ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೇಶವರಾವ್


 ಬಿ. ಎಸ್. ಕೇಶವರಾವ್


ನನಗೆ ಕನ್ನಡ ಪುಸ್ತಕದ ಅಂಗಡಿಗೆ ಹೋದಾಗಲೆಲ್ಲ ಮೊದಲು ಎದ್ದು ಕಾಣುವುದು ಬಿ. ಎಸ್. ಕೇಶವರಾವ್ ಅವರ ಕೃತಿಗಳು.  ಅವರ ಕೃತಿಗಳ ಹೆಸರೇ ವೈಶಿಷ್ಟ್ಯಪೂರ್ಣ.  ಅವರ ಕೃತಿಗಳು ಕನ್ನಡದ ರಸಪಾಕವನ್ನು ಪರಿಚಯಿಸುವಂತಹ ಸ್ವಾದಗಳು.  ಕನ್ನಡ ಸಾಹಿತ್ಯದ ಕ್ರೀಮ್ ಅನ್ನು ಅವರು ಆಕರ್ಷಣೀಯವೆಂಬಂತೆ ವೈವಿಧ್ಯತೆಗಳುಳ್ಳ ಕೃತಿಗಳಾಗಿ ಪ್ರಕಟಪಡಿಸುತ್ತ ಬಂದವರು. ಅವರು ಬರಹಗಾರರು ಮಾತ್ರವಲ್ಲ. ಅವರೊಬ್ಬ ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ. 

ಕೇಶವರಾವ್‌ 1935ರ ಡಿಸೆಂಬರ್ 15ರಂದು 
ಮೈಸೂರಿನಲ್ಲಿ ಜನಿಸಿದರು. ತಂದೆ ಬಿ.ಕೆ. ಸುಬ್ಬರಾವ್. ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮ ಮತ್ತು ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಗಳಿಸಿದರು.

ಕೇಶವರಾವ್ ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗ ಆರಂಭಿಸಿದರು. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ ಕೆಲಸ ಮಾಡಿದರು. ನಂತರ ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರ ವೃತ್ತಿ ಆಯ್ದುಕೊಂಡು ಚಿಂತಾಮಣಿ, ತುಮಕೂರು, ಹಾಸನ, ಕೆ.ಆರ್. ಪೇಟೆ, ಮೈಸೂರು, ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 

ಕೇಶವರಾಯರಿಗೆ ಎಳವೆಯಿಂದಲೇ  ಸಾಂಸ್ಕೃತಿಕ ಕಾರ‍್ಯಕ್ರಮಗಳತ್ತ ಒಲವು ಮೂಡಿತು. ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳ ನಿರ್ದೇಶನ ಮತ್ತ ನಟನೆ ಮಾಡಿದರು. 1955ರಲ್ಲಿ ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರಂತರ ನಾಟಕ ‘ಗರ್ಭಗುಡಿ’ಯ ನಿರ್ದೇಶನ ಮಾಡಿ ಸ್ವಯಂ ಕಾರಂತರಿಂದ ಮೆಚ್ಚುಗೆ ಗಳಿಸಿದರು. 1957ರಲ್ಲಿ ತ್ರಿ-ರಂಗಭೂಮಿ ರಚಿಸಿ ಪರ್ವತ ವಾಣಿಯವರ ಸುಂದ್ರೋಪಸುಂದ್ರು ಯಶಸ್ವಿ ಪ್ರಯೋಗ ಮಾಡಿದರು. 1958ರಲ್ಲಿ ಬೇಂದ್ರೆಯವರ ಸಮ್ಮುಖದಲ್ಲಿ ನಾಟಕ ಪ್ರಯೋಗ ಮಾಡಿದರು. ಅ.ನ.ಕೃ. ಅವರ ಕಿತ್ತೂರರಾಣಿ ಚೆನ್ನಮ್ಮ, ಕಣ್ಣೀರು; ತರಾಸುರವರ ದುರ್ಗಾಸ್ತಮಾನ ಕಾದಂಬರಿಗಳ ರಂಗರೂಪ ಮಾಡಿದರು. 

ಕೇಶವರಾವ್ ಪ್ರಖ್ಯಾತ ಪತ್ರಿಕೆಗಳಿಗೆ ಅಂಕಣ ಬರೆದರು. ‘ಹಂಸ’ ಕಾವ್ಯನಾಮದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ವಿಮರ್ಶೆ ಅಂಕಣ ನಿರ್ವಹಿಸಿದರು. ಕರ್ಮವೀರ ಪತ್ರಿಕೆಯಲ್ಲಿ ರಂಗಾಂತರಂಗ ಅಂಕಣ ಬರೆದರು. ಹಲವಾರು ದೂರದರ್ಶನ ವಾಹಿನಿಗಳಲ್ಲಿ ನಟಿಸಿದರು. ರಸಿಕರಂಜನಿ ಸಂಸ್ಥೆಯನ್ನು ನಡೆಸಿದರು. 

ಈಗಾಗಲೇ ಹೇಳಿದಂತೆ ಬಿ. ಎಸ್. ಕೇಶವರಾವ್ ಕನ್ನಡದ ರಸಪಾಕವನ್ನು ಆಕರ್ಷಕ ಹೆಸರಿನ ಕೃತಿಗಳಲ್ಲಿ ಪ್ರಕಟಿಸಿ ಕನ್ನಡ ಸಾಹಿತ್ಯದತ್ತ ಸಾಮಾನ್ಯ ಜನರನ್ನು ಆಕರ್ಷಿಸಿ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತ ಬಂದರು. ಕನ್ನಡದ ಕೋಗಿಲೆ ಕಾಳಿಂಗರಾಯರು, ಅಪೂರ್ವರೊಡನೆ, ಕನ್ನಡಕ್ಕೊಬ್ಬನೇ ಕೈಲಾಸಂ, ಕನ್ನಡದ ಕಟ್ಟಾಳು ಅ.ನ.ಕೃ, ನಾ ಕಂಡ ಪುಂಡ ಪಾಂಡವರು, ಸೂತ್ರಧಾರ ಬಿ.ವಿ. ಕಾರಂತ, ಮರೆಯಲಾಗದವರು, ಕೈಲಾಸಂ ಜೋಕ್ಸು-ಸಾಂಗ್ಸು, ಬೀಚಿ-ಬುಲೆಟ್ಸು-ಬಾಂಬ್ಸು-ಭಗವದ್ಗೀತೆ, ಕಂದರ ಕಾರಂಜಿ, ಪ್ರಸಂಗ ಪ್ರವಾಹ, ಪ್ರಸಂಗ ತರಂಗ, ಕೈಲಾಸಂ ಸಮಗ್ರ ಕೃತಿಗಳು (ಸಂಪಾದಿತ), ಮೈಸೂರು ಅನಂತಸ್ವಾಮಿ, ಸರಸ ಸಾಹಿತ್ಯ ಸಾರಾಮೃತ ಹೀಗೆ ಅವರ ಅನೇಕ ಆಕರ್ಷಕ ಕೃತಿಗಳು ಸಾಹಿತ್ಯ ಲೋಕದಲ್ಲಿ ನಲಿಯುತ್ತಿವೆ.

ಬಿ. ಎಸ್. ಕೇಶವರಾವ್ ಅವರಿಗೆ ಕೈಲಾಸಂ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಬಿ. ಎಸ್. ಕೇಶವರಾಯರು 2017ರ ಅಕ್ಟೋಬರ್ 30ರಂದು ಈ ಲೋಕವನ್ನಗಲಿದರು.

On the birth day of writer and theatre personality B. S. Keshava Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ