ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಗಿಲೊಳು ಕೈಮುಗಿದು



 ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು 

ಕಂಬನಿಯ ಮಾಲೆಯನು
ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ
ಅರ್ಪಿಸಿಲ್ಲಿ

ಗಂಟೆಗಳ ದನಿಯಿಲ್ಲ
ಜಾಗಟೆಗಳಿಲ್ಲಿಲ್ಲ 
ಕರ್ಪೂರದಾರತಿಯ
ಜ್ಯೋತಿಯಿಲ್ಲ 
ಭಗವಂತನಾನಂದ ರೂಪಗೊಂಡಿಹುದಿಲ್ಲಿ 
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ

ಸಾಹಿತ್ಯ: ಕುವೆಂಪು

“ಈ ಗೀತೆಯನ್ನು ‘ಸೋಮನಾಥಪುರ ದೇವಾಲಯ’ವನ್ನು ಕಂಡ ಕುವೆಂಪು ಅವರು  1928ರಲ್ಲಿ ಬರೆದರು.  ಇಲ್ಲಿ "ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ" ಎಂದು ಕುವೆಂಪು ಕರೆ ಕೊಡುವುದು, ಈ ದೇವಸ್ಥಾನ ತನ್ನ ಶಿಲ್ಪ ವೈಭವದಿಂದ ‘ಕಲೆಯಬಲೆ’ಯಂತೆ ಇದೆ ಎನ್ನುವ ಕಾರಣಕ್ಕೆ ಮಾತ್ರ ಅಲ್ಲ; ಅದಕ್ಕೂ ಮಿಗಿಲಾಗಿ, ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’–ಎನ್ನುವ ಕಾರಣಕ್ಕೆ. ಗಂಟೆಗಳ ದನಿ, ಜಾಗಟೆಯ ಸದ್ದು ಮತ್ತು ಕರ್ಪೂರದಾರತಿ ಇಲ್ಲದಿರುವುದು ಒಂದು ನಷ್ಟ ಎಂಬ ವಿಷಾದಭಾವ ಇಲ್ಲಿದೆ ಎಂದೇನಾದರೂ ಭಾವಿಸುವುದಾದರೆ ಕವಿತೆಯ ಅರ್ಥದಿಂದ ನಾವು ವಂಚಿತರಾದಂತೆಯೇ ಸರಿ. ಯಾಕೆಂದರೆ ಗಂಟೆಗಳ ದನಿ, ಜಾಗಟೆಯ ಮೊಳಗು, ಕರ್ಪೂರದಾರತಿ ಇವೆಲ್ಲ ಪೂಜಾರಿ ಅಥವಾ ಪುರೋಹಿತನಿದ್ದಾನೆ ಎಂಬುದಕ್ಕೆ ಸಂಕೇತ; ಆದರೆ ಇಲ್ಲಿ ಪೂಜಾರಿ ಅಥವಾ ಪುರೋಹಿತ ಇಲ್ಲ, ಆದ ಕಾರಣ ಗಂಟೆಗಳ ದನಿಯಾಗಲೀ, ಜಾಗಟೆಯ ಸದ್ದಾಗಲೀ ಕರ್ಪೂರದಾರತಿಯಾಗಲೀ ಇಲ್ಲ. ಯಾಕೆಂದರೆ ಸೋಮನಾಥಪುರದ ಈ ದೇವಾಲಯ ಮತ್ತು ಮೂರ್ತಿ ಪರಕೀಯರ ದಾಳಿಯಿಂದ  ಭಗ್ನವಾಗಿರುವುದರಿಂದ ಅಲ್ಲಿ ಯಾವ ಪೂಜೆಯೂ ಇಲ್ಲ. ಹೀಗಾದುದರಿಂದ ಪೂಜೆಯೂ ಇಲ್ಲದ, ಪೂಜಾರಿಯೂ ಇಲ್ಲದ, ಆದರೆ ತನ್ನ ಶಿಲ್ಪಕಲಾವೈಭವದಿಂದ ‘ಭಗವಂತನಾನಂದ ಮೂರ್ತಿ’ಗೊಂಡಂತಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ.” (ಜಿ. ಎಸ್. ಶಿವರುದ್ರಪ್ಪನವರ ನುಡಿ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ