ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ತಿಪ್ಪೇಸ್ವಾಮಿ


 ಎಸ್. ತಿಪ್ಪೇಸ್ವಾಮಿ


ವಿಶ್ವಮಾನ್ಯ ಛಾಯಾಗ್ರಾಹಕ, ನಮ್ಮ ಕನ್ನಡಿಗರೇ ಆದ ಎಸ್. ತಿಪ್ಪೇಸ್ವಾಮಿ ಅವರು ಕಳೆದ 6 ದಶಕಗಳಿಂದಲೂ ಛಾಯಾಗ್ರಹಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಛಾಯಾಚಿತ್ರ ಪತ್ರಿಕಾ ವೃತ್ತಿ, ವೈದ್ಯಕೀಯ ಛಾಯಾಗ್ರಹಣ, ಸಿನಿಮಾ, ಸ್ಥಿರ ಚಿತ್ರ, ಛಾಯಾಚಿತ್ರ ಶಿಕ್ಷಣ, ವನ್ಯಜೀವಿ ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಅವರದ್ದು ಅನನ್ಯ ಸೇವೆ. 

ತಿಪ್ಪೇಸ್ವಾಮಿ 1942ರ ಅಕ್ಟೋಬರ್ 24ರಂದು ಚಿತ್ರದುರ್ಗ ಜಿಲ್ಲೆಯ  ಹಿರಿಯೂರು ತಾಲ್ಲೂಕಿನ ಆಲೂರಿಲ್ಲಿ ಜನಿಸಿದರು. ತಂದೆ ಸಿದ್ದಣ್ಣನವರು. ತಾಯಿ ಕರಿಯಮ್ಮನವರು. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣ ಪೂರೈಸಿದ ತಿಪ್ಪೇಸ್ವಾಮಿ ಅವರಿಗೆ ಚಿತ್ರದುರ್ಗದಲ್ಲಿ ಬಿಎಸ್‌ಸಿ ಪದವಿ ಪಡೆಯುವ ಹಂತದಲ್ಲಿ ಛಾಯಾಗ್ರಹಣದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಮುಂದೆ ಅವರು ಮೂರು ವರ್ಷದ ಸಿನಿಮಾಟೋಗ್ರಫಿ ಪದವಿ ಸಾಧನೆಯನ್ನೂ ಮಾಡಿದರು.

ಕ್ರಮೇಣದಲ್ಲಿ ಛಾಯಾಗ್ರಹಣದಲ್ಲಿ ವೈಶಿಷ್ಟ್ಯತೆ ಸಾಧಿಸಿದ ತಿಪ್ಪೇಸ್ವಾಮಿ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಹಾನ್ ಛಾಯಾಗ್ರಾಹಕರಾಗಿ ಏರಿದ ಎತ್ತರ ಅಸಾಮಾನ್ಯವಾದದ್ದು. ಅವರಿಗೆ 1992ರಲ್ಲಿ ಗ್ರೇಟ್ ಬ್ರಿಟನ್‌ನ 'ರಾಯಲ್ ಫೋಟೋಗ್ರಫಿ ಸೊಸೈಟಿ'ಯ ಫೆಲೋಶಿಪ್ (ಎಫ್‌ಆರ್‌ಪಿಎಸ್), 1995ರಲ್ಲಿ ಯುನೆಸ್ಕೊದ 'ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೋಗ್ರಫಿ' ಗೌರವ (ಇಎಫ್‌ಐಎಸಿ), 2000ದಲ್ಲಿ 'ಕೊಲೀಗ್ ಸೊಸೈಟಿ ಕ್ಯಾಲಿಫೋರ್ನಿಯ  ಫೆಲೋಶಿಪ್' ಗೌರವ (ಎಫ್‌ಐಸಿಎಸ್), 2011ರಲ್ಲಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ ಫೆಲೋಶಿಪ್ ಪ್ರಶಸ್ತಿ, 2017ರಲ್ಲಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕದಿಂದ ವಿಶ್ವದ ಮಹಾನ್ ಛಾಯಾಗ್ರಾಹಕರ ಪಟ್ಟಿಯಲ್ಲಿ ಐದನೇ ಸ್ಥಾನದ ಗೌರವ, ಫ್ರಾನ್ಸ್ ಎಕ್ಸಲೆನ್ಸಿ ಫೆಡರೇಷನ್ ಇಂಟರ್ ನ್ಯಾಷನಲ್ ಆರ್ಟ್ ಫೋಟೋಗ್ರಫಿ ಗೌರವ,  2018ರಲ್ಲಿ ಭಾರತದ ರಾಷ್ಟ್ರಪತಿಗಳು ನೀಡಿದ 'ವಯೋಶ್ರೇಷ್ಠ ಸಮ್ಮಾನ್' ರಾಷ್ಟ್ರಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪಶಸ್ತಿ ಹೀಗೆ ಅನೇಕ ಮಹತ್ವದ ಗೌರವಗಳು ಸಂದಿವೆ. ಇದಲ್ಲದೆ ರಾಷ್ಟ್ರೀಯ ಮಟ್ಟದಲ್ಲೇ 250ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ವನ್ಯಜೀವಿ ಚಿತ್ರಗಳಿಗಾಗಿ 35 ದೇಶಗಳ ನಡುವೆ ನಡೆದ ‘ವಿಶ್ವಕಪ್`ನಲ್ಲಿ 7 ಬಾರಿ ಪ್ರಶಸ್ತಿ ಪಡೆದ ಭಾರತೀಯ ತಂಡದ ಮಹಾನ್ ಛಾಯಾಗ್ರಾಹಕ ತಿಪ್ಪೇಸ್ವಾಮಿ ಅವರು.

ಕಾಲಾನುಕ್ರಮದಲ್ಲಿ  ಕಪ್ಪು ಬಿಳುಪು, ವರ್ಣ ಫಿಲಂ, ಡಿಜಿಟಲ್ ಮತ್ತು ಇಂದಿನವರೆಗಿನ ಎಲ್ಲ ಆಧುನಿಕ ತಂತ್ರಜ್ಞಾನಗಳೆಲ್ಲದರಲ್ಲಿ ತಿಪ್ಪೇಸ್ವಾಮಿ ಅವರಿಗೆ ಶ್ರೇಷ್ಠ ಮಟ್ಟದ ಪರಿಣತಿ ಇದೆ. 

ವಿಶ್ವಮಟ್ಟದ ವ್ಯಾಪಕತೆ ಹೊಂದಿದ್ದರೂ ತಿಪ್ಪೇಸ್ವಾಮಿ ಅವರು ತಮ್ಮ ಮಣ್ಣನ್ನು ಮರೆತವರಲ್ಲ. ನಮ್ಮ ಭಾಷೆ, ಸಂಸ್ಕೃತಿ, ಪರಿಸರ, ಪಕ್ಷಿ ಪ್ರಾಣಿಗಳ ಕುರಿತಾದ ವೈಜ್ಞಾನಿಕ ತಿಳುವಳಿಕೆ, ನಾಡಿನ ವಿವಿಧ ರೀತಿಯ ಆಗುಹೋಗುಗಳು, ಚಳವಳಿಗಳು, ಚಾರಿತ್ರಿಕ ಹೋರಾಟಗಳು, ಸಾಹಿತ್ಯ-ಸಾಂಸ್ಕೃತಿಕ ವಿದ್ಯಮಾನಗಳು ಇವೆಲ್ಲವುಗಳಲ್ಲಿನ ಸಕ್ರಿಯ ಅರಿವು-ಅನುಭವಗಳ ಜೊತೆಗೆ, ಎಲ್ಲರೊಡನೆ ಸ್ನೇಹ, ಸರಳತೆ, ಪ್ರೀತಿ-ವಾತ್ಸಲ್ಯಗಳ ಸಜ್ಜನಿಕೆ, ಇತರರನ್ನು ಮೆಚ್ಚಿ ಪ್ರೋತ್ಸಾಹಿಸುವ ಔದಾರ್ಯ ಹೀಗೆ ಎಲ್ಲದರಲ್ಲೂ ತಿಪ್ಪೇಸ್ವಾಮಿ ಶಿಖರಪ್ರಾಯರು. 

ತಿಪ್ಪೇಸ್ವಾಮಿ ಅವರು ಬದುಕಿನ ಬಂಡಿಯ ಚಾಲನೆಯ ನಿಟ್ಟಿನಲ್ಲಿ ಸಿನಿಮಾ ಕ್ಷೇತ್ರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಆದರೆ ವನ್ಯಜೀವಿ ಛಾಯಾಗ್ರಾಹಕಣ ಅವರಿಗೆ ಸಂತಸ-ಸಂತೃಪ್ತಿಗಳನ್ನು ನೀಡಿರುವುದರ ಜೊತೆಗೆ ವಿಶ್ವವ್ಯಾಪಿಯಾದ ಪ್ರಸಿದ್ಧಿಯನ್ನೂ ತಂದಿದೆ.  ಹತ್ತು ಚಲನಚಿತ್ರಗಳು ಮತ್ತು ಇನ್ನೂರಕ್ಕೂ ಹೆಚ್ಚು ಡಾಕ್ಯುಮೆಂಟರಿಗಳಿಗೆ ಸಹಾ ತಿಪ್ಪೇಸ್ವಾಮಿ ಅವರ ಛಾಯಾಗ್ರಹಣ ಸಂದಿದ್ದು ಅವುಗಳಲ್ಲಿ ಅನೇಕವು ರಾಷ್ಟ್ರಮಟ್ಟದವರೆಗಿನ ಪ್ರಶಸ್ತಿಗಳನ್ನು ಗಳಿಸಿವೆ.

ಛಾಯಾಗ್ರಹಣವೆಂಬುದು ಸುಜ್ಞಾನದ ಜೊತೆಗೆ ಅಪಾರ ತಾಳ್ಮೆ ಬೇಡುವಂತದ್ದು. ಅದೊಂದು ತಪಸ್ಸು ಎಂದರೂ ಸರಿಯೇ. ಇದೆಲ್ಲವೂ ಬರೀ ಮಾತುಗಳಲ್ಲ. ತಿಪ್ಪೇಸ್ವಾಮಿ ಅವರ ಕಾಯಕವನ್ನು ನಮ್ಮ ನೋಟ ಜ್ಞಾನಗಳ ಮಿತಿಯಲ್ಲೇ ಇನಿತೇ ಇನಿತು ನಿಟ್ಟಿಸಿದರೂ ಸಾಕು, ಇದರ ಹಿಂದಿರುವ ತಪಸ್ವಿಯ ಕುರುಹು ಕಾಣಸಿಗುತ್ತದೆ.

ಈ ಮಹಾನ್ ಛಾಯಾಗ್ರಾಹಕ ತಪಸ್ವಿ, ಸಾಧಕರಾದ ತಿಪ್ಪೇಸ್ವಾಮಿ ಅವರಿಗೆ ಮೆಚ್ಚುಗೆ, ಅಭಿಮಾನ ಮತ್ತು ಗೌರವಗಳನ್ನು ಹೊತ್ತ ಹೃದಯದಾಳದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

On the birth day of one among the greatest photographers of international fame S Thippeswamy Siddanna 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ