮೊದಲಿಗೆ ದ್ರಾವಿಡ ಜನಾಂಗಗಳ ಗ್ರಾಮಭಿಮಾನಿ ದೇವತೆಯಾಗಿದ್ದಿರ ಬಹುದೆಂದು ಕೆಲವರು ಸಂಶೋಧಕರು ಊಹಿಸುತ್ತಾರೆ. ಕಾಲಾಂತರದಲ್ಲಿ ಈ  ದೇವತೆಯನ್ನು ಸಂಸ್ಕರಿಸಿಕೊಂಡು ಆರ್ಯರು ತಮ್ಮ ದೇವತಾವರ್ಗದಲ್ಲಿ ಸೇರಿಸಿಕೊಂಡಿರ ಬಹುದೆಂದು ಅವರ ಅಭಿಪ್ರಾಯ. ಆದರೆ ಈ ವಾದವನ್ನು ಒಪ್ಪದ ಸಂಶೋಧಕರೂ ಉಂಟು. ಅವರು ಹೇಳುವ ಕಾರಣಗಳಿವು: ಯಜುರ್ವೇದದ ತೈತ್ತೀರಿಯ ಸಂಹಿತೆಯಲ್ಲಿ ನಮೋ ಗಣೇಭ್ಯೋ ಗಣಪತಿಭ್ಯಶ್ಚವೋ ನಮಃ (5-4-1) ಎಂಬ ಮಂತ್ರದಲ್ಲಿ ಅನೇಕ ಗಣಪತಿಗಳ ಉಲ್ಲೇಖವಿದೆ. ಅತ್ಯಂತ ಪ್ರಾಚೀನವಾದ (ಪ್ರ.ಶ.ಪು.ಸು. 4ನೆಯ ಶತಮಾನದ) ಮಾನವಗೃಹ್ಯಸೂತ್ರದಲ್ಲಿ ವಿನಾಯಕರ ಸಂಖ್ಯೆ ನಾಲ್ಕೆಂದಿರುವುದಲ್ಲದೆ ಇವರ ಹೆಸರು ಕ್ರಮವಾಗಿ ಸಾಲಕಟಂಟಕ. ಕೂಶ್ಮಾಂಡ, ರಾಜಪುತ್ರ ಉಸ್ಮಿತ, ಮತ್ತು ದೇವಯಜನ ಎಂಬುದನ್ನು ತಿಳಿಸಿ ಇವರ ಪೀಡಾಪರಿಹರಕ್ಕಾಗಿ ಶಾಂತಿ ಕರ್ಮಗಳನ್ನು ವಿಧಿಸಿದೆ. ಮುಂದೆ ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಈ ವಿನಾಯಕರ ತಾಯಿ ಅಂಬಿಕೆಯೆಂದೂ ಇವರನ್ನು ತೃಪ್ತಿಪಡಿಸದೆ ಪೀಡೆ ಪರಿಹಾರವಾಗದೆಂದೂ ಹೇಳಿದೆ. ಪ್ರಸಕ್ತಶಕಾರಂಭದಲ್ಲಿ ರಚಿತವಾದ ಬೋಧಾಯನ ಗೃಹ್ಯಸೂತ್ರ, ಗೋಭಿಲಸ್ಕೃತಿ ಗಳಲ್ಲಿಯೂ ಹಾಲನ (ಸಾತವಾಹನ) ಗಾಥಾ ಸಪ್ತಶತಿಯಲ್ಲಿಯೂ ಗಜಮುಖನ ಉಲ್ಲೇಖದಂತೆ ಅವನ ಅಗ್ರಪೂಜಾರ್ಹತೆಯೂ ನಿರ್ದಿಷ್ಟವಾಗಿವೆ. 

ಬಾಣಭಟ್ಟ, ಭವಭೂತಿಗಳು ಗಣಪತಿಯ ಸ್ತೋತ್ರ ಮಾಡಿದ್ದಾರೆ. ಹೀಗೆ ಗಣಪತಿಯ ಅತ್ಯಂತ ಪ್ರಾಚೀನ ಸ್ವರೂಪ ಸಂಶಯಾಸ್ಪದವಾಗಿದ್ದರೂ ಅದು ಕ್ರಿ.ಶ. ಆರನೆಯ ಶತಮಾನದ ವೇಳೆಗೆ ಇಂದು ಪ್ರಸಿದ್ಧವಾಗಿರುವ ಸ್ವರೂಪಕ್ಕೆ ಬಂದು ಮುಟ್ಟಿಯಾಗಿತ್ತೆಂದು ಊಹಿಸಬಹುದು. ಏಕೆಂದರೆ ಇದೇ ಕಾಲದ ಪ್ರಾಚೀನ ಶಿಲಾಮೂರ್ತಿಗಳು ಕೂಡ ಜೋಧಪುರದ ಬಳಿ ಘಾಟಿಯಾಲ, ಐಹೊಳೆ ಹಾಗು ಬಾದಾಮಿ ದೇವಾಲಯಗಳಲ್ಲಿ ಈಗಲೂ ಕಾಣಸಿಗುತ್ತವೆ. ಗಣಪತಿಯ ಮಹಿಮೆಯನ್ನು ವಿಸ್ತಾರವಾಗಿ ಪ್ರತಿಪಾದಿಸುವ ಪುರಾಣಗಳೂ ಇಲ್ಲಿಂದ ಮುಂದೆ ರಚಿತವಾದುವೆಂದು ಊಹಿಸಬಹುದು.

ಪುರಾಣಗಳ ಪ್ರಕಾರ ಗಣಪತಿ ಶಿವ ಪಾರ್ವತಿಯರ ಮಗ. ಕೇವಲ ಪಾರ್ವತಿಯ ಮುದ್ದುಮಗನೆನ್ನುವುದೇ ಹೆಚ್ಚು ಸಮರ್ಪಕ ವೆನಿಸುತ್ತದೆ. ಏಕೆಂದರೆ ಅವಳ ಸ್ನಾನ ಚೂರ್ಣದಿಂದ ಈತ ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ, ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಜನಿಸಿದನಂತೆ. ಗಂಗೆ ಅವನನ್ನು ತನ್ನ ಸುತನೆಂದರೂ ಶಿವ ಅವನನ್ನು ಪಾರ್ವತೀಸುತನೆಂದೂ ತೀರ್ಮಾನಿಸಿ ಅವನನ್ನು ಏಕಮುಖನನ್ನಾಗಿ ಮಾಡಿದನಂತೆ. ಅಂಜನಗಿರಿಯಲ್ಲಿ ಅವನನ್ನು ವಿಘ್ನವಿನಾಶಕ ದೇವನೆಂದು ಈಶ್ವರ ಪಟ್ಟಗಟ್ಟಿದನಂತೆ. ಈ ವಿವರಗಳು ಕಾಶ್ಮೀರಕವಿಯಾದ ಜಯರಥನ ಹರಚರಿತ ಚಿಂತಾಮಣಿಯಲ್ಲಿ (13ನೆಯ ಶತಮಾನ) ದೊರೆಯುತ್ತದೆ. 

ಬ್ರಹ್ಮವೈವರ್ತ ಪುರಾಣದಲ್ಲಿ ಗಣೇಶನ ಜನ್ಮವೃತ್ತಾಂತ ವಿಸ್ತಾರವಾಗಿ ಬಂದಿದೆ. ಅಲ್ಲಿಯ ಕಥೆ ಬೇರೆ ರೀತಿಯಾಗಿದೆ. ಪಾರ್ವತಿ ತನ್ನ ಕಂದನನ್ನು ತೋರಿಸಲು ಎಲ್ಲರೊಂದಿಗೆ ಶನಿಯನ್ನೂ ಕರೆಸಿದ್ದಳಂತೆ. ಶನಿಯ ವಕ್ರದೃಷ್ಟಿ ಬಿದ್ದೊಡನೆ ಗಣಪತಿಯ ತಲೆ ಬಿದ್ದು ಹೋಯಿತಂತೆ. ಆಮೇಲೆ ವಿಷ್ಣು ಅವನಿಗೆ ಆನೆಯ ತಲೆಯನ್ನು ತಂದು ಅಂಟಿಸಿದನಂತೆ. ಗಣೇಶನಿಗೆ ಇರುವುದು ಒಂದೇ ದಂತ. ಇನ್ನೊಂದು ದಂತ ಕಳೆದುದು ಹೇಗೆನ್ನಲು ಬೇರೆ ಬೇರೆ ಕಥೆಗಳಿವೆ. ಅದನ್ನು ರಾವಣ ಮುರಿದನೆಂದು ಮಾಘಕವಿ (ಶಿಶುಪಾಲವಧ) ಹೇಳಿದರೆ, ಪರಶುರಾಮನೊಡನೆ ಯುದ್ಧದಲ್ಲಿ ಅದು ಮುರಿಯಿತೆಂದು ಬ್ರಹ್ಮವೈವರ್ತಪುರಾಣ ತಿಳಿಸುತ್ತದೆ. ಯಾರು ಜಗವನ್ನೆಲ್ಲ ಬೇಗ ಪ್ರದಕ್ಷಿಣೆ ಮಾಡುವರೆಂದು ಗಣೇಶನಿಗೂ ಕುಮಾರಸ್ವಾಮಿಗೂ ಸ್ಪರ್ಧೆ ಬಂದ ಕಾಲದಲ್ಲಿ ದಂತ ಮುರಿಯಿತೆಂದು ಹರಚರಿತ ಚಿಂತಾಮಣಿಯಲ್ಲಿ ಹೇಳಲಾಗಿದೆ. ಶಿವ ಪುರಾಣದ ಪ್ರಕಾರ ಶಿವನೇ ಪಾರ್ವತಿಯ ಸ್ನಾನಗೃಹದ ಬಾಗಿಲ್ಲಲಿ ಕಾವಲಿದ್ದ ಗಣೇಶನ ತಲೆಯನ್ನು ಕಡಿದು ಅದಕ್ಕೆ ಬದಲಾಗಿ ಆನೆಯ ತಲೆಯನ್ನು ಜೋಡಿಸಿದನೆನ್ನಲಾಗಿದೆ. ಗಣಪತಿಗೆ ಮದುವೆಯೇ ಇಲ್ಲವೆನ್ನುವ ಕೆಲವು ಪುರಾಣಗಳಿದ್ದರೆ, ಅವನಿಗೆ ಸಿದ್ಧಿ, ಬುದ್ಧಿ ಎಂಬ ಇಬ್ಬರು ಹೆಂಡಿರನ್ನು ಹೇಳುವ ಪುರಾಣಗಳುಂಟು; ಸಿದ್ಧಿಯಲ್ಲಿ ಹುಟ್ಟಿದ ಕ್ಷೇಮ ಮತ್ತು ಬುದ್ಧಿಯಲ್ಲಿ ಹುಟ್ಟಿದ ಲಾಭ ಎಂಬ ಮಕ್ಕಳನ್ನು ಹೇಳುವ ಪುರಾಣಗಳೂ ಉಂಟು. ಗಣಪತಿಯ ವಿಗ್ರಹಗಳಲ್ಲಿ ಕೆಲವು ಇಂದಿನ ಸುಂದರಾಕೃತಿಯ ಬದಲು ಒರಟು ವಿಕಾರರೂಪದಲ್ಲಿಯೂ ಇರುವುದನ್ನು ಕಾಣುತ್ತೇವೆ (ಉದಾ: ನಾಸಿಕದ ಮೋದಕೇಶ್ವರ ಗಣಪತಿ, ವಾರ್ಡದ ಸ್ವಯಂಭೂ ಗಣಪತಿ). ಕೆಲವು ಕೇವಲ ಸ್ಥೂಲ ಆನೆಯ ತಲೆಯಂತಿರುವ ಕಲ್ಲುಗಳೇ ಇರುತ್ತವೆ. (ಉದಾ: ಜುನ್ನಾರದ ಸಾರ್ವಜನಿಕ ಗಣಪತಿ). ಕೆಲವೆಡೆ ದ್ವಿಭುಜ ಗಣಪತಿಗಳಿವೆ (ಉದಾ: ಗೋಕರ್ಣ ಮತ್ತು ಇಡಗುಂಜಿಯ ಮೂರ್ತಿಗಳು). ಪಲ್ಲವರ ಕಾಲಕ್ಕೆ ಮುಂಚೆ ದಕ್ಷಿಣದಲ್ಲಿ ಗಣಪತಿ ವಿಗ್ರಹಗಳು ಸಿಕ್ಕಿಲ್ಲ. ಮುಂದೆ ಅನೇಕ ತಂತ್ರ ಆಗಮಗಳ ನಿರ್ದೇಶನದಂತೆ ಗಣಪತಿಯ ಮೂರ್ತಿ ಕಲ್ಪನೆಯಲ್ಲೂ ನಾನಾಭುಜಗಳು, ಮುಖಗಳು, ಅಲಂಕಾರಗಳು ಬೆಳೆದು ಬಂದುದನ್ನು ನೋಡಬಹುದು. ಹೊಯ್ಸಳರ ಕಾಲದಿಂದೀಚೆಗೆ ಈ ಪರಿಷ್ಕೃತ ರೂಪಗಳು ಕನ್ನಡ ನಾಡಿನಲ್ಲೆಲ್ಲ ಕಾಣಬರುತ್ತವೆ.

ಭಾರತದಲ್ಲಿ ಮಾತ್ರವೇ ಅಲ್ಲ, ಪ್ರಾಚೀನ ಭಾರತೀಯರು ತಮ್ಮ ಸಂಸ್ಕೃತಿಯನ್ನು ಹರಡಿದ ಸಾಗರೋತ್ತರ ದೇಶಗಳಲ್ಲಿ ಕೂಡ ಗಣಪತಿವಿಗ್ರಹಗಳು ಜನಪ್ರಿಯವಾಗಿದ್ದುವು. ಜಾವ, ಕಾಂಬೋಡಿಯ, ಬೋರ್ನಿಯೊ ಮೊದಲಾದ ಆಗ್ನೇಯ ಏಷ್ಯ ರಾಷ್ಟ್ರಗಳಲ್ಲಿ ಹಿಂದೂ ಸಂಪ್ರದಾಯದ ಗಣಪತಿಯಿದ್ದರೆ, ಚೀನ, ಜಪಾನ್, ಸಿಂಹಳಗಳಲ್ಲಿ ಬೌದ್ಧರ ಪ್ರಭಾವದಿಂದ ಮಾರ್ಪಟ್ಟ ರೂಪದಲ್ಲಿ ಗಣಪತಿ ವಿಗ್ರಹಗಳು ಇಂದಿಗೂ ಕಾಣಸಿಗುತ್ತವೆ.

ಈಗ ಕೇವಲ ಗಣಪತಿಯೊಬ್ಬನನ್ನೇ ಪರಮ ದೈವತವೆಂದು ಭಜಿಸುವ ಹಿಂದೂ ಸಂಪ್ರದಾಯ ಎಲ್ಲಿಯೂ ಹೆಚ್ಚಾಗಿ ಕಾಣದಿದ್ದರೂ ಪ್ರಾಚೀನ ಭಾರತದಲ್ಲಿ ಅಂಥ ಒಂದು ಸಂಪ್ರದಾಯ ಊರ್ಜಿತದಲ್ಲಿದ್ದುದು ಸ್ಪಷ್ಟವಾಗಿ ಕಾಣಬರುತ್ತದೆ. ಅದಕ್ಕೆ ಗಾಣಾಪತ್ಯ ಸಂಪ್ರದಾಯವೆಂದು ಹೆಸರಿದ್ದಿತು. ಆನಂದಗಿರಿಯ ಶಂಕರವಿಜಯವೆಂಬ ಗ್ರಂಥದಲ್ಲಿ (ಪ್ರಾಯಃ 10ನೆಯ ಶತಮಾನಕ್ಕಿಂತ ಇನ್ನೂ ಎಷ್ಟೋ ಈಚಿನ ಗ್ರಂಥ) ಗಾಣಾಪತ್ಯರ ಆರು ಪಂಥಗಳನ್ನು ಉಲ್ಲೇಖಿಸಲಾಗಿದೆ: 1. ಮಹಾಗಣಪತಿ; 2.ಹರಿದ್ರಾ ಗಣಪತಿ; 3. ಉಚ್ಛಿಷ್ಟ ಗಣಪತಿ; 4. ನವನೀತ ಗಣಪತಿ; 5. ಸ್ವರ್ಣ ಗಣಪತಿ ಮತ್ತು 6. ಸಂತಾನ ಗಣಪತಿ. ಈ ದೇವತೆಗಳ ಅವಾಹನಾಮಂತ್ರ ಹಾಗೂ ಪುಜಾ ವಿಧಿಗಳಲ್ಲಿ ವ್ಯತ್ಯಾಸಗಳಿರುತ್ತಿದ್ದುವು. ಇವು ಬೇರೆ ಬೇರೆ ತಂತ್ರ ಆಗಮ ಗ್ರಂಥಗಳನ್ನು ಅವಲಂಭಿಸುತ್ತಿದ್ದುವು. ಆದರೂ ಆರೂ ಪಂಥದವರು ಪ್ರಪಂಚದ ಸೃಷ್ಟಿ, ಸ್ಥಿತಿ, ಸಂಹಾರಕ್ಕೆಲ್ಲ ಮೂಲಕಾರಣ ಗಣಪತಿಯೇ ಹೊರತು ಶಿವನಲ್ಲವೆಂದು ನಂಬುತ್ತಿದ್ದರು. ಬ್ರಹ್ಮಾದಿಗಳೆಲ್ಲ ಗಣಪತಿಯ ಮಾಯೆಯ ಮೂಲಕ ಜನಿಸಿದವರೆಂದೇ ಅವರ ಹೇಳಿಕೆ. ಹೀಗೆ ಇವರು ವೇದಾಂತದ ಪರಮತತ್ತ್ವಕ್ಕೆ ಅಥವಾ ಪರಬ್ರಹ್ಮವಸ್ತುವಿಗೆ ಪ್ರತೀಕವಾಗಿಯೇ ಗಣಪತಿಯನ್ನು ಆರಾಧಿಸುತ್ತಿದ್ದರೆನ್ನಬಹುದು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ 

World wide Ganesha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ