ಸಿ. ಆರ್. ಚಂದ್ರಶೇಖರ್
ಸಿ. ಆರ್. ಚಂದ್ರಶೇಖರ್
ಡಾ. ಸಿ. ಆರ್. ಚಂದ್ರಶೇಖರ್ ವೈದ್ಯಕೀಯಲೋಕದಲ್ಲಿ ನಾನು ಕಂಡಿರುವ ಒಬ್ಬ ಮಹಾನ್ ಸಂತರು. ಅವರಲ್ಲಿರುವ ಹಣದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಸೇವೆ ಮಾಡುವ ಸಾಮಾಜಿಕ ಸೇವಾ ತತ್ಪರತೆ; ಸಮಾಜಮುಖಿ ಸಹೃದಯತೆ, ನಯ, ವಿನಯ; ವಿಷಯವನ್ನು ಸರಳ ಭಾಷೆಯ ಮೃದುವಾದ ಧ್ವನಿಯಲ್ಲಿ, ಸುಸ್ಪಷ್ಟವಾಗಿ ಜೊತೆಗೆ ಮಾನವೀಯ ಹೃದ್ಭಾವದಲ್ಲಿ ಮುಟ್ಟಿಸುವಿಕೆ ಇತ್ಯಾದಿ ಗುಣಗಳು ಇಂದೂ ಸಾಧ್ಯವೇ ಎಂದು ನಮ್ಮನ್ನು ಮೂಕರಾಗಿಸುತ್ತವೆ. ಅವರಷ್ಟು ಮಾನಸಿಕ ಆರೋಗ್ಯದ ಬಗ್ಗೆ ತಿಳಿದವರಿಲ್ಲ, ತಿಳಿಸುವವರಿಲ್ಲ, ಬರೆದವರಿಲ್ಲ, ಯಾವುದೇ ಸ್ವಹಿತ ಚಿಂತನೆಯಿಲ್ಲದೆ ಲೋಕಕ್ಕೆ ಕೊಡುತ್ತಿರುವವರಿಲ್ಲ.
ಸಿ. ಆರ್. ಚಂದ್ರಶೇಖರ್ 1948ರ ಡಿಸೆಂಬರ್ 12ರಂದು ಚನ್ನಪಟ್ಟಣದಲ್ಲಿ ಜನಿಸಿದರು. ತಂದೆ ಬಿ.ಎಂ. ರಾಜಣ್ಣಾಚಾರ್. ತಾಯಿ ಎಸ್.ಪಿ. ಸರೋಜಮ್ಮ. ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ನಡೆಯಿತು. ಹೈಸ್ಕೂಲು ವಿದ್ಯಾಭ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದರು. ಬೆಂಗಳೂರು ಸರಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಓದಿ, ಬೆಂಗಳೂರಿನ ವೈದ್ಯಮಹಾಲಯದಿಂದ ಎಂ.ಬಿ.ಬಿ.ಎಸ್., ನಿಮ್ಹಾನ್ಸ್‌ನಲ್ಲಿ ಮನೋ ವೈದ್ಯಕೀಯದಲ್ಲಿ ಡಿಪ್ಲೊಮ ಮತ್ತು ಎಂ.ಡಿ. ಪದವಿಗಳನ್ನು ಪಡೆದರು.
ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬಗ್ಗೆ ಬೆಳೆದ ಅಭಿರುಚಿಯಿಂದ ಕವನ, ಲೇಖನಗಳ ಬರವಣಿಗೆ ಮಾಡುತ್ತಿದ್ದರು. ಕಾಲೇಜು ಮ್ಯಾಗಜಿನ್‌ನಲ್ಲಿ ಅವರ ಹಲವಾರು ಲೇಖನಗಳು ಪ್ರಕಟಗೊಂಡಿದ್ದವು. ಮುಂದೆ ಎಲ್ಲ ಪ್ರಸಿದ್ಧ ನಿಯತಕಾಲಿಕಗಳಲ್ಲೂ ಅವರ ಇಂಗ್ಲಿಷ್ ಮತ್ತು ಕನ್ನಡ ಬರಹಗಳು ನಿರಂತರವಾಗಿ ಹರಿದುಬಂದಿವೆ.
ಡಾ. ಸಿ. ಆರ್. ಚಂದ್ರಶೇಖರ್ ನಿಮ್ಹಾನ್ಸ್‌ನ ಮನೋ ವೈದ್ಯ ವಿಭಾಗ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.
ಡಾ. ಸಿ. ಆರ್. ಚಂದ್ರಶೇಖರ್ ಮನೋರೋಗದ ಕುರಿತಾದ ಅಪಕ್ವ ಕಲ್ಪನೆಗಳನ್ನು ನಿವಾರಿಸಲು, ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೂರಾರು ಕೃತಿಗಳನ್ನು, ಉಪನ್ಯಾಸಗಳನ್ನು, ಮಾರ್ಗದರ್ಶನ ಶಿಬಿರಗಳನ್ನು, ಸ್ವಯಂಸೇವಕರ ಪಡೆಯ ನಿರ್ಮಾಣವನ್ನು ಹೀಗೆ ಮಹತ್ವದ ಕೆಲಸವನ್ನು ನಿರಂತರ ಮಾಡುತ್ತ ಬಂದಿದ್ದಾರೆ. ಅವರು ತಮ್ಮ
ಸ್ವಯಂ ಸೇವಕ ಪಡೆಯೊಂದಿಗೆ ಉಚಿತ ಮಾನಸಿಕ ಆರೋಗ್ಯ ಸಮಾಲೋಚನೆ, ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ವೈದ್ಯಕೀಯ ಮಾರ್ಗದರ್ಶನ ನೀಡುವ ಬೆಂಗೂರಿನ ಅರಕೆರೆಯಲ್ಲಿರುವ ಕೇಂದ್ರದ ಹೆಸರು 'ಸಮಾಧಾನ'. ಅಲ್ಲಿ ಯಾವುದೇ ರೀತಿಯ ಶುಲ್ಕವೂ ಇಲ್ಲದೆ ಅಪೂರ್ವ ಸಮಾಧಾನ ನೀಡುವ ಆಪ್ತ ವಾತಾವರಣವಿದೆ. ಇದಲ್ಲದೆ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ‘ಪ್ರಸನ್ನ ಆಪ್ತ ಸಲಹಾ ಕೇಂದ್ರ’ದ ಮೂಲಕವೂ ಸಲಹೆ-ಚಿಕಿತ್ಸೆ-ಹೀಗೆ ಹಲವಾರು ವಿಧದಲ್ಲಿ ಆರೋಗ್ಯ ನಿರ್ವಹಣಾ ಕಾರ್ಯಕ್ರಮಗಳು ನಡೆಯುತ್ತಿವೆ. ಅವರು ತಮದು ಮತ್ತೊಬ್ಬರದು ಎಂಬ ಭೇದವಿಲ್ಲದೆ ಇತರ ಸಮಾಜ ಸೇವಾ ಸಂಸ್ಥೆಗಳೊಡನೆ ಸಹಾ ಅಪಾರ ಕೆಲಸ ಮಾಡುತ್ತಿದ್ದಾರೆ.
ಡಾ. ಸಿ. ಆರ್. ಚಂದ್ರಶೇಖರ್ ಅವರು ಬರೆದ ಕೃತಿಗಳನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯದ ಪ್ರಸಾರಾಂಗಗಳು, ಪುಸ್ತಕ ಪ್ರಾಧಿಕಾರ, ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಲ್ಲ ಪ್ರಮುಖ ಪ್ರಕಟಣಾ ಸಂಸ್ಥೆಗಳೂ ಪ್ರಕಟಿಸುತ್ತ ಬಂದಿವೆ. ಇವುಗಳಲ್ಲಿ ಮಾನಸಿಕ ಆರೋಗ್ಯ ಕುರಿತ ಮಗು ಮನಸ್ಸು ಮತ್ತು ಆರೋಗ್ಯ, ಹದಿವಯಸ್ಸು-ಅಸ್ವಸ್ಥ ಮನಸ್ಸು, ಚಿತ್ರ ವೈಚಿತ್ರ್ಯ, ಮಾನಸಿಕ ಕಾಯಿಲೆ ಎಂದರೇನು? ಮುಂತಾದ ಮಾನಸಿಕ ಆರೋಗ್ಯದ ನೂರಾರು ಕೃತಿಗಳು; ಮಿದುಳು, ಸೃಷ್ಟಿಯ ಅದ್ಭುತ ಮಿದುಳು, ನಮ್ಮ ಶರೀರ ಮತ್ತು ಅದರ ರಕ್ಷಣೆ, ಪ್ರಥಮ ಚಿಕಿತ್ಸೆ, ಮುಂತಾದ ಹತ್ತಾರು ಸಾಮಾನ್ಯ ಆರೋಗ್ಯ ಕೃತಿಗಳು; ಲೈಂಗಿಕ ದುರ್ಬಲತೆ; ಕಾರಣ ಪರಿಹಾರ, ಮೈಮನಸ್ಸು, ಸುಖದಾಂಪತ್ಯ, ದಾಂಪತ್ಯ ಸಮಸ್ಯೆಗಳು ಮುಂತಾದ ಲೈಂಗಿಕ ವಿಜ್ಞಾನದ ಕೃತಿಗಳು; ಭಾನಾಮತಿ, ಮೈಮೇಲೆ ದೆವ್ವ ಬರುವುದೇ? ಅತೀಂದ್ರಿಯ ಶಕ್ತಿ ಇರುವುದು ನಿಜವೇ? ಮೊದಲಾದ ವೈಚಾರಿಕ ಕೃತಿಗಳು; ಹಲವಾರು ಮನೋವಿಜ್ಞಾನ, ಆರೋಗ್ಯ ಸಂಬಂಧಿ ಕೃತಿಗಳು ಇವೆ.
ಡಾ. ಸಿ. ಆರ್. ಚಂದ್ರಶೇಖರ್ ಮನೆ ಮನಸ್ಸು, ಎರಡನೆಯ ಹೆಂಡತಿ, ಪಚ್ಚೆಯುಂಗುರ, ತಲೆ ತಪ್ಪಿಸಿಕೊಂಡವನು, ಕದಡಿದ ಮನಸ್ಸು ಮೊದಲಾದ ಕಾದಂಬರಿಗಳನ್ನೂ ಪ್ರಕಟಿಸಿದ್ದಾರೆ. ಪರನಾರಿ ಸಂಗ ಬೇಡೆಲೋ ನನರಾಯ, ನಾರದರ ಪರದಾಟ, ಕೃಷ್ಣಾಯಣ, ವೈದ್ಯೋ ನಾರಾಯಣೋ ಹರಿಃ ಮೊದಲಾದ ನಾಟಕಗಳನ್ನೂ ರಚಿಸಿದ್ದಾರೆ. ಇವರ ಹಲವಾರು ಕೃತಿಗಳು ತೆಲುಗು, ಇಂಗ್ಲಿಷ್ ಭಾಷೆಗಳಲ್ಲೂ ಪ್ರಕಟಗೊಂಡಿವೆ.
ಡಾ. ಸಿ. ಆರ್. ಚಂದ್ರಶೇಖರ್ ಅವರ ಪ್ರಕಟಿತ ಕೃತಿಗಳ ಸಂಖ್ಯೆಯೇ ಸುಮಾರು 200 ಇವೆ. ಅನೇಕ ಕೃತಿಗಳು ಹಲವಾರು ಬಾರಿ ಮರು ಮುದ್ರಣದ ದಾಖಲೆ ಮಾಡಿವೆ. ಇದಲ್ಲದೆ ನಿಯಮಿತವಾಗಿ ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಸುಧಾ, ತರಂಗ, ಕರ್ಮವೀರ ಮುಂತಾದ ನಾಡಿನ ಪ್ರಖ್ಯಾತ ಪತ್ರಿಕೆಗಳ ಜೊತೆಗೆ ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್‌ಪ್ರೆಸ್, ವಿಮೆನ್ಸ್ ಎರಾ ಮುಂತಾದ ಇಂಗ್ಲಿಷ್ ಪತ್ರಿಕೆಗಳು ಸೇರಿ ಸಹಸ್ರಾರು ಲೇಖನಗಳು ಪ್ರಕಟಗೊಂಡಿವೆ. ಇಂಚರ, ಸುದ್ದಿ ಸಂಗಾತಿ, ಪ್ರಜಾವಾಣಿ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ವೈದ್ಯಕೀಯ ಅಂಕಣಗಳ ಬರಹ ಮತ್ತು ಹಲವಾರು ಪತ್ರಿಕೆಗಳಲ್ಲಿ ಪ್ರಶ್ನೋತ್ತರ ವಿಭಾಗದ ನಿರ್ವಹಣೆ ಮಾಡಿದ್ದಾರೆ.
ಡಾ. ಸಿ. ಆರ್. ಚಂದ್ರಶೇಖರ್ ಸಮುದಾಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ನಿರ್ವಹಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಭಯ, ಮೌಢ್ಯ, ದುರ್ಬಲ ಮನಸ್ಸಿನಿಂದ ಉನ್ಮಾದ ಗೊಳ್ಳುವ ಕ್ರಿಯೆಯಾದ ಭಾನಾಮತಿಯನ್ನು ಗುಲಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿ ಅಧ್ಯಯನ ಮಾಡಿ ಹಳ್ಳಿಗರಿಗೆ ಪರಿಹಾರ ಸೂಚಿಸಲು ಅಂದಿನ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಎಚ್. ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ರಚಿತಗೊಂಡಿದ್ದ ಸಮಿತಿಯಲ್ಲಿ ಮನೋವೈದ್ಯರಾಗಿ ಪಾಲ್ಗೊಂಡು ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ರೂಪರೇಷೆ ತಯಾರಿಕೆ, ಮನೋವೈದ್ಯರಿಗೆ, ವೈದ್ಯರಿಗೆ, ವೈದ್ಯೇತರ ಸಿಬ್ಬಂದಿಗೆ ರೋಗಿಗಳ ಆರೈಕೆ ಬಗ್ಗೆ ತರಬೇತಿ, ಕಾಲೇಜು ಶಿಕ್ಷಕರಿಗೆ, ಆಪ್ತ ಸಲಹಾಕೌಶಲ ತರಬೇತಿ, ಮಾನಸಿಕ ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ ವರ್ಧನೆಯ ಬಗ್ಗೆ ಕಾರ‍್ಯಾಗಾರಗಳ ಮೂಲಕ ನೀಡುವ ತರಬೇತಿ, ಮೂಢ ನಂಬಿಕೆಗಳ ಪ್ರಕರಣಗಳಾದ ಭಾನಾಮತಿ, ದೇವರು ದೆವ್ವ ಬರುವ ಪ್ರಕರಣಗಳ ಬಗ್ಗೆ ಹಳ್ಳಿಗರಲ್ಲಿ ತಿಳುವಳಿಕೆ ನೀಡುವ ಕಾರ್ಯಕ್ರಮ ಹೀಗೆ ಅವರು ನಡೆಸಿದ ಮತ್ತು ಇಂದೂ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಅಪಾರ,
ಡಾ. ಸಿ. ಆರ್. ಚಂದ್ರಶೇಖರ್ ಅವರು ಭಾರತೀಯ ಮನೋವೈದ್ಯರ ಸಂಗದ ಫೆಲೊ ಆಗಿ; ಭಾರತೀಯ ಮನೋವೈದ್ಯ ಸಂಘದ ಕರ್ನಾಟಕ ಶಾಖೆಯ ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ; ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರಲ್ಲದೆ ಹಲವಾರು ವೈದ್ಯಕೀಯ ಪತ್ರಿಕೆಗಳು, ವ್ಯಕ್ತಿ ವಿಕಸನ ಪತ್ರಿಕೆಗಳು, ಜನಪ್ರಿಯ ವಿಜ್ಞಾನ ಪತ್ರಿಕೆಗಳು ಮುಂತಾದವುಗಳ ಗೌರವ ಸಂಪಾದಕರಾಗಿಯೂ ದುಡಿಯುತ್ತಿದ್ದಾರೆ.
ಡಾ. ಸಿ. ಆರ್. ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಕೆಲವು ಬಾರಿ ಕರ್ನಾಟ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಡಾ. ಬಿ.ಸಿ. ರಾಯ್ ವೈದ್ಯ ದಿನಾಚರಣಾ ಪ್ರಶಸ್ತಿ, ಕರ್ನಾಟಕ ಚೇತನಾ ಪ್ರಶಸ್ತಿ, ಡಾ. ವಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ಭಾರತ ಸರಕಾರದ ರಾಷ್ಟ್ರೀಯ ಪುರಸ್ಕಾರ, ಶಿವರಾಮಕಾರಂತ ಪ್ರಶಸ್ತಿ, ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ 500ನೆಯ ಜಯಂತೋತ್ಸವ ಪ್ರಶಸ್ತಿ, ಮಾನವರತ್ನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಗೌರವಗಳು ಅರಸಿ ಬಂದಿವೆ.
On the birth day of great Doctor of Mental Health, writer and reformer Dr. C. R. Chandrashekhar Sir 🌷🙏🌷
Error 503! Connection to the Blogger server has been interrupted.
ಕಾಮೆಂಟ್‌ಗಳು