ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಗಡಿ ಶೇಷಾಚಲರು


 ಅಗಡಿ ಶೇಷಾಚಲರು


ಶೇಷಾಚಲ ಭಗವಾನರು ನಾಡಿನ ಸಂತ ಶ್ರೇಷ್ಠರಲ್ಲಿ ಒಬ್ಬರು.  

ಶೇಷಾಚಲ ಭಗವಾನರು ಕ್ರಿ.‍ಶ. 1848ರ ಚೈತ್ರ ಬಹುಳ ಪಂಚಮಿಯ ದಿನ ಜನಿಸಿದರು. ಅವರು ಹುಟ್ಟಿ ಬೆಳೆದುದು ಅಗಡಿ ಎಂಬ ಒಂದು ಸಣ್ಣ ಹಳ್ಳಿಯಲ್ಲಿ. ಅದು ಧಾರವಾಡ ಜಿಲ್ಲೆಯಲ್ಲಿದೆ. ಅಲ್ಲಿ ನರಸಿಂಹ ಶಾಸ್ತ್ರಿ ಎಂಬಾತನಿದ್ದ. ಆತನ ಮನೆತನಕ್ಕೆ ಚಕ್ರವರ್ತಿ ಮನೆತನ ಎಂದು ಹೆಸರಿತ್ತು.  ಬಡತನದ ಚಕ್ರವರ್ತಿಯಾದರೂ ಆತ ವೇದ, ಶಾಸ್ತ್ರ, ಪುರಾಣಗಳಲ್ಲಿ ಆಳವಾದ ಜ್ಞಾನವುಳ್ಳ ದೊಡ್ಡ ವಿದ್ವಾಂಸನಾಗಿದ್ದ. ಅವರ ಮೊಮ್ಮಗನೇ ಶೇಷಾಚಲ ಭಗವಾನ್.
ನರಸಿಂಹ ಚಕ್ರವರ್ತಿಗಳ ಮಗ ರಾಮ ಚಕ್ರವರ್ತಿ. ಈತನೂ ತಂದೆಯಂತೆಯೇ ವಿದ್ಯಾವಂತ, ಕೀರ್ತಿಶಾಲಿ. ಆತನ ಹೆಂಡತಿ ಲಕ್ಷಮ್ಮ. ಆಕೆ ಬಲು ಉದಾರಿ. ದೊಡ್ಡ ಪತಿವ್ರತೆ. ಈ ಸಾತ್ವಿಕ ದಂಪತಿಗಳ ಆರು ಜನ ಗಂಡು ಮಕ್ಕಳಲ್ಲಿ ಎರಡನೆಯವನೇ ಶೇಷಾಚಲ.

ಶೇಷಾಚಲ ಮೈ ಕೈ ತುಂಬಿಕೊಂಡು ಮುದ್ದು – ಮುದ್ದಾಗಿದ್ದ. ಆದರೆ ಚುರುಕಾಗಿರಲಿಲ್ಲ.  ಸ್ವಲ್ಪ ಮೊದ್ದು. ಅವನು ಎಲ್ಲಿ ಮಲಗಿಸಿದರೆ ಅಲ್ಲಿ ಬಿದ್ದಿರುತ್ತಿದ್ದ. ಹಸಿವು, ನಿದ್ದೆ ಮೊದಲಾದ ಯಾವ ಕಾರಣಕ್ಕೂ ಅಳುತ್ತಿರಲಿಲ್ಲ. ಯಾರು ಎಲ್ಲಿಗೆ ಎತ್ತಿಕೊಂಡು ಹೋದರೂ ಹಠ ಮಾಡುತ್ತಿರಲಿಲ್ಲ. ಅವನು ಬೆಳೆದು ಬಾಲಕನಾದ ಮೇಲೂ ಅಷ್ಟೆ. ಅವನು ಯಾವುದಕ್ಕೂ ಹಠ ಮಾಡುತ್ತಿರಲಿಲ್ಲ. ಏನನ್ನೂ ಬೇಕೆಂದು ಆಸೆ ಪಡುತ್ತಿರಲಿಲ್ಲ. ಅವನು ನಿತ್ಯತೃಪ್ತ. ಸದಾಸುಖಿ. ಮನಸ್ಸು ಬಂದರೆ ಶಾಲೆಗೆ ಹೋಗುತ್ತಿದ್ದ, ಇಲ್ಲದಿದ್ದರೆ ತನ್ನ ಪಾಡಿಗೆ ತಾನು ದೇವರ ಪೂಜೆ, ಭಜನೆ, ಧ್ಯಾನಗಳಲ್ಲಿರುತ್ತಿದ್ದ. ಊರಿನಲ್ಲಿ ನಡೆಯುತ್ತಿದ್ದ ಕೀರ್ತನೆ, ಹರಿಕಥೆಗಳಿಗೆ ತಪ್ಪದೇ ಹೋಗುತ್ತಿದ್ದ.  ಎಂಟು ವರ್ಷ ವಯಸ್ಸಾಯಿತು. ತಂದೆ, ಮಗನಿಗೆ ಉಪನಯನ ಮಾಡಿ ಸಂಧ್ಯಾವಂದನೆ, ಸೂರ್ಯ ನಮಸ್ಕಾರ, ದೇವರ ಪೂಜೆ ಇವುಗಳ ಮಂತ್ರಗಳನ್ನು ಹೇಳಿಕೊಟ್ಟರು. ಶೇಷಾಚಲನಿಗೆ ವೇದಪಾಠವನ್ನು ಹೇಳಿಕೊಡಲು ಪ್ರಾರಂಭಿಸಿದರು. ಅವನಿಗೆ ಅದರಲ್ಲಿ ಆಸಕ್ತಿ ಹುಟ್ಟಲಿಲ್ಲ. ತಾಳಿಕೋಟೆ ಶೇಷಭಟ್ಟರು ಎಂಬ ವಿದ್ವಾಂಸರ ಬಳಿಗೆ ಕಳುಹಿಸಿದರು. ಅಲ್ಲಿ ವೇದದ ಅಭ್ಯಾಸ ನಡೆಯಿತು. ಆದರೂ ಶೇಷಾಚಲನಿಗೆ ಸಮಾಧಾನ ಆಗಲಿಲ್ಲ. ಒಂದು ದಿನ ಹುಡುಗ ತಂದೆಗೆ ಸ್ಪಷ್ಟವಾಗಿ ತಿಳಿಸಿದ – “ಅಪ್ಪ, ನನಗೆ ವೇದ ಬೇಡ: ದೇವರ ಪೂಜೆ, ಜಪ ಧ್ಯಾನಗಳೇ ಸಾಕು" ಎಂದು.

ವಿಚಿತ್ರ ದಿನಚರಿಯ ಬಾಲಕ
ಮನೆಯಲ್ಲಿ ಎಲ್ಲರದೂ ಒಂದು ದಾರಿಯಾದರೆ ಶೇಷಾಚಲನದು ಬೇರೊಂದು ದಾರಿ. ರಾತ್ರಿಯ ಹೊತ್ತು, ಎಲ್ಲರಿಗಿಂತ ಮೊದಲು ಅವನು ಒಂದು ಮೂಲೆಯಲ್ಲಿ ಮಲಗಿಕೊಳ್ಳುತ್ತಿದ್ದ. ಮನೆಯವರೆಲ್ಲ ಮಲಗಿ ನಿದ್ರಿಸುತ್ತಲೇ ಅವನು ಹಾಸಿಗೆಯಲ್ಲಿ ಎದ್ದು ಕುಳಿತು ಬೆಳಗಾಗುವವರೆಗೆ ಧ್ಯಾನ ಮಾಡುತ್ತಿದ್ದು, ಕೋಳಿ ಕೂಗುತ್ತಲೇ ಹೂವಿನ ಬುಟ್ಟಿಯನ್ನು ಹಿಡಿದು ಹೊರಕ್ಕೆ ಹೊರಡುತ್ತಿದ್ದ. ಊರ ಹೊರಗಿನ ತೋಟದ ಬಾವಿಯಲ್ಲಿ ಮುಖವನ್ನು ತೊಳೆದು, ದೇವರ ನಾಮಗಳನ್ನು ಹಾಡಿಕೊಳ್ಳುತ್ತಾ ಹೂ, ಪತ್ರೆ, ತುಳಸಿಗಳನ್ನು ಬುಟ್ಟಿಯ ತುಂಬ ಕೀಳುತ್ತಿದ್ದ. ಅನಂತರ ಮನೆಗೆ ಬಂದು ಸ್ನಾನಮಾಡಿ ತಾಯಿ ಅಡಿಗೆ ಮಾಡಿ ಮುಗಿಸುವವರೆಗೂ ಅವನ ದೇವರ ಪೂಜೆ ನಡೆಯುತ್ತಿತ್ತು. ಅವನ ಮನೆಗೆ ಆಗಾಗ ಸಂತರು, ಸಾಧುಗಳು, ಸಂನ್ಯಾಸಿಗಳು ಬರುತ್ತಿದ್ದರು. ಶೇಷಾಚಲನು ಅವರ ಬಟ್ಟೆಗಳನ್ನು ಒಗೆದುಕೊಡುವನು, ಹಾಸಿಗೆ ಹಾಸಿಕೊಡುವನು, ಅವರು ಹೇಳುತ್ತಿದ್ದ ನೀತಿಯ ನುಡಿಗಳನ್ನು ಒಂದೇ ಮನಸ್ಸಿನಿಂದ ಕೇಳುವನು, ಸಂಜೆ ದೇವರ ಗುಡಿಗೆ ಹೋಗುವನು, ಅಲ್ಲಿ ದೇವರ ನಾಮಗಳನ್ನು ಹಾಡಿ ಮನೆಗೆ ಹಿಂದಿರುಗುವನು. ಇದು ಅವನ ದಿನಚರಿ.

ಕಾಲ ಉರುಳಿತು. ಬಾಲಕನಾಗಿದ್ದ ಶೇಷಾಚಲ ಇಪ್ಪತ್ತೆರಡು ವರುಷದ ಯುವಕನಾದ. ಆದರೂ ಅವನು ಸಂಸಾರದ ಯೋಚನೆ ಹಚ್ಚಿಕೊಳ್ಳಲಿಲ್ಲ. ಸಂಪಾದನೆ ಮಾಡುವ ಯಾವ ಕುರುಹೂ ಮೂಡಲಿಲ್ಲ.  ಮದುವೆ ಆದರೆ ಸರಿಹೋದಾನು ಎಂದು ಮರೋಳವೆಂಬ ಗ್ರಾಮದ ಶ್ಯಾನುಭೋಗ ಭೀಮಪ್ಪನ ಮಗಳು ತುಳಸವ್ವೆ  ಜೊತೆ ಮದುವೆ ನಡೆಸಿದರು. ಮದುವೆಯಿಂದ ಶೇಷಾಚಲನಲ್ಲಿ ಹೆಚ್ಚು ಬದಲಾವಣೆಯೇನೂ ಆಗಲಿಲ್ಲ. ಅವನಾಯಿತು, ಅವನ ಜಪ ತಪ ಪೂಜೆಗಳಾದವು.

ಆ ವರ್ಷ ದೇಶದಲ್ಲೆಲ್ಲಾ ದೊಡ್ಡ ಬರ ಬಂತು. ಮಳೆ-ಬೆಳೆಗಳೊಂದೂ ಆಗಲಿಲ್ಲ. ಜನರು ಹೊಟ್ಟೆಗಿಲ್ಲದೆ ಹುಳಗಳಂತೆ ಸತ್ತುಹೋದರು. ಆ ಕಷ್ಟಕಾಲದಲ್ಲಿಯೂ ಶೇಷಾಚಲನ ಮನೆಗೆ ದಿನದಿನದ ಆಹಾರ ಹೇಗೋ ಒದಗಿ ಬರುತ್ತಿತ್ತಂತೆ. ಶೇಷಾಚಲ ತನಗೆ ಬಡಿಸಿದ ಆಹಾರದಲ್ಲಿ ಅರ್ಧವನ್ನು ಹೊಟ್ಟೆಗಿಲ್ಲದವರಿಗೆ ಕೊಟ್ಟು ಉಳಿದುದರಿಂದಲೇ ತೃಪ್ತನಾಗುತ್ತಿದ್ದನಂತೆ! ತಾನು ಹಾಕಿಕೊಂಡಿದ್ದ ಬಟ್ಟೆಗಳನ್ನು ತಿರುಕರಿಗೆ ಕೊಟ್ಟು ತಾನು ಬಹು ಸ್ವಲ್ಪ ಬಟ್ಟೆ ಇಟ್ಟುಕೊಳ್ಳುತ್ತಿದ್ದನಂತೆ. 

ಬರಗಾಲ ಬಂದ ಮರುವರ್ಷ ಮಳೆ ಬಂತು. ಬೆಳೆ ಬೆಳೆಯಿತು. ಜನರು ಉಂಡು, ಉಟ್ಟು ಸುಖಗೊಂಡರು. ಆಗ ಅಗಡಿಯ ಕೆಲವು ವಿದ್ವಾಂಸರು ದಕ್ಷಿಣ ಭಾರತದ ತೀರ್ಥಯಾತ್ರೆಗೆಂದು ಹೊರಟರು. ಶೇಷಾಚಲನಿಗೂ ಯಾತ್ರೆ ಮಾಡಬೇಕೆನಿಸಿತು. ಮರುದಿನ ಶೇಷಾಚಲನು ಇತರರೊಡನೆ ಯಾತ್ರೆ ಹೊರಟನು. ಹಲವು ದಿನ ಪ್ರಯಾಣಮಾಡಿ ಅವರು ಶೃಂಗೇರಿಯನ್ನು ಸೇರಿದರು.
ಅವನು ಮುಂಜಾನೆ ಎದ್ದವನೇ ತುಂಗೆಯಲ್ಲಿ ಸ್ನಾನ, ಸಂಧ್ಯಾವಂದನೆಗಳನ್ನು ಮಾಡಿ ಶಾರದೆಯ ದರ್ಶನಕ್ಕೆ ಹೋಗುತ್ತಿದ್ದನು. ಅಲ್ಲಿ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತನೆಂದರೆ ಮಧ್ಯಾಹ್ನದವರೆಗೆ ಮೇಲಕ್ಕೇಳುತ್ತಿರಲಿಲ್ಲ. ಆಮೇಲೆ ಆತನು ಸ್ವಾಮಿಗಳ ಮಠಕ್ಕೆ ಹೋಗಿ ಅವರ ದರ್ಶನಕ್ಕಾಗಿ ಕಾದಿರುತ್ತಿದ್ದನು. ಸ್ವಾಮಿಗಳು ಊಟಮಾಡಿ ಕೈ ತೊಳೆದುಕೊಳ್ಳುವ ಸ್ಥಳಕ್ಕೆ ಹತ್ತಿರದಲ್ಲಿಯೇ ಆತನು ಮರೆಯಾಗಿ ನಿಂತಿರುತ್ತಿದ್ದನು. ಅವರು ಕೈ ತೊಳೆದು ಹಿಂತಿರುಗುತ್ತಲೇ ಶೇಷಾಚಲನು ಅವರು ಪಾದ ತೊಳೆದ ನೀರನ್ನು ತಲೆಯ ಮೇಲೆ ಚಿಮುಕಿಸಿಕೊಂಡು, ತೀರ್ಥದಂತೆ ಕುಡಿಯುತ್ತಿದ್ದನು. ತರುವಾಯ ಆತನು ಶೃಂಗೇರಿಯ ನಾಲ್ಕು ಮನೆಗಳಲ್ಲಿ ಭಿಕ್ಷೆಯನ್ನು ಬೇಡಿ, ಅನ್ನವನ್ನು ತಿನ್ನುತ್ತಿದ್ದನು. ಹೀಗೆಯೇ ಕೆಲವು ದಿನಗಳು ಕಳೆದವು.
ಒಂದು ದಿನ ಶೇಷಾಚಲನು ಎಂದಿನಂತೆ ಸ್ವಾಮಿಗಳು ಕೈ ತೊಳೆಯುವ ಸ್ಥಳದಲ್ಲಿ ಕಾದು ನಿಂತಿದ್ದ. ಅವರು ಅವನಿದ್ದ ಸ್ಥಳಕ್ಕೆ ಬಂದು, “ಅಯ್ಯ, ಮಹಾರಾಯ, ನಾವು ಈ ದಿನ ಊಟ ಮಾಡದೆ ನಿನಗಾಗಿ ಕಾದಿದ್ದೇವೆ. ನೀನು ಇಂದು ನಮ್ಮ ಜೊತೆಯಲ್ಲಿಯೇ ಶಾರದೆಯ ಪ್ರಸಾದವನ್ನು ಸ್ವೀಕರಿಸಬೇಕು’. ಎಂದು ಹೇಳಿದರು. ಅವರು ಆತನ ಕೈ ಹಿಡಿದು ಊಟದ ಮನೆಗೆ ಕರೆದೊಯ್ದರು. ಅಲ್ಲಿ ಎರಡು ಎಲೆಗಳಲ್ಲಿ ಊಟ ಬಡಿಸಿ ಸಿದ್ಧವಾಗಿತ್ತು. ಇಬ್ಬರೂ ಎಲೆಯ ಮುಂದೆ ಕುಳಿತರು. ಸ್ವಾಮಿಗಳು ತಮ್ಮ ಎಲೆಯಲ್ಲಿ ಬಡಿಸಿದ್ದ ಅನ್ನದಿಂದ ಮೂರು ತುತ್ತುಗಳನ್ನು ತೆಗೆದು ಶೇಷಾಚಲನ ಎಲೆಗೆ ಹಾಕಿದರು. ಅನಂತರ ಇಬ್ಬರೂ ಮೌನವಾಗಿ ಊಟ ಮಾಡಿದರು. ಊಟ ಮಾಡಿ ಕೈ ತೊಳೆದ ಮೇಲೆ ಸ್ವಾಮಿಗಳು ಶೇಷಾಚಲನನ್ನು ತಮ್ಮ ಕೊಠಡಿಗೆ ಕರೆದೊಯ್ದು ಅವನಿಗೆ ಶಾರದಾ ಸ್ತುತಿಯನ್ನು ಹೇಳಿಕೊಟ್ಟರು. ತಾವು ಹೇಳಿಕೊಟ್ಟುದನ್ನು ಅವರು ಆತನ ಬಾಯಿಂದ ಹೇಳಿಸಿದರು. ಆಮೇಲೆ ಆತನೊಡನೆ “ಮಗೂ, ಇಂದು ಶಾರದೆ ನಿನಗೆ ಭಕ್ತಿ, ಜ್ಞಾನ, ವೈರಾಗ್ಯವೆಂಬ ಮೂರು ತುತ್ತುಗಳನ್ನು ನೀಡಿದ್ದಾಳೆ. ಅದನ್ನು ಲೋಕಕ್ಕೆ ಹಂಚು’ ಎಂದು ಹೇಳಿ ಆತನನ್ನು ಬೀಳ್ಕೊಟ್ಟರು. ಶೇಷಾಚಲ ಸಂತೋಷದಿಂದ ಕಣ್ಣೀರು ಸುರಿಸುತ್ತಾ ಅವರಿಗೆ ನಮಸ್ಕರಿಸಿ ಛತ್ರಕ್ಕೆ ಹಿಂದಿರುಗಿದ.

ಮರುದಿನ ಯಾತ್ರಿಕರೆಲ್ಲಾ ಉಡುಪಿಗೆ ಪ್ರಯಾಣ ಹೊರಟರು. ಅಗಡಿಯ ಯಾತ್ರಿಕರು ಮಠದ ಛತ್ರದಲ್ಲಿ ಇಳಿದುಕೊಂಡರು. ಅವರು ಶ್ರೀ ಕೃಷ್ಣನ ದರ್ಶನ ಮಾಡಿ, ಮಠದಲ್ಲಿ ಊಟಮಾಡುತ್ತಾ ಕೆಲಕಾಲ ಅಲ್ಲಿಯೇ ಇದ್ದರು.
ಉಡುಪಿಯಲ್ಲಿಯೂ ಶೇಷಾಚಲನು ಭಿಕ್ಷೆಯನ್ನು ಮಾಡಿ ಊಟಮಾಡುತ್ತಿದ್ದ. ಮಠದಲ್ಲಿ ಊಟಮಾಡುತ್ತಿರಲಿಲ್ಲ. ದಿನವೂ ಬೆಳಗು ಮುಂಜಾನೆ ಸ್ನಾನ ಮಾಡಿಕೊಂಡು ಶ್ರೀಕೃಷ್ಣನ ಎದುರಿನಲ್ಲಿ ಕುಳಿತನೆಂದರೆ ಮಧ್ಯಾಹ್ನದವರೆಗೆ ಮೇಲೇಳು ತ್ತಿರಲಿಲ್ಲ.

ಉಡುಪಿಯಲ್ಲಿ ಒಂದು ವಿಶೇಷ ಘಟನೆ ನಡೆಯಿತು ಎಂದು ಹೇಳುತ್ತಾರೆ. ಒಂದು ದಿನ ಶೇಷಾಚಲ ಭಿಕ್ಷೆಗಾಗಿ ಒಂದು ಮನೆಗೆ ಹೋದ. ಆ ಮನೆಯ ಯಜಮಾನಿ ಆತನನ್ನು ಒಳಕ್ಕೆ ಕರೆದು, “ಸ್ವಾಮಿ, ನಿಮಗೆ ಜ್ಯೋತಿಷ ಬರುತ್ತದೆಯೇ?” ಎಂದು ಕೇಳಿದಳು. ಅವನು, “ಅಮ್ಮ, ನನಗೆ ಜ್ಯೋತಿಷ ಗೊತ್ತಿಲ್ಲ. ಆದರೆ ನಿಮ್ಮ ದುಃಖ ಅರ್ಥವಾಗಿದೆ. ಗುರು ಕೃಪೆಯಿಂದ ನಿಮ್ಮ ಯಜಮಾನರು ಇಂದು ಸಂಜೆ ಹಿಂದಿರುಗುತ್ತಾರೆ. ನೀವು ಚಿಂತಿಸಬೇಡಿ” ಎಂದ. ಆಕೆಗೆ ಆಶ್ಚರ್ಯವಾಯಿತು. ಆಕೆಯ ಗಂಡ ಮನೆ ಬಿಟ್ಟು ಹೋಗಿ ಇಪ್ಪತ್ತು ವರ್ಷವಾಗಿತ್ತು. ಆತನ ಸುದ್ದಿಯೇ ತಿಳಿದಿರಲಿಲ್ಲ. ಆತ ಅಂದು ಹಿಂದಕ್ಕೆ ಬರುವನೆಂಬ ಸಂತೋಷ. ಅದಕ್ಕೂ ಹೆಚ್ಚಾಗಿ ತನ್ನ ಮನಸ್ಸು ಶೇಷಾಚಲನಿಗೆ ಹೇಗೆ ಗೊತ್ತಾಯಿತೆಂಬ ಆಶ್ಚರ್ಯ! ಆಕೆ, “ಸ್ವಾಮಿ, ನಾನು ಬಡವಳು. ನಿಮಗೆ ನಾನೇನು ಕೊಡಬಲ್ಲೆ? ನಿಮ್ಮ ಮಾತು ನಿಜವಾದರೆ ನೀವು ನನ್ನ ಪಾಲಿನ ದೇವರು ಎಂದು ಭಾವಿಸುತ್ತೇನೆ’ ಎಂದಳು. ಶೇಷಾಚಲ ಹೇಳಿದಂತೆ ಆಕೆಯ ಗಂಡ ಅಂದು ಸಂಜೆ ಹಿಂದಿರುಗಿದ. ಹೆಂಡತಿಯ ಸಂತೋಷಕ್ಕೆ ಪಾರವೇ ಇಲ್ಲ. ನಡೆದ ವಿಷಯವನ್ನೆಲ್ಲ ಗಂಡನಿಗೆ ತಿಳಿಸಿದಳು. ಗಂಡ ಹೆಂಡತಿಯರು ಹೋಗಿ ಶೇಷಾಚಲನನ್ನು ಕಂಡು ನಮಸ್ಕರಿಸಿದರು. ಆತನನ್ನು ಮನೆಗೆ ಕರೆದು ಆತನಿಗೆ ಸಿಹಿಯೂಟವನ್ನು ಮಾಡಿಸಿದರು. ಅನಂತರ ಆಕೆ ಆತನ ಕಾಲುಮುಟ್ಟಿ ನಮಸ್ಕರಿಸಿದಳು.

ಶೇಷಾಚಲ ಉಡುಪಿಯಲ್ಲಿದ್ದಾಗ ಮತ್ತೊಂದು ಆಶ್ಚರ್ಯದ ಸಂಗತಿ ನಡೆಯಿತು. ಅಲ್ಲಿ ಒಂದು ದೊಡ್ಡ ವಿದ್ವಾಂಸರ ಸಭೆ ನಡೆಯಿತು. ಅಗಡಿಯಿಂದ ಬಂದಿದ್ದವರು ದೊಡ್ಡ ವಿದ್ವಾಂಸರೆಲ್ಲ ಸಭೆಗೆ ಹೋಗಿ ತಮ್ಮ ಪಾಂಡಿತ್ಯವನ್ನು ತೋರಿಸಿದರು. ಅವರಿಗೆಲ್ಲ ತಮ್ಮ ಯೋಗ್ಯತೆಗೆ ತಕ್ಕ ಸಂಭಾವನೆ ದೊರೆಯಲಿಲ್ಲವೆಂದು ಸಂಕಟವಾಗಿತ್ತು. ಇದನ್ನು ನೋಡಿ ಶೇಷಾಚಲನ ಮನ ಕರಗಿತು. ಆತನು ಸ್ವಾಮಿಗಳ ಬಳಿಗೆ ಹೋಗಿ ತಾನೂ ಸಭೆಯಲ್ಲಿ ಭಾಗವಹಿಸಲು ಅಪ್ಪಣೆ ಬೇಡಿದ. ಸ್ವಾಮಿಗಳಿಗೆ ಅವನನ್ನು ಕಂಡು ಮೊದಲು, ‘ಈತನಿಗೆ ಸಂಸ್ಕೃತ ಬರುತ್ತದೆಯೆ? ವಿದ್ವಾಂಸರ ಸಭೆಯಲ್ಲಿ ಮಾತನಾಡಬಲ್ಲನೆ?’ ಎಂದು ಅನುಮಾನವಾಯಿತು. ಆದರೂ ಅವನ ವಿನಯವನ್ನು ಕಂಡು ಒಪ್ಪಿದರು. ಶೇಷಾಚಲನು ಸ್ವಾಮಿಗಳಿಗೆ ನಮಸ್ಕರಿಸಿ ಶಾರದೆಯನ್ನು ಧ್ಯಾನ ಮಾಡುತ್ತಾ ಸಂಸ್ಕೃತದಲ್ಲಿಯೇ ಅವರೊಡನೆ ಶಾಸ್ತ್ರ ವಿಷಯವನ್ನು ಕುರಿತು ಮಾತನಾಡಿದ. ಆತನ ಮಾತಿನ ರೀತಿ, ತಾತ್ಪರ್ಯಗಳನ್ನು ಕಂಡು ಸ್ವಾಮಿಗಳಿಗೆ ಪರಮ ಸಂತೋಷವಾಯಿತು. ಅವರು “ಇದು ಕಲಿತ ಮಾತಲ್ಲ, ದೇವವಾಣಿ” ಎಂದರು. ಅವರು ಆತನಿಗೆ ಕೈ ತುಂಬ ಹಣವನ್ನು ಬಹುಮಾನವಾಗಿ ಕೊಟ್ಟು ಕಳಿಸಿದರು. ಶೇಷಾಚಲನು ಅದನ್ನು ತಂದು ತನ್ನ ಸಂಗಡಿಗರಿಗೆ ಕೊಟ್ಟ. ಅವರಿಗೆ ತೃಪ್ತಿಯಾಯಿತು. ಅವನ ಮಹತ್ತನ್ನು ಕಂಡು ಅವರಿಗೆ ಆಶ್ಚರ್ಯವೂ ಆಯಿತು.

ಶೇಷಾಚಲನು ಸಂಗಡಿಗರೊಡನೆ ಆಗುಂಬೆ, ತೀರ್ಥಹಳ್ಳಿ ಮೊದಲಾದ ಸ್ಥಳಗಳಿಗೆ ಭೇಟಿಕೊಟ್ಟನು. ಆಗಲೆ ಆತನ ಕೀರ್ತಿ ಹಬ್ಬುತ್ತಿತ್ತು. ಆತನನ್ನು ನೋಡಲು, ಅವನ ಉಪದೇಶ ಕೇಳಲು ಅನೇಕ ಜನ ಬರುತ್ತಿದ್ದರು. ರಾಮೇಶ್ವರದವರೆಗೆ ದಕ್ಷಿಣ ದೇಶದ ಯಾತ್ರೆಯನ್ನೆಲ್ಲ ಮಾಡಿ ಮುಗಿಸಿದನು. ಆಮೇಲೆ ಅವರೆಲ್ಲ ಹಿಂದಿರುಗಿ ಅಗಡಿಯತ್ತ ಹೊರಟರು. ಹಾದಿಯಲ್ಲಿ ‘ಕೆರೆಹಳ್ಳಿ’ ಎಂಬ ಒಂದು ಊರು ಸಿಕ್ಕಿತು. ಅಲ್ಲಿನ ಶ್ಯಾನುಭೋಗನು ಅವರನ್ನೆಲ್ಲ ತನ್ನ ಮನೆಯಲ್ಲಿ ಇಳಿಸಿದನು. ಆ ದಿನ ಆತನ ಮನೆಯಲ್ಲಿ ದೇವರ ಸಮಾರಾಧನೆ; ಮರುದಿನ ಆತನ ಮಗಳ ಮದುವೆ. ಮನೆಮಂದಿಯೆಲ್ಲ ಅಂದು ಸಂಜೆ ಬೀಗರನ್ನು ಇದಿರುಗೊಳ್ಳಲು ಸಿದ್ಧರಾದರು. ಸಂಜೆಯೇ ಬರಬೇಕಾದ ಬೀಗರು ರಾತ್ರಿ ಹತ್ತು ಘಂಟೆಯಾದರೂ ಬರಲಿಲ್ಲ. ಸಹಜವಾಗಿ ಮನೆಯ ಯಜಮಾನನಿಗೆ ಕಾತರ, ಏನಾಯಿತೊ ಎಂದು ಹೆದರಿಕೆ. ಮದುವೆಯ ಪುರೋಹಿತರು, “ಇನ್ನೇನು ಬರುತ್ತಾರೆ, ಬಂದೇ ಬರುತ್ತಾರೆ’ ಎಂದು ಭವಿಷ್ಯ ಹೇಳುತ್ತಿದ್ದರು. ಅದನ್ನು ಕೇಳಿದ ಶೇಷಾಚಲ, “ಇಲ್ಲ, ಈ ದಿನ ಅವರು ಬರುವಂತೆ ಕಾಣುವುದಿಲ್ಲ. ಏನೋ ತೊಂದರೆಯಾಗಿ ಲಗ್ನವನ್ನು ನಾಲ್ಕು ದಿನ ಮುಂದಕ್ಕೆ ಹಾಕಿರಬಹುದು. ಬಹುಶಃ ಅವರಿಂದ ಒಂದು ಪತ್ರ ಬರಬಹುದೋ ಏನೋ’ ಎಂದು ಹೇಳಿದ. ಆತ ಹಾಗೆ ಹೇಳುತ್ತಿರುವಾಗಲೇ ಒಬ್ಬ ಕುದುರೆಯ ಸವಾರ ಅಲ್ಲಿಗೆ ಬಂದ. ಆವನು ಶ್ಯಾನುಭೋಗರಿಗೆ ಒಂದು ಕಾಗದವನ್ನು ಕೊಟ್ಟ. ಅದು ಬೀಗರಿಂದ ಬಂದ ಪತ್ರ. ಮದುವೆಯನ್ನು ನಾಲ್ಕು ದಿನ ಮುಂದಕ್ಕೆ ಹಾಕಬೇಕೆಂದು ಅದರಿಂದ ತಿಳಿಯಿತು. ಅದನ್ನು ಕಂಡು ಶ್ಯಾನುಭೋಗನಿಗೆ ಶೇಷಾಚಲನಲ್ಲಿ ಭಕ್ತಿ, ಗೌರವಗಳು ಮೂಡಿದವು. ತನ್ನ ಮಗಳ ಮದುವೆಯಾಗುವವರೆಗೆ ಆತನು ಶೇಷಾಚಲನನ್ನೂ ಆತನ ಜೊತೆಯವರನ್ನೂ ಅಲ್ಲಿಯೇ ನಿಲ್ಲಿಸಿಕೊಂಡನು. ಆಮೇಲೆ ಅವರಿಗೆಲ್ಲ ಕೈತುಂಬ ದಕ್ಷಿಣೆ ಕೊಟ್ಟು ಕಳುಹಿಸಿದನು. ಶೇಷಾಚಲನು ತನ್ನ ಪಾಲಿನ ದಕ್ಷಿಣೆಯನ್ನು ಜೊತೆಯವರಿಗೆ ಕೊಟ್ಟುಬಿಟ್ಟನು.

ಯಾತ್ರೆ ಹೊರಟವರೆಲ್ಲ ಸುಖವಾಗಿ ಊರಿಗೆ ಹಿಂದಿರುಗಿದರು. ಅವರು ತಮ್ಮ ಯಾತ್ರೆಯ ಕಥೆಯನ್ನೆಲ್ಲ ಜನಗಳಿಗೆ ಹೇಳಿದರು. ಅದರಲ್ಲಿಯೂ ಶೇಷಾಚಲನ ಮಹತ್ತನ್ನು ಬಾಯ್ತುಂಬ ಹೊಗಳಿದರು. ಇದನ್ನು ಕೇಳಿ ಊರಿನವರಿಗೆಲ್ಲ ಆತನಲ್ಲಿ ಭಕ್ತಿ – ಗೌರವಗಳು ಹುಟ್ಟಿದವು. ಆತನ ಕೀರ್ತಿ ಸುತ್ತಮುತ್ತಲಿನ ಊರುಗಳಿಗೆಲ್ಲ ಹಬ್ಬಿ ಹರಡಿತು.  ಜನರು ಗುಂಪು ಗುಂಪಾಗಿ ಹಣ್ಣು, ಕಾಯಿಗಳೊಡನೆ ಆತನನ್ನು ಕಾಣಲೆಂದು ಬರಲು ಪ್ರಾರಂಭವಾಯಿತು. ಹಾಗೆ ಬಂದವರನ್ನೆಲ್ಲ ಶೇಷಾಚಲನು ಬಹು ಪ್ರೀತಿಯಿಂದ ಕಂಡು ಅವರ ಕಷ್ಟ-ಸುಖಗಳನ್ನು ವಿಚಾರಿಸುತ್ತಿದ್ದನು. ಅವರು ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ಆತನು, “ಮಹಾರಾಜ್, ಗುರು ದೊಡ್ಡವನು. ಆತನನ್ನು ನಂಬಿರಿ, ಎಲ್ಲ ಕಷ್ಟಗಳೂ ದೂರವಾಗುತ್ತವೆ’ ಎಂದು ಹೇಳುತ್ತಿದ್ದನು. ಆತ ಹೇಳಿದಂತೆ ಜನರ ಸಂಕಟ ದೂರವಾಗುತ್ತಿತ್ತು. ಇದನ್ನು ಕಂಡ ಜನ ಆತನನ್ನು ‘ಅವತಾರ ಪುರುಷ’ ನೆಂದು ನಂಬಿದರು. ಕಾಲಕ್ರಮದಲ್ಲಿ ಜನರು ಶೇಷಾಚಲನನ್ನು ‘ಶೇಷಾಚಲ – ಭಗವಾನ್’ ಎಂದು ಕರೆದು ಗೌರವಿಸಿದರು.
ಆದರೆ ಮನೆಯವರಿಗೆ ಬೇಸರ
ಲೋಕವೆಲ್ಲ ಶೇಷಾಚಲರನ್ನು ಗೌರವಿಸುತ್ತಿತ್ತು. ಆದರೆ ‘ದೀಪದ ಬುಡದಲ್ಲಿಯೆ ಕತ್ತಲು’ ಎಂಬಂತೆ ಮನೆಯವರಿಗೆ ಮಾತ್ರ ಆತನಲ್ಲಿ ಅಸಮಾಧಾನ. ಆತನ ದೆಸೆಯಿಂದ ತಮ್ಮ ಮನೆಯಲ್ಲಿ ಹಣದ ಹೊಳೆ ಹರಿಯಬೇಕೆಂದು ಅವರು ಬಯಸುತ್ತಿದ್ದರು. ಆದರೆ ಭಗವಾನ್‌ರಿಗೆ ಹಣದ ದಾಹ ಹುಟ್ಟಲಿಲ್ಲ. ಅವರು ಹಣವನ್ನು ಕೈಯಿಂದ ಮುಟ್ಟುತ್ತಲೇ ಇರಲಿಲ್ಲ. ಇದರಿಂದ ಮನೆಯವರಿಗೆ ನಿರಾಸೆಯಾಯಿತು. ಅವರು ‘ಜನಗಳನ್ನು ಹಣಕ್ಕಾಗಿ  ಪೀಡಿಸುವುದು ಬೇಡ, ತಾವಾಗಿಯೇ ಸಂತೋಷದಿಂದ ಕೊಟ್ಟುದನ್ನು ತೆಗೆದುಕೊಳ್ಳಬಾರದೆ? ಹಣವಿಲ್ಲದೆ ಸಂಸಾರ ನಡೆಯುವುದು ಹೇಗೆ? ಗಂಡಸಾದವನಿಗೆ ಸಂಪಾದಿಸದೆ ತಿನ್ನಲು ನಾಚಿಕೆಯಾಗಬೇಡವೆ?’ ಎಂದು ಹಂಗಿಸುತ್ತಿದ್ದರು. ಇತರರು ಇರಲಿ, ಕೈಹಿಡಿದ ಹೆಂಡತಿ ಕೂಡ ಅವರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದಳು. ಹಣವಿಲ್ಲದ ಗಂಡನಲ್ಲಿ ಆಕೆಗೆ ಗುಣವು ಕಾಣಿಸಲಿಲ್ಲ. ಇದರಿಂದ ಮನೆಯಲ್ಲಿ ಕಿರುಕುಳ ಪ್ರಾರಂಭವಾಯಿತು. ಹೊತ್ತು ಹೊತ್ತಿಗೆ ಜಪ ತಪಗಳು ನಡೆಯುವುದೂ ಕಷ್ಟವಾಯ್ತು. ಏನಾದರೂ ಭಗವಾನರು ಬದಲಾಯಿಸಲಿಲ್ಲ. ಅವರು “ಆದದ್ದೆಲ್ಲಾ ಒಳಿತೇ ಆಯಿತು, ಇದೂ ಒಂದು ಭಗವಂತನ ಲೀಲೆ’ ಎಂದುಕೊಂಡರು.

ಉತ್ತರ ಕರ್ಣಾಟಕದಲ್ಲಿ ಮುರುಗೋಡು ಎಂಬ ಒಂದು ಊರಿದೆ. ಅಲ್ಲಿ ಚಿದಂಬರ ಸ್ವಾಮಿಗಳೆಂಬ ಒಬ್ಬ ಸಂತರಿದ್ದರು. ಅವರ ಮಹಿಮೆ ಮತ್ತು ಲೀಲೆಗಳು ಅಪಾರ. ಶೇಷಾಚಲ ಭಗವಾನರ ತಾತ ಅವರ ಪರಮ ಭಕ್ತರಾಗಿದ್ದರು. ಒಮ್ಮೆ ಸ್ವಾಮಿಗಳು ಆ ಭಕ್ತರೊಡನೆ ‘ಅಯ್ಯ, ನಾನು ಕೆಲಕಾಲದ ಮೇಲೆ ನಿನ್ನ ವಂಶದಲ್ಲಿ ಪುನಃ ಅವತರಿಸುತ್ತೇನೆ’ ಎಂದು ಹೇಳಿದ್ದರಂತೆ! ಆ ಮಾತು ಎಲ್ಲರಿಗೂ ಮರೆತುಹೋಗಿತ್ತು. ಶೇಷಾಚಲ ಭಗವಾನರು ಪ್ರತಿ ವರ್ಷವೂ ತಪ್ಪದೆ ಚಿದಂಬರ ಸ್ವಾಮಿಗಳ ಆರಾಧನೆಗೆ ಹೋಗುತ್ತಿದ್ದರು. ಆ ಕಾಲದಲ್ಲಿ ಅವರು ಬೈಗೂ ಬೆಳಗೂ ಪೂಜೆ, ಭಜನೆ, ತಪಸ್ಸುಗಳಲ್ಲಿ ಮುಳುಗಿರುತ್ತಿದ್ದರು. ಅವರ ಸೇವೆ, ಸಜ್ಜನಿಕೆ, ಸ್ನೇಹ, ಸಮತಾಭಾವಗಳನ್ನು ಕಂಡ ಜನ ಅವರನ್ನು ಚಿದಂಬರರ ಅವತಾರ ಎಂದು ನಂಬಿಕೊಂಡರು. ಚಿದಂಬರರ ಭಕ್ತರೆಲ್ಲ ಶೇಷಾಚಲರ ಭಕ್ತರೂ ಆದರು. ಸದ್ಗುರುಗಳ ನಡೆವಳಿಕೆಗೆ ಎಲ್ಲರೂ ಮಾರುಹೋದರು.

ಗೋದಾವರಿ ನದೀತೀರದಲ್ಲಿ ‘ನರಸಿಂಹವಾಡಿ’ ಎಂಬ ಪುಣ್ಯಕ್ಷೇತ್ರವಿದೆ. ಅದು ಋಷಿಮುನಿಗಳ ವಾಸಸ್ಥಾನ. ಭಗವಾನರಿಗೆ ಅಲ್ಲಿ ಹೋಗಿ ತಪಸ್ಸು ಮಾಡಬೇಕೆಂಬ ಬಯಕೆ ಹುಟ್ಟಿತು. ಹಾಗೆ ತಪಸ್ಸು ಮಾಡುವಾಗ ಅಲ್ಲಿರುವವರಿಗೆಲ್ಲ ಅನ್ನದಾನ ಮಾಡಿದರೆ ಎಷ್ಟು ಚೆನ್ನ ಎನ್ನಿಸಿತು, ಅವರಿಗೆ. ಇದನ್ನು ಕೇಳಿ ಅವರ ಶಿಷ್ಯರಾದ ಗುರುರಾಯರು ಅವರ ಆಸೆಯನ್ನು ಪೂರೈಸುವುದಾಗಿ ಹೇಳಿದರು. ಅವರು ಮುರುಗೋಡದ ಹತ್ತಿರವಿದ್ದ ತಲ್ಲೂರು ಎಂಬ ಪುಟ್ಟ ಸಂಸ್ಥಾನದ ಕಾರುಭಾರಿಗಳು. ಆವರು ತಮ್ಮ ಗುರುಗಳಿಗೆ ಒಂದು ವರುಷದವರೆಗೆ ಎಲ್ಲ ಅನುಕೂಲಗಳನ್ನು ಒದಗಿಸಿಕೊಟ್ಟರು.

ಶೇಷಾಚಲ ಭಗವಾನರು ನರಸಿಂಹವಾಡಿಗೆ ಹೋದರು. ಅಲ್ಲಿ ಎಲ್ಲ ಆಸೆಗಳನ್ನು ಬಿಟ್ಟು ದೇವರ ಧ್ಯಾನದಲ್ಲಿ ನಿರತರಾದವರು ಎನ್ನಿಸಿಕೊಂಡವರು ಅನೇಕರಿದ್ದರು. ಕೆಲವರು ನಿಜವಾಗಿ ವಿರಕ್ತರಾದವರು. ಆದರೆ ನರಸಿಂಹವಾಡಿಯಲ್ಲಿದ್ದವರೆಲ್ಲ ನಿಜವಾದ ಯತಿಗಳಲ್ಲ. ಅವರಲ್ಲಿ ಹಲವರು ಹೊಟ್ಟೆಯ ಪಾಡಿಗಾಗಿ ಅಲ್ಲಿ ಸೇರಿಕೊಂಡವರು. ಅವರು ರೂಪಾಯಿ ನಾಣ್ಯವನ್ನು ‘ನಾರಾಯಣ’ ಎಂದು ಕರೆಯುತ್ತಿದ್ದರು. ಅವರು ಪರಸ್ಪರ ಸೇರಿದಾಗ ‘ನನ್ನಲ್ಲಿ ಇಷ್ಟು ನಾರಾಯಣ ಶೇಖರವಾಗಿದೆ’ ಎಂದು ಹೇಳಿಕೊಳ್ಳುತ್ತಿದ್ದರು. ಅವರಿಗೆ ಶೇಷಾಚಲ ಭಗವಾನರಲ್ಲಿ ಅಸೂಯೆ. ಆದರೆ ಭಗವಾನರಲ್ಲಿ ಅವರ ಆಟವೇನೂ ನಡೆಯಲಿಲ್ಲ. ಸಜ್ಜನರಾದ ಸಾಧುಗಳು ಅನೇಕರು ಭಗವಾನರಲ್ಲಿ ಗುರುಭಾವನೆಯನ್ನು ಇಟ್ಟಿದ್ದರು. ಅಂತಹವರಲ್ಲಿ ಗೋವಿಂದಸ್ವಾಮಿ ಎಂಬುವರು ಒಬ್ಬರು. ಅವರು ಭಿಕ್ಷಾನ್ನದಿಂದ ಜೀವಿಸುತ್ತಿದ್ದರು. ಒಂದು ದಿನ ಅವರು ತುಂಬ ತಡವಾಗಿ ಭಿಕ್ಷಕ್ಕೆ ಹೊರಟರು. ಎಲ್ಲಿಯೂ ಭಿಕ್ಷೆ ಸಿಗಲಿಲ್ಲ. ಕಡೆಗೆ ಶೇಷಾಚಲರಿದ್ದ ಮನೆಗೆ ಬಂದರು. ಅಂದು ಶೇಷಾಚಲರು ತಮ್ಮ ಪೂಜೆ ಮುಗಿದು ಎಷ್ಟೋ ಹೊತ್ತಾಗಿದ್ದರೂ ಊಟಕ್ಕೆ ಎದ್ದಿರಲಿಲ್ಲ. ಶಿಷ್ಯರು ಮತ್ತೆ ಮತ್ತೆ ಕರೆದರೂ ಅವರು ಹೋಗಲಿಲ್ಲ. ಗೋವಿಂದ ಸ್ವಾಮಿಗಳು ಬಂದು ‘ಭವತೀ ಭಿಕ್ಷಾಂದೇಹಿ’ ಎಂದು ಕೂಗುತ್ತಲೇ ಶೇಷಾಚಲರು ಬಾಗಿಲಿಗೆ ಓಡಿಬಂದು ಅವರನ್ನು ಒಳಕ್ಕೆ ಕರೆದೊಯ್ದರು. ಅಲ್ಲಿ ಅವರನ್ನು ತಮ್ಮ ಪಕ್ಕದಲ್ಲಿ ಊಟಕ್ಕೆ ಕೂಡಿಸಿಕೊಂಡು ‘ಏಕೆ ಇಷ್ಟು ತಡಮಾಡಿದಿರಿ? ನಾವು ನಿಮಗಾಗಿ ಬಹಳ ಹೊತ್ತಿನಿಂದ ಕಾಯ್ದುಕೊಂಡಿದ್ದೆವು’ ಎಂದರು. ಇದನ್ನು ಕೇಳಿದ ಶಿಷ್ಯರು ತಮ್ಮ ಗುರು ಮಹಾಪುರುಷರೆಂದು ಅರ್ಥಮಾಡಿಕೊಂಡರು. ಗೋವಿಂದಸ್ವಾಮಿ ಅವರನ್ನು ತಮ್ಮ ಇಷ್ಟದೇವತೆಯೆಂದೇ ಭಾವಿಸಿದರು. ಬಯಸಿದ ಶಿಷ್ಯರು ಬಂದರು
ಭಗವಾನರ ತಪಸ್ಸು ಸಿದ್ಧಿಸಿತು. ಅವರಿಗೆ ದೇವರ ದರ್ಶನವಾಯಿತು. ಅವರು ನರಸಿಂಹವಾಡಿಯಿಂದ ಅಗಡಿಗೆ ಹಿಂದಿರುಗಿದರು. ಈಗ ಅವರ ಮುಖ ಕಾಂತಿಯಿಂದ ತುಂಬಿತ್ತು. ತಾವು ಕಂಡ ಸತ್ಯವನ್ನು ಲೋಕಕ್ಕೆಲ್ಲ ತಿಳಿಸಬೇಕೆಂದು ಅವರ ಮನಸ್ಸು ಉತ್ಸಾಹದಿಂದ ತುಂಬಿ ತುಳುಕಿತು. ತಮ್ಮ ಸಂದೇಶವನ್ನು ಲೋಕಕ್ಕೆಲ್ಲ ಕೊಂಡೊಯ್ಯುವ ಶಿಷ್ಯರು ಬರಬಾರದೆ ಎಂದು ಅವರು ಬಯಸುತ್ತಿದ್ದರು. ಅವರ ದರ್ಶನಕ್ಕಾಗಿ ಬರುತ್ತಿದ್ದ ಜನರಿಗೇನೂ ಕೊರತೆಯಿರಲಿಲ್ಲ. ಆದರೆ ಅವರೆಲ್ಲ ಮಕ್ಕಳಾಗಲೆಂದೊ, ಐಶ್ವರ್ಯ ಅಥವಾ ಅಧಿಕಾರ ಬೇಕೆಂದೋ ಕೇಳಿಕೊಳ್ಳುತ್ತಿದ್ದವರು. ಜ್ಞಾನಕ್ಕಾಗಿ ಬಂದವರಲ್ಲ. ಭಗವಾನರು ‘ದೇವರೇ, ನಿನ್ನನ್ನು ಕಾಣಬಯಸುವವರು ಬರಬಾರದೆ?’ ಎಂದು ಮೊರೆಯಿಡುತ್ತಿದ್ದರು. ಅವರ ಮೊರೆ ದೇವರಿಗೆ ಕೇಳಿಸಿರಬೇಕು. ಅವರ ಕೀರ್ತಿಯನ್ನು ಕೇಳಿ ಮೊಟ್ಟಮೊದಲು ಬಂದ ಪಟ್ಟಶಿಷ್ಯ ನಾರಾಯಣ. ಅನಂತರ ಬಂದವನು ಶಂಕರ. ಮೂರನೆಯವ ಲಿಂಗಪ್ಪ. ಈ ಮೂವರೂ ಪರಬ್ರಹ್ಮನಿಂದ ಒಡೆದು ಬಂದ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಇದ್ದರು. ಇವರು ದೇಶದ ಉದ್ದಗಲಕ್ಕೂ ಸಂಚರಿಸಿ, ಜನರಲ್ಲಿ ಭಾಗವತ ಧರ್ಮವನ್ನು ಬಿತ್ತಿದರು. ಅವರ ಬೋಧನೆಯಿಂದ ಸಹಸ್ರಾರು ಜನ ಭಕ್ತಿಮಾರ್ಗವನ್ನು ಕೈಗೊಂಡರು.
ಸರಳವಾದ ಸಂದೇಶ
ಭಗವಾನರ ಮೂರು ಜನ ಶಿಷ್ಯರೂ ಕ್ರಮವಾಗಿ ನಾರಾಯಣ ಭಗವಾನ್, ಶಂಕರ ಭಗವಾನ್, ಲಿಂಗೋ  ಭಗವಾನ್ ಎಂದು ಪ್ರಸಿದ್ಧರಾಗಿದ್ದಾರೆ. ಅವರು ಗುರುವಿನಿಂದ ಜನರಿಗೆ ಕೊಂಡೊಯ್ದ ಸಂದೇಶ ಸರಳ ಸುಂದರವಾಗಿದೆ – “ಗುರುವೇ ತಂದೆ, ತಾಯಿ, ಬಂಧು, ಬಳಗ, ಸ್ನೇಹಿತ ಎಲ್ಲವೂ; ಅವನೇ ದೇವರು, ಅವನೇ ದೇವತೆ, ಅವನೇ ಶಿಕ್ಷಕ, ಅವನೇ ರಕ್ಷಕ. ಗುರುವು ಮನುಷ್ಯ ರೂಪದಿಂದ ಕಾಣಿಸಿದರೂ ಅವನೇ ದೇವರು. ಅವನು ಮೆಚ್ಚುವಂತೆ ನಡೆಯಿರಿ. ಅವನು ನಿಮ್ಮನ್ನು ಉದ್ಧರಿಸುತ್ತಾನೆ’.

ಭಗವಾನರ ಸಂದೇಶವನ್ನು ಕೇಳಿದ ಜನ ಅವರನ್ನು ಕಣ್ಣಾರೆ ಕಾಣಬೇಕೆಂದು ಬಯಸಿದರು. ಅವರ ಬಯಕೆಯನ್ನು ಈಡೇರಿಸುವುದಕ್ಕಾಗಿ ಶಿಷ್ಯರು ಒಂದು ಉಪಾಯ ಹೂಡಿದರು. ಅವರು ಶೇಷಾಚಲ ಭಗವಾನರ ಬಳಿಗೆ ಹೋಗಿ ಕೈಜೋಡಿಸಿಕೊಂಡು “ಗುರುದೇವ, ನಿಮ್ಮ ಜಯಂತಿ (ಹುಟ್ಟುಹಬ್ಬ) ಯನ್ನು ಆಚರಿಸಬೇಕೆಂದು ನಮ್ಮ ಬಯಕೆ. ಅಪ್ಪಣೆಯನ್ನು ದಯಪಾಲಿಸಬೇಕು’ ಎಂದರು. ಆಗ ಗುರುವು “ಯಾಕಾಗಲೊಲ್ಲದು! ಅಗತ್ಯವಾಗಿ ಮಾಡಿ, ಆದರೆ ಜಾತಿ, ಮತ ಭೇದವಿಲ್ಲದೆ, ಬಂದವರಿಗೆಲ್ಲ ಮನ ತಣಿಯುವಂತೆ ಅನ್ನದಾನ ಮಾಡಬೇಕು’ ಎಂದರು. ಗುರುವಿನ ಅಪ್ಪಣೆ ದೊರೆತುದೆ ತಡ, ಊರೂರುಗಳಿಂದ ದವಸಧಾನ್ಯಗಳು ಬಂದು ರಾಶಿ ರಾಶಿಯಾಗಿ ಬಿದ್ದವು. ನಿರ್ದಿಷ್ಟವಾದ ದಿನ ಹತ್ತು ಸಹಸ್ರ ಜನ ಭಕ್ತವೃಂದ ಬಂದು ಸೇರಿತು. ಯಾರೋ ನೀರು ಹೊತ್ತರು, ಯಾರೋ ಅಡಿಗೆ ಮಾಡಿದರು, ಯಾರೋ ಬಡಿಸಿದರು, ಯಾರೋ ಎಲೆಗಳನ್ನು ಬಳಿದು ಚೊಕ್ಕಟ ಮಾಡಿದರು. ಮೂರು ದಿನಗಳ ಕಾಲ ಅಗಡಿಯಲ್ಲಿ ಮಹೋತ್ಸವ ನಡೆದುಹೋಯಿತು. ಆ ಕಾಲದಲ್ಲಿ ಜನರ ಸಂತೋಷ, ಉತ್ಸಾಹಗಳಿಗೆ ಕೊನೆ ಮೊದಲಿಲ್ಲ. ಎಲ್ಲರೂ ಗುರುವಿನ ದರ್ಶನ ಮಾಡಿ, ಆಶೀರ್ವಾದವನ್ನು ಪಡೆದು, ಧನ್ಯರಾದರು. ಈ ಜಯಂತಿ ಉತ್ಸವ ಈಗಲೂ ಅಶ್ವಯುಜ ಬಹುಳ ಪಾಡ್ಯದಿಂದ ಹತ್ತು ದಿನಗಳು ನಡೆಯುತ್ತದೆ.

1904ರಲ್ಲಿ ಅಗಡಿಯಲ್ಲಿ ಪ್ಲೇಗು ರೋಗ ಕಾಣಿಸಿಕೊಂಡಿತು. ಆಗಿನ ಕಾಲದಲ್ಲಿ ಈ ರೋಗ ಕಾಣಿಸಿಕೊಂಡಿತೆಂದರೆ ಊರಿಗೆ ಊರೇ ನಾಶವಾಗುತ್ತಿತ್ತು. ಆದ್ದರಿಂದ ಜನರು ಭಗವಾನರ ಬಳಿಗೆ ಓಡಿಬಂದು ಅವರ ಮೊರೆಹೊಕ್ಕರು. ಆಗ ಭಗವಾನರು “ನೀವು ಹೆದರಬೇಡಿ. ಒಡನೆಯೆ ನೀವೆಲ್ಲ ಊರಿಗೆ ಒಂದು ಮೈಲಿ ಪೂರ್ವದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು, ಅಲ್ಲಿಯೇ ಒಂದು ತಿಂಗಳು ವಾಸ ಮಾಡಿರಿ. ನಾನೂ ನಿಮ್ಮೊಡನೆ ಬರುತ್ತೇನೆ” ಎಂದರು. ಜನರು ಹಾಗೆಯೇ ಮಾಡಿದರು. ಯಾರೂ ಸಾಯಲಿಲ್ಲ. ಒಂದು ತಿಂಗಳಾದ ಮೇಲೆ ಎಲ್ಲರೂ ಊರಿಗೆ ಹಿಂದಿರುಗಿದರು. ಆದರೆ ಭಗವಾನರು ಹಿಂದಿರುಗಲಿಲ್ಲ. ಅವರು ಅಲ್ಲಿಯೇ ನೆಲೆಸಿದರು. “ಶೆಟ್ಟಿ ಇಳಿದಲ್ಲಿ ಪಟ್ಟಣ’’ ಎಂಬಂತಾಯಿತು.  ಭಕ್ತರು ಅಲ್ಲಿಯೇ ಅವರಿಗಾಗಿ ಒಂದು ಮನೆಯನ್ನು ಕಟ್ಟಿಕೊಟ್ಟರು. ಕಾಲಕ್ರಮದಲ್ಲಿ ಅಲ್ಲಿಯೇ ಇನ್ನೂ ಹತ್ತಾರು ಮನೆಗಳಾದವು. ಅವುಗಳ ಸುತ್ತಲೂ ಒಂದು ದೊಡ್ಡ ಪ್ರಾಕಾರ ನಿರ್ಮಾಣವಾಯಿತು. ಭಗವಾನರು ಅದನ್ನು “ಆನಂದವನ’’ ಎಂದು ಕರೆದರು. ಅದೇ ಇಂದಿಗೂ ಉಳಿದುಕೊಂಡು ಬಂದಿದೆ.

ಶೇಷಾಚಲ ಭಗವಾನರ ಶಿಷ್ಯ ಸಂಪತ್ತು ಬೆಳೆಯುತ್ತಾ ಹೋದಂತೆ ಆನಂದವನದ ಕಾರ್ಯಕಲಾಪಗಳೂ ಬೆಳೆಯುತ್ತಾ ಹೋದವು. ವೇದ ಮತ್ತು ಸಂಸ್ಕೃತಗಳನ್ನು ಕಲಿಸಲು ಒಂದು ಪಾಠಶಾಲೆ ಸ್ಥಾಪಿತವಾಯಿತು. ಕನ್ನಡ ಕಾದಂಬರಿಕಾರರಲ್ಲಿ ಪ್ರಸಿದ್ಧರಾಗಿರುವ ಗಳಗನಾಥರು ಅದರ ಉಪಾಧ್ಯಾಯರಾದರು. ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಜನರಲ್ಲಿ ಪ್ರಸಾರ ಮಾಡುವುದಕ್ಕಾಗಿ 1908ರಲ್ಲಿ ಕನ್ನಡದಲ್ಲಿ “ಸದ್ಬೋಧ ಚಂದ್ರಿಕೆ’’ ಎಂಬ ಮಾಸ ಪತ್ರಿಕೆ ಹುಟ್ಟಿಕೊಂಡಿತು. ಎಲ್ಲೊ ಗುಡ್ಡೊ ಕುಲಕರ್ಣಿ, ವಲ್ಲಭ ಮಹಾಲಿಂಗ ತಟ್ಟಿ ಮೊದಲಾದ ಭಕ್ತರು ಇದಕ್ಕೆ ಕಾರಣರಾದರು. ಈ ಮಾಸಪತ್ರಿಕೆ ಅತ್ಯಂತ ಜನಪ್ರಿಯವಾಯಿತು. ಅದರಲ್ಲಿ ಬಂದ ಲೇಖನಗಳು ಪುಸ್ತಕರೂಪವನ್ನು ತಾಳಿದವು. ಅವು “ಶೇಷಾಚಲ ಗ್ರಂಥಮಾಲೆ’’ಯಲ್ಲಿ ಪ್ರಕಟಗೊಂಡವು. ಇದಕ್ಕಾಗಿ ‘ಶೇಷಾಚಲ ಮುದ್ರಣ ಶಾಲೆ’ ಹುಟ್ಟಿಕೊಂಡಿತು. ಇವೆಲ್ಲ ಇಂದಿಗೂ ನಡೆದುಕೊಂಡು ಬಂದಿವೆ.

ಶೇಷಾಚಲ ಭಗವಾನರು ತಾವಾಗಿಯೇ ಯಾವ ಪವಾಡವನ್ನೂ ಮಾಡುತ್ತಿರಲಿಲ್ಲ. ಆದರೆ ಜನರ ಭಾವಕ್ಕೆ ತಕ್ಕಂತೆ ಅವು ತಾವಾಗಿಯೇ ವ್ಯಕ್ತವಾಗುತ್ತಿದ್ದವು. ಒಮ್ಮೆ ಅಗಡಿಯ ಗಂಗಾಬಾಯಿ ಎಂಬ ಹೆಣ್ಣು ಮಗಳು ಭಗವಾನರ ಬಳಿಗೆ ಬಂದಳು. ಆಕೆ ಮಹಾಪತಿವ್ರತೆ. ಆಕೆಗೆ ಭಗವಾನರಲ್ಲಿಯೂ ಬಹಳ ಭಕ್ತಿ. ಆಕೆ ಗುರುವಿನ ತೀರ್ಥ ಪ್ರಸಾದಗಳನ್ನು ಸೇವಿಸದೆ ಊಟಮಾಡುತ್ತಿರಲಿಲ್ಲ. ಆಕೆಯ ಗಂಡನೂ ಅಷ್ಟೆ. ಆತ ಮುದುಕ, ರೋಗಿಷ್ಟ. ಆತನಿಗೆ ಆಶ್ರಮಕ್ಕೆ ಬರಲಾಗುತ್ತಿರಲಿಲ್ಲ. ಆದ್ದರಿಂದ ಆತನು ಹೆಂಡತಿ ತಂದ ತೀರ್ಥ ಪ್ರಸಾದಗಳನ್ನು ತೆಗೆದುಕೊಳ್ಳುತ್ತಿದ್ದ. ಒಮ್ಮೆ ಆತನಿಗೆ ವಿಷಮಶೀತ ಜ್ವರ ಬಂದಿತು.  ಔಷಧ ಪಥ್ಯಗಳಿಂದ ಏನೂ ಪ್ರಯೋಜನವಾಗಲಿಲ್ಲ. ಆತ ಸತ್ತುಹೋಗುವಂತಾದ. ಗಂಗಾಬಾಯಿ ಭಗವಾನರ ಬಳಿಗೆ ಓಡಿ ಬಂದು ‘ತಂದೆ, ನನ್ನ ಮಾಂಗಲ್ಯವನ್ನು ಉಳಿಸಿ’ ಎಂದು ಹೇಳಿ ಗಳಗಳ ಅತ್ತಳು. ಗುರುಗಳು ‘ತಂಗಿ ಅಳಬೇಡ, ಗುರುವು ದಯಾಮಯ, ನಿನ್ನ ಓಲೆಯ ಭಾಗ್ಯವನ್ನು ಉಳಿಸುತ್ತಾನೆ. ಈ ತೀರ್ಥವನ್ನು ನಿನ್ನ ಗಂಡನ ಬಾಯಲ್ಲಿ ಹಾಕು’ ಎಂದು ಹೇಳಿ ತೀರ್ಥವನ್ನು ಕೊಟ್ಟರು. ಆಕೆ ಅದನ್ನು ಕೊಂಡೊಯ್ದು ಗಂಡನ ಬಾಯಲ್ಲಿ ಹಾಕಿದಳು. ಆಶ್ಚರ್ಯವೋ ಆಶ್ಚರ್ಯ. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆತ ಎದ್ದು ಕುಳಿತ. ಸಂಜೆಯ ವೇಳೆಗೆ ಜ್ವರ ನಿಂತಿತು. ಅದೇ ಘಳಿಗೆಯಲ್ಲಿ ಗಂಗಾಬಾಯಿಗೆ ಜ್ವರ ಕಾಣಿಸಿಕೊಂಡಿತು. ಮರುದಿನ ಬೆಳಗ್ಗೆ ಆಕೆ ಗುರುಗಳ ಹೆಸರನ್ನು ಹೇಳುತ್ತಾ ಕಡೆಯ ಉಸಿರನ್ನು ಎಳೆದಳು. ಇದಾದ ಮೂರು ದಿನಗಳ ಮೇಲೆ ಆಕೆಯ ಗಂಡನೂ ಕಾಲವಾದನು. ಗಂಗಾಬಾಯಿಗೆ ಮುತ್ತೈದೆಯ ಸಾವು ಸಿಕ್ಕಿತು.

ಇಂತಹ ಪವಾಡಗಳು ಎಷ್ಟೋ ನಡೆದವು. ಭಗವಾನರ ಕೀರ್ತಿ ಕನ್ನಡ ನಾಡಿನಲ್ಲಿ ಮಾತ್ರವೇ ಅಲ್ಲ, ಅಲ್ಲಿಂದ ಹೊರಗೂ ಬಹು ದೂರದವರೆಗೂ ಹಬ್ಬಿ ಹರಡಿತು. ದೂರ ದೇಶಗಳಿಂದ ಅನೇಕ ಸಾಧು ಸಜ್ಜನರೂ, ಋಷಿಮುನಿಗಳೂ ಆನಂದವನದ ಯಾತ್ರೆಯನ್ನು ಕೈಗೊಂಡರು. ಅವರು ಶೇಷಾಚಲರ ದರ್ಶನ, ಬೋಧನೆಗಳಿಂದ ಧನ್ಯರಾದರು.

ಶೇಷಾಚಲ ಭಗವಾನರ ವಯಸ್ಸು ಎಪ್ಪತ್ತನ್ನು ಸಮೀಪಿಸಿತು. ಅವರಿಗೆ ಅತಿಸಾರವೆಂಬ ರೋಗ ಬಂದಿತು. ಅದರಿಂದ ಅವರಿಗೆ ತುಂಬ ಬಾಧೆಯಾಗುತ್ತಿತ್ತು. ಆದರೇನು? ಅವರು ಶಿಷ್ಯರಿಗೆ ಬೋಧನೆ ಮಾಡುವುದನ್ನು ನಿಲ್ಲಿಸಲಿಲ್ಲ. ಅವರು ತಮ ಕೈ ಕೋಲನ್ನು ಮೂಲೆಯಲ್ಲಿಟ್ಟು ‘ಎಲೆ ರೋಗ, ನೀನು ಆ ಕೋಲಿನಲ್ಲಿರು’ ಎಂದು ಹೇಳಿ, ಶಿಷ್ಯರಿಗೆ ಬೋಧಿಸುತ್ತಿದ್ದರು. ಶಿಷ್ಯರು “ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಿ’’ ಎಂದರೆ, ಗುರುಗಳು, ‘”ಮಹಾರಾಜ್, ಭಗವಂತ ಈ ದೇಹದಿಂದ ಇನ್ನೂ ಐದು ವರ್ಷ ಸೇವೆ ನಡೆಯಬೇಕೆಂದು ಹೇಳಿದ್ದಾನೆ. ಅದು ನಿಮ್ಮ ಪುಣ್ಯ. ಈ ಬಾಯಿಂದ ಬರುವ ಮಾತೆಲ್ಲ ದೇವವಾಣಿ. ಇದು ಸಿಕ್ಕುವುದು ಕಷ್ಟ. ಆಸಕ್ತಿಯಿಂದ ಈ ವಾಣಿಯನ್ನು ಕೇಳಿರಿ; ಅಮೃತತ್ವ ದೊರೆಯುತ್ತದೆ’’ ಎಂದು ಹೇಳುತ್ತಿದ್ದರು.

ರೋಗ ದಿನದಿನಕ್ಕೆ ಉಲ್ಬಣಿಸುತ್ತಾ ಹೋಯಿತು. ಮಹಾ ಮಹಾ ವೈದ್ಯರೆಲ್ಲ ಬಂದು ಪರೀಕ್ಷಿಸಿ ಔಷಧ ಕೊಟ್ಟರು. ಏನೂ ಪ್ರಯೋಜನವಾಗಲಿಲ್ಲ. ಭಗವಾನರು ನಗುನಗುತ್ತಾ ‘ವೈದ್ಯರು ಎಲ್ಲ ನಾಡಿಗಳನ್ನೂ ಪರೀಕ್ಷಿಸುತ್ತಾರೆ. ಬ್ರಹ್ಮ ನಾಡಿ ಮಾತ್ರ ಅವರಿಗೆ ಸಿಗುತ್ತಿಲ್ಲ’ ಎಂದರು. ಅವರು ದಿನ ದಿನಕ್ಕೂ ಮೆತ್ತಗಾಗುವುದನ್ನು ಕೇಳಿ ಅವರ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಗುರುಗಳು ಕಾಯಿಲೆಯನ್ನು ಅನುಭವಿಸುತ್ತಿದ್ದರು, ಆದರೆ ವಿಶ್ರಾಂತಿ ಯಿಲ್ಲದೆ ಜನರಿಗೆ ಬೋಧನೆ ಮಾಡುತ್ತಿದ್ದರು. ಶಿಷ್ಯರು ವ್ಯಥೆ ಪಡುವರು. ವಿಶ್ರಾಂತಿ ತೆಗೆದುಕೊಳ್ಳಿ ಎಂದು ಬೇಡುವರು. ಆದರೆ ಭಗವಾನರು, ‘ವ್ಯಥೆ ಪಡಬೇಡಿ; ದೇಹ ಅನುಭವಿಸಬೇಕಾದದ್ದನ್ನೆಲ್ಲ ತಪ್ಪಿಸುವ ಹಾಗಿಲ್ಲ. ಮನಸ್ಸನ್ನು ದೇವರಲ್ಲಿ ನಿಲ್ಲಿಸುವುದು ಮುಖ್ಯ’ ಎಂದು ತಾವೇ ಸಮಾಧಾನ ಹೇಳುತ್ತಿದ್ದರು. ಗುರುಗಳ ಬೋಧನೆಯೂ ಮುಂದುವರಿಯುತ್ತಿತ್ತು.
ದೇಹವನ್ನು ಬಿಟ್ಟರು

ಅಂದು ಭಾದ್ರಪದ ಶುದ್ಧ ಸಪ್ತಮಿ. ಗುರುಗಳು ಎಂದಿನಂತೆ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರಪೂಜೆಯನ್ನು ಮಾಡಿ ಮುಗಿಸಿದರು. ಪಂಚಾಂಗ ಶ್ರವಣ ನಡೆಯಿತು. ಅಂದು ಭಾದ್ರಪದ ಸಪ್ತಮಿ ಬುಧವಾರ ಅಮೃತ ಸಿದ್ಧಿಯೋಗ. ಇದನ್ನು ಕೇಳುತ್ತಲೇ ಭಗವಾನರು ‘ಇದು ದೇಹ ಬಿಡುವುದಕ್ಕೆ ಸುದಿನ’ ಎಂದು ತಮಗೆ ತಾವೇ ಹೇಳಿಕೊಂಡರು. ಸುತ್ತಲೂ ಶಿಷ್ಯರು ಕುಳಿತಿದ್ದಾರೆ. ಭಗವಾನರು ಅವರನ್ನು ಕುರಿತು ನಾನು ಇಂದು ಸಮಾಧಿಯಲ್ಲಿರುವಾಗ ಈ ದೇಹ ಕೊನೆಯಾಗುತ್ತದೆ, ಆಗ ಯಾರೂ ಅಳಕೂಡದು. ಇದೊಂದು ಮಂಗಳದ ದಿನ. ಗುರುವಿನ ಕಡೆಯ ಸಂದೇಶವನ್ನು ನಿಮಗೆ ಹೇಳುತ್ತಿದ್ದೇನೆ. ಗುರುವೇ ಪರಮಾತ್ಮನ ಅವತಾರ. ಆತನ ಸೇವೆಯಿಂದ ಉದ್ಧಾರ. ಅಹಂಕಾರ, ಮಮಕಾರಗಳನ್ನು ಬಿಡಿರಿ. ಸಜ್ಜನರ ಸಹವಾಸ ಮಾಡಿ ಗುರುಭಕ್ತಿಯ ಸಂಪ್ರದಾಯವನ್ನು ಬೆಳೆಸಿಕೊಂಡು ಹೋಗಿ’’ ಎಂದು ಹೇಳಿ ಮಲಗಿದರು. ಅವರ ಬಾಯಿಯಿಂದ ‘ಹೇ ಗಂಗಾಮಾತೆ! ಎಂಬ ಮಾತು ಬಂತು. ಆ ವೇಳೆಗೆ ಸರಿಯಾಗಿ ಒಬ್ಬ ಬ್ರಾಹ್ಮಣ ತನ್ನ ಹೆಂಡತಿಯೊಡನೆ ಗಂಗೆಯ ಕೊಡವನ್ನು ಹೊತ್ತು ಅಲ್ಲಿಗೆ ಬಂದ. ಆತ ಕಾಶಿಯಿಂದ ಬಂದಿದ್ದ. ‘ಇಂತಹ ದಿನ ಇಷ್ಟು ಹೊತ್ತಿಗೆ ನೀವು ಗಂಗೆಯನ್ನು ಹೊತ್ತು ಆನಂದವನಕ್ಕೆ ಹೋಗಿ’ ಎಂದು ಆತನಿಗೆ ಪರಮೇಶ್ವರ ಕನಸಿನಲ್ಲಿ ಅಪ್ಪಣೆ ಮಾಡಿದ್ದನಂತೆ! ಶೇಷಾಚಲರು ಒಂದು ಬಟ್ಟಲಿನ ತುಂಬ ಆ ಗಂಗೆಯನ್ನು ಕುಡಿದು ಗಟ್ಟಿಯಾಗಿ ಭಜನೆ ಮಾಡಲು ತೊಡಗಿದರು. ಸುತ್ತಲಿನವರೂ ಅವರನ್ನು ಅನುಸರಿಸಿದರು. ಆಗ ಶ್ರೀ ಶೇಷಾಚಲರು, ‘ಚಿದಂಬರ ಚಿದಂಬರ, ದತ್ತ ದತ್ತ! ರಾಮ ರಾಮ’’ ಎಂದು ಗಟ್ಟಿಯಾಗಿ ಹೇಳಿದರು. ಮರುಕ್ಷಣದಲ್ಲಿ ಅವರು ಕಣ್ಣುಮುಚ್ಚಿ ಧ್ಯಾನದಲ್ಲಿ ಮುಳುಗಿದರು. ಅವರ ನೆತ್ತಿ ಒಡೆಯಿತು. ಪ್ರಾಣವಾಯು ದೇಹವನ್ನು ಬಿಟ್ಟು ಹೋಯಿತು. 

ಶ್ರೀ ಶೇಷಾಚಲರು, “ಭಕ್ತರಿಗೆ ಶರೀರಕ್ಕೆ ಮಹತ್ವ ನೀಡಬೇಡಿ, ಎಲ್ಲವೂ ಚಿದಂಬರನ ಮಹಿಮೆ, ಭಗವಂತನು ಎಲ್ಲರ ಶರೀರದಲ್ಲಿಯೂ ವ್ಯಾಪಿಸಿಕೊಂಡಿರುವನು ಅವನೇ ಸಾಕ್ಷಾತ್ ‘ಚಿದಂಬರನು’ ಎನ್ನುತ್ತಿದ್ದರು.

ಈಗ ಆನಂದವನ ಆಶ್ರಮದಲ್ಲಿ ಶ್ರೀ ಶೇಷಾಚಲ ಭಗವಾನರ ಅಂತ್ಯಕ್ರಿಯೆ ನಡೆದ ಕಡೆ ಒಂದು ಪುಟ್ಟ ಗುಡಿಯನ್ನು ಕಟ್ಟಿದ್ದಾರೆ. ಕಾಶಿಯಿಂದ ತಂದ ಒಂದು ಲಿಂಗವನ್ನು ಅಲ್ಲಿ ಇಟ್ಟಿದ್ದಾರೆ. ಅದಕ್ಕೆ ಶೇಷಾಚಲೇಶ್ವರ’ ಎಂದು ಹೆಸರು.

On Remembrance Day of Agadi Sheshachala Sadguru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ