ವ್ಯಾಸರಾವ್ ನಿಂಜೂರ್
ವ್ಯಾಸರಾವ್ ನಿಂಜೂರ್
ಡಾ. ವ್ಯಾಸರಾವ್ ನಿಂಜೂರ್ ವಿಜ್ಞಾನಿಗಳಾಗಿ ಮತ್ತು ಕನ್ನಡ ಸಾಹಿತಿಗಳಾಗಿ ಹೆಸರಾಗಿದ್ದಾರೆ.
ವ್ಯಾಸರಾವ್ ನಿಂಜೂರ್ ಉಡುಪಿ ಜಿಲ್ಲೆಯ ತೆಂಕನಿಡಿಯೂರಿನಲ್ಲಿ 1940ರ ಅಕ್ಟೋಬರ್ 6ರಂದು ಜನಿಸಿದರು. ತಂದೆ ಶ್ರೀನಿವಾಸ ನಿಂಜೂರ್. ತಾಯಿ ಸೀತಮ್ಮ. ಶಾಲಾ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ನಡೆದವು. ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ ಓದಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ ಗಳಿಸಿದರು.
ವ್ಯಾಸರಾವ್ ನಿಂಜೂರ್ ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭ ಮಾಡಿದರು. ಮುಂದೆ ಮುಂಬೈನ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. ನಿವೃತ್ತಿಯ ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.
ಭಾಭಾ ಪರಮಾಣು ಕೇಂದ್ರದಲ್ಲಿದ್ದಾಗ ವ್ಯಾಸರಾವ್ ನಿಂಜೂರ್ ಅವರ 87 ಸಂಶೋಧನ ಪ್ರಬಂಧಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅಂತರಕೋಶೀಯ ಲೈಸೋಸೋಮ್ ಮತ್ತು ಲೈಸೋಸೋಮ್ ಕಿಣ್ವಗಳ ಬಗ್ಗೆ ಅವರು ವಿಶೇಷ ಸಂಶೋಧನೆ ನಡೆಸಿದರು. ಆಹಾರ ವಿಜ್ಞಾನ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ ಅವರ ಸಂಶೋಧನೆ ಕ್ಷೇತ್ರಗಳು. ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕಿರಣಗಳ ಬಳಕೆ, ಪ್ರೊಟೀನ್ ನ್ಯೂನತೆಯ ಪ್ರಭಾವ, ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ ಮುಂತಾದ ವಿಷಯಗಳಲ್ಲಿ ಅವರ ಸಂಶೋಧನೆಗಳು ವಿಶ್ವಮಾನ್ಯತೆ ಗಳಿಸಿದವು.
ವ್ಯಾಸರಾವ್ ನಿಂಜೂರ್ ಅವರು ವಿಜ್ಞಾನಿಯಾಗಷ್ಟೇ ಅಲ್ಲದೆ ಕನ್ನಡದ ಸಾಹಿತಿಯಾಗಿಯೂ ಅಪಾರ ಕೃಷಿ ಮಾಡಿದ್ದಾರೆ. ಉಸಿರು, ಚಾಮುಂಡೇಶ್ವರಿ ಭವನ, ತೆಂಕನಿಡಿಯೂರಿನ ಕುಳುವಾರಿಗಳು ಅವರ ಕಾದಂಬರಿಗಳಲ್ಲಿ ಸೇರಿವೆ. ಕುಂಕುಮ, ಮಂಚ, ದೂಜ ಮಾಸ್ತರರ ಮಗಳು ಬಸಿರಾದುದು ಅವರ ಕಥಾಸಂಕಲನಗಳಲ್ಲಿ ಸೇರಿವೆ. ನಲ್ವತ್ತರ ನಲುಗು ಅವರ ನಾಟಕ ಕೃತಿ. ಇವರು ಬರೆದ ಅನೇಕ ನಾಟಕಗಳು ರಂಗಮಂಚವೇರಿ ಯಶಸ್ವಿಯಾಗಿವೆ. ಮಕ್ಕಳಿಗಾಗಿ ಹೋಮಿಭಾಭಾ ಕೃತಿ ಮೂಡಿಸಿದ್ದಾರೆ. ಅವರ ಹಲವಾರು ಕವಿತೆ, ಕಥೆಗಳು ಪತ್ರಿಕೆಗಳಲ್ಲಿ ಮೂಡಿವೆ. ಅವರ ಸಮಗ್ರ ಕಥೆಗಳು ಮತ್ತು ಆತ್ಮಕಥನ ‘ಎಳೆದ ತೇರು’ ಲೋಕಾರ್ಪಣೆ ಆಗಿವೆ.
ವ್ಯಾಸರಾವ್ ನಿಂಜೂರ್ ಅವರು ಬುಲೆಟಿನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಇರ್ರೇಡಿಯೇಷನ್ ನ್ಯೂಸ್, ಬೆಳಗು, ಗೋಕುಲವಾಣಿ ಮುಂತಾದ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆ ನಿರ್ವಹಿಸಿದ್ದಾರೆ
ವ್ಯಾಸರಾವ್ ನಿಂಜೂರ್ ಅವರ ಉಸಿರು ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ಚಾಮುಂಡೇಶ್ವರಿ ಭವನ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಮೂಡಬಿದಿರೆ 71ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಪ್ರಶಸ್ತಿ. ಮಹಾರಾಷ್ಟ್ರದ 6ನೆಯ ಸಾಂಸ್ಕೃತಿಕ ಸಮಾವೇಶದಲ್ಲಿ ‘ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
On the birthday of scientist and writer Dr. Vyasarao Ninjoor

ಕಾಮೆಂಟ್‌ಗಳು