ಸಂಯುಕ್ತಾ ಪುಲಿಗಲ್
ಸಂಯುಕ್ತಾ ಪುಲಿಗಲ್
ಸಂಯುಕ್ತಾ ಪುಲಿಗಲ್ ಅನುಪಮ ಬರಹಗಾರ್ತಿ, ವಿಶಿಷ್ಟ ಚಿಂತಕಿ ಮತ್ತು ನಿರಂತರ ಉತ್ಸಾಹಿ.
ಬೆಂಗಳೂರಿನವರಾದ ಸಂಯುಕ್ತಾ ಪುಲಿಗಲ್ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿ, ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಗಳನ್ನು ಗಳಿಸಿ ಪ್ರಸ್ತುತ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿವಿಧ ಆಸಕ್ತಿಗಳಲ್ಲಿ ವೀಣಾವಾದನವೂ ಒಂದು. ಎಲ್ಲಾ ತರಹದ ಸಂಗೀತದಲ್ಲೂ ಅವರಿಗೆ ಅಪಾರ ಅಕ್ಕರೆ.
ಕನ್ನಡವೆಂದರೆ ಅಕ್ಕರೆ ತುಂಬಿಕೊಂಡ ಸಂಯುಕ್ತಾ ಪುಲಿಗಲ್ ಅವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳು ಮತ್ತು ಸಮೂಹ ಮಾಧ್ಯಮಗಳಲ್ಲಿ ಪ್ರಕಾಶಿಸುತ್ತಾ ಬಂದಿವೆ. ಇತರ ಭಾಷೆಗಳ ಕೃತಿಗಳನ್ನು ಸುಂದರವಾಗಿ ಕನ್ನಡಕ್ಕೆ ತಂದಿರುವುದು ಅವರ ವೈಶಿಷ್ಟ್ಯ. ಅವರ ಒಂದು ಬರಹ ಹೇಳುವಂತೆ ಅವರಿಗೆ ಅನುವಾದವೆಂಬುದು ಒಂದು ಧ್ಯಾನ. ಈ ಧ್ಯಾನದಲ್ಲಿ ಹೊರಹೊಮ್ಮಿ ಜನ ಮೆಚ್ಚುಗೆ ಗಳಿಸಿರುವ ಅವರ ಅನುವಾದಿತ ಕೃತಿಗಳು 'ಪರ್ವತದಲ್ಲಿ ಪವಾಡ’, ‘ರೆಬೆಲ್ ಸುಲ್ತಾನರು’ ಮತ್ತು 'ಗೂಡಿನಿಂದ ಬಾನಿಗೆ'.
’ಲ್ಯಾಪ್ ಟಾಪ್ ಪರದೆಯಾಚೆಗೆ’ ಎಂಬುದು ಸಂಯುಕ್ತಾ ಪುಲಿಗಲ್ ಅವರ ಅಂಕಣ ಬರಹ. ‘ಆಪರೇಷನ್ ಬೆಳಕಿನ ಕಿಡಿಗಳು' ಅವರ ಕಾದಂಬರಿ. 'ಧೀಮಂತ ಚೇತನ' ಎಂಬುದು ವ್ಯಕ್ತಿ ಪರಿಚಯ. ಇವರ 'ನಾನಿಲ್ಲೇ ಇರುವೆ' ಕೃತಿ ಕ್ಯಾನ್ಸರ್ ಕುರಿತಾಗಿ, ತಜ್ಞ ವೈದ್ಯರ ಸಂದರ್ಶನಗಳು, ಆರ್ಥಿಕ ಸಲಹೆಗಳು ಹಾಗೂ ಉಪಯಕ್ತ ಸಂಪನ್ಮೂಲಗಳ ವಿವರಗಳನ್ನು ದಾಖಲಿಸಿದೆ.
ಇಂಗ್ಲಿಷ್ ಅಲ್ಲದೆ ವಿವಿಧ ಭಾಷಾ ಲೋಕಗಳ ಕಲಿಕೆ ಮತ್ತು ಸಾಹಿತ್ಯ ವ್ಯಾಸಂಗಗಳಲ್ಲಿ ತೊಡಗಿರುವ ಸಂಯುಕ್ತಾ ಅವರಿಂದ ಇನ್ನೂ ಹೆಚ್ಚು ಹೆಚ್ಚು ಲೋಕಸಾಹಿತ್ಯ ದರ್ಶನ ಮುಂದಿನ ದಿನಗಳಲ್ಲಿ ಬರಲಿದೆ.
ನಿತ್ಯ ಹಸನ್ಮುಖಿ, ಉತ್ಸಾಹಿ, ಕ್ರಿಯಾಶೀಲರಾದ ಸಂಯುಕ್ತಾ ಪುಲಿಗಲ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Samyuktha Puligal🌷🌷🌷
ಚದುರಿ ಹೋಗುತ್ತಿರುವ ನಮ್ಮ ಸಂಸ್ಕೃತಿಯ ಲಗಾಮು ಹಿಡಿದಿರುವ ನಿಮಗೆ ನನ್ನ ನಮನ ಗಳು.
ಪ್ರತ್ಯುತ್ತರಅಳಿಸಿ