ಆರ್. ಎಸ್. ನಾಯ್ಡು
ಆರ್. ಎಸ್. ನಾಯ್ಡು
ಆರ್. ಎಸ್. ನಾಯ್ಡು ಎಂದು ಪ್ರಖ್ಯಾತರಾದ ಆರ್. ಸೀತಾಪತಿ ನಾಯ್ಡು ಮಹಾನ್ ರೇಖಾಚಿತ್ರ ಕಲಾವಿದ, ಶಿಲ್ಪಿ, ಪತ್ರಕರ್ತ, ರಾಷ್ಟ್ರಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರು.
ಸೀತಾಪತಿ ನಾಯ್ಡು 1906ರ ಆಗಸ್ಟ್ 27ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಪಿ.ವಿ. ರಂಗಸ್ವಾಮಿ ನಾಯ್ಡು. ತಾಯಿ ರಂಗನಾಯಕಮ್ಮ. ಅವರ ವಿದ್ಯಾಭ್ಯಾಸ ಮೈಸೂರು, ಧಾರವಾಡ ಮತ್ತು ತಿರುಚಿನಾಪಳ್ಳಿ, ಮತ್ತು ಪುಣೆಗಳಲ್ಲಿ ನಡೆಯಿತು.
ಆರ್. ಎಸ್. ನಾಯ್ಡು ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಯುವ ಕಾಂಗ್ರೆಸ್ ಸಂಸ್ಥೆಯನ್ನು ಕಟ್ಟಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದರು. ಗಾಂಧೀಜಿಯವರ ಜೊತೆ ಇವರೂ ಯರವಾಡ ಜೈಲಿನಲ್ಲಿದ್ದರು.
ಮಾರ್ಕ್ಸ್‌ವಾದಿಂದ ಪ್ರಭಾವಿತರಾಗಿದ್ದ ಆರ್. ಎಸ್. ನಾಯ್ಡು ಜೈಲಿನಲ್ಲಿದ್ದಾಗಲೇ ಜೇಡಿಮಣ್ಣು ತರಿಸಿ ಆಳೆತ್ತರದ ಲೆನಿನ್ ಮೂರ್ತಿ ನಿರ್ಮಾಣ ಮಾಡಿದರು. ಮೀನೂಮಸಾನಿ, ಅಶೋಕ ಮೆಹ್ತಾ, ಮೆಹರಾಲಿಯವರೊಡಗೂಡಿ ಸಮಾಜವಾದಿಪಕ್ಷ ಕಟ್ಟಿದರು. ಅಖಿಲ ಭಾರತ ಆರ್ಥಿಕ ಪರಿಸ್ಥಿತಿಯ ಚಿತ್ರಣವನ್ನು ಜನರಿಗೆ ಬಿಂಬಿಸಲು ವಿಕ್ಟೋರಿಯಲ್ ಎಕನಾಮಿಕ್ಸ್ ಪತ್ರಿಕೆ ಪ್ರಾರಂಭಿಸಿದರು.
ಆರ್. ಎಸ್. ನಾಯ್ಡು ಪತ್ರಿಕೆಗಳಿಗೆ ವ್ಯಂಗ್ಯ ಚಿತ್ರಗಳನ್ನು ಬರೆದರು. ಅವುಗಳಲ್ಲಿ ಅನೇಕವು ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆಯಲ್ಲಿಯೂ ಮರುಮುದ್ರಣಗೊಳ್ಳುತ್ತಿದ್ದವು. ಜ್ಯೋತಿಬಸು, ರಜನಿಪಟೇಲ್, ಕುಮಾರಮಂಗಳಂರೊಡನೆ ಲಂಡನ್ನಿನಲ್ಲಿ ಕೆಲಕಾಲ ಇದ್ದರು. ಮುಂಬಯಿಯಲ್ಲಿಯೂ ಕೆಲವರ್ಷದ ಜೀವನ ನಡೆಸಿರು.
ಆರ್. ಎಸ್. ನಾಯ್ಡು ಬೆಂಗಳೂರಿಗೆ ಬಂದು ಟಿಎಸ್ಸಾರ್ ಸ್ನೇಹದಿಂದ ಪ್ರಜಾವಾಣಿ, ಹೆರಾಲ್ಡ್ ಪತ್ರಿಕೆಗೆ ವ್ಯಂಗ್ಯ ಚಿತ್ರಗಳು ಮತ್ತು ರೇಖಾ ಚಿತ್ರಗಳನ್ನು ಮೂಡಿಸಿದರು. ಇವರ ರೇಖಾ ಚಿತ್ರಗಳದು ವಿನೂತನ ಶೈಲಿ, ನಿರೂಪಣೆ, ಗತಿ ವಿನ್ಯಾಸದ ಅಳವಡಿಕೆಯಿಂದ ಅತ್ಯಂತ ಮನಸೆಳೆಯುತ್ತಿದ್ದವು. ಇವರು ಸ್ನೇಹಿತರಿಗೆ ಬರೆದ ಕಾಗದಗಳಲ್ಲೂ ರೇಖಾ ಚಿತ್ರಗಳಿರುತ್ತಿದ್ದವು.
ಆರ್. ಎಸ್. ನಾಯ್ಡು ಉಬ್ಬು ಚಿತ್ರ, ಭಾವ ಚಿತ್ರ ಮತ್ತು ಶಿಲ್ಪ ಚಿತ್ರಗಳ ರಚನೆಯಲ್ಲಿಯೂ ಅಗಾಧ ಪ್ರತಿಭೆ. ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಲೆನಿನ್, ಸ್ಟಾಲಿನ್, ಶಿವ, ಬುದ್ಧ, ಕ್ರಿಸ್ತ, ಮೇರಿ, ಷಾ, ಕೈಲಾಸಂ, ಕುವೆಂಪು, ಬೇಂದ್ರೆ, ಠಾಕೂರ್, ಬಿ.ಎಂ.ಶ್ರೀ ಮುಂತಾದ ಅನೇಕ ಮಹನೀಯರ ಶಿಲ್ಪಗಳನ್ನು ಮೂಡಿಸಿದ್ದರು.
ಆರ್. ಎಸ್. ನಾಯ್ಡು ಮೈಸೂರಿನ ರಾಜೇಂದ್ರನಗರದಲ್ಲಿ ಕರ್ನಾಟಕ ಗೃಹ ಮಂಡಲಿಯು ಕಟ್ಟಿಸಿದ ಕಾರ್ಮಿಕ ಕಾಲನಿಯಲ್ಲಿ ಕೊನೆಗಾಲದ ಬದುಕು ನಡೆಸಿ 1985ರ ಅಕ್ಟೋಬರ್ 6ರಂದು ನಿಧನರಾದರು.
On the birth anniversary of great artiste and freedom fighter R. S. Naïdu
ಕಾಮೆಂಟ್‌ಗಳು