ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡೆಪ್ಯೂಟಿ ಚನ್ನಬಸಪ್ಪ


ಡೆಪ್ಯೂಟಿ ಚನ್ನಬಸಪ್ಪನವರು


19ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ. ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಚನ್ನಬಸಪ್ಪನವರು.

ಚನ್ನಬಸಪ್ಪನವರು 1834 ವರ್ಷದ ನವೆಂಬರ್ 1ರಂದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಜನಿಸಿದರು. ತಂದೆ ಬಸಲಿಂಗಪ್ಪನವರು ಮತ್ತು ತಾಯಿ ತಿಮ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದಿದ್ದು ಧಾರವಾಡದಲ್ಲಿ. ಕಲಿತದ್ದು ಕನ್ನಡ, ಮರಾಠಿ ಮತ್ತು ಗಣಿತ.

ಬಾಲಕ ಚನ್ನಬಸಪ್ಪನವರು ಇಂಗ್ಲಿಷ್ ಕಲಿಯುವ ಹಂಬಲದಿಂದ ಯಾರಿಗೂ ಹೇಳದೆ ಕೇಳದೆ, ನಡೆದೇ ಪುಣೆ ತಲುಪಿದರು. ಪುಣೆಯಲ್ಲಿ ಅವರಿಗೆ ಆಶ್ರಯ ನೀಡಿದವರು ಗೋವಿಂದರಾವ್ ಮೆಹಂಡಳೇಕರ ಅವರು. ಓದಿನಲ್ಲಿ ಪಾರಂಗತರೆನಿಸಿದ ಚನ್ನಬಸಪ್ಪನವರು ಪ್ರತಿ ತಿಂಗಳೂ ಹತ್ತು ರೂಪಾಯಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರಂತೆ. ಅಂದಿನ ದಿನದಲ್ಲಿ ಕೆಲಸದಲ್ಲಿದ್ದವರಿಗೆ ಸಂಭಳ ಅಷ್ಟು ಬರುತಿದ್ದರೆ ಹೆಚ್ಚಿರುತ್ತಿದ್ದ ಕಾಲ. ಹೀಗೆ ತಾಯಿಯನ್ನು ತಮ್ಮ ಬಳಿ ವಾಸಕ್ಕೆ ಕರೆಸಿಕೊಂಡಾಗ ಆಕೆಗೆ ಹಿಗ್ಗೋ. ಹಿಗ್ಗು.

ಚನ್ನಬಸಪ್ಪನಾವರು ಇಂಗ್ಲೆಂಡಿನಲ್ಲಿ ಅದೇ ತಾನೇ ತೆರೆದ ಕೂಪರ್ಸ್‌ಹಿಲ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ಆಯ್ಕೆಯಾದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದರು. ದಾದಾಬಾಯಿ ನವರೋಜಿಯವರ ಈ ಯೋಜನೆ ಅಯಶಸ್ವಿಯಾಗಿ ಇಂಗ್ಲೆಂಡ್ ಪ್ರಯಾಣ ರದ್ದುಗೊಂಡಿತು. ಅವರು 1855ರಲ್ಲಿ ಧಾರವಾಡಕ್ಕೆ ವಾಪಸ್ಸು ಬಂದರು. ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು. ಅಷ್ಟರಲ್ಲಿ ಧಾರವಾಡದಲ್ಲಿ ನೂತನವಾಗಿ ಆರಂಭಗೊಂಡ ನಾರ್ಮಲ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಆಯ್ಕೆಗೊಂಡರು. ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿ 1861ರಲ್ಲಿ ಬೆಳಗಾಂ ಜಿಲ್ಲೆಯ ಡೆಪ್ಯೂಟಿ ಇನ್‌ಸ್ಪೆಕ್ಟರೆನಿಸಿದರು. ಹೀಗಾಗಿ ಅವರ ಹೆಸರಿಗೆ ಡೆಪ್ಯೂಟಿ ಅಂಟಿಕೊಂಡಿತು.

ಚನ್ನಬಸಪ್ಪನವರು ಅಧಿಕಾರಕ್ಕೆ ಬರುವ ಮುನ್ನ ಧಾರವಾಡ, ಬೆಳಗಾವಿ, ಬಿಜಾಪುರ ಜಿಲ್ಲೆಯ ಕನ್ನಡ ಶಾಲೆಯ ಸಂಖ್ಯೆ ಕೇವಲ 34 ಇತ್ತು. ಚನ್ನಬಸಪ್ಪನವರ ಹತ್ತು ವರುಷದ ಆಡಳಿತದಲ್ಲಿ ಅಲ್ಲಿ ಕನ್ನಡ ಶಾಲೆಗಳ ಸಂಖ್ಯೆ 668ಕ್ಕೆ ಏರಿತು.
ಚನ್ನಬಸಪ್ಪನವರು, ರಾಮಚಂದ್ರ ಚುರಮುರಿ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದ ಕನ್ನಡ ಭಕ್ತರಿಗೆ ಕನ್ನಡದಲ್ಲಿ ಗ್ರಂಥ ರಚಿಸಲು ಪ್ರೇರಣೆ, ಪ್ರೋತ್ಸಾಹ, ಬೆಂಬಲಗಳನ್ನು ಒದಗಿಸಿದರು. ಸ್ವಯಂ ತಾವೇ ಪಠ್ಯ ಪುಸ್ತಕಗಳನ್ನು ರಚಿಸಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರದುರ್ಗದ ನಿರಂಜನ ಜಗದ್ಗುರು ಬೃಹನ್ಮಠದ ಮಹಾಲಿಂಗ ಸ್ವಾಮಿಗಳ ಮನವೊಲಿಸಿ ಬೆಳಗಾವಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದರು. ಸ್ವಾಮಿಗಳ ನಿಧನಾನಂತರ ತಾವೇ ಇದರ ಆರ್ಥಿಕ ಹೊಣೆ ಹೊತ್ತರು. ಹೆಂಡತಿ ಮೈಮೇಲಿನ ನಗ, ಮನೆ-ಮಠಮಾರಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಮಾಡಿದರಂತೆ.

ಚನ್ನಬಸಪ್ಪನವರು 'ಕಾಮೆಡಿ ಆಫ್ ಎರರ್ಸ್‌' (ನಗದವರನ್ನು ನಗಿಸುವ ಕಥೆ) ಮತ್ತು 'ಮ್ಯಾಕ್‌ಬೆತ್' ಕೃತಿಗಳನ್ನು ಪ್ರಕಟಿಸಿದರು. 'ಮ್ಯಾಕ್ಬೆತ್' ಕೃತಿಯ ಮೂಲಕ ಶೇಕ್ಸಪಿಯರ್ ಅನ್ನು ಮೊದಲು ಕನ್ನಡಕ್ಕೆ ತಂದವರು ಚನ್ನಬಸಪ್ಪನವರು.

ಚನ್ನಬಸಪ್ನವರು ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ "ಜೀವನ ಶಿಕ್ಷಣ" ಪತ್ರಿಕೆಯ ಸ್ಥಾಪಕರಾಗಿಯೂ ಸ್ಮರಣೀಯರು. ಮಕ್ಕಳ ಶಿಕ್ಷಣಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿದ್ದ ಚನ್ನಬಸಪ್ಪನವರಿಗೆ ಜೀವನವೇ ಶಿಕ್ಷಣ ಶಾಲೆಯಾಗಿದ್ದರಲ್ಲಿ ಅಚ್ಚರಿಯಿಲ್ಲ.

ಡೆಪ್ಯುಟಿ ಚನ್ನಬಸಪಪ್ನವರು 1881 ವರ್ಷದ ಜನವರಿ 4ರಂದು ಈ ಲೋಕವನ್ನಗಲಿದರು. 1981 ವರ್ಷದಲ್ಲಿ ಚನ್ನಬಸಪ್ಪನವರು ನಿಧನರಾದ ನೂರು ವರ್ಷಗಳಾದ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ.

ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಡೆಪ್ಯೂಟಿ ಚನ್ನಬಸಪ್ಪನವರ ನೆನಪು ಎಲ್ಲಕಾಲಕ್ಕೂ ಸ್ಪೂರ್ತಿದಾಯಕ.  


 Tag: Deputy Channabasappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ