ಪು.ತಿ.ನ. ಸಂಸ್ಮರಣೆ
ಪು.ತಿ.ನ. ಸಂಸ್ಮರಣೆ
ಇಂದು ಕನ್ನಡನಾಡಿನ ಮಹಾನ್ ಕವಿಗಳಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅವರ ಸಂಸ್ಮರಣಾ ದಿನ. ಅವರು 1998ರ ಅಕ್ಟೋಬರ್ 13ರಂದು ಈ ಲೋಕವನ್ನಗಲಿದರು.
ಪು. ತಿ. ನರಸಿಂಹಾಚಾರ್ಯರು ಮೇಲುಕೋಟೆಯಲ್ಲಿನ ವೈದಿಕ ಮನೆತನಕ್ಕೆ ಸೇರಿದವರು. ಅವರ ಹಿರಿಯರು ಕೆಲವು ಶತಮಾನಗಳ ಹಿಂದೆ ತಿರುವಳ್ಳೂರಿನಿಂದ ಮೇಲುಕೋಟೆಗೆ ಬಂದವರು.
ನರಸಿಂಹಾಚಾರ್ಯರು 1905ರ ಮಾರ್ಚ್ 17ರಂದು ಜನಿಸಿದರು. ತಂದೆ ವೇದ, ಉಪನಿಷತ್ತು, ಆಗಮ, ತರ್ಕ, ಪುರಾಣ ಮುಂತಾದ ಹತ್ತು ಹಲವು ಜ್ಞಾನ ಶಾಖೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದ್ದ ಶ್ರೀ ತಿರುನಾರಾಯಣ ಅಯ್ಯಂಗಾರ್. ತಾಯಿ ಗೊರೂರಿನ ಶ್ರೀರಂಗಮ್ಮ.
ಮನೆ, ಮೇಲುಕೋಟೆಯ ಪ್ರಾಥಮಿಕ ಪಾಠಶಾಲೆ, ಸಂಸ್ಕೃತ ಪಾಠಶಾಲೆ, ಮೈಸೂರಿನ ಮಹಾರಾಜಾ ಹೈಸ್ಕೂಲು ಮತ್ತು ಮಹಾರಾಜ ಕಾಲೇಜುಗಳು ಅವರು ಓದಿದ ಶಿಕ್ಷಣ ಸಂಸ್ಥೆಗಳು. ಅವರು 1926ರಲ್ಲಿ ಬಿ.ಎ ಪದವಿ ಪಡೆದರು. ತತ್ವಶಾಸ್ತ್ರ, ವೇದಾಂತದರ್ಶನ, ಸಂಸ್ಕೃತಗಳು ಅವರ ವ್ಯಾಸಂಗದ ವಿಷಯಗಳು. ಅವರು ಫ್ರೆಂಚ್ ಭಾಷೆಯನ್ನು ಕಲಿತವರು. ವಿಮರ್ಶಕರು ಗುರುತಿಸಿರುವಂತೆ ಅವರದು ಕಾಳಿದಾಸ ಮತ್ತು ವರ್ಡ್ಸ್ ವರ್ತ್ ಪ್ರಭಾವಿತ ಮನೋಧರ್ಮ. ಗುರುಗಳಲ್ಲಿ ಎಂ. ಹಿರಿಯಣ್ಣ, ಸ್ನೇಹಿತರಲ್ಲಿ ತೀ.ನಂ.ಶ್ರೀ, ಶಿವರಾಮ ಶಾಸ್ತ್ರಿ ಮುಂತಾದವರು ಇವರ ಕಾವ್ಯರಚನೆಗೆ ಪ್ರೇರಕ ಶಕ್ತಿಗಳಾದರು.
ಹೈಸ್ಕೂಲಿನಲ್ಲಾಗಲೀ, ಕಾಲೆಜಿನಲ್ಲಾಗಲಿ ಪು.ತಿ.ನ ಅವರಿಗೆ ಕನ್ನಡ ಪಠ್ಯ ಪುಸ್ತಕಗಳ ಸ್ಪರ್ಶವೇ ಇರಲಿಲ್ಲ. ಮನೆಯಲ್ಲಿ ತಮಿಳು, ಶಾಲೆಯಲ್ಲಿ ಸಂಸ್ಕೃತ ಹೀಗಿದ್ದ ವಾತಾವರಣದಲ್ಲಿ ಅವರಿಗೆ ಮಿಡ್ಲ್ ಸ್ಕೂಲಿನಲ್ಲಿ ನಾಗಚಂದ್ರ, ಕನಕದಾಸ, ಪುರಂದರದಾಸ, ಸರ್ವಜ್ಞ, ಇತ್ಯಾದಿ ಓದಿದ್ದು ಮಾತ್ರವೇ ಶಾಲೆಯಲ್ಲಿ ದೊರೆತ ಕನ್ನಡ. ತಮ್ಮ ಓದಿನಲ್ಲಾಗಲೀ, ತಾವು ಮಾಡಿದ ಕಚೇರಿಯ ಕೆಲಸದಲ್ಲಾಗಲೀ ಇಣುಕುಗಳೂ ಇಲ್ಲದ ಕನ್ನಡ ಅವರ ಬರವಣಿಗೆಯಲ್ಲಿ ಮೂಡಿದ್ದಂತೂ ನಂಬಲಸಾಧ್ಯವಾದ, ಅದ್ಭುತ ವಿಷಯಗಳಲ್ಲೊಂದು.
ಬಿ.ಎ ಪದವಿ ಪಡೆದ ನಂತರ ಪ್ರಾರಂಭವಾದ ಪು.ತಿ.ನ ಅವರ ವೃತ್ತಿಜೀವನವು ಅವರ ಬದುಕಿನ ಕುತೂಹಲಗಳಲ್ಲಿ ಒಂದು. ಸಂಪ್ರದಾಯಬದ್ಧರೂ, ದೇಶ ಭಕ್ತರೂ ಆದ ಈ ಕವಿ, “ಹುಲ್ಲುಗಾವಲಿನ ಹೂತಮರಗಳ ಎಲೆಗಳು ಬಡಿಸುವ ಬಾನ ಬಿಂದುಗಳ ಲೆಕ್ಕದೊಳಾಯ್ತು ನನ್ನಾಸಕ್ತಿ” ಎಂದು ಮುಕ್ತವಾಗಿ ಹೇಳುತ್ತಿದ್ದರು. ಅವರು ಕೆಲಸ ಮಾಡಿದ್ದು ಮೈಸೂರಿನಲ್ಲಿನ ಸೈನ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿ, ಕಚೇರಿಯ ಮ್ಯಾನೇಜರ್ ಆಗಿ ಹಾಗೂ ಶಾಸನಸಭಾ ಕಚೇರಿಯಲ್ಲಿ ಸಂಪಾದಕನಾಗಿ.
ಪು.ತಿ.ನ ಅವರು ಅವರ ಪ್ರವೃತ್ತಿಗೆ ಹೆಚ್ಚು ಹತ್ತಿರವಾದ ವೃತ್ತಿಯನ್ನು ನಿವೃತ್ತಿಯ ನಂತರದ ದಿನಗಳಲ್ಲಿ ಪಡೆದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರಾಗಿ ಅವರು ಎಂಟು ವರ್ಷಗಳ ಕಾಲ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರು ವ್ಯಾಸಂಗ, ಕಾವ್ಯರಚನೆ, ಸ್ನೇಹ ಸಂಪಾದನೆಗಳಂತಹ ಪ್ರಿಯ ಕಾರ್ಯಗಳಲ್ಲಿ ತಲ್ಲೀನರಾದರು.
ಪು.ತಿ.ನ ಅವರ ಸಾಹಿತ್ಯಸೃಷ್ಟಿಯು ಕಾವ್ಯ, ನಾಟಕ, ಲಲಿತ ಪ್ರಬಂಧ, ಭಾವ ಪ್ರಬಂಧ, ಕಾವ್ಯಾರ್ಥ ಚಿಂತನೆ, ಅನುವಾದ ಮುಂತಾದ ಹಲವು ಪ್ರಕಾರಗಳಲ್ಲಿ ಸಂದಿದೆ. ಆದರೆ ಅವರ ಬರವಣಿಗೆಯ ಎಲ್ಲ ಬಗೆಗಳಲ್ಲೂ ಹರಡಿಕೊಂಡಿರುವುದು ಕವಿಯ ಮನಸ್ಸು ಮತ್ತು ದೃಷ್ಟಿಕೋನ. ಅವರ ಮೊದಮೊದಲ ಕವಿತೆಗಳು ‘ಕಿರಿಯ ಕಾಣಿಕೆ’ (1928) ಮತ್ತು ‘ತಳಿರು’ (1930) ಎಂಬ ಕವನ ಸಂಗ್ರಹಗಳಲ್ಲಿ ಕಾಣಿಸಿಕೊಂಡವು. ಪ್ರಬುದ್ಧ ಕರ್ನಾಟಕ, ಜಯಕರ್ನಾಟಕಗಳಂತಹ ಪತ್ರಿಕೆಗಳಲ್ಲಿಯೂ ಅವರು ಕಾಣಿಸಿಕೊಂಡು, ಮಾಸ್ತಿ, ಬಿ.ಎಂ.ಶ್ರೀ, ಡಿ.ವಿ.ಜಿ, ಹಿರಿಯಣ್ಣನವರಂತಹ ಮಹನೀಯರ ಮೆಚ್ಚುಗೆಗೆ ಪಾತ್ರರಾದರು. ಅವರ ಮೊದಲ ಸಂಕಲನವಾದ ‘ಹಣತೆ’ 1933ರಲ್ಲಿ ಮಾಸ್ತಿಯವರ ಮುನ್ನುಡಿಯೊಂದಿಗೆ ಪ್ರಕಟವಾಯಿತು. ಅದರ ನಂತರ ಅವರು ಮಾಂದಳಿರು, ಶಾರದಾಯಾಮಿನಿ, ಗಣೇಶ ದರ್ಶನ, ಹೃದಯ ವಿಹಾರಿ, ರಸ ಸರಸ್ವತಿ, ಮಲೆದೇಗುಲ, ಹೃದಯ ವಿಹಾರಿ, ಇರುಳ ಮೆರಗು ಮತ್ತು ಹಳೆ ಚಿಗುರು ಹೊಸ ಚಿಗುರು (1981) ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಶ್ರೀ ಹರಿಚರಿತೆ 1988ರಲ್ಲಿ ಮತ್ತು ಹಣತೆಯ ಹಾಡು 1998ರಲ್ಲಿ ಪ್ರಕಟಗೊಂಡವು.
ಪು.ತಿ.ನ ಅವರ ಅನೇಕ ಕವನಗಳು ಕನ್ನಡ ಕಾವ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿವೆ ಎಂಬುದು ಬಹುತೇಕ ವಿದ್ವಾಂಸರು ಒಪ್ಪುವ ಮಾತು. ‘ಯದುಗಿರಿಯ ಮೌನ ವಿಕಾಸ’ದಿಂದ ಹಿಡಿದು ‘ಶರ್ವರಿ ಸುಷಮೆ’ಯಂತಹ ನೂರಾರು ಕವಿತೆಗಳ ಕಾವ್ಯ ಸೌಂದರ್ಯವನ್ನು ಕೇವಲ ಮಾತುಗಳಲ್ಲಿ ಹಿಡಿದಿಡುವುದು ಅಸಾಧ್ಯ.
ಶ್ರೀಹರಿಚರಿತೆಯಲ್ಲಿ ಪು.ತಿ.ನ ಅವರು ಶ್ರೀಕೃಷ್ಣನನ್ನು ಹೊಸರೀತಿಯಲ್ಲಿ ನೋಡುತ್ತಾರೆ. “ಎಲ್ಲ ಸಿರಿ ಸೊಬಗೆಲ್ಲ ಕಲೆಗಳ್ ಗಣಿಯೆ ತಾನಾಗಿರುವ’ ಚಿದ್ಘನನಾದ ಶ್ರೀಕೃಷ್ಣನನ್ನು ಪೌರಾಣಿಕತೆಯ ಸೊಬಗು ಭವ್ಯತೆಗಳ ಮಧ್ಯೆ ವೈಚಾರಿಕತೆಯ ಹೊಸ ಅರ್ಥದಲ್ಲಿ ಪು.ತಿ.ನ ಅವರು ಓದುಗರಿಗೆ ಪರಿಚಯಿಸುತ್ತಾರೆ. ಶ್ರೀಕೃಷ್ಣ ಈ ಮಹಾಕಾವ್ಯದಲ್ಲಿ ಜನಸಾಮಾನ್ಯರ ಮುಗ್ಧತೆ, ಪ್ರೀತಿ, ಆಕಾಂಕ್ಷೆಗಳ ಪ್ರತಿರೂಪವಾಗಿ ಏಕಕಾಲದಲ್ಲಿ ಮಹಾಪುರುಷನಾಗಿಯೂ, ಪುರುಷೋತ್ತಮನಾಗಿಯೂ ಕಂಗೊಳಿಸುತ್ತಾನೆ.
ಪು.ತಿ.ನ ಅವರು ಪ್ರಕಟಿಸಿರುವ ನಾಟಕಗಳ ಸಂಖ್ಯೆಯು ಅವರ ಕವನಸಂಕಲನಗಳಿಗಿಂತ ಕಡಿಮೆಯೇನಲ್ಲ. ಶಾಸ್ತ್ರೀಯ ಸಂಗೀತದ ಖಚಿತ ಹಿನ್ನಲೆಯುಳ್ಳ ಪು.ತಿ.ನ ಅವರ ಗೀತ ನಾಟಕಗಳು ನಮ್ಮ ಕಾಲದ ರಂಗಭೂಮಿಗೆ ಒಂದು ಆಕರ್ಷಣೆಯಾಗಿಯೂ ಸವಾಲಾಗಿಯೂ ಒದಗಿದೆ.
ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ಕವಿ, ದೋಣಿಯ ಬಿನದ, ವಿಕಟಕವಿ ವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಶ್ರೀ ರಾಮ ಪಟ್ಟಾಭಿಷೇಕ, ಸತ್ಯಾಯನ ಹರಿಶ್ಚಂದ್ರ ಮತ್ತು ಜಾಹ್ನವಿ ಜೋಡಿ ದೀವಿಗೆ ಮುಂತಾದ ನಾಟಕಗಳನ್ನು ಪು.ತಿ.ನ ರಚಿಸಿದ್ದಾರೆ.
ಪು.ತಿ.ನ ಅವರ ‘ಗೋಕುಲ ನಿರ್ಗಮನ’ ಮತ್ತು ‘ಅಹಲ್ಯೆ’ಗಳು ಅತ್ಯುತ್ತಮ ನಾಟಕಗಳ ಸಾಲಿನಲ್ಲಿ ಪ್ರತಿಷ್ಠಿತವಾಗಿವೆ. ಕೃಷ್ಣನ ಬದುಕಿನಲ್ಲಿ ಮಹತ್ವದ ಘಟ್ಟವೊಂದನ್ನು ಆರಿಸಿಕೊಂಡು ಅವನಲ್ಲಾದ ಪರಿವರ್ತನೆಯು ಅವನ ಸುತ್ತಲಿನವರ ಮೇಲೆ ಬೀರುವ ಪರಿಣಾಮವನ್ನು ಚಿತ್ರಿಸುವುದು ಗೋಕುಲ ನಿರ್ಗಮನದ ವಸ್ತು. ಪೂರ್ವ ಯೌವನದ ಧೀರಲಲಿತ ವ್ಯಕ್ತಿತ್ವವನ್ನು, ವೇಣು ವಿಸರ್ಜನದಂತಹ ಸಾಂಕೇತಿಕ ಕ್ರಿಯೆಯಿಂದ ತ್ಯಜಿಸಿ, ಜೀವನದ ಜವಾಬ್ಧಾರಿಗಳನ್ನು ನಿರ್ವಹಿಸಲು ಕೃಷ್ಣನು ಸಿದ್ಧನಾಗುವ ಸನ್ನಿವೇಶವು ಇನ್ನಿಲ್ಲವೆನ್ನುವಷ್ಟು ಹೃದಯಂಗಮವಾಗಿ, ಸ್ವಪ್ನೋಪಮವಾಗಿ ಮೂಡಿಬಂದಿದೆ. ಪು.ತಿ.ನ ಅವರ ಕವಿತೆಗಳನ್ನೂ ಮೀರಿದೆ ಎಂಬಂತೆ ಗೋಕುಲ ನಿರ್ಗಮನ ಮತ್ತು ಅಹಲ್ಯೆ ನಾಟಕಗಳ ಹಾಡುಗಳು ಜನರನ್ನು ಅಪಾರವಾಗಿ ಆಕರ್ಷಿಸಿವೆ. ನಾಟಕದ ಒಳಗಿನಿಂದ ನೇರವಾಗಿ ಚಿಮ್ಮುವ ಹಾಡುಗಳು ಆಲೋಚಿಸಲಾರದಷ್ಟು ತತ್ಕಾಲೀನವಾಗಿವೆ. ಗೋಕುಲ ನಿರ್ಗಮನ ನಾಟಕ, ಬಿ.ವಿ. ಕಾರಂತ್, ಪ್ರತಿಭಾ ಪ್ರಹ್ಲಾದ್ ಮುಂತಾದವರಲ್ಲದೆ ಅನೇಕ ರಂಗತಂಡಗಳ ಪ್ರಯೋಗಗಳಲ್ಲಿ ಕೂಡಾ ಅಪಾರ ಜನಪ್ರಿಯತೆ ಕಂಡಿದೆ.
ಅಹಲ್ಯೆಯು ಪು.ತಿ.ನ ಅವರ ಅತ್ಯುತ್ತಮ ಸಾಹಿತ್ಯ ಸೃಷ್ಟಿಗಳಲ್ಲೊಂದು. ರಾಮಮಹಿಮೆಯ ಪ್ರದರ್ಶನಕ್ಕೆಂದು ಮೀಸಲಾಗಿರುವ ಪುರಾಣಕಥೆಯೊಂದರ ಅಂತರಂಗದೊಳಗೆ, ಎಲ್ಲ ಕಾಲ-ದೇಶಗಳ ಮನುಷ್ಯ ಹೃದಯಗಳಲ್ಲಿಯೂ ನಡೆಯುತ್ತಿರಬಹುದಾದ ತುಮುಲಗಳನ್ನು ಗುರುತಿಸಿ ಸಮಗ್ರಕಥೆಯನ್ನೂ ಪುನಃ ಸೃಷ್ಟಿಸಿರುವುದು ಈ ಕೃತಿಯ ಮಹತ್ವವಾಗಿದೆ. ಬಾಷೆ ಮತ್ತು ಭಾವಗಳ ಮೈತ್ರಿಯು ಇಲ್ಲಿ ಸಿದ್ಧಿಸಿರುವ ರೀತಿ ಅಪೂರ್ವವಾದುದು. ಇಲ್ಲಿಯೂ ಹಾಡುಗಳಿವೆ. ವರ್ಣನೆಗಳಿಗೆ ತಮ್ಮದೇ ಆದ ಚೆಲುವಿದೆ.
ಲೋಕಾಭಿರಾಮನಾದ ಶ್ರೀರಾಮನ ಅಸಾಧಾರಣವಾದ ವ್ಯಕ್ತಿತ್ವದ ಹೃದಯಂಗಮವಾದ ಪರಿಚಯವನ್ನು ಮಾಡಿಸುವ ಗೀತ ನಾಟಕ ‘ಶ್ರೀ ರಾಮ ಪಟ್ಟಾಭಿಷೇಕಂ’.
ಪು.ತಿ.ನ ಅವರು ‘ರಾಮಾಚಾರಿಯ ನೆನಪು’, ‘ಧ್ವಜರಕ್ಷಣೆ’, ‘ರಥ ಸಪ್ತಮಿ ಮತ್ತು ಇತರ ಚಿತ್ರಗಳು’, ‘ಈಚಲು ಮರದ ಕೆಳಗೆ’ ‘ಧೇನುಕ ಪ್ರಕರಣ’ ಮತ್ತು ‘ಯದುಗಿರಿಯ ಗೆಳೆಯರು’, ‘ದೀಪರೇಖೆ’ ಮುಂತಾದ ಗದ್ಯ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಮ್ಮ ವಿಚಾರಗಳನ್ನು ಸೃಜನಶೀಲ ಚೌಕಟ್ಟಿನೊಳಗೆ ಹಿಡಿದಿಡುವ ಬಂಧನದಿಂದ ಮುಕ್ತರಾದ ಕವಿ ತಮ್ಮ ವಿಚಾರಗಳನ್ನು ನಿರಾತಂಕವಾಗಿ ಮಂಡಿಸುವುದನ್ನು ಇಲ್ಲಿ ನೋಡಬಹುದು. ‘ಕಾವ್ಯ ಕುತೂಹಲ’ ಮತ್ತು ‘ರಸಪ್ರಜ್ಞೆ’ ಪು.ತಿ.ನ ಅವರ ಸಾಹಿತ್ಯ ತತ್ವ ಮತ್ತು ಕಾವ್ಯ ಮೀಮಾಂಸೆಗಳನ್ನು ಕುರಿತ ಕೃತಿಗಳು.
‘ಕನ್ನಡ ಭಗವದ್ಗೀತೆ’, ‘ಮಹಾಪ್ರಸ್ಥಾನ’, ‘ಸಮಕಾಲೀನ ಭಾರತೀಯ ಸಾಹಿತ್ಯ’, ‘ಬದಲಿಸಿದ ತಲೆಗಳು’, ‘ನಮ್ಮಳ್ವಾರ್’ ಪು.ತಿ.ನ ಅವರ ಅನುವಾದ ಗ್ರಂಥಗಳು.
ಪು.ತಿ.ನ ಅವರು ಜನಪ್ರಿಯತೆ ಮತ್ತು ಪ್ರಶಸ್ತಿಗಳಿಗೆ ಅಪರಿಚಿತರಲ್ಲ. ಭಾರತ ಸರ್ಕಾರ ನೀಡಿದ 'ಪದ್ಮಶ್ರೀ' ಪ್ರಶಸ್ತಿ, ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಶ್ರೀಹರಿಚರಿತೆ’ಗೆ ಪಂಪ ಪ್ರಶಸ್ತಿ, ಗ್ರಂಥಲೋಕ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, 53ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗಳನ್ನು ಇಲ್ಲಿ ಹೆಸರಿಸಬಹುದು. ‘ಯದುಗಿರಿಯ ವೀಣೆ’ ಪು.ತಿ.ನ ಅವರನ್ನು ಕುರಿತ ಕವಿತೆಗಳ ಸಂಕಲನ. ಪು.ತಿ.ನ ಅಭಿವಂದನ ಗ್ರಂಥವಾದ ‘ಯದುಗಿರಿ’ 1981ರಲ್ಲಿ ಪ್ರಕಟವಾಯಿತು.
ಅಂದಿನ ಮನುಷ್ಯ, ಇಂದಿನ ಮನುಷ್ಯ ಎಂಬ ಅಂತರವಿಲ್ಲದೆ ಎಲ್ಲ ಕಾಲದ ಮನುಷ್ಯರಿಗೂ ಪ್ರಸ್ತುತವಾದ ಅಂತರಂಗದ ತಲ್ಲಣಗಳನ್ನು ಮಂಡಿಸುವುದರ ಸಂಗಡವೇ ಅವುಗಳ ಪರಿಹಾರವನ್ನು ಕುರಿತು ಚಿಂತಿಸುವುದರಿಂದ ಪು.ತಿ.ನ ಅವರ ಬರವಣಿಗೆಗೆ ಸಾರ್ವಕಾಲಿಕವಾದ ತಾತ್ವಿಕ ಮಹತ್ವವಿದೆ. ಕನ್ನಡ ಸಾಹಿತ್ಯದ ನಿರ್ಮಾಪಕರ ಪ್ರತಿಷ್ಠಿತರ ಸಾಲಿನಲ್ಲಿ ಪು.ತಿ.ನ ಅವರು ಎಂದೆಂದೂ ವಿರಾಜಮಾನರು.
(ಆಧಾರ: ಎಚ್.ಎಸ್. ರಾಘವೇಂದ್ರರಾವ್ ಅವರ ಪು.ತಿ.ನ ಅವರ ಬರಹ ಮತ್ತು ಕನ್ನಡ ಸಂಪದದ ಪ್ರಕಟಣೆಯಾದ ಸಾಹಿತ್ಯ ರತ್ನಗಳು ಕೃತಿಯಲ್ಲಿ ಗೆಳೆಯ ದಿವಂಗತ ಅಶೋಕ್ ಡಿ ನಾಯಕ್ ಅವರು ಕೆಲವು ಅಭಿಪ್ರಾಯಗಳು)
On Remembrance Day of our great poet Pu. Thi. Narasimhachar
ಕಾಮೆಂಟ್‌ಗಳು