ಹಿರಿಯಡ್ಕ ಗೋಪಾಲರಾವ್
ಹಿರಿಯಡ್ಕ ಗೋಪಾಲರಾವ್
ಇಂದು ಯಕ್ಷಗಾನ ಲೋಕದ ಮದ್ದಳೆ ಮಾಂತ್ರಿಕ, ಶತಾಯುಷಿ ಹಿರಿಯಡ್ಕ ಗೋಪಾಲರಾವ್ ಸಂಸ್ಮರಣಾ ದಿನ. 1919ರಲ್ಲಿ ಜನಿಸಿದ್ದ ಗೋಪಾಲರಾಯರು 101 ವರ್ಷದ ಜೀವನ ನಡೆಸಿದವರು.
ಹಿರಿಯಡ್ಕ ಗೋಪಾಲರಾಯರು ಉಡುಪಿ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನಗಳು ಮತ್ತು ಸಾಹಿತ್ಯದ ಕುರಿತು ವಿಚಾರ ಸಂಕಿರಣ ಸಭೆ ಸಮಾರಂಭಗಳಲ್ಲಿ ತಪ್ಪದೆ ಕಂಡು ಬರುತ್ತಿದ್ದ ವ್ಯಕ್ತಿಯಾಗಿದ್ದರು. ಯಕ್ಷಗಾನ ಲೋಕದ ಜೀವಂತ ದಂತಕತೆಯಾಗಿದ್ದ ಇವರು ಸಂಘ ಸಂಸ್ಥೆಯವರು ಆಸಕ್ತರು ಕರೆದರೆ ಹಿರಿಯ ವಯಸ್ಸಿನಲ್ಲೂ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು.
ಭಾಗವತ ಕುಂಜಾಲು ಶೇಷಗಿರಿ ಕಿಣಿ, ಹಾರಾಡಿ ರಾಮಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಶಿರಿಯಾರ ಮಂಜುನಾಕ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೊಳ್ಕೆಬೈಲು ಶೀನ ನಾಯ್ಕ ಮುಂತಾದವರನ್ನು ಒಳಗೊಂಡ ಬಡಗುತಿಟ್ಟು ಯಕ್ಷಗಾನದ ಸುವರ್ಣಯುಗದ ಓರ್ವ ಪ್ರತಿನಿಧಿಯಾಗಿದ್ದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗೋಪಾಲರಾಯರು ಒಬ್ಬರಾಗಿದ್ದರು. ಮದ್ದಳೆ ವಾದನದ ಗಂಟು ಉರುಳಿಕೆ, ಏರುಮದ್ದಳೆ, ಹಾಗೂ ಆಧುನಿಕ ಶಿಕ್ಷಣ ಪದ್ಧತಿಗಳು ಬಡಗುತಿಟ್ಟು ಯಕ್ಷಗಾನಕ್ಕೆ ರಾಯರು ನೀಡಿದ ಮುಖ್ಯ ಕೊಡುಗೆಗಳಾಗಿದ್ದವು.
ಹಿರಿಯಡ್ಕ ಸಮೀಪ ಓಂತಿಬೆಟ್ಟಿನಲ್ಲಿ ಸರಳ ಜೀವನ ನಡೆಸುತ್ತಿದ್ದ ಮದ್ದಳೆಯ ಮಾಂತ್ರಿಕರಾದ ಗೋಪಾಲರಾಯರು 1919ರಲ್ಲಿ ಹಿರಿಯಡ್ಕ ಶೇಷಗಿರಿರಾವ್ ಮತ್ತು ಲಕ್ಷ್ಮೀ ದಂಪತಿಗಳ ಸುಪುತ್ರರಾಗಿ ಜನಿಸಿದರು. ಉಡುಪಿಯ ಅನಂತೇಶ್ವರ ಶಾಲೆಯಲ್ಲಿ ಆರನೇ ತರಗತಿ ಮುಗಿಸಿ ಜೀವನ ಶಿಕ್ಷಣಕ್ಕೆ ಕಾಲಿಟ್ಟರು.
ತಂದೆ ಆಯುರ್ವೇದ ವೈದ್ಯರಾಗಿದ್ದು ಮದ್ದಳೆವಾದನವನ್ನು ತಿಳಿದಿದ್ದರಿಂದ ಎರಡನ್ನೂ ಮಗನಿಗೆ ಧಾರೆಯೆರೆದರು. ಯಕ್ಷಗಾನದ ಅಭದ್ರತೆಯ ನಡುವೆ ವೈದ್ಯವೃತ್ತಿ ಗೋಪಾಲರಾಯರಿಗೆ ಭದ್ರತೆ ನೀಡಿತ್ತು. ಮದ್ದಳೆವಾದನ ಮತ್ತು ಕುಣಿತವನ್ನು ಹಿರಿಯಡ್ಕದ ಗುರಿಕಾರ ನಾಗಪ್ಪ ಕಾಮತರಿಂದ ಪಡೆದ ಗೋಪಲರಾಯರು 1934ರಲ್ಲಿ ವಿಠಲ ಹೆಗ್ಡೆಯವರ ನೇತೃತ್ವದ ಹಿರಿಯಡ್ಕ ಮೇಳ ಸೇರಿದರು. ಮೇಳದ ಹೊಣೆಹೊತ್ತ ಶೇಷಗಿರಿ ರಾಯರು ಮಗನನ್ನು ವೇಷಧಾರಿಯಾಗಿ ಆ ಮೇಳಕ್ಕೆ ಸೇರಿಸಿದರು.
ಮಾತಿಗೆ ಬೇಕಾದ ಸಾಹಿತ್ಯದಲ್ಲಿ ಹಿಂದೆ ಬಿದ್ದ ರಾಯರನ್ನು ಒತ್ತು ಮದ್ದಳೆಗೆ ಸೂಚಿಸಲಾಯಿತು. ಒತ್ತು ಮದ್ದಳೆಗಾರ ಚಂಡೆಯನ್ನು ಬಾರಿಸಬೇಕಾದದ್ದು ಅಂದಿನ ಮೇಳಗಳಲ್ಲಿ ರೂಢಿಯಾಗಿತ್ತು. ಹೀಗೆ ಎರಡು ವರ್ಷ ಹಿರಿಯಡ್ಕ ಮೇಳದಲ್ಲಿ ಸೇವೆ ಸಲ್ಲಿಸಿದರು. ನಂತರ ಅವರಿಗೆ ಮುಖ್ಯ ಮದ್ದಳೆಗಾರರಾಗುವ ಯೋಗ ಲಭಿಸಿತು.
ಪೆರ್ಡೂರು ಮೇಳದ ಯಜಮಾನರಾಗಿದ್ದ ಹಿರಿಯ ವೇಷಧಾರಿ ಗಣಪತಿ ಪ್ರಭುಗಳು ಇವರನ್ನು ಮುಖ್ಯ ಮದ್ದಳೆಗಾರರಾಗಿ ಸೇರಿಸಿಕೊಂಡರು. ಕೋಟ ಶ್ರೀನಿವಾಸ ನಾಯ್ಕರು ಅಲ್ಲಿನ ಭಾಗವತರು. ನಂತರ ಮಾರ್ವಿ ಶ್ರೀನಿವಾಸ ಉಪ್ಪೂರರಿಗೆ ಪ್ರಧಾನ ಮದ್ದಳೆಗಾರರಾಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ನಂತರ ಮಂದಾರ್ತಿ ಮೇಳಕ್ಕೆ ಸೇರಿದ ಗೋಪಾಲರಾಯರು ನಿರಂತರ 27 ವರ್ಷ ತಿರುಗಾಟ ಮಾಡಿ ಸ್ವಯಂ ನಿವೃತ್ತಿ ಪಡೆದರು.
ಮಂದಾರ್ತಿ ಕ್ಷೇತ್ರಕ್ಕೂ ಗೋಪಾಲ ರಾಯರಿಗೂ ಅವಿನಾಭಾವ ಸಂಬಂಧವಿತ್ತು. ಪ್ರತೀ ವರ್ಷ ಮಂದಾರ್ತಿ ಮೇಳದ ದೇವರ ಸೇವೆ ಆಟಕ್ಕೆ ಹಾಜರಿರುತ್ತಿದ್ದ ಹಿರಿಯ ತಲೆಮಾರಿನ ಏಕಮಾತ್ರ ವ್ಯಕ್ತಿ ಇವರಾಗಿದ್ದರು. ಶ್ರೀ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿ ಬಹುಬೇಗನೆ ಇವರಿಗೆ ಲಭಿಸಿತ್ತು. ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಬಡಗುತಿಟ್ಟಿನ ಮಹಾನ್ ಕಲಾವಿದ ಶೇಷಗಿರಿ ಭಾಗವತರಿಗೆ ಸಾಥಿಯಾಗಿದ್ದರು.
ಹಾರಾಡಿ ರಾಮಗಾಣಿಗರು, ಕೊಳ್ಕೆಬೈಲು ಶೀನ ನಾಕರು, ಜಾನುವಾರುಕಟ್ಟೆ ಭಾಗವತರು, ಗೋರ್ಪಾಡಿ ವಿಠಲ ಪಾಟೀಲರು, ಸುರಗಿಕಟ್ಟೆ ಬಸವ ಗಾಣಿಗರು, ಶಿರಯಾರ ಮಂಜುನಾಕರು, ಹಳ್ಳಾಡಿ ಮಂಜಯ್ಯ ಶೆಟ್ಟಿ, ಬೈಕಾಡಿ ಗೋಪಾಲ ಮಡಿವಾಳ, ಜಂಬೂರು ರಾಮಚಂದ್ರಯ್ಯ, ಹಾರಾಡಿ ನಾರಾಯಣ ಗಾಣಿಗ, ಮಹಾಬಲ ಗಾಣಿಗ ಮುಂತಾದ ಘಟಾನುಘಟಿಗಳಿಂದ ತುಂಬಿದ ಮಂದಾರ್ತಿ ಮೇಳದ ಆ ಸಮಯವನ್ನು ಗೋಪಾಲರಾಯರು ಆಪ್ತರೊಂದಿಗೆ ಮೆಲುಕು ಹಾಕುತ್ತಿದ್ದರು.
"ಮೈಕ್ ಇಲ್ಲದೆ ಶೇಷಗಿರಿ ಭಾಗವತರ ಸ್ವರ ರಾತ್ರಿ ವೇಳೆ ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು. ತಾಳ ಲಯಗಳ ಮೇಲಿನ ಅವರ ಹಿಡಿತ ಅದ್ಭುತ. ಅವರ ಪದಕ್ಕೆ ನುಡಿಸುವಾಗ ಕೈ ತನ್ನಿಂದ ತಾನೆ ಓಡುತ್ತಿತ್ತು. ಅವರು ಅನುಭವಿಸಿ ಹಾಡುವ ಭಾಗವತರು. ನನಗೆ ಪ್ರತೀತಿ ಬಂದುದಿದ್ದರೆ ಶೇಷಗಿರಿ ಭಾಗವತರಿಂದ" ಎಂದು ವಿನಮ್ರವಾಗಿ ನುಡಿಯುತ್ತಿದ್ದ ಗೋಪಾಲರಾಯರು ಶೇಷಗಿರಿ ಅವರಂತಹ ಭಾಗವತರನ್ನು ನಾನು ಇದುವರೆಗೆ ಕಂಡಿಲ್ಲ ಎನ್ನುತ್ತಿದ್ದರು. ಮಂದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ ಈ ನಾಲ್ಕು ಮೇಳಗಳಲ್ಲಿ ವಾದನ ಕ್ರಮಗಳು ಒಂದೇ ರೀತಿ ಇದ್ದು ಚೆಂಡೆಯನ್ನು ಅನಗತ್ಯವಾಗಿ ಬಳಸುವ ಕ್ರಮವಿರಲಿಲ್ಲ ಎಂದು ನೆನಪಿಸುತ್ತಿದ್ದರು.
ಏರು ಮದ್ದಳೆಯ ಅವಿಷ್ಕಾರ ಬಡಗುತಿಟ್ಟಿಗೆ ಗೋಪಾಲರಾಯರ ಮಹತ್ವದ ಕೊಡುಗೆಯಾಗಿತ್ತು. ಸಾವಿರಗಟ್ಟಲೆ ಜನ ಸೇರುತ್ತಿದ್ದ ಜೋಡಾಟಗಳು ಇದಕ್ಕೆ ಕಾರಣ. ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷರಿಗೆ ತಮ್ಮ ವಾರ್‍ಫಂಡಿಗಾಗಿ ಜೋಡಾಟ ನಡೆಸಿ ಹಣ ಕಟ್ಟುವಂತೆ ಮಾಗಣೆಯವರಿಗೆ ಆದೇಶ ನೀಡಿದ್ದರಿಂದ ತಿಂಗಳಿಗೆ ಒಂದೆರಡು ಜೋಡಾಟ ಅನಿವಾರ್ಯವಾಯಿತು. ಸಮಬಲದ ಮೇಳಗಳ ನಡುವೆ ಸ್ಪರ್ಧೆ ಏರ್ಪಟ್ಟಾಗ ಹೊಸ ಶೋಧಗಳು ನಡೆದವು.
ತಬಲವಾದನದ ಅನುಭವವೇ ರಾಯರ ಏರುಮದ್ದಳೆಗೆ ಪ್ರೇರಣೆಯಂತೆ. ಮದ್ದಳೆಯ ಗಂಟು ಉರುಳಿಕೆಯನ್ನು ಜನಪ್ರಿಯತೆಗೊಳಿಸಿದ ಕೀರ್ತಿ ರಾಯರಿಗಿದೆ. ಸಾಮಾನ್ಯ ಉರುಳಿಕೆ ಮಾತ್ರ ಇದ್ದ ಕಾಲದಲ್ಲಿ ಪೆರ್ಡೂರು ವೆಂಕಟ ಕಾಮತರಿಂದ ಗಂಟು ಉರುಳಿಕೆ ಕಲಿತ ರಾಯರು ತಮ್ಮ ಏರು ಮದ್ದಳೆ ವಾದನದಲ್ಲಿ ಅದನ್ನು ಸಮರ್ಪಕವಾಗಿ ಬಳಸಿದ್ದರು. ವೃದ್ದಾಪ್ಯದಲ್ಲೂ ವಾದನದಲ್ಲಿ ಇತರರನ್ನು ಅವರು ಮೀರಿಸಬಲ್ಲವರಾಗಿದ್ದರು. ವಾದನದ ಸ್ಪಷ್ಟತೆ ಇವರ ಬಹುದೊಡ್ಡ ಗುಣವಾಗಿತ್ತು.
1967ರ ಮೇ ತಿಂಗಳಲ್ಲಿ ಮಂದಾರ್ತಿ ಮೇಳಕ್ಕೆ ವಿದಾಯ ಹಾಡಿದ ರಾಯರು ವೈದ್ಯ ವೃತ್ತಿ ನಡೆಸತೊಡಗಿದರು. ಡಾ| ಶಿವರಾಮ ಕಾರಂತರು ತಮ್ಮೆಲ್ಲ ಚಟುವಟಿಕೆಗಳಲ್ಲಿ ರಾಯರನ್ನು ಬಳಸಿಕೊಂಡರು. 1961ರಲ್ಲಿ ರಾಗಗಳ ದಾಖಲಾತಿ ಅಲ್ಲದೆ ನೃತ್ಯ ನಾಟಕಗಳಲ್ಲೂ ರಾಯರು ಇದ್ದರು. 1967ರಲ್ಲಿ ಬ್ರಹ್ಮಾವರದಲ್ಲಿ ಆರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಗುರುವಾಗಿ ನೇಮಕವಾದರು. 1976ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯ, ವೀರಭದ್ರ ನಾಯಕರೊಂದಿಗೆ ಗುರುವಾಗಿ ಸೇರಿಕೊಂಡ ಇವರು ಈರ್ವರೊಂದಿಗೆ ಸೇರಿಕೊಂಡು ಮಾಡಿದ ಪಾಠಪಟ್ಟಿ ಒಂದು ಅಧಿಕೃತ ಪಠ್ಯವಾಗಿ ಮೂಡಿಬಂತು. ಕೇಂದ್ರದಲ್ಲಿ ಏಳು ವರ್ಷಗಳ ಕಾಲ ಗುರುವಾಗಿ ಸೇವೆ ಸಲ್ಲಿಸಿದ ರಾಯರು ಕಾರಂತರ ಯಕ್ಷರಂಗದ ಸದಸ್ಯರಾಗಿ ರಾಜ್ಯದ ಹೊರಗೂ ತಿರುಗಾಟ ನಡೆಸಿದರು.
ಡಾ| ಪೀಟರ್ ಜೆ.ಕ್ಲಾಸ್ ಹಾಗೂ ಮಾರ್ತಾ ಆಶ್ಟನ್ ಇವರಿಬ್ಬರು ಗೋಪಾಲರಾಯರ ಪ್ರಸಿದ್ಧ ವಿದೇಶಿ ಶಿಷ್ಯರು. ಒಬ್ಬರು ಮದ್ದಳೆವಾದನವನ್ನು ಇನ್ನೊಬ್ಬರು ವೇಷಗಾರಿಕೆಯ ಸಮಗ್ರ ಅಧ್ಯಯನ ನಡೆಸಿ ಪಿಎಚ್.ಡಿ ಕೂಡ ಪಡೆದರು. 1976ರಲ್ಲಿ ಮಾರ್ತಾ ಅವರೊಡನೆ ಅಮೇರಿಕಾದ ಹತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. 1979ರಲ್ಲಿ ಬಿ.ವಿ. ಆಚಾರ್ಯರೊಂದಿಗೆ ಅಮೆರಿಕ, ಜರ್ಮನಿ ಪ್ರವಾಸಗಳಲ್ಲಿ ಗೋಪಾಲರಾಯರು ಭಾಗವಹಿಸಿದ್ದರು. ಬಿ.ವಿ.ಕಾರಂತರ ನೃತ್ಯ ನಾಟಕಕ್ಕೂ ಸಂಗೀತ ನೀಡಿದ ರಾಯರ ಮದ್ದಳೆ ವಾದನವನ್ನು ಜಪಾನಿನ ರಂಗಾಸಕ್ತರು ದಾಖಲಿಸಿಕೊಂಡಿದ್ದಾರೆ.
ಅನೇಕ ಸಂಘ ಸಂಸ್ಥೆಗಳ ಕಲಾವಿದರಿಗೆ ಯಕ್ಷಗಾನವನ್ನು ಕಲಿಸಿ, ಈ ಕಲೆಯನ್ನು ಮುಂದಿನ ತಲೆ ಮಾರಿಗೆ ದಾಟಿಸಿದ ಕೀರ್ತಿ ರಾಯರಿಗಿದೆ. ಅವುಗಳಲ್ಲಿ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಕಲಾ ಸಂಸ್ಥೆ ಮೊದಲಿನದ್ದಾಗಿದೆ. ಅನೇಕ ಶಿಷ್ಯರನ್ನು ತಯಾರುಗೊಳಿಸಿದ ರಾಯರ ಅನೇಕ ಶಿಷ್ಯರು ಸಮಕಾಲೀನ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಅವರ ಪಟ್ಟಶಿಷ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಸಂಜೀವ ಸುವರ್ಣರು ಉಡುಪಿ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾಗಿದ್ದರು ಮಾತ್ರವಲ್ಲದೆ ಯಕ್ಷಗಾನದ ದಶಾವತಾರಿ, ಗೋಪಾಲ ರಾಯರ ಏಕಮಾತ್ರ ಪುತ್ರ ರಾಮ ಮೂರ್ತಿ ಅವರನ್ನು ಓರ್ವ ಯಕ್ಷಗಾನ ಕಲಾವಿದನನ್ನಾಗಿ ಬೆಳೆಸಿದರು.
ಓರ್ವ ಕಲಾವಿದನಿಗೆ ಸಲ್ಲಬಹುದಾದ ಸಾಕಷ್ಟು ದೊಡ್ಡ ಪ್ರಶಸ್ತಿಗಳು ಗೋಪಾಲರಾಯರಿಗೆ ಸಂದವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರಕಾರದ ಜಾನಪದಶ್ರೀ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್, ವಾದಿರಾಜ್ ಹೆಬ್ಬಾರ್ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಮಂದಾರ್ತಿ ಕ್ಷೇತ್ರದ ಹಾರಾಡಿ ರಾಮಗಾಣಿಗ ಪ್ರಶಸ್ತಿಗಳು ಇವುಗಳಲ್ಲಿ. ಪ್ರಮುಖವಾದವುಗಳು.
ಗೋಪಾಲರಾಯರೊಂದಿಗೆ ಸಂವಾದ ನಡೆಸಿದ ವಿದ್ವಾಂಸರಾದ ಕೆ. ಎಂ. ರಾಘವ ನಂಬಿಯಾರರು ಬರೆದ 'ಮದ್ದಳೆಯ ಮಾಯಾಲೋಕ' ಎಂಬ ಗ್ರಂಥ ಗೋಪಾಲರಾಯರ ಅನುಭವಗಳನ್ನೊಳಗೊಂಡ ಮಹಾನ್ ಗ್ರಂಥವಾಗಿ ಪ್ರಕಟಗೊಂಡಿದೆ.
ಮಹಾನ್ ಚೇತನ ಹಿರಿಯಡ್ಕ ಗೋಪಾಲರಾವ್ 2020ರ ಅಕ್ಟೋಬರ್ 17ರಂದು ಈ ಲೋಕವನ್ನಗಲಿದರು.
ಮಾಹಿತಿ ಆಧಾರ: ಬಯಲಾಟ.ಕಾಂ ತಾಣದಲ್ಲಿ ಪ್ರೊ.ಎಸ್.ವಿ.ಉದಯ ಕುಮಾರ ಶೆಟ್ಟಿ ಅವರ ಬರಹ.
On Remembrance Day of Yakshagana artiste Hiriyadka Gopala Rao
ಕಾಮೆಂಟ್‌ಗಳು