ಪಿ. ಬಿ. ದೇಸಾಯಿ
ಪಿ. ಬಿ. ದೇಸಾಯಿ
ಪಾಂಡುರಂಗ ಭೀಮರಾವ್ ದೇಸಾಯಿ ಕರ್ನಾಟಕ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ವಿದ್ವಾಂಸರು ಮತ್ತು ಸಂಶೋಧಕರು.
ಪಿ. ಬಿ. ದೇಸಾಯಿ ರಾಯಚೂರು ಜಿಲ್ಲೆಯ ಕೊಪ್ಪಳ ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ 1910ರ ಡಿಸೆಂಬರ್ 24ರಂದು ಜನಿಸಿದರು. ತಂದೆ ಭೀಮರಾವ್. ತಾಯಿ ಭಾಗೀರಥಿ ಬಾಯಿ. ಪ್ರಾಥಮಿಕ ಶಿಕ್ಷಣ ಸೇಡಂನಲ್ಲಿ, ಸೆಕೆಂಡರಿ ಶಿಕ್ಷಣ ಗುಲಬರ್ಗಾದಲ್ಲಿ ನಡೆಯಿತು. ಮುಂಬಯಿ ವಿಶ್ವವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯ ನಂತರ ಅನಾರೋಗ್ಯಕ್ಕೆ ತುತ್ತಾಗಿ ಆರು ವರ್ಷ ಕಾಲ ವಿದ್ಯಾಭ್ಯಾಸಕ್ಕೆ ಧಕ್ಕೆಯಾಯಿತು. 1935ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಸಂಸ್ಕೃತ ಆನರ‍್ಸ್ ಪದವಿ, 1937ರಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.
ಪಿ. ಬಿ. ದೇಸಾಯಿ ಊರಿನ ಸುತ್ತಮುತ್ತ ಇದ್ದ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಅವರಿಗೆ ಕೇಂದ್ರ ಸರಕಾರದ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಹಾಯಕ ಸಂಶೋಧಕರ ಹುದ್ದೆ ದೊರೆಯಿತು. ಉದಕಮಂಡಲದಲ್ಲಿ ಶಾಸನ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ 17 ವರ್ಷ ಇಲಾಖೆಗಾಗಿ ದುಡಿದರು. ವಿಜಯನಗರದ ಆರನೆಯ ಶತಮಾನೋತ್ಸವ ಸಂದರ್ಭದಲ್ಲಿ ಇವರು ರಚಿಸಿದ ಗ್ರಂಥ ‘ವಿಜಯನಗರ ಸಾಮ್ರಾಜ್ಯ’. ದಕ್ಷಿಣ ಭಾರತದ ಶಾಸನ ಸಂಪುಟಗಳ ಪೈಕಿ 11ನೆಯ ಸಂಪುಟದ ಮೊದಲಭಾಗ ಮತ್ತು 15ನೆಯ ಸಂಪುಟವನ್ನು ಸಂಪಾದಿಸಿದರು. ಶಾಸನಗಳಿಗೆ ಸಂಬಂಧಿಸಿದಂತೆ ಇವರು ರಚಿಸಿದ ಗ್ರಂಥ ‘ಶಾಸನ ಪರಿಚಯ’. ಇದಕ್ಕೆ ಮೈಸೂರು ಸರಕಾರದ ಪುರಸ್ಕಾರ ಸಂದಿತು. ಹೈದರಾಬಾದ್ ಸರಕಾರಕ್ಕಾಗಿ ಸಂಪಾದಿಸಿದ ಗ್ರಂಥಗಳು ‘ಎ ಕಾರ್ಪಸ್ ಆಫ್ ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಇನ್ ಹೈದರಾಬಾದ್’ ಮತ್ತು ‘ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್ ಮತ್ತು ಸೆಲೆಕ್ಟೆಟೆಡ್ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್’ ಎಂಬ ಗ್ರಂಥಗಳು.
ಪಿ. ಬಿ. ದೇಸಾಯಿ 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತ ಇತಿಹಾಸ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರೀಡರ್ ಆಗಿ ನೇಮಕಗೊಂಡು 1962ರಲ್ಲಿ ಅದರ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ದುಡಿದರು. ಶಾಸನ ಶಾಸ್ತ್ರವನ್ನು ವೈಜ್ಞಾನಿಕವಾಗಿ ಬೋಧಿಸಲು ಶಾಸನ ಶಾಸ್ತ್ರದ ಡಿಪ್ಲೊಮ ತರಗತಿಗಳನ್ನು ಪ್ರಾರಂಭಿಸಿದರು. ‘ಜೈನಿಸಮ್ ಇನ್ ಸೌತ್ ಇಂಡಿಯಾ ಅಂಡ್ ಸಮ್ ಜೈನ್ ಎಪಿಗ್ರಾಫ್ಸ್’ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ 1961ರಲ್ಲಿ ಡಿ.ಲಿಟ್. ಪದವಿ ಸಂದಿತು. ಸಂಶೋಧನ ಸಂಸ್ಥೆಯ ನಿರ್ದೇಶಕರಾದ ನಂತರ ಪುರಾತತ್ವ ಗ್ರಂಥಾಲಯವನ್ನು ರೂಪಿಸಿದರು. ವಿದ್ವಾಂಸರಿಂದ ವಿದ್ವತ್‌ಪೂರ್ಣ ಉಪನ್ಯಾಸಗಳನ್ನೇರ್ಪಡಿಸಿದರು. ಹಸ್ತಪ್ರತಿಗಳ ವಿವರಣಾತ್ಮಕ ಪಟ್ಟಿಯನ್ನು (ಡಿಸ್‌ಕ್ರಿಪ್‌ಟಿವ್ ಕ್ಯಾಟಲಾಗ್ಸ್ ಆಫ್ ಮ್ಯಾನ್‌ಸ್ಕ್ರಿಪ್ಟ್‌ಸ್ ಇನ್ ದಿ ಕನ್ನಡ ರಿಸರ್ಚ್ ಇನ್‌ಸ್ಟಿಟ್ಯೂಟ್) ಪ್ರಕಟಿಸಿದರು. ಇವರ ಸಂಶೋಧನ ಗ್ರಂಥಗಳಲ್ಲಿ ಪ್ರಮುಖವಾದವುಗಳೆಂದರೆ ‘ಬಸವೇಶ್ವರ ಅಂಡ್ ಹಿಸ್ ಟೈಮ್ಸ್’, ಕರ್ನಾಟಕ ಇತಿಹಾಸದ ‘ಎ ಹಿಸ್ಟರಿ ಆಫ್ ಕರ್ನಾಟಕ’ (ಇತರರೊಡನೆ), ‘ಮಿಂಚಿದ ಮಹಿಳೆಯರು’, 'ಕುಂತಲೇಶ್ವರ’, 'ಮದಗಜಮಲ್ಲ’, ‘ಕರ್ನಾಟಕದ ಕಲಚುರಿಗಳು’ ಮತ್ತು ‘ಕನ್ನಡ ನಾಡಿನ ಶಾಸನಗಳು’ ಮುಂತಾದವುಗಳು. ಶಿವಾಜಿ ಜೀವನಕ್ಕೆ ಸಂಬಂಧಿಸಿದ ‘ಶಿವ ಚರಿತ್ರವೃತ್ತ’ ಎಂಬ ಮರಾಠಿ ಗ್ರಂಥ ಮತ್ತೊಂದು ಪ್ರಮುಖ ಗ್ರಂಥ. ಇದಲ್ಲದೆ ಇಂಗ್ಲಿಷ್‌ನಲ್ಲಿ 105, ಕನ್ನಡದಲ್ಲಿ 230, ಮರಾಠಿಯಲ್ಲಿ 40 ಲೇಖನಗಳನ್ನು ಬರೆದಿದ್ದರು.
ಪಿ. ಬಿ. ದೇಸಾಯಿ ಅವರು 1971ರಲ್ಲಿ ನಿವೃತ್ತರಾದ ನಂತರವೂ ಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿದ್ದರು. 1973 ರಲ್ಲಿ ನಡೆದ ಅಖಿಲ ಭಾರತ ಇತಿಹಾಸ ಸಮ್ಮೇಳನದ ಶಾಸನ ಶಾಸ್ತ್ರ ವಿಭಾಗದ ಅಧ್ಯಕ್ಷತೆ ವಹಿಸಿದರು.
ಸಂಶೋಧಕರು, ಶಾಸ್ತ್ರಜ್ಞರು, ಸಂಸ್ಕೃತಿಯ ಆಳವಾದ ಜ್ಞಾನವುಳ್ಳವರೂ ಆಗಿದ್ದ ದೇಸಾಯಿಯವರು 1974ರ ಮಾರ್ಚ್ 5 ರಂದು ನಿಧನರಾದರು.
On the birth anniversary of great scholar and historian P. B. Desai
ಕಾಮೆಂಟ್‌ಗಳು